ಬಿಸಿ ಕುರ್ಚಿಯ ಬಿಸಿ ಬಿಸಿ ಅನುಭವಗಳು...

A LIFE TIME OPPORTUNITY

ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿದ್ದೆ ನಾನು ಆ ಒಂದು ಕರೆ ನನಗೆ ಬಂದಾಗ. ಅಲ್ಲಿ ಪುಸ್ತಕ ಪ್ರಾಧಿಕಾರದ ವತಿಯಿಂದ ಡಿಸ್ಕೌಂಟ್ ಮೇಳ ನಡೀತಾ ಇತ್ತು. ಪುಸ್ತಕ ಕೊಳ್ಳುವಲ್ಲಿ ಮಗ್ನನಾಗಿದ್ದೆ.
ನಿಮಗೆ ಗೊತ್ತಿರಲಿಕ್ಕಿಲ್ಲ ಅಂದರೆ ಇಲ್ಲಿ ಕೇಳಿ.. ಪುಸ್ತಕ ಕೊಳ್ಳುವಾಗ ಬಹಳ ಏಕಾಗ್ರತೆ ಬೇಕು. ಆ ಏಕಾಗ್ರತೆಯನ್ನೇ ಕೆಡಿಸುವಂಥ ಕರೆ ಅದಾಗಿತ್ತು.

ಅದು ಕನ್ನಡ ಕೋಟ್ಯಾಧಿಪತಿ ತಂಡದಿಂದ ಬಂದಿತ್ತು. ಅಲ್ಲಿಂದ ಶುರುವಾಯಿತು ನೋಡಿ ಕನಸುಗಳ ಸೌಧ. ಆ ಭಾವ ಮನುಷ್ಯ ಸಹಜವಾಗಿ ಬಂದದ್ದು. ಕರೆ ಅತಿಮಾನುಷ ಶಕ್ತಿಯಿಂದ ಆದದ್ದು. ನಂತರ ಕೆಲವು ಸುತ್ತುಗಳ ಆಯ್ಕೆ ಪ್ರಕ್ರಿಯೆಗಳು ಮುಗಿಯುವ ಹೊತ್ತಿಗೆ ತಿಂಗಳುಗಳೇ ಕಳೆದಿತ್ತು. ಆ ಕನಸಿನ ಸೌಧವೂ  ಬೆಳೆದಿತ್ತು.

ಚೆನ್ನೈಗೆ ಅಪ್ಪನೊಂದಿಗೆ  ಪ್ರಯಾಣ. ಆ ರೈಲಿನ ಪ್ರಯಾಣದಲ್ಲಿ ಮೂಡಿಬಂದ ಭಾವಗಳು ನನ್ನ ಬ್ಲಾಗಿನ 'ಭಯಗವನ'ದಲ್ಲಿ  ಓದಿ. ಸುವರ್ಣ ವಾಹಿನಿಯ ಆತಿಥ್ಯ ಅಚ್ಚುಕಟ್ಟಾಗಿತ್ತು. ಮೊದಲ ಬಾರಿಗೆ ಪುನೀತ್ ರನ್ನು ನೋಡಿದಾಗ ಎಕ್ಸೈಟ್ ಆಗಿದ್ದೆ.
ನನ್ನೊಂದಿಗೆ  ಬಂದಿದ್ದ ಮಿಕ್ಕ ಒಂಭತ್ತು ಜನ ಸ್ಪರ್ಧಿಗಳಲ್ಲಿ ಸ್ನೇಹವಾಗಲು ಹೆಚ್ಚು ಸಮಯ ಬೇಕಾಗಲಿಲ್ಲ.
ಎಲ್ಲರೂ ಗೆಲ್ಲಲಿ ಎಂಬ ಮನೋಭಾವ ಯಾರಿಗಾದರು ಬಂದುಬಿಡತ್ತೆ ಅಲ್ಲಿ.

