ಹೋಗಿ ’ಪ್ರಸಾದ’ ಸ್ವೀಕರಿಸಿ ಬನ್ನಿ..

ಸಿನಿಮಾ ಹುಟ್ಟಿದ್ದು ಮನರಂಜನೆಗಾದರೂ ಅದು ಬೆಳಿಯುತ್ತಾ ಸಮಾಜದ ಮೇಲೆ ಪರಿಣಾಮ ಬೀರಿದ ಪರಿಣಾಮ ಅಗಾಧ. ಸಿನಿಮಾ ಮಾಡುವವರ ಮೇಲಿನ ಜವಾಬ್ದಾರಿ ಇದೆಯಲ್ಲ ಅದು ನಾವು ಊಹಿಸಿಕೊಳ್ಳುವುದಕ್ಕಿಂತ ದೊಡ್ಡದು. ತಮ್ಮ ಜವಾಬ್ದಾರಿ ಮತ್ತು ಸಾಮಾಜಿಕ ಕಳಕಳಿಯನ್ನು ಚೆನ್ನಾಗಿ ಬಲ್ಲ ಸಿನಿಮಾ ತಂಡ 'ಪ್ರಸಾದ್'.
ಫಾರ್ಮುಲ ಚಿತ್ರಗಳನ್ನು ನೋಡಿ ನೋಡಿ ಬೆಂಡಾದ ಪ್ರೇಕ್ಷಕರಿಗೆ ಈ ಬಿರು ಬೇಸಿಗೆಯಲ್ಲಿ 'ಪ್ರಸಾದ್' ಒಂದು ತಂಪಿನ ಸಿಂಚನ.
ನಿರ್ದೇಶಕ 'ಮನೋಜ್ ಸತಿ' ಅವರ ಮೊದಲ ಪ್ರಯತ್ನದಲ್ಲೇ ಗೆದ್ದಿದ್ದಾರೆ. ಕಥೆಯಲ್ಲಿ ಹೊಸದೇನಿಲ್ಲವಾದರು ಚಿತ್ರಕಥೆ, ನಿರೂಪಣಾ ಶೈಲಿ ಅದನ್ನು ಮರೆಸುವಂತಿದೆ.



ಕಾರ್ ಮೆಕಾನಿಕ್ 'ಶಂಕರ್' (ಅರ್ಜುನ್ ಸರ್ಜಾ) ಮತ್ತು ಅವನ ಹೆಂಡತಿ 'ಮಾಲತಿ'ಯದು ( ಮಾಧುರಿ ಭಟ್ಟಾಚಾರ್ಯ)
ಒಂದು ಚೊಕ್ಕ ಸಂಸಾರ.  ತಮ್ಮದಲ್ಲದ ಇಬ್ಬರು ಹೆಣ್ಣುಮಕ್ಕಳನ್ನು ತಮ್ಮ ಮಕ್ಕಳಂತೆಯೇ ನೋಡಿಕೊಳ್ಳುವ ಅವರಿಗೆ ಒಂದು ಗಂಡು ಮಗುವಾಗುತ್ತದೆ. ಮಗನ ಮೇಲೆ ಸಹಜವಾಗಿ ಅಪಾರ ಮಮತೆಯಿರುವ ಶಂಕರ್ ಗೆ, ಯಾವಾಗ ತನ್ನ ಮಗ ಕಿವುಡ ಮತ್ತು ಮಾತು ಬಾರದವ ಎಂದು ತಿಳಿಯುವುದೋ ಆಗ ಅವನಿಗೆ ಆಕಾಶವೇ ಕಳಚಿದಂತಾಗುತ್ತದೆ. ಅವನಿಗಿದ್ದ ದೇವರ ಮೇಲಿನ ನಂಬಿಕೆ ಇದ್ದಕಿದ್ದಂತೆ ನಶಿಸಿಹೋಗುತ್ತದೆ. ಮಗನನ್ನು ಶಾಲೆಗೆ ಸೇರಿಸಲು ಹಿಂದೂ ಮುಂದು ನೋಡುವ ಶಂಕರ್, ನಂತರ ಮನಸ್ಸು ಬದಲಾಯಿಸಿ ಶಾಲೆಗೆ ಸೇರಿಸುತ್ತಾನೆ. ತಾಯಿ ಪ್ರೀತಿ ಅವನನ್ನು ಈಜು ತರಬೇತಿಗೂ ಸೇರಿಸುವಂತೆ ಮಾಡುತ್ತದೆ. ಈಜಿನಲ್ಲಿ ಕೆಲವೇ ತಿಂಗಳಲ್ಲಿ ಅಪಾರ ಯಶಸ್ಸು ಗಳಿಸಿ ತಂದೆ ತಾಯಿ ಶಾಲೆಗೆ ಹೆಸರು ತರುತ್ತಾನೆ. ಹೀಗೆ ಸಾಗುವ ಕಥೆಯಲ್ಲಿ ಸಾಮಾಜಿಕ ಕಳಕಳಿಯಿದೆ, ಸಂಬಂಧಗಳ ವಾಂಛಲ್ಯವಿದೆ, ಅಪ್ಪ ಮಗನ ನಡುವಿನ ನವಿರಾದ ಪ್ರೀತಿಯಿದೆ ಮತ್ತು ಇಂದಿನ ಸಿನಿಮಾಗಳಲ್ಲಿ ಕಾಣದ ಹಲವು ಭಾವನಾತ್ಮಕ ಸನ್ನಿವೇಶಗಳಿವೆ.

ಅರ್ಜುನ್ ಸರ್ಜಾ ಕನ್ನಡ ಚಿತ್ರ ರಂಗಕ್ಕೆ ಮತ್ತೆ ಬಂದಿರುವುದು ನಮ್ಮ ಪಾಲಿನ ಅದೃಷ್ಟ. ಶಂಕರ್ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ. ಮಾಧುರಿ ನಿಮ್ಮ ಮನೆಯ ಹುಡುಗಿಯಂತೆ ಕಾಣುತ್ತಾಳೆ. ಅವಳ ಪಾತ್ರದ ಡಬ್ಬಿಂಗ್ ಕಡೆ ನಿರ್ದೇಶಕ ಇನ್ನೂ ಗಮನವಹಿಸಬೇಕಿತ್ತು. 'ಪ್ರಸಾದ್' ಪಾತ್ರದಲ್ಲಿ ಮಾಸ್ಟರ್ ಸಂಕಲ್ಪ್ (ನಿಜ ಜೀವನದಲ್ಲೂ ಅಂಗವಿಕಲ) ಚಿತ್ರದ ಪ್ರಮುಖ ಆಕರ್ಷಣೆ. ಹಿರಿಯ ನಟ ರಾಮಕೃಷ್ಣ, ಶಂಕರ್ ಗೆಳೆಯನ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದಾರೆ.

ಇಳಯರಾಜ ತಮ್ಮ ಇಳಿವಯಸ್ಸಿನಲ್ಲೂ ಕಥೆಗೆ ತಕ್ಕುದಾದ ವಿಭಿನ್ನ ಹಿನ್ನಲೆ ಸಂಗೀತ ಜೋಡಿಸಿ ’ಓ ನನ್ನ ಕಂದ’ ಮತ್ತು ’ಒಂದು ಅರಮನೆ, ಅಲ್ಲಿ ಗಿಳಿಗಳು’ ಹಾಡುಗಳು ನೆನಪಿನಲ್ಲಿ ಉಳಿಸುವಂತೆ ಮಾಡಿದ್ದಾರೆ. ಸಂಜಯ್ ಮಲ್ಕಾನ್ ಕ್ಯಾಮೆರ ಹಿಂದೆ ಅಚ್ಚುಕಟ್ಟಾದ ಕೆಲಸ ಮಾಡಿದ್ದಾರೆ. ಅಶೋಕ್ ಖೇಣಿ ಇಂತಹ ಒಂದು ಪ್ರಯತ್ನಕ್ಕೆ ಹಣ ಹಾಕಿ ಒಳ್ಳೆಯತನ ಮೆರೆದಿದ್ದಾರೆ. ಅರ್ಜುನ್ ಸರ್ಜಾ ಅವರೇ ಅಚ್ಚ ಕನ್ನಡದಲ್ಲಿ ಸಂಭಾಷಣೆ ಬರೆದಿರುವುದು ಚಿತ್ರದ ಮತ್ತೊಂದು ಹೈಲೈಟ್.

'ಪ್ರಸಾದ್' ನಿಶ್ಯಬ್ಧದ ಕೂಗು ಎಂಬ ಅಡಿ ಬರಹವನ್ನು ಇಟ್ಟುಕೊಂಡಿದೆ. ಅದು ಚಿತ್ರಮಂದಿರದ ನಿಶ್ಯಬ್ಧದ ಕೂಗಾಗದೆ ಎಲ್ಲ ಕನ್ನಡ ಚಿತ್ರ ರಸಿಕರು ಈ ಚಿತ್ರವನ್ನು ನೋಡಬೇಕು. ಹ್ಞಾಂ.. ಚಿತ್ರಮಂದಿರದ ಆಚೆ ಬರುವ ಮುನ್ನ ಕಣ್ಣಂಚಿನ ನೀರೋರೆಸಿಕೊಳ್ಳುವುದನ್ನು ಮರೆಯಬೇಡಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