ಭ್ರಷ್ಟಾಚಾರ ಶುರುವಾಗುವುದು ಬಸ್ಸಿಂದ
ಜಗತ್ತಿನ ತಜ್ಞರೆಲ್ಲ ಒಂದುಗೂಡಿ ಹುಡುಕಿದರೂ ಸಿಗದಷ್ಟು ಆಳವಾಗಿ ಬೇರೂರಿರುವ ಭ್ರಷ್ಟಾಚಾರ ಎಂಬ ಹೆಜ್ಜಾಲದ ಮೂಲವನ್ನು ನಾನು ಸೀದಾ
ಒಂದು ಬಸ್ಸಿಂದ ಭ್ರಷ್ಟಾಚಾರ ಶುರು ಆಗುತ್ತೆ ಎಂಬ ಆರೋಪ ಮಾಡಿ ತೋರಿಸುವ ಅಂಕಣವೊಂದನ್ನು ಬರೆಯ ಹೊರಟಿದ್ದೇನೆ. ಸ್ವಾಗತ. ಸರಿ ಶುರುಮಾಡ್ತೀನಿ.
ಒಂದು ಬಸ್ಸಿಂದ ಭ್ರಷ್ಟಾಚಾರ ಶುರು ಆಗುತ್ತೆ ಎಂಬ ಆರೋಪ ಮಾಡಿ ತೋರಿಸುವ ಅಂಕಣವೊಂದನ್ನು ಬರೆಯ ಹೊರಟಿದ್ದೇನೆ. ಸ್ವಾಗತ. ಸರಿ ಶುರುಮಾಡ್ತೀನಿ.
'ರೈಯ್ಯಾ....' !!
ನಾನು ಚಿಕ್ಕಂದಿನಲ್ಲಿ ಬಸ್ಸಿನ ಟಿಕೆಟ್ ಗಳನ್ನು ಸಂಗ್ರಹಿಸುವ ಆಟವಾಡುತ್ತಿದ್ದೆ. ಮನೆಗ್ ಬಂದ ಅತಿಥಿಗಳು ಬಸ್ಸಲ್ಲೇನಾದ್ರೂ ಬಂದಿದ್ರೆ ಅವರು ಚಪ್ಪಲಿ ಬಿಡುವ ಮೊದಲೇ ಅವರಿಂದ ಚೀಟಿಗಳನ್ನು ಪಡೆದುಬಿಡುವಷ್ಟು ಆತುರ. ಈ ಚೀಟಿ ಸಂಗ್ರಹದ ಆಟ ಎಷ್ಟು ದಿನಗಳಿತ್ತು, ಹೇಗೆ ಶುರುವಾಯ್ತು,ಯಾವಾಗ ನಿಲ್ಲಿಸಿದೆ ಇವೆಲ್ಲ ನನಗ್ಯಾಕೋ ನೆನಪಿಲ್ಲ. ಆದರೆ ಕಲೆ ಹಾಕುವ ಕೆಲಸ ಏಕೆ ನಿಲ್ಲಿಸ್ದೆ ಅಂತ ಈಗಲೂ ನೆನಪಿದೆ !!
ಒಂದು ದಿನ ನಾನು ಇದುವರೆಗೂ ಎಷ್ಟು ಟಿಕೆಟ್ ಗಳನ್ನು ಕಲೆಹಾಕಿದ್ದೀನಿ ಎಂದು ನೊಡಲು ಮನೆಯ ಡ್ರೆಸ್ಸಿಂಗ್ ಟೇಬಲ್ ಕೆಳಗಿನ ಗೂಡು ತೆಗೆದು ನೋಡಿದೆ. ಸುಮಾರು ಚೀಟಿಗಳನ್ನು ಗುಡ್ಡೆಹಾಕಿದ್ದೆ. ಪರವಾಗಿಲ್ಲ ಶಭಾಶ್ ಅನ್ನಿಸುವ ಹೊತ್ತಿಗೆ ತಕ್ಷಣ ಇನ್ನೊಂದು ಯೋಚನೆ ಬಂತು. ಈ ಚೀಟಿ ಗುಡ್ಡೆಯನ್ನೆಲ್ಲ ಏನು ಮಾಡುವುದು?? ಉತ್ತರವಿಲ್ಲದ ಪ್ರಶ್ನೆ. ಕೆಲವು ಸಮಯ ಉತ್ತರ ಹುಡುಕಲು ಪ್ರಯತ್ನಿಸಿದೆ, ಊಹುಂ ಏನು ಹೊಳಯಲಿಲ್ಲ.. ಅದರ ಸಂಗ್ರಹ ಕಾರ್ಯ ನಿರರ್ಥಕ ಎನ್ನಿಸಿತು. ಅಂದಿಗೆ ನನ್ನ ಪ್ರೀತಿಯ ಚೀಟಿ ಸಂಗ್ರಹಕ್ಕೆ ಚ್ಯುತಿಬಿತ್ತು.
