YAARE KOOGADALI MOVIE REVIEW

ಯಾರೇ ಕೂಗಾಡಲಿ, ಕ್ಯಾರೆ ಎನ್ನದ 'ಹುಡುಗರು'.. !!

ನೋಡ್ ನೋಡ್ತಾ ಮೊದಲಾರ್ಧ ಮುಗಿದೇ ಹೋಗತ್ತೆ. ಕಥೆ ಕುತೂಹಲ ಘಟ್ಟ ಮುಟ್ಟತ್ತೆ. 'ಅಬ್ಬಾ' ಅಷ್ಟೊಂದು ವೇಗ, ಆದರೂ ಅತ್ಯಂತ ನೀಟು. ಮಧ್ಯಂತರದ ನಂತರವೂ ಅಷ್ಟೇ ವೇಗ ಕಾಪಾಡಿಕೊಂಡರೂ ಕ್ಲೈಮ್ಯಾಕ್ಸ್ ಗೆ ಬಂದು ನಿಂತಾಗ ಇಡೀ ಸಿನಿಮಾ 'ಅಷ್ಟಕ್ಕಷ್ಟೇ' ಅನಿಸಿಬಿಡತ್ತೆ.




ಕಥೆ-ಚಿತ್ರಕಥೆ :

ಕುಮಾರ್ (ಅಪ್ಪು) ನಟೇಶನ (ಯೋಗಿ) ಸಂಗ ಆಸ್ಪತ್ರೆ ಒಂದರಿಂದ ತಪ್ಪಿಸಿಕೊಂಡು ಬರ್ತಾರೆ. ಊರು ಸೇರಿ ಪೆಟ್ರೋಲ್ ಬಂಕೊಂದರಲ್ಲಿ ಕೆಲಸಕ್ಕೆ ಸೇರಿ, ಇನ್ನೂ  ಹೆಚ್ಚು ಸಾಧಿಸುವ ಛಲದಲ್ಲಿ ತಮ್ಮದೇ 'ಪೈಡ್ ಸರ್ವೀಸ್' ಕಂಪನಿಯೊಂದನ್ನ ಶುರುಮಾಡ್ತಾರೆ. ಅದೇ ದೊಡ್ಡದಾಗಿ ಬೆಳೆದು ಹತ್ತಾರು ನಿರುದ್ಯೋಗಿಗಳಿಗೆ ಕೆಲಸ ಕೊಡ್ತಾರೆ. ಈ ಮಧ್ಯೆ ಕುಮಾರ್ ನನ್ನು ಗ್ಯಾಂಗೊಂದು ಚಿತ್ರದ ಶುರುವಿಂದಲೂ ಹುಡುಕುತ್ತಿರುತ್ತೆ. ಅವರೆಲ್ಲಾ ಅವನ ಸಂಬಂಧಿಕರೇ. ಕುಮಾರ್ ಊರಿನಿಂದ ತಪ್ಪಿಸಿಕೊಂಡು ಬಂದಿರುವ ದೊಡ್ಡ ಹುಚ್ಚ, ಮಾನಸಿಕ ರೋಗಿ ಎಂದು ಬಿಂಬಿಸುವ ಹೊತ್ತಿಗೆ ಮಧ್ಯಂತರ.
ಮುಂದೆ, ಎಲ್ಲಾರು ಮಾಡುವುದು ಆಸ್ತಿಗಾಗಿ ಎಂಬಂತೆ ಹೊಡೆದಾಟ ಬಡಿದಾಟಗಳು ಎಗ್ಗಿಲ್ಲದೇ ನಡೆಯುತ್ತದೆ. ನಾಯಕ ಎಲ್ಲರನ್ನು ಬಡಿದು ಬಗ್ಗಿಸಿ ನಾಯಕಿಯನ್ನು ವರಿಸುತ್ತಾನೆ. ಅಲ್ಲಿಗೆ 'ಎಲ್ಲರ ಕೂಗಾಟ' ನಿಂತು ಯಾಪಿ ಎಂಡಿಂಗ್ !!



ತಮಿಳಿನ 'ಪೋರಾಲಿ' ಚಿತ್ರದ ನಿರ್ದೇಶಕ ಸಮುದ್ರಖಣಿ ಇಲ್ಲಿಯೂ ನಿರ್ದೇಶನದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಚಿತ್ರಕಥೆಯ ಆ ಓಟ, ಮೊದಲಾರ್ಧದ ಅತ್ಯಂತ ಬಿಗಿ ನಿರೂಪಣೆ ಎಲ್ಲವೂ ಸೂಪರ್. ಆದರೆ ಹಾಡುಗಳ ಪ್ಲೇಸ್ಮೆಂಟ್, ಮಿತಿ ಮೀರಿದ ಹಿಂಸೆ, ಕ್ಲೀಷೆಯಾಗಿ ಉಳಿಯುವ ಕಥೆ ಚಿತ್ರಕ್ಕೆ ಬಿದ್ದ ಹೊಡೆತಗಳು.
'ವಾಜಪೇಯಿ, ಕಲಾಂ, ಹಜಾರೆ ಎಲ್ಲಾ ಬ್ಯಾಚುಲರ್ ಗಳೇ, ದೇಶಾನೆ ಅವ್ರಿಗೆ ಕೊಟ್ಟಿದ್ವಿ, ಬ್ಯಾಚುಲರ್ ಗಳಿಗೆ ಮನೆ ಬಾಡಿಗೆ ಕೊಡಕ್ಕೆ ಯೋಚ್ನೆ ಮಾಡ್ತಾರೆ' ಮುಂತಾದ ಚುರುಕು ಸಂಭಾಷಣೆ ಬಂದಾಗ ಗುರುಪ್ರಸಾದ್ ಕಾಣಿಸುತ್ತಾರೆ.