ಹೈಲೈಟ್ಸ್..
  • ಸ್ವತಃ ಪುನೀತ್ ಕರೆದು ಅವರ ಈಮೇಲ್ ಐಡಿ ಕೊಟ್ಟಾಗ ಆದ ಸಂತಸ, ರಾಘಣ್ಣ ನಂದೇ ಬೆಸ್ಟ್ ಎಪಿಸೋಡ್ ಅಂದಾಗ, ಗುರುಪ್ರಸಾದ್ ಕರೆದು ಬೆನ್ನು ತಟ್ಟಿದಾಗ ಆದ ಸಾರ್ಥಕ ಭಾವ ಇವೆಲ್ಲ ನೆನಪುಗಳು.
  • ಫಾಸ್ಟೆಸ್ಟ್ ಫಿನ್ಗರ್ಸ್ ಸುತ್ತಿಗೆ ಆಯ್ಕೆಯಾಗುವ ಮುನ್ನ ಒಮ್ಮೆ ದೇವರನ್ನ ಬೇಡಿಕೊಳ್ಳುವ ಪ್ರಯತ್ನ ಮಾಡಿದೆ. ಆದರೆ ಒಂದು ಕ್ಷಣಕ್ಕೆ ಈ ಯೋಚನೆ ಬಂತು - "ಈ ಹತ್ತು ಜನಗಳಲ್ಲಿ ನನ್ನನ್ನೇ ಯಾಕೆ ಆ ದೇವರು ಆಯ್ಕೆ ಮಾಡಬೇಕು? ನಾನೇನು ಸ್ಪೆಷಲ್ ಕಿಡ್ದೆ.. ಹ್ಜ್ಞಾಂ ..? ". ಈ ಯೋಚನೆ ಬಂದ ಮೇಲೆ ಸುಮ್ಮನೆ ಕೂತು ಆಟದ ಬಗ್ಗೆ ಗಮನ ಹರಿಸಿದೆ.
  • ಶೋ ಬಿತ್ತರವಾದ ದಿನದಿಂದ ನಾನು ಎಲ್ಲಿ ಹೋದರೂ ಜನ ಗುರುತಿಸುತ್ತಾರೆ.
  • ಆಟೋದವರು ನನ್ನ ನೋಡಿ ಜೈ ಮಾಕಾಳಮ್ಮ ಅಂದಾಗ ನನ್ನ ತುಟಿ ಅಂಚಿನಲ್ಲಿ ನಗೆ.
  • ಚಿತ್ರಮಂದಿರ, ಹೋಟೆಲ್, ಮಾಲ್ ಗಳಲ್ಲಿ ಜನ ನನ್ನ ಹತ್ತಿರ ಬಂದು ಅಭಿಮಾನ ತೋರಿಸಿದಾಗ ಖುಷಿ ಆಗತ್ತೆ.
  • ಈ ಸಂತಸ, ಖುಷಿ, ಸಂಭ್ರಮ.. ಈ ಜಿಗಿ ಈ  ಜಿಗಿ ..  ಎಲ್ಲವು ಎರಡು ದಿನ..
ಖ್ಯಾತಿ ನಶ್ವರ.. ಜ್ಞಾನ, ಕೃತಿ ಶಾಶ್ವತ.. ಜೈ ಮಾಕಾಳಮ್ಮ  :-)


ಅಲ್ಲಿ ನಡೆದಿದ್ದನ್ನ ಪದಗಳಲ್ಲಿ ಹೇಳುವ ಬದಲು ಈ ಕೆಳಗಿನ ವಿಡಿಯೋಗಳನ್ನು ನೋಡಿ. ನಿಮ್ಮ ಅಭಿಪ್ರಾಯ ತಿಳಿಸಿ.
CHECK THIS VIDEO LINKS FOR MY FULL EPISODE VIDEOS..















THANK YOU !!





ಡೈಲಾಗ್ಸ್ಗೇ ಕಾಸು ಗೋವಿಂದ.. ಕಥೆ ಶಿವನ ಪಾದಾರವಿಂದ..

"ನೀನ್ ಮುಮ್ತಾಜ್ ಅಂದ್ರೆ ನಾನ್ ಗುಮ್ತಾಜ್" ಅಂತ ಮಾತು ಮಾತಿಗೂ ಮುಟ್ ನೋಡ್ಕೊಳೋ ಸಂಭಾಷಣೆಗೆ ಪಡ್ಡೆ ಹುಡುಗರು 'ಸೈ' ಅಂದ್ರೆ ಮಡಿವಂತರು 'ಕೊಯ್' ಅನ್ನಬಹುದು.
ಹೌದು  ಸುರೇಶ್ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಕೆ.ಎ. ಸುರೇಶ್ ನಿರ್ಮಿಸಿರುವ ಯುವ ನಿರ್ದೇಶಕ
ಪವನ್ ಒಡೆಯರ್ ಅವರ ಪ್ರಥಮ ಕಾಣಿಕೆ  'ಗೋವಿಂದಾಯ ನಮಃ' ಚಿತ್ರದ ಸಾರಂಶವಿದು.



ಗೋವಿಂದ (ಕೋಮಲ್) ಶುದ್ಧ ಅಲಾಲ್ಟೋಪಿ. ಅವನ ಜೀವನದ  ಹಾದಿಯಲ್ಲಿ ಸಿಗುವ ಮುಗ್ಧ ಹುಡುಗಿಯರನ್ನು ಪ್ರೀತಿಯ ಹೆಸರಲ್ಲಿ ವಂಚಿಸಿ ಕೊನೆಗೆ ತಾನು ನಿಜವಾಗಲು ಪ್ರೀತಿಸುವ ಹುಡುಗಿ ಅವನಿಗೇ ಮೋಸ ಮಾಡಿದಾಗ ಅವನಿಗೆ ಪ್ರೀತಿಯ ಬೆಲೆ ಅರ್ಥವಾಗಿ, ಪ್ರಾಯಶ್ಚಿತ್ತವಾಗಿ ಆತ್ಮಹತ್ಯೆಗೆ ಮುಂದಾಗುತ್ತಾನೆ. ಅವನ ಆತ್ಮಹತ್ಯಾ ಜೊತೆಗಾರನಾಗಿ ಸಿಗುವ 'ಹರೀಶ್ ರಾಜ್' ಕೂಡ ಪ್ರೀತಿಯ ಮೋಸಕ್ಕೆ ಬಲಿಯಾಗಿ ನೊಂದಿರುತ್ತಾನೆ. ಜಂಪಿಂಗ್ ಸ್ಟಾರ್ ಹರೀಶ್ ರಾಜ್ ಮತ್ತು ಸೆನ್ಸೇಶನಲ್ ಸ್ಟಾರ್ ಕೋಮಲ್ ಮಾತಿನ  ನಡುವೆ ನಡೆಯುವ ಕಥೆಯಲ್ಲಿ ಸಂಭಾಷಣೆ ಪ್ರೇಕ್ಷಕರನ್ನು  ನಗೆ ಸಾಗರದಲ್ಲಿ ಮುಳುಗಿಸುತ್ತದೆ.

ಪವನ್ ಒಡೆಯರ್ ಬರೆದಿರುವ ಡೈಲಾಗ್ಸ್ ಚಿತ್ರದ ಜೀವಾಳ. ಆದರೆ ಟೈಟಲ್ ಕಾರ್ಡ್ ಲಿದ್ದ ಹೊಸತನ ಚಿತ್ರ ಸಾಗುತ್ತ ಮಾಸಿಹೋಗಿ ಕ್ಲೈಮಾಕ್ಸ್ ನಲ್ಲಿ ಏನು ಉಳಿಯುವುದಿಲ್ಲ. ಕೋಮಲ್ ಅಭಿನಯ ಮತ್ತು ಹಾಸ್ಯದ ಟೈಮಿಂಗ್ ಬಗ್ಗೆ ಎರಡನೆಯ ಮಾತೇ ಇಲ್ಲ. ಚಿತ್ರದ ನಾಲ್ಕು ನಾಯಕಿಮಣಿಯರಲ್ಲಿ  ರೇಖಾ, ಮಧುಲಿಕ, ಅನ ಮತ್ತು ಪರುಲ್ ಇದ್ದಾರೆ. ಈಗಾಗಲೇ ಜನರಿಗೆ ಹುಚ್ಚು ಹಿಡಿಸಿರುವ 'ಪ್ಯಾರ್ಗೆ ಆಗ್ಬಿಟೈತೆ' ಹಾಡಲ್ಲಿ ಪರುಲ್ ಅದ್ಭುತವಾಗಿ ಕುಣಿದಿದ್ದಾರೆ. ಗುರುಕಿರಣ್ ಸಂಗೀತ ಚೆನ್ನಾಗಿದ್ದು, ಪದೇ ಪದೇ  ಹಿನ್ನಲೆ ಸಂಗೀತದಲ್ಲಿ ಬರುವ 'ಕುದುರೆ ಕೆನೆತ ' ಹೈಕಳಿಗೆ ರುಚಿಸುತ್ತದೆ. ಸಂಕಲನ, ಕ್ಯಾಮೆರ ಕೆಲಸ ಈಗಿನ ತಂತ್ರಜ್ಞಾನಕ್ಕೆ ತಕ್ಕುದಾಗಿದೆ.