ಹೀಗೆ ಒಂದು ಕಾಲದಲ್ಲಿ ಅತ್ಯಂತ ಮೋಹದಿಂದ ಬಸ್ಸಿನ ಟಿಕೆಟ್ ಗಳನ್ನು ಕಲೆಹಾಕುತ್ತಿದ್ದ ನಾನು ಸಣ್ಣ ವಯಸ್ಸಿನಲ್ಲೇ ಆಧ್ಯಾತ್ಮಿಕವಾಗಿ ಯೋಚಿಸಿ ಅದಕ್ಕೊಂದು ತೆರೆ ಎಳೆದೆ. ಆದರೆ ಮಜಾ ನೋಡಿ.. ಆಗ ಕಳೆದುಕೊಂಡಿದ್ದ ಮೋಹ ಈಗ ಮತ್ತೆ ನನ್ನನ್ನ ಆವರಿಸಿದೆ. ಸ್ವೀಕರಿಸಿದ್ದ ಸನ್ಯಾಸತ್ವಕ್ಕೆ ವಿದಾಯ ಹೇಳಿ ಮತ್ತೆ ಟಿಕೆಟ್ ಮೇಲಿನ ಮೋಹಕ್ಕೆ ಒಳಗಾಗಿದ್ದೇನೆ. ಆದರೆ ಈ ಬಾರಿ ಅದಕ್ಕೊಂದು ಅರ್ಥವಿದೆ.
ಒಮ್ಮೆ ಮೈಸೂರಿನ ರೈಲ್ವೇ ಸ್ಟೇಷನ್ ಇಂದ ಪ್ರೀಮಿಯರ್ ಸ್ಟುಡಿಯೋ ಹಾದು ಹೋಗುವ ಇಲವಾಲದ ಬಸ್ ಹತ್ತಿದ್ದೆ. ನನ್ನ ನಿಲ್ದಾಣ ಸ್ಟುಡಿಯೋ. ಎಂದಿನಂತೆ ಸಾಗುತ್ತಿದ್ದ ಬಸ್ ಗೆ ಇದ್ದಕಿದ್ದಂತೆ ಟಿಕೆಟ್ ಚೆಕಿಂಗ್ ಇನ್ಸ್ಪೆಕ್ಟರ್ ಹತ್ತಿದ್ರು. ಒಬ್ಬ ಕಾಲೇಜು ಹುಡುಗನ ಬಳಿ ಟಿಕೆಟ್ ಇರಲಿಲ್ಲ. ಫೈನ್ ಹಾಕಲು ಸಜ್ಜಾದ್ರು. ಆದ್ರೆ ವಿಷಯ ಏನಂದ್ರೆ ಪಾಪ ಅವನು ಆಗ ತಾನೇ ಬಸ್ ಹತ್ತಿದ್ದ, ಕಂಡಕ್ಟರ್ ಇನ್ನು ಅವನ ಬಳಿ ಬಂದೆ ಇರ್ಲಿಲ್ಲ. ಆದ್ರೆ ಇನ್ಸ್ಪೆಕ್ಟರ್ ಯಾಕೋ ಅವನ ಮಾತು ಕೇಳಲು ಸಿದ್ಧನಿಲ್ಲ. ಕಂಡಕ್ಟರ್ ಸೇರಿದಂತೆ ಇಡಿ ಬಸ್ಸಿಗೆ ಬಸ್ಸೇ ಆ ಹುಡುಗನನ್ನು ಸಮರ್ಥಿಸಿದರೂ ಇನ್ಸ್ಪೆಕ್ಟರ್ ಮಾತು ಕೇಳಲು ಸಿದ್ಧನಿಲ್ಲ. ಕಂಡಕ್ಟರ್ ಸಂಬಳವೂ ಕಟ್, ಹುಡುಗನಿಗೂ ಅದೆಷ್ಟೋ ಫೈನ್ ಅಂತೆಲ್ಲ ಮಾತಾಗುತಿತ್ತು. ಅಲ್ಲಾ ಇನ್ಸ್ಪೆಕ್ಟರ್ ಗಳು ಇಷ್ಟೊಂದ್ ಬಿಗಿ ಇದ್ರೂ ಕೆಲವರು ಟಿಕೆಟ್ ಕೊಡೋದೇ ಇಲ್ವಲ ಅಂತ ಮನದಲ್ಲೇ ಯೋಚಿಸುತ್ತಾ ಇದ್ದೆ. ಅಷ್ಟೊತ್ತಿಗೆ ನನ್ನ ಸ್ಟಾಪ್ ಬಂತು. ಇಳಿದೆ.
ಬೆಂಗಳೂರಿನ ವೈಟ್ ಫೀಲ್ಡ್ ನ ಹೋಪ್ ಫಾರ್ಮ್ ಸಿಗ್ನಲ್ ಇಂದ ಐಟಿಪಿಬಿ (ಅಂತರರಾಷ್ಟ್ರೀಯ ಟೆಕ್ ಪಾರ್ಕ್) ಗೆ ಎರಡೇ ಸ್ಟಾಪು. ವೋಲ್ವೋ ಹತ್ತಿದರೆ ಹತ್ತು ರೂಪಾಯಿ. ಮಾಮೂಲಿ ಬಸ್ ಹತ್ತಿದರೆ ಐದು. ವೋಲ್ವೋ ಹತ್ತಿದರೆ ಹತ್ತಕ್ಕೆ ಒಂಭತ್ತು ಸಾರಿ ನಿಯತ್ತಾಗಿ ಟಿಕೆಟ್ ಕೊಡ್ತಾರೆ. ಅದೇ ಮಾಮೂಲಿ ಬಸ್ ಹತ್ತಿದ್ರೆ ಹತ್ತಕ್ಕೆ ಒಂಭತ್ತು ಸಾರಿ ಟಿಕೆಟ್ ಕೊಡಲ್ಲ. ಘಟನೆಯೊಂದು ಹೀಗೆ ನಡೀತು -
ನಾನು ಹೋಪ್ ಫಾರ್ಮ್ ನಲ್ಲಿ ಮಾಮೂಲಿ ಬಸ್ ಹತ್ತಿದೆ. ಕಂಡಕ್ಟರ್ ಬಂದ.
ಕಂ - ಮೂರ್ ರುಪಾಯಿ ಕೊಡಿ. ನಾನು ಕೊಟ್ಟೆ. ಟಿಕೆಟ್ ಕೊಡದೆ ಮುಂದಕ್ಕೆ ಹೋದ. ನಾನು ವಾಪಸ್ ಕರೆದು ಟಿಕೆಟ್ ಕೊಡಿ ಅಂದೆ. ಇನ್ನು ಎರಡು ರುಪಾಯಿ ಕೊಡಿ ಅಂದ. ಕೊಟ್ಟೆ, ಟಿಕೆಟ್ ಇಶ್ಯೂ ಆಯ್ತು. ಹೀಗೆ ಪ್ರತಿ ಸಾರಿಯು ನನಗೆ ಆಗುತ್ತಿತ್ತು. ಆದ್ರೆ ಅಂದೇಕೋ ಕಂಡಕ್ಟರ್ ನನ್ನು ಕಿಚಾಯಿಸಲು ಮನಸಾಯ್ತು. ನಾನು - ಸ್ವಾಮಿ.. ಟಿಕೆಟ್ ಐದು ರುಪಾಯ್ ಆದ್ರೆ, ಮೊದ್ಲು ಮೂರ್ ರುಪಾಯ್ ಏನಿಕ್ ಇಸ್ಕೊಂಡ್ರಿ? ಕಂಡಕ್ಟರ್ ಬಳಿ ಉತ್ತರವಿಲ್ಲ, ನನ್ನದು ಮತ್ತದೇ ಪ್ರಶ್ನೆ. ಕಂಡಕ್ಟರ್ ಗೆ ನೆತ್ತಿಗೇರಿತು, ಅವಮಾನ ಆಯ್ತು ಯಾಕಂದ್ರೆ ನಾನು ಎಲ್ಲರಿಗೂ ಕೇಳುವಂತೆಯೇ ಮಾತಾಡುತ್ತಿದ್ದೆ. ಇದಕ್ಕಿದ್ದಂತೆ ಅವನು ಜೋರಾಗಿ ಅಸಂಬದ್ಧ ಮಾತುಗಳನ್ನು ಆಡಲು ಶುರುಮಾಡಿದ. ಕೊನೆಗೆ ಮಾತಿಗೆ ಮಾತು ಬೆಳೆದು ಕೊನೆಗೊಂದು ಮಾತು ಅವನ ಬಾಯಿಂದ ಹೊರ ಬಂತು. ನನಗೆ ಮಾತೇ ಹೊರಡಲಿಲ್ಲ. ಅವ ಹೀಗಂದ - "ಎರಡು-ಮೂರ್ ರೂಪಾಯಿಗೆ ಸಾಯ್ತ್ಯಲ್ಲ. ನಿಮ್ಮಂಥವರಿಂದಾನೆ ಈ ದೇಶ ಹಾಳಾಗಿರೋದು."
ಅಲ್ಲಿ ತನಕ, ಟಿಕೆಟ್ ಕೇಳಿ ಪಡೆಯುವುದರಿಂದ ಸರ್ಕಾರದ ಬೊಕ್ಕಸಕ್ಕೆ ಆಗುವ ಲಾಸ್ ಕಮ್ಮಿ ಆಗತ್ತೆ, ಭ್ರಷ್ಟಾಚಾರ ತಡೆ, ಅದು ಇದು ಎಂದು ತಿಳಿದಿದ್ದ ನನಗೆ ಆ ಮಾತು ಕೇಳಿ ನನ್ನೊಳಗೆ ಪ್ರಶ್ನೆಯೊಂದನ್ನು ಹುಟ್ಟುಹಾಕಿದ ಅವನ ಅಜ್ಞಾನವನ್ನು ನೋಡಿ ನಗು ಬಂತು. ಅಷ್ಟೊತ್ತಿಗೆ ನನ್ನ ಸ್ಟಾಪೂ ಬಂತು. ಅಶಾಂತ ಮನದಲ್ಲೇ ಕೆಳಗಿಳಿದೆ.
ಹೀಗೆ ಎರಡು ದಿನದಲ್ಲಿ ಎರಡು ವೈರುಧ್ಯ ಘಟನೆಗಳು ಜರುಗಿದವು. ಒಂದರಲ್ಲಿ ಕಂಡಕ್ಟರ್ ತಪ್ಪು, ಮತ್ತೊಂದರಲ್ಲಿ ಪ್ರಯಾಣಿಕನ ತಪ್ಪು. ಒಂದೆರಡು ಮೂರು ರೂಪಾಯಿ ಉಳಿಸಲೋ/ಗಳಿಸಲೋ, ಚಿಲ್ಲರೆ ಇಲ್ಲದ ಕಾರಣಕ್ಕೋ, 'ಏನ್ ಪರವಾಗಿಲ್ಲ' ಧೋರಣೆಯೊಂದಿಗೋ, 'ಅಯ್ಯೋ ಪಾಪ ಕಂಡಕ್ಟರ್ ಬದಿಕೊಳ್ಳಿ' ಎಂಬ ಕರುಣಾಭಾವ ಉಕ್ಕಿ ಹರಿದುದ್ದಕ್ಕೋ .. ಹೀಗೆ ಕಾರಣ ಯಾವುದೇ ಇರಲಿ ನೀವು ಬಸ್ ಹತ್ತಿ ಟಿಕೆಟ್ ಪಡೆಯಲಿಲ್ಲ ಅಂದ್ರೆ ಅದು ಭ್ರಷ್ಟಾಚಾರಕ್ಕೆ ನಾಂದಿ ಹಾಡಿದಂತೆ. ಇಷ್ಟು ಸಣ್ಣಮಟ್ಟದ ಹುಳುಕನ್ನೇ ನಮ್ಮ ಕೈಲಿ ಮುಚ್ಚಲಾಗದಿದ್ದರೇ ಇನ್ನು ದೊಡ್ಡ ಕಂದಕದ ಬಗ್ಗೆ ಮಾತನಾಡುವುದು ದಂಡ. ನಮ್ಮ ಹಣಕ್ಕೆ ಟಿಕೆಟ್ ಪಡೆಯುವಷ್ಟು ಚೈತನ್ಯ ಬೆಳೆಸಿಕೊಳ್ಳಲೇಬೇಕು. ಕೆಲವೊಮ್ಮೆ ಅದಕ್ಕೊಂದು ಸಣ್ಣ ಹೋರಾಟದ, ದನಿಯೆತ್ತಿ ಮಾತನಾಡುವ ಅವಶ್ಯಕತೆ ಇರುತ್ತದೆ, ಖಂಡಿತ ತಪ್ಪಲ್ಲ.
ನಾನು ಪ್ರತೀ ಬಾರಿ ಆ ಹೋಪ್ ಫಾರ್ಮ್ ಜಂಕ್ಷನ್ ಗೆ ಹೋಗಿ ನಿಂತಾಗ ಬರುವ ಬಸ್ಸಿನ ಕಂಡಕ್ಟರ್ ಯಾವುದೇ ಗಲಾಟೆ ಇಲ್ಲದೆ ಟಿಕೆಟ್ ಕೊಡಲಿ ಎಂದು ಭರವಸೆ ಇಟ್ಟುಕೊಂಡಿರುತ್ತೇನೆ. ಆದರೂ ಅದೇಕೋ ಅಲ್ಲಿ ನಿಂತಾಗಲೆಲ್ಲ ಕಾಲು ಕೆರೆದಹಾಗೆ ಆಗತ್ತೆ. ಈಗ ನನ್ನ ಬಳಿ ಬಿಎಂಟಿಸಿ ಕಾಲ್ ಸೆಂಟರ್, ಇಂಟರ್ನೆಟ್ ಪೋರ್ಟಲ್ ಮಾಹಿತಿ ಕೂಡ ಇದೆ ತುರ್ತು ಪರಿಸ್ಥಿತಿಯಲ್ಲಿ ಬಳಸಲು.
ಬಸ್ ಕಂಡಕ್ಟರ್ ಬಗ್ಗೆ ಕಂಪ್ಲೇಂಟ್ ಮಾಡಲು ಬಿಎಂಟಿಸಿ ಕಾಲ್ ಸೆಂಟರ್ ಇದೆ. ಸಾರ್ವಜನಿಕರ ಬೇಜವಾಬ್ದಾರಿ ಧೋರಣೆ, ಅಜ್ಞಾನಗಳ ಬಗ್ಗೆ ಕಂಪ್ಲೇಂಟ್ ಮಾಡಲು ಯಾವ್ ಸೆಂಟರ್ರು ಇಲ್ಲ. ಯಾಕಂದರೆ ಸಾರ್ವಜನಿಕರೇ ಸಮಸ್ಯೆಯ ಸೆಂಟರ್ರಿನಲ್ಲಿರುವವರು.
ಟಿಕೆಟ್ ಕೇಳಿ ಪಡೆಯಿರಿ.
ನಿಮಗೆ ದೊಡ್ಡ ಮಟ್ಟದಲ್ಲಿ ಹೆಮ್ಮೆ ಹುಟ್ಟಿಸುವ ಸಣ್ಣ ಕೆಲಸವದು.
ಬೆಂಗಳೂರಿನಲ್ಲಿ ಸರ್ಕಾರ ನಮಗೆ ಸಾಕಷ್ಟು ಸೌಲಭ್ಯಗಳನ್ನು ನೀಡಿದೆ. ಉಪಯೋಗಿಸುವುದು ಬಿಡುವುದು ನಮಗೆ ಬಿಟದ್ದು.
ಇಂಟರ್ನೆಟ್ ಪೋರ್ಟಲ್ - http://btis.in/bus/ticket
ಬೆಂಗಳೂರಿನಲ್ಲಿ ಸರ್ಕಾರ ನಮಗೆ ಸಾಕಷ್ಟು ಸೌಲಭ್ಯಗಳನ್ನು ನೀಡಿದೆ. ಉಪಯೋಗಿಸುವುದು ಬಿಡುವುದು ನಮಗೆ ಬಿಟದ್ದು.
ಇಂಟರ್ನೆಟ್ ಪೋರ್ಟಲ್ - http://btis.in/bus/ticket
BMTC Call Centre - 1800 425 1663