ಶಾಲಭಂಜಿಕೆ ಎಂಬ ಮನಃರಂಜಿಕೆ

ನಾನು ಈ ಹಿಂದೆ ಸಾಕಷ್ಟು ಕನ್ನಡ ಪುಸ್ತಕಗಳನ್ನು ಓದಿದ್ದರೂ, ಅದರ ಬಗ್ಗೆ ಬರೀಬೇಕು ಅಂತ ಅನ್ನಿಸಿರಲಿಲ್ಲ. Of course, ಭೈರಪ್ಪ, ಅನಂತಮೂರ್ತಿ, ಕಾರಂತ, ತೇಜಸ್ವಿ ಮೊದಲಾದವರ ಸಾಹಿತ್ಯದ ಬಗ್ಗೆ ನಾನೇನ್ ಹೇಳೋದಿರತ್ತೆ.  ಪುಸ್ತಕ ಪ್ರೇಮಿಗಳು ಮುಗಿಬಿದ್ದು ಓದ್ತಾರೆ.

ಆದರೆ ಇಲ್ಲೊಂದು ಪುಸ್ತಕದ ಬಗ್ಗೆ ನಾನು ಹೇಳಲೇಬೇಕು. ಅದು ಛಂದ  ಪುಸ್ತಕ ಪ್ರಕಟಿಸಿರುವ ಶಾಲಭಂಜಿಕೆ ಎಂಬ ಮೈನವಿರೇಳಿಸುವ ಕಥಾ ಸಂಕಲನ. ಇತಿಹಾಸ ಮತ್ತು ವಿಜ್ಞಾನದ ಅಜ್ಞಾತ ಸತ್ಯಗಳ ಅಡಿಗಟ್ಟಿನಲ್ಲಿ ಹೆಣೆಯಲಾದ ಕಥೆಗಳು ರೋಚಕ ಎನಿಸುವ ರೀತಿಯಲ್ಲಿ ಬರೆದಿದ್ದಾರೆ, ಲೇಖಕರಾದ ಡಾ. ಕೆ ಎನ್ ಗಣೇಶಯ್ಯ ನವರು. ಇವರು ಮೂಲತಃ ಜೀವ ಶಾಸ್ತ್ರ ವಿಜ್ಞಾನಿ ಎಂಬುದು ಸೋಜಿಗದ ಸಂಗತಿ.

ಶಾಲಭಂಜಿಕೆ ಎಂಬ ಶಿಲಾಬಾಲಿಕೆ 'ಮೋನಲಿಸ 'ಳಿಗೇ ಸಡ್ಡು ಹೊಡೆಯುವಷ್ಟು ಸುಂದರವಾಗಿದ್ದಳು. ಅ ಶಿಲಾಬಾಲಿಕೆಯನ್ನು ನಿರ್ಮಿಸಿದವ ಕೊಲೆಯಾದ ಕಥೆ, ಅದರ ಹಿಂದಿನ ಮರ್ಮ, ಕರ್ಮಗಳೆಲ್ಲವೂ ಕಥಾ ಸಂಕಲನದ ಮೊದಲ ಕಥೆಯಾದ 'ಶಾಲಭಂಜಿಕೆ' ಹೇಳುತ್ತದೆ. ಈ ಕಥೆಯನ್ನು ಓದಿದ ನಂತರ ನಿಮಗೆ ನನ್ನಂತೆಯೇ ಆ ಶಾಲಭಂಜಿಕೆಯನ್ನು ಜೀವನದಲ್ಲಿ ಒಮ್ಮೆ ನೋಡಬೇಕೆನ್ನಿಸದಿದ್ದರೆ ಕೇಳಿ. ಇಂದಿಗೂ ಅದು ಗ್ವಾಲಿಯರ್ ನಲ್ಲಿದೆಯಂತೆ.


ಹೀಗೆಯೇ ಪುಸ್ತಕದ ಪ್ರತಿಯೊಂದು ಕಥೆಯೂ ನಿಮ್ಮ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ. ಅದೇ ಲೇಖಕರ ಶಕ್ತಿ. 'ಸೋಮನಾಥಪುರದ ವಿಷ್ಣು   ವಿಗ್ರಹ', 'ಬಿಳಿಗಿರಿ ರಂಗ ಬೆಟ್ಟದ ಜೇನುಗಳು'  ಬಗ್ಗೆಯ ಕಥೆಗಳು ನನಗೆ ಎಷ್ಟರ ಮಟ್ಟಿಗೆ ಪ್ರಭಾವ ಬೀರಿದೆ ಅಂದ್ರೆ ಸಿಕ್ಕ ಸಿಕ್ಕವರಿಗೆಲ್ಲ ಅದರ ಬಗ್ಗೆಯೇ ಕೊರಿತಾಯ್ದ್ದೆ. ಕೆಲವು ಕಥೆಗಳನ್ನು ಹೆಣೆದಿರುವ ಶೈಲಿ ಏಕತಾನತೆ ಇಂದ ಕೂಡಿದ್ದರೂ, ಕಥಾವಸ್ತು ಮಾತ್ರ ಅತ್ಯಾಕರ್ಷಕ ಹಾಗು ಅತ್ಯಂತ ನವ್ಯ.

ಕನ್ನಡ ಸಾಹಿತ್ಯಕ್ಕೇ ಹೊಸ ಆಯಾಮ ಕೊಟ್ಟಿರುವ ಇಂತಹ ಪುಸ್ತಕಗಳು ಮತ್ತಷ್ಟು ಬರಲಿ ಎಂಬುದೇ ನನ್ನ ಆಶಯ.
ಉಪಯುಕ್ತ ಮಾಹಿತಿ:
ಪುಸ್ತಕದ ಹೆಸರು: ಶಾಲಭಂಜಿಕೆ
ಪ್ರಕಟಣೆ: ಛಂದ ಪುಸ್ತಕ
ದರ: ೮೦ ರೂಗಳು
ಪ್ರತಿಗಳು: ಸಪ್ನಾ ಬುಕ್ ಹೌಸಲ್ಲಿ ಲಭ್ಯ

ಕಾಸ್ ಕೊಟ್ಟು ಕನ್ನಡ ಪುಸ್ತಕ ಓದಿ!!
" ನೀನ್ ತಗಂಡಿದ್ಯಲ್ಲ ನಿಂದೇ ಒಸಿ ಕೊಡಪ್ಪ ಓದ್ಕೊಡ್ತಿವಿ "  ಅಂತ ಕೆಲವರು ನನ್ನ ಕೇಳಬಹುದು.
" ಸಾರಿ ಸರ್, ನೀವು ಕ್ಯೂನಲ್ಲಿದ್ದೀರಿ, ದಯವಿಟ್ಟು ನಿರೀಕ್ಷಿಸಿ "

೨೦೧೧ರ ಕೊನೆಯ ಬರವಣಿಗೆ.  ೨೦೧೨ ರಲ್ಲಿ ಸಿಗೋಣ ಗೆಳೆಯರೇ. 

~ ಶಶಾಂಕ  

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