ಪುನೀತ್: 
ಪುನೀತ್ ರ ಸುಮಾರುಎಲ್ಲಾ ಚಿತ್ರಗಳಂತೆ ಇಲ್ಲಿಯೂ ಅವರನ್ನ ಅತ್ಯಂತ ಸಂಭಾವಿತನಂತೆ ತೋರಿಸಲಾಗಿದೆ. ಹುಡುಗಿಯನ್ನು ಕಣ್ಣೆತ್ತಿ ನೋಡಲ್ಲ, ಐಟಮ್ ಡ್ಯಾನ್ಸರನ್ನು  ಮುಟ್ಟಲ್ಲ, ನಾಯಕಿಯೇ ಪ್ರಪೋಸ್ ಮಾಡ್ಬೇಕು ಇತ್ಯಾದಿ.
ಒಂದು ಹೊಸತನವೆಂದರೆ ಅದು ಪುನೀತ್ ರ ದ್ವಿತೀಯಾರ್ಧದ ಪಾತ್ರ. ಪೋಷಾಕಿನಲ್ಲು, ಪೋಷಣೆಯಲ್ಲೂ. ಅದು ಅಪ್ಪು ನ ಇಮೇಜಿಗೆ ವಿರುದ್ಧದ ಪಾತ್ರ. ಅದರಲ್ಲೂ ಅಪ್ಪು ಸೈ ಎನಿಸಿ ಇಮೇಜಾತೀತ ನಟರಾಗಿ ಹೊರಹೊಮ್ಮಿದ್ದಾರೆ.

ಹಾಡು:
ಹರಿಕೃಷ್ಣ ರ ಹಿನ್ನಲೆ ಸಂಗೀತ ಚಿತ್ರದ ವೇಗಕ್ಕೆ ಮತ್ತಷ್ಟು ಬಲಕೊಟ್ಟಿದೆ. ಆದರೆ ಹಾಡುಗಳು ನಿರಾಸೆ ಮೂಡಿಸುತ್ತದೆ. ಅದರ ರಾಗ ಸಂಯೋಜನೆಯಿಂದಲ್ಲ. ಅವುಗಳ ಪ್ಲೇಸ್ಮೆಂಟ್ ಇಂದ. 'ಹಲ್ಲೋ 123' ಐಟಮ್ ನಂಬರ್ 'ಪಂಕಜ'ಳ ನೆನಪಿಗಾದರೆ, 'ಕೆಂಪಾದೋ ಕೆಂಪಾದೋ' ಹಾಡು ಚಿತ್ರದ ಆ ಹಂತಕ್ಕೆ ಅಷ್ಟೇನೂ ಅವಶ್ಯವಲ್ಲ.

ಇತರೆ:
ಭಾವನ ಪ್ರಪೋಸ್ ಮಾಡೋ ದೃಶ್ಯದಲ್ಲಿ ಹೈಲೈಟ್ ಆಗ್ತಾರೆ. ಯೋಗಿಯ ಪಾತ್ರ ಪೋಷಣೆಯಲ್ಲಿ 'ಹುಡುಗರು' ಚಿತ್ರದ ಛಾಯೆಯಿದೆ. ದೀಪು ಸಂಕಲನ ನಿಜಕ್ಕೂ ಚೆನ್ನಾಗಿದೆ. 'ಏನ್ ಸ್ಪೀಡ್ ಗುರು ಫಿಲಮ್ಮು' ಅನ್ಸಿದ್ರೆ ಕ್ರೆಡಿಟ್ಸ್ ಟು ದೀಪು.
ಸುಕುಮಾರ್ ಕ್ಯಾಮೆರ ಕೆಲಸ ಚೇಸಿಂಗ್, ಫೈಟ್ ದೃಶ್ಯಗಳು ಮತ್ತು ಕೆಲವು ಲಾಂಗ್ ಶಾಟ್ ಗಳು ಚಿತ್ರಕ್ಕೆ ಕಳೆತರುತ್ತವೆ.

ಲಾಸ್ಟ್ ಪಂಚ್:
ಮನುಷ್ಯ ಸಂಘಜೀವಿ ಎಂಬ ಸಂದೇಶ ಚಿತ್ರ ಶುರುವಾಗುವ ಮುಂಚೆಯೇ ಹೇಳುವುದು ಹಾಲಿವುಡ್ ಸ್ಟೈಲ್ ಆಫ್ ಮೇಕಿಂಗ್. ಇದನ್ನ ಸಾರಲು ತಮಿಳಿನ ಒಂದು ಚಿತ್ರವನ್ನು ಡಾ! ರಾಜ್ ಸಂಸ್ಥೆ  ಕನ್ನಡಕ್ಕೆ ರೀಮೇಕ್ ಮಾಡುವ ಬದಲು
ಇದೇ ಸಂದೇಶವನ್ನು ಹೇಳಲು ಇದರಪ್ಪನಂತಹ ಕಥೆಗಳು ಕನ್ನಡದಲ್ಲಿ ಸಿಗುತ್ತಿದ್ದವು ಎಂದೆನಿಸುವುದು ಪ್ರತಿಯೊಬ್ಬ ಸ್ವಾಬಿಮಾನಿ ಕನ್ನಡಿಗನ ಒಮ್ಮತ ಅಭಿಪ್ರಾಯ.



~ಹೊಗೆ