ನೆರೆ-ಹೊರೆ

ಅದು ಬೆಂಗಳೂರು. ಅಲ್ಲಿರುವ ಲೆಕ್ಕವಿಲ್ಲದಷ್ಟು ಕ್ರಮ, ಅಕ್ರಮ, ಸಕ್ರಮ ಅಪಾರ್ಟ್ಮೆಂಟುಗಳಲ್ಲಿ ಅದೂ ಒಂದು. ಸುಮಾರು ಇನ್ನೂರು ಫ್ಲ್ಯಾಟುಗಳಿರಬಹುದು. ರಾಜು ಟಿಪ್ ಟಾಪ್ ಆಗಿ ರೆಡಿ ಆಗಿ ಬಂದು ಫ್ಲ್ಯಾಟೊಂದರ ಮುಂದೆ ನಿಲ್ತಾನೆ. ಅವನ ಬಳಿ ಇದ್ದ ಒಂದಿಷ್ಟು ಬೀಗಗಳಲ್ಲಿ ಬಾಗಿಲನ್ನು ತೆಗೆಯಲು ಪ್ರಯತ್ನಿಸುತ್ತಾನೆ. ಕೆಲವೇ ಸೆಕೆಂಡುಗಳಲ್ಲಿ ಬೀಗ ತೆರೆಯುತ್ತೆ. ಎಂದಿಗಿಂತ ಇವತ್ತು ಬೇಗ ಸಿಗ್ತಲ್ಲಾ ಅಂತ ಒಳಗೆ ಖುಷಿಪಟ್ಟು ಫ್ಲ್ಯಾಟ್ ಒಳಹೊಕ್ತಾನೆ. ಹೌದು ಅವನ ವೃತ್ತಿಯೇ ಅದು.


ಪರರ ಸ್ವತ್ತು ಹೊಲಸು ಅನ್ನೋ ಗಾದೆ ಅವನಿಗಿಲ್ಲ. ಅವನಿಗೆ ಪರರ ಸ್ವತ್ತೇ ಪರಮಾನ್ನ. ಎಂದಿನಂತೆ ಈ ದಿನವೂ ಅವನ ಬ್ಯಾಗಿಗೆ ಸಿಕ್ಕಿದ್ದು ತುಂಬಿಸಲು ಅಣಿಯಾಗ್ತಾನೆ. ದೊಡ್ ದೊಡ್ ವಸ್ತುಗಳಿಗೆ ಕೈ ಹಾಕದೆ ಸಿಕ್ಕ ಸಿಕ್ಕ ವಾಚು, ಕೂಲಿಂಗ್ ಗ್ಲಾಸು, ಕ್ಯಾಮೆರಾ, ಚಿಲ್ಲರೆ ಹಣ, ಆಭರಣಗಳು, ಸೀರೆ ಇತ್ಯಾದಿ ಅವನ ಮಜಬೂತಾದ ಬ್ಯಾಗಿಗೆ ತುಂಬಿಸಿ ಮತ್ತೇನಾದ್ರೂ ಸಿಗತ್ತಾ ಅಂತ ನೋಡ್ತಿರ್ಬೇಕಾದ್ರೆ ಅವನು ಒಳಗಿನಿಂದ ಬೋಲ್ಟ್ ಹಾಕಿದ್ದ ಮನೆಯ ಕದವನ್ನ ಆಚೆಯಿಂದ ಯಾರೋ ತಟ್ತಾರೆ. ಇವನ ಎದೆ ಒಂದೇ ಬಾರಿಗೆ ಧಸಕ್ ಅನ್ನತ್ತೆ.


ಅವನ ಅನುಭವದಲ್ಲಿ ಈ ರೀತಿ ಆದದ್ದು ಇದೇ ಮೊದಲು. ಇಂತ ಪರಿಸ್ಥಿತಿಯಲ್ಲಿ ಏನು ಮಾಡ್ಬೇಕೆಂದು ತಿಳಿಯದೇ ಕುಗ್ಗಿಹೋಗ್ತಾನೆ. ಆಚೆಯಿಂದ ಬಡಿತ ಹೆಚ್ಚಾಗುತ್ತಲೇ ಇವನಿಗೆ ಅಪಾರ್ಟ್ಮೆಂಟ್ ಸೆಕುರಿಟಿಯ ಆಜಾನುಬಾಹು ದೇಹ ಕಣ್ಮುಂದೆ ಬರುತ್ತದೆ. ಮನೆಯವರು ಯಾರದರೂ ಇದ್ದರೆ, ಅವರನ್ನು ತಳ್ಳಿ ಓಡಿಹೋಗಬಹುದೇ, ಹಾಗೆ ಮಾಡಿದರೂ ಅಪಾರ್ಟ್ಮೆಂಟ್ ಗೇಟ್ ತನಕ ಹೋಗುವಷ್ಟರಲ್ಲಿ ಸೆಕುರಿಟಿಯವರಿಗೆ ಸುದ್ದಿ ಮುಟ್ಟದೇ ಇರುತ್ತದಯೇ , ಮುಂತಾದವು ಇವನ ಮನಸ್ಸಿನಲ್ಲಿರುವಂತೆಯೇ ಆಚೆಕಡೆ ಇದ್ದ ನಳಿನಾ ಆಂಟಿ ಮತ್ತೊಮ್ಮೆ ಬಾಗಿಲು ಬಡೀತಾಳೆ.