ಕೋಮಲ್ ಶ್ರದ್ಧೆ ವಹಿಸಿ ಫೈಟ್ಸ್ ಮತ್ತು ನೃತ್ಯ ಮಾಡಿದ್ದಾರೆ. ಆದರೆ ಜನರಿಗೆ ಅದು ಹಿಡಿಸುತ್ತ ಎಂದು ಕೋಮಲ್ ಯೋಚಿಸಬೇಕಾಗಿದೆ. ಏನೇ ಆಗಲಿ, ಕನ್ನಡಕ್ಕೆ ಮತ್ತೊಬ್ಬ ಪವನ್ ಭರವಸೆ ಮೂಡಿಸಿದ್ದಾರೆ. ಗೆಳೆಯರೊಂದಿಗೆ ಹೋದಾಗ ಖುಷಿ ಕೊಡುವ ಚಿತ್ರ.. ಗೋವಿಂದಾಯ ನಮಃ !!!

ಹೋಗಿ ’ಪ್ರಸಾದ’ ಸ್ವೀಕರಿಸಿ ಬನ್ನಿ..

ಸಿನಿಮಾ ಹುಟ್ಟಿದ್ದು ಮನರಂಜನೆಗಾದರೂ ಅದು ಬೆಳಿಯುತ್ತಾ ಸಮಾಜದ ಮೇಲೆ ಪರಿಣಾಮ ಬೀರಿದ ಪರಿಣಾಮ ಅಗಾಧ. ಸಿನಿಮಾ ಮಾಡುವವರ ಮೇಲಿನ ಜವಾಬ್ದಾರಿ ಇದೆಯಲ್ಲ ಅದು ನಾವು ಊಹಿಸಿಕೊಳ್ಳುವುದಕ್ಕಿಂತ ದೊಡ್ಡದು. ತಮ್ಮ ಜವಾಬ್ದಾರಿ ಮತ್ತು ಸಾಮಾಜಿಕ ಕಳಕಳಿಯನ್ನು ಚೆನ್ನಾಗಿ ಬಲ್ಲ ಸಿನಿಮಾ ತಂಡ 'ಪ್ರಸಾದ್'.
ಫಾರ್ಮುಲ ಚಿತ್ರಗಳನ್ನು ನೋಡಿ ನೋಡಿ ಬೆಂಡಾದ ಪ್ರೇಕ್ಷಕರಿಗೆ ಈ ಬಿರು ಬೇಸಿಗೆಯಲ್ಲಿ 'ಪ್ರಸಾದ್' ಒಂದು ತಂಪಿನ ಸಿಂಚನ.
ನಿರ್ದೇಶಕ 'ಮನೋಜ್ ಸತಿ' ಅವರ ಮೊದಲ ಪ್ರಯತ್ನದಲ್ಲೇ ಗೆದ್ದಿದ್ದಾರೆ. ಕಥೆಯಲ್ಲಿ ಹೊಸದೇನಿಲ್ಲವಾದರು ಚಿತ್ರಕಥೆ, ನಿರೂಪಣಾ ಶೈಲಿ ಅದನ್ನು ಮರೆಸುವಂತಿದೆ.



ಕಾರ್ ಮೆಕಾನಿಕ್ 'ಶಂಕರ್' (ಅರ್ಜುನ್ ಸರ್ಜಾ) ಮತ್ತು ಅವನ ಹೆಂಡತಿ 'ಮಾಲತಿ'ಯದು ( ಮಾಧುರಿ ಭಟ್ಟಾಚಾರ್ಯ)
ಒಂದು ಚೊಕ್ಕ ಸಂಸಾರ.  ತಮ್ಮದಲ್ಲದ ಇಬ್ಬರು ಹೆಣ್ಣುಮಕ್ಕಳನ್ನು ತಮ್ಮ ಮಕ್ಕಳಂತೆಯೇ ನೋಡಿಕೊಳ್ಳುವ ಅವರಿಗೆ ಒಂದು ಗಂಡು ಮಗುವಾಗುತ್ತದೆ. ಮಗನ ಮೇಲೆ ಸಹಜವಾಗಿ ಅಪಾರ ಮಮತೆಯಿರುವ ಶಂಕರ್ ಗೆ, ಯಾವಾಗ ತನ್ನ ಮಗ ಕಿವುಡ ಮತ್ತು ಮಾತು ಬಾರದವ ಎಂದು ತಿಳಿಯುವುದೋ ಆಗ ಅವನಿಗೆ ಆಕಾಶವೇ ಕಳಚಿದಂತಾಗುತ್ತದೆ. ಅವನಿಗಿದ್ದ ದೇವರ ಮೇಲಿನ ನಂಬಿಕೆ ಇದ್ದಕಿದ್ದಂತೆ ನಶಿಸಿಹೋಗುತ್ತದೆ. ಮಗನನ್ನು ಶಾಲೆಗೆ ಸೇರಿಸಲು ಹಿಂದೂ ಮುಂದು ನೋಡುವ ಶಂಕರ್, ನಂತರ ಮನಸ್ಸು ಬದಲಾಯಿಸಿ ಶಾಲೆಗೆ ಸೇರಿಸುತ್ತಾನೆ. ತಾಯಿ ಪ್ರೀತಿ ಅವನನ್ನು ಈಜು ತರಬೇತಿಗೂ ಸೇರಿಸುವಂತೆ ಮಾಡುತ್ತದೆ. ಈಜಿನಲ್ಲಿ ಕೆಲವೇ ತಿಂಗಳಲ್ಲಿ ಅಪಾರ ಯಶಸ್ಸು ಗಳಿಸಿ ತಂದೆ ತಾಯಿ ಶಾಲೆಗೆ ಹೆಸರು ತರುತ್ತಾನೆ. ಹೀಗೆ ಸಾಗುವ ಕಥೆಯಲ್ಲಿ ಸಾಮಾಜಿಕ ಕಳಕಳಿಯಿದೆ, ಸಂಬಂಧಗಳ ವಾಂಛಲ್ಯವಿದೆ, ಅಪ್ಪ ಮಗನ ನಡುವಿನ ನವಿರಾದ ಪ್ರೀತಿಯಿದೆ ಮತ್ತು ಇಂದಿನ ಸಿನಿಮಾಗಳಲ್ಲಿ ಕಾಣದ ಹಲವು ಭಾವನಾತ್ಮಕ ಸನ್ನಿವೇಶಗಳಿವೆ.

ಅರ್ಜುನ್ ಸರ್ಜಾ ಕನ್ನಡ ಚಿತ್ರ ರಂಗಕ್ಕೆ ಮತ್ತೆ ಬಂದಿರುವುದು ನಮ್ಮ ಪಾಲಿನ ಅದೃಷ್ಟ. ಶಂಕರ್ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ. ಮಾಧುರಿ ನಿಮ್ಮ ಮನೆಯ ಹುಡುಗಿಯಂತೆ ಕಾಣುತ್ತಾಳೆ. ಅವಳ ಪಾತ್ರದ ಡಬ್ಬಿಂಗ್ ಕಡೆ ನಿರ್ದೇಶಕ ಇನ್ನೂ ಗಮನವಹಿಸಬೇಕಿತ್ತು. 'ಪ್ರಸಾದ್' ಪಾತ್ರದಲ್ಲಿ ಮಾಸ್ಟರ್ ಸಂಕಲ್ಪ್ (ನಿಜ ಜೀವನದಲ್ಲೂ ಅಂಗವಿಕಲ) ಚಿತ್ರದ ಪ್ರಮುಖ ಆಕರ್ಷಣೆ. ಹಿರಿಯ ನಟ ರಾಮಕೃಷ್ಣ, ಶಂಕರ್ ಗೆಳೆಯನ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದಾರೆ.

