ಡೈಲಾಗ್ಸ್ಗೇ ಕಾಸು ಗೋವಿಂದ.. ಕಥೆ ಶಿವನ ಪಾದಾರವಿಂದ..

"ನೀನ್ ಮುಮ್ತಾಜ್ ಅಂದ್ರೆ ನಾನ್ ಗುಮ್ತಾಜ್" ಅಂತ ಮಾತು ಮಾತಿಗೂ ಮುಟ್ ನೋಡ್ಕೊಳೋ ಸಂಭಾಷಣೆಗೆ ಪಡ್ಡೆ ಹುಡುಗರು 'ಸೈ' ಅಂದ್ರೆ ಮಡಿವಂತರು 'ಕೊಯ್' ಅನ್ನಬಹುದು.
ಹೌದು  ಸುರೇಶ್ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಕೆ.ಎ. ಸುರೇಶ್ ನಿರ್ಮಿಸಿರುವ ಯುವ ನಿರ್ದೇಶಕ
ಪವನ್ ಒಡೆಯರ್ ಅವರ ಪ್ರಥಮ ಕಾಣಿಕೆ  'ಗೋವಿಂದಾಯ ನಮಃ' ಚಿತ್ರದ ಸಾರಂಶವಿದು.



ಗೋವಿಂದ (ಕೋಮಲ್) ಶುದ್ಧ ಅಲಾಲ್ಟೋಪಿ. ಅವನ ಜೀವನದ  ಹಾದಿಯಲ್ಲಿ ಸಿಗುವ ಮುಗ್ಧ ಹುಡುಗಿಯರನ್ನು ಪ್ರೀತಿಯ ಹೆಸರಲ್ಲಿ ವಂಚಿಸಿ ಕೊನೆಗೆ ತಾನು ನಿಜವಾಗಲು ಪ್ರೀತಿಸುವ ಹುಡುಗಿ ಅವನಿಗೇ ಮೋಸ ಮಾಡಿದಾಗ ಅವನಿಗೆ ಪ್ರೀತಿಯ ಬೆಲೆ ಅರ್ಥವಾಗಿ, ಪ್ರಾಯಶ್ಚಿತ್ತವಾಗಿ ಆತ್ಮಹತ್ಯೆಗೆ ಮುಂದಾಗುತ್ತಾನೆ. ಅವನ ಆತ್ಮಹತ್ಯಾ ಜೊತೆಗಾರನಾಗಿ ಸಿಗುವ 'ಹರೀಶ್ ರಾಜ್' ಕೂಡ ಪ್ರೀತಿಯ ಮೋಸಕ್ಕೆ ಬಲಿಯಾಗಿ ನೊಂದಿರುತ್ತಾನೆ. ಜಂಪಿಂಗ್ ಸ್ಟಾರ್ ಹರೀಶ್ ರಾಜ್ ಮತ್ತು ಸೆನ್ಸೇಶನಲ್ ಸ್ಟಾರ್ ಕೋಮಲ್ ಮಾತಿನ  ನಡುವೆ ನಡೆಯುವ ಕಥೆಯಲ್ಲಿ ಸಂಭಾಷಣೆ ಪ್ರೇಕ್ಷಕರನ್ನು  ನಗೆ ಸಾಗರದಲ್ಲಿ ಮುಳುಗಿಸುತ್ತದೆ.

ಪವನ್ ಒಡೆಯರ್ ಬರೆದಿರುವ ಡೈಲಾಗ್ಸ್ ಚಿತ್ರದ ಜೀವಾಳ. ಆದರೆ ಟೈಟಲ್ ಕಾರ್ಡ್ ಲಿದ್ದ ಹೊಸತನ ಚಿತ್ರ ಸಾಗುತ್ತ ಮಾಸಿಹೋಗಿ ಕ್ಲೈಮಾಕ್ಸ್ ನಲ್ಲಿ ಏನು ಉಳಿಯುವುದಿಲ್ಲ. ಕೋಮಲ್ ಅಭಿನಯ ಮತ್ತು ಹಾಸ್ಯದ ಟೈಮಿಂಗ್ ಬಗ್ಗೆ ಎರಡನೆಯ ಮಾತೇ ಇಲ್ಲ. ಚಿತ್ರದ ನಾಲ್ಕು ನಾಯಕಿಮಣಿಯರಲ್ಲಿ  ರೇಖಾ, ಮಧುಲಿಕ, ಅನ ಮತ್ತು ಪರುಲ್ ಇದ್ದಾರೆ. ಈಗಾಗಲೇ ಜನರಿಗೆ ಹುಚ್ಚು ಹಿಡಿಸಿರುವ 'ಪ್ಯಾರ್ಗೆ ಆಗ್ಬಿಟೈತೆ' ಹಾಡಲ್ಲಿ ಪರುಲ್ ಅದ್ಭುತವಾಗಿ ಕುಣಿದಿದ್ದಾರೆ. ಗುರುಕಿರಣ್ ಸಂಗೀತ ಚೆನ್ನಾಗಿದ್ದು, ಪದೇ ಪದೇ  ಹಿನ್ನಲೆ ಸಂಗೀತದಲ್ಲಿ ಬರುವ 'ಕುದುರೆ ಕೆನೆತ ' ಹೈಕಳಿಗೆ ರುಚಿಸುತ್ತದೆ. ಸಂಕಲನ, ಕ್ಯಾಮೆರ ಕೆಲಸ ಈಗಿನ ತಂತ್ರಜ್ಞಾನಕ್ಕೆ ತಕ್ಕುದಾಗಿದೆ.

ಕೋಮಲ್ ಶ್ರದ್ಧೆ ವಹಿಸಿ ಫೈಟ್ಸ್ ಮತ್ತು ನೃತ್ಯ ಮಾಡಿದ್ದಾರೆ. ಆದರೆ ಜನರಿಗೆ ಅದು ಹಿಡಿಸುತ್ತ ಎಂದು ಕೋಮಲ್ ಯೋಚಿಸಬೇಕಾಗಿದೆ. ಏನೇ ಆಗಲಿ, ಕನ್ನಡಕ್ಕೆ ಮತ್ತೊಬ್ಬ ಪವನ್ ಭರವಸೆ ಮೂಡಿಸಿದ್ದಾರೆ. ಗೆಳೆಯರೊಂದಿಗೆ ಹೋದಾಗ ಖುಷಿ ಕೊಡುವ ಚಿತ್ರ.. ಗೋವಿಂದಾಯ ನಮಃ !!!

1 ಕಾಮೆಂಟ್‌: