ತರ್ಕಕ್ಕೆ ನಿಲುಕದ ಜಟ್ಟ

ಜಟ್ಟ ಒಬ್