ನಾಲ್ಕು ವರ್ಷದಿಂದ ಬೆಂಗಳೂರಿನಲ್ಲಿ ನೆಲೆಸಿರೋ ಆಕೆ ಕೇಳ್ತಾಳೆ  "Who is Rajkumar" !!!

ಹಲವು ಕಾಡುವ ಘಟನೆಗಳು

ಘಟನೆ ೧:

ಅವನ ಹೆಸರು ಭಾರ್ಗವ. ಪ್ರತಿಷ್ಠಿತ ಐಟಿ ಕಂಪನಿಯೊಂದರಲ್ಲಿ ಕೆಲಸ. ಸುಮಾರು ೨ ವರ್ಷದಿಂದ ಬೆಂಗಳೊರಿನಲ್ಲಿ ನೆಲೆಸಿದ್ದಾನೆ. ಅವನ ಊರು ತಿರುಪತಿ. ಇಷ್ಟು ದಿನ ಯಾವುದೋ ತೆಲುಗಿನವರೇ ನಡೆಸುವ ಪಿಜಿಯಲ್ಲಿದ್ದ ಆತ, ಈಗ ತನ್ನ ತಂದೆ ತಾಯಿಯನ್ನು ಬೆಂಗಳೂರಿಗೆ ಕರೆತರಲು ನಿರ್ಧರಿಸಿದ್ದಾನೆ. ಈ ಊರು ಅವನಿಗೆ ಬಾಳಾನೆ ಹೊಂದಿಕೆಯಾಗಿದೆಯಂತೆ.
ಅವನಿಗೆ ಹೊಂದಿಕೆ ಆಗಿರೋದಲ್ಲ. ಈ ಬೆಂಗಳೂರೇ ಹಾಗೆ, ಎಲ್ಲರನ್ನು ಹೊಂದಿಸಿಕೊಂಡು ಬಿಡುತ್ತದೆ. ೨ ವರ್ಷದಿಂದ ಇಲ್ಲಿದ್ದರೂ ಒಂದು ನಯಾಪೈಸೆ ಕನ್ನಡ ಕಲಿಯದೆ ಇಲ್ಲಿ ಬಾಳಿ ಬದುಕಿದ್ದಾನೆ ಈ ಭಾರ್ಗವ ಕುಮಾರ. Wow ಅಲ್ವ. ಒಮ್ಮೆ ನಾನು ಅವನು ಹೀಗೆ ಮಾತಿಗೆ ಸಿಕ್ಕಾಗ ಆದ ಸಂಭಾಷಣೆ ಹೀಗಿತ್ತು.

ನಾನು - What man? 
Heard that you are staying with your parents now.

ಆತ - Ya man. I made them shift here. 
We got a rented house in Banashankari.

ನಾನು - Nice locality. Till now, you were staying in martalli and you managed in telugu everywhere. Now Banashankari is kind of old bangalore dude. You have to learn Kannada.

ಆತ - No dude. Actually my house owner is also Telugu guy. So no worries. We can manage with Telugu only. Infact, we got it for a cheaper rate as we were telugu.

ನಾನು ಒಂದು ಕ್ಷಣ ಅವಕ್ಕಾದೆ. ಏನು ತೋಚದೆ ಮೇಲ್ ಬಾಕ್ಸ್ ರಿಫ್ರೆಶ್ ಮಾಡಿದೆ. ಹೊಸ ಮೇಲೊಂದು ಬಂದಿತ್ತು. ಅದರತ್ತ ಬಲವಂತವಾಗಿ ಗಮನ ಹರಿಸಿದೆ.
-------

ಘಟನೆ ೨:
ಉತ್ತರಪ್ರದೇಶದ ಕಾನ್ಪುರದ ಯುವತಿಯೊಬ್ಬಳು ಹೊಸದಾಗಿ ಬೆಂಗಳೂರಿಗೆ ಕೆಲಸ ಅರಸಿ ಬಂದಿರುತ್ತಾಳೆ. ಆ ಮಹಾತಾಯಿಯನ್ನು ಅಷ್ಟು ದೂರದಿಂದ ಬೆಂಗಳೂರಿಗೆ ಬರಲು ಅದೇನು ಸೆಳವು ಈ ಊರಲ್ಲಿ ಎಂದು ತಿಳಿದುಕೊಳ್ಳಲು ಪ್ರಶ್ನಿಸಿದಾಗ, ಅವಳು ಹೀಗೆ ಹೇಳ್ತಾಳೆ.
"ನಾನು ನನ್ನ ತಾಯಿಗೆ ಕೇಳಿದೆ. ಡೆಲ್ಲಿ, ಮುಂಬೈ, ಬೆಂಗಳೂರು ಈ ಮೂವರಲ್ಲಿ ನಾ ಎಲ್ಲಿ ಹೋಗಿ ಕೆಲ್ಸಕ್ಕೆ ಸೇರಲಿ ಅನ್ತ. ನನ್ನ ತಾಯಿ ಅಂದ್ರು, ಡೆಲ್ಲಿ ಸುರಕ್ಷಿತವಲ್ಲ, ಮುಂಬೈ ಸುರಕ್ಷಿತವೂ ಅಲ್ಲ, ಆರ್ಥಿಕವಾಗಿಯೂ ಅಲ್ಲಿ ತಂಗುವಿಕೆ ಕಷ್ಟ. ಬೆಂಗಳೂರು ದೂರವಾದರು ಅಲ್ಲಿಯ ಸಂಸೃತಿಯಲ್ಲಿ ಹೆಚ್ಚೇನು ವ್ಯತ್ಯಾಸವಾಗಲಾರದು. ಆದ್ರಿಂದ ಬೆಂಗಳೂರಿಗೆ ಬಂದೆ" ಅಂತ ಸ್ಪಷ್ಟ ಉತ್ತರ ಕೊಟ್ಟಳು ಆ ಕಾನ್ಪುರದ ಬಾಲೆ. 
ನಾನೂರು ಚಿಲ್ಲರೆ ಕಿಮೀ ದೂರದ ದೇಶದ ರಾಜಧಾನಿ ಬಿಟ್ಟು, ಎಲ್ಲರನ್ನು ಬಾಚಿತಬ್ಬುವ ಆರ್ಥಿಕ ರಾಜಧಾನಿ ಮುಂಬೈಯನ್ನು ಬದಿಗೊತ್ತಿ, ಸಾವಿರದ ಎಂಟುನೂರು ಕಿಮೀ ದೂರದ ಬೆಂಗಳೂರು ಆಕೆಯನ್ನು ಭರಸೆಳೆದಿತ್ತು.
-------

ಘಟನೆ ೩:
ಹೆಸರು ವಿನಯ್. ಪಕ್ಕದ ಆಂಧ್ರದವ. ಇತ್ತೀಚೆಗಷ್ಟೆ ಅವ ಬೆಂಗಳೂರಿನಿಂದ ಚೆನ್ನೈಗೆ ಹೋಗಬೇಕಾಯ್ತು. ಅಲ್ಲಿ ಮತ್ತೊಂದು ಕಂಪನಿಯಲ್ಲಿ ಹೆಚ್ಚಿನ ಸಂಬಳದ ಕೆಲಸ ಸಿಕ್ಕಿತ್ತು. ಅವನಿಗೊಂದು ಗಿಫ್ಟ್ ಕೊಟ್ಟು ಕಳಿಸುವ ಸಂದರ್ಭದಲ್ಲಿ ನಮ್ಮ ತಂಡದ ಕೆಲ ತಮಿಳರು,  ಚೆನ್ನೈ ನಲ್ಲಿ ಹೇಗೆ ಬದುಕಬೇಕು, ಅಲ್ಲಿ ತಮಿಳು ಕಲಿಯಲೇಬೇಕು, ಅದು ಬೆಂಗಳೂರಿನಂತಲ್ಲ ಎಂಬ ಮೊದಲಾದ ಟಿಪ್ಸ್ ಕೊಡುತ್ತಿದ್ದರು. ಆಗ ಅವನಂದ. "ನಾನು ಬೆಂಗಳೂರಿಗೆ ಬರುವಾಗ ಯಾರೂ ಇಂಥ ಟಿಪ್ ಕೊಡಲೇ ಇಲ್ಲ" ಅಂತ.
 -------

 ಘಟನೆ ೪:
ಅಲ್ಲೊಂದು ಮಾಮೂಲಿ ಟೀಮ್ ಮೀಟಿಂಗ್ ನಡೀತಿತ್ತು. ಎಲ್ಲ ಸೇರಿ ಹರಟೋದು, ಕಿಚಾಯಿಸೋದು ನಡೀತಿತ್ತು. ಹಾಗೆ ಮಾತು ಬೆಂಗಳೂರು, ಸಿಟಿ ಬಸ್ಸು, ಕನ್ನಡ, ಚಿತ್ರಗಳು ಹೀಗೆ ಸಾಗುತಿತ್ತು. ಆಗ ಅಲ್ಲೊಂದು ಪ್ರಶ್ನೆ ಒಬ್ಬಳ ಬಾಯಿಂದ ಹಾರಿ ಬಂತು ನೋಡಿ. ಪಿತ್ತ ಒಂದೇ ಸಮಕ್ಕೆ ನೆತ್ತಿಗೇರಿತ್ತು.ಅವಳಾಡಿದ ಮಾತೇನು ಗೊತ್ತಾ.
"Who is Rajkumar?" ಅನ್ನೋದೆ.
ಥತ್ ಅವಳ ಮೊಕಕ್ಕಿಷ್ಟು ಅನ್ಕೊಂಡೆ.. ಬರೋಬ್ಬರಿ ನಾಕು ವರ್ಷಗಳ ಬೆಂಗಳೂರಿನಲ್ಲಿ ಇದ್ದಾಳೆ ಉತ್ತರದ ಯುವತಿ. ತಕ್ಷಣ ಎದ್ದು ನಿಂತು ಅಣ್ಣಾವ್ರ ಬಗ್ಗೆ ಇದ್ಬದ್ ವಿಷಯವನ್ನೆಲ್ಲಾ ' ರಣಚಂಡಿಗೆ ಔತಣವೀಯುವ ' ಫೋರ್ಸಲ್ಲಿ ಹೇಳಿಬಿಡೋಣ ಅನ್ನಿಸ್ತು. ಆದರೆ ಹೇಳುವ ಭರದಲ್ಲಿ ಮುಖ್ಯ ವಿಷಯಗಳು ಮರೆತು ಅಣ್ಣಾವ್ರಿಗೆ ಧಕ್ಕೆ ಆಗಬಾರದು ಅಂತ ಸುಮ್ಮನೆ ಬಡಬಡಿಸುವ ಉದ್ರೇಕವನ್ನು ತಡೆಹಿಡಿದೆ. ಅಣ್ಣಾವ್ರಂಥ ಅವರನ್ನೇ ಅವಳಿಗೆ ಗೊತ್ತುಮಾಡಿಸದಿರುವ ಅವಳ ಸುತ್ತಮುತ್ತಲಿನ ಬೆಂಗಳೂರಿಗೆ ಹಿಡಿಶಾಪಹಾಕುತ್ತ ಕೂತೆ. ಸಿಕ್ಕ ಸಿಕ್ಕ ಕನ್ನಡಿಗ ಗೆಳೆಯರಿಗೆಲ್ಲ ವಿಷಯ ತಿಳಿಸಿದೆ. ಅವರು ಈ ಅತಿರೇಕವನ್ನು ಕಂಡು ನನ್ನಂತೆಯೇ ಭಾವಾವೇಶಕ್ಕೆ ಒಳಗಾಗುತ್ತಾರೆ ಎಂದು ನಿರೀಕ್ಷಿಸುತ್ತ ಇದ್ದರೆ, ಅಲ್ಲಾಗಿದ್ದೆ ಬೇರೆ. ಮುಕ್ಕಾಲು ಜನ 'ಅದು ಕಾಮನ್ ಮಗ, ನಮ್ ಆಫೀಸ್ ಅಲ್ಲೂ ಎಷ್ಟೊಂದ್ ಜನಕ್ಕೆ ರಾಜ್ಕುಮಾರ್' ಗೊತ್ತಿಲ್ಲ ಅಂದಾಗ ನನ್ನೆದೆ ಕಂಪಿಸಿತು. ಏಕೆಂದರೆ ರಾಜ್ ಒಬ್ಬ ಮನುಶ್ಯನಲ್ಲ. ಅವರೊಂದು ಸಂಸ್ಕೃತಿಯ  ಪ್ರತೀಕ, ಒಂದು ನಾಡಿನ ಪ್ರತಿನಿಧಿ, ಒಂದು ಭಾಷೆಯ ಲಾಂಛನ, ಕನ್ನಡ ನಾಡಿನ ಜನರ ಹೃದಯಸಾಮ್ರಜ್ಯದಲ್ಲಿ ನೆಲೆಸಿರೋ ಒಬಾ ದೈವೀಪುರುಷ. ಅಂಥವರನ್ನೇ ನಾವು ನಮ್ಮ 'ಅತಿಥಿ'ಗಳಿಗೆ ಪರಿಚಯ ಮಾಡಿಕೊಡುವಲ್ಲಿ ವಿಫಲರಾಗಿದ್ದೇವೆ ಅಂದ್ರೆ ಇದೊಂಥರ ಹೆಂಗಾಯ್ತು ಅಂದ್ರೆ "ಆಗ್ರಾ ಗೆ ಕರೆದು ತಾಜ್ಮಹಲ್ ತೋರಿಸದೆ ಇರೋ ಹಾಗೆ ಆಯ್ತು".


ಬರಿಯ ತೆರೆಯಮೇಲೆ ಭರ್ಜರಿಯಾಗಿ,  ಮಾತ್ರವಲ್ಲದೆ ಆಚೆ ತಮ್ಮ ಸರಳತನದಿಂದಲೇ ವಿಜೃಂಭಿಸಿದ ರಾಜಕುಮಾರ್ ನನ್ನೇ ನಮ್ಮ ಅತಿಥಿಗಳಿಗೆ ಪರಿಚಯಿಸದ ನಾವು ಅವರ್ಣನೀಯವಾಗಿ ಕನ್ನಡಕ್ಕೆ ದುಡಿದ, ಶ್ರಮಿಸಿದ,  ಎತ್ತಿಹಿಡಿದ ಕುವೆಂಪು, ಕಾರಂತರಂಥ ಲೆಕ್ಕವಿಲ್ಲದಷ್ಟು ಮಹಾಶಯರನ್ನು ಪರಿಚಯಿಸುತ್ತೀವಾ. ಅವರ ಪರಿಚಯ ನಮ್ಗಿದ್ರೆ ತಾನೇ ನಾವು ಮಿಕ್ಕವರಿಗೆ ಅವರ ಬಗ್ಗೆ ಹೇಳೋದು. ಹೀಗೆ ಸಾಗ್ತಿದ್ರೆ ಮುಂದೊಂದಿನ ಕರ್ನಾಟಕದಲ್ಲಿ ಕನ್ನಡಿಗರೇ ಇತರರ  'ಅತಿಥಿ'ಗಳಾಗುವುದು ನಮಪ್ಪ್ರಾಣೆ ಅತಿಶಯವೇನಲ್ಲ !!!

~ಹೊಗೆ