ನಳಿನಾ ಆಂಟಿ ಸೆಮಿ ಸಿಲ್ಕ್ ಸೀರೆಯುಟ್ಟು , ಮ್ಯಾಚಿಂಗ್ ಸ್ಲೀವ್ಲೆಸ್ಸ್ ಬ್ಲೌಸ್ ತೊಟ್ಟು, ಕೂದಲನ್ನು ಜಡೆಯೂ ಅಲ್ಲದ, ಜುಟ್ಟೂ ಅಲದ ನಾಟ್ ತರಹದ ಹೇರ್ ಸ್ಟೈಲೊಂದಿಗೆ ಹೈ ಹೀಳ್ಡ್ ಚಪ್ಪಲಿ ತೊಟ್ಟಿರುತ್ತಾಳೆ. ಅವಳು ತುಂಬಾ ಅರ್ಜೆಂಟ್ ಕೆಲಸದಲ್ಲಿರುವಂತೆ ಮತ್ತೊಂದು ಬಾರಿ ಬಾಗಿಲು ಬಡಿಯುತ್ತಾಳೆ , ಅದೇ ಲಾಸ್ಟ್ ಚ್ಯಾನ್ಸ್ ಎಂದು ಮನಸ್ಸಿನಲ್ಲಂದುಕೊಂಡು. ಇತ್ತ ರಾಜು ಭಂಡ ಧೈರ್ಯ ಮಾಡಿ ಬಾಗಿಲು ತೆರೆಯುತ್ತಾನೆ, ಅವನ ಹೆಗಲೇರಿಸಿಕೊಂಡಿದ್ದ ಬ್ಯಾಗನ್ನು ಬದಿಗಿಟ್ಟು. ಹೆಂಗಸನ್ನು ನೋಡಿ ಕೊಂಚ ಹಗುರಗೊಂಡರೂ ಅವಳೇ ಮನೆಯೊಡತಿಯಾಗಿದ್ದರೆ ಎಂಬ ಪ್ರಶ್ನೆ ಮನಸ್ಸಿಗೆ ಬರುವ ಹೊತ್ತಿಗೆ, ಅವಳು -


HELLO MISTER, ನಾನು ನಿಮ್ ಪಕ್ಕದ್ ಫ್ಲ್ಯಾಟಲ್ಲಿರೋದು. ACTUALLY ನಾನು ನಮ್ಮ ಸಂಘದ ಮೀಟಿಂಗೊಂದಕ್ಕೆ ಅರ್ಜೆಂಟ್ ಹೊರಡ್ಬೇಕು. ನನ್ ಹಸ್ಬೆಂಡ್ ಇನ್ ಒನ್ ಟು ಹಾರ್ಸ್ ನಲ್ಲಿ ಬರ್ತಾರೆ. ಬಂದ್ರೆ ಒಂದ್ಚೂರು ಈ ಕೀ ಕೊಡ್ತೀರಾ?
ರಾಜುವಿನ ಮನಸ್ಸು ಕಕ್ಕಾಬಿಕ್ಕಿಯಾಗತ್ತೆ. ಬಾಯಿಗೆ ಬೀಗ ಹಾಕ್ದಂಗ್ ಆದ್ರೂ, ಕಷ್ಟಪಟ್ಟು ಬಾಯಿ ಬಿಡ್ತಾನೆ - ಓಕೆ. ಶ್ಯೂರ್. ಐ ವಿಲ್ ಟೇಕ್ ಕೇರ್ ಅಂತಾನೆ...




ಬೆಂಗಳೂರಿನ ಮನೆ-ಫ್ಲ್ಯಾಟುಗಳಲ್ಲಿ ಅಕ್ಕ ಪಕ್ಕದ ಮನೆಯವರ ಈಗಿನ ಪರಿಸ್ಥಿತಿಯೇ ಈ ಬರವಣಿಗೆಗೆ  ಸ್ಫೂರ್ತಿ.
ಬೃಹತ್ ಬೆಂಗಳೂರು - ಸಂಕುಚಿತ ಮನಸ್ಸುಗಳು !!