ಇಳಯರಾಜ ತಮ್ಮ ಇಳಿವಯಸ್ಸಿನಲ್ಲೂ ಕಥೆಗೆ ತಕ್ಕುದಾದ ವಿಭಿನ್ನ ಹಿನ್ನಲೆ ಸಂಗೀತ ಜೋಡಿಸಿ ’ಓ ನನ್ನ ಕಂದ’ ಮತ್ತು ’ಒಂದು ಅರಮನೆ, ಅಲ್ಲಿ ಗಿಳಿಗಳು’ ಹಾಡುಗಳು ನೆನಪಿನಲ್ಲಿ ಉಳಿಸುವಂತೆ ಮಾಡಿದ್ದಾರೆ. ಸಂಜಯ್ ಮಲ್ಕಾನ್ ಕ್ಯಾಮೆರ ಹಿಂದೆ ಅಚ್ಚುಕಟ್ಟಾದ ಕೆಲಸ ಮಾಡಿದ್ದಾರೆ. ಅಶೋಕ್ ಖೇಣಿ ಇಂತಹ ಒಂದು ಪ್ರಯತ್ನಕ್ಕೆ ಹಣ ಹಾಕಿ ಒಳ್ಳೆಯತನ ಮೆರೆದಿದ್ದಾರೆ. ಅರ್ಜುನ್ ಸರ್ಜಾ ಅವರೇ ಅಚ್ಚ ಕನ್ನಡದಲ್ಲಿ ಸಂಭಾಷಣೆ ಬರೆದಿರುವುದು ಚಿತ್ರದ ಮತ್ತೊಂದು ಹೈಲೈಟ್.

'ಪ್ರಸಾದ್' ನಿಶ್ಯಬ್ಧದ ಕೂಗು ಎಂಬ ಅಡಿ ಬರಹವನ್ನು ಇಟ್ಟುಕೊಂಡಿದೆ. ಅದು ಚಿತ್ರಮಂದಿರದ ನಿಶ್ಯಬ್ಧದ ಕೂಗಾಗದೆ ಎಲ್ಲ ಕನ್ನಡ ಚಿತ್ರ ರಸಿಕರು ಈ ಚಿತ್ರವನ್ನು ನೋಡಬೇಕು. ಹ್ಞಾಂ.. ಚಿತ್ರಮಂದಿರದ ಆಚೆ ಬರುವ ಮುನ್ನ ಕಣ್ಣಂಚಿನ ನೀರೋರೆಸಿಕೊಳ್ಳುವುದನ್ನು ಮರೆಯಬೇಡಿ.

ಅಭಯಗವನ

ನೆನೆಸಿಕೊಂಡರೆ ಭಯ 
ಸೋಲುವ ಭಯ
ಸೋತರೆ ನಿರರ್ಥಕವಾಗುವ ಭಯ..  

ನಗುವವರ ಮುಂದೆ ನಿಲ್ಲುವ ಭಯ
ಹೀಯಾಳಿಕೆಗಳನು ಕೇಳುವ ಭಯ
ಸೋತರೆ ಸಂತೈಸುವವರ ಭಯ..

ದಿನ ಕಳೆದಂತೆ ಹೆಚ್ಚಾಗುವ ಭಯ
ಒಳಬಲವನ್ನೇ ಹೆದರಿಸುವ ಭಯ
ಗೆಲುವೆನ್ನುವುದಿದೆಯಂದೇ ಮರೆಸುವ ಭಯ..

ಸೋತು ಸುಣ್ಣಾಗುವ ಭಯ
ಗಾಯವು ಹುಣ್ಣಾಗುವ ಭಯ
ಕನಸುಗಳು ಮಣ್ಣಾಗುವ ಭಯ..

ಮಹದಾಶೆಗಳನು  ಈಡೇರಿಸುವ ಭಯ
ಹೊಸಗನಸುಗಳನು ನೈವೇರಿಸುವ ಭಯ
ಸೋಲುವ ಮುಂಚೆಯೇ ಸೋತೆನೆಂದು ಭಯ..

ಆ ನರೇಂದ್ರನಗಿಲ್ಲ ಈ ಭಯ
ಕೋಟ್ಯಂತರ ನರರಿಗೆ ಅವನೇ ಅಭಯ
ಜಯ ಜಯ ಜಯ..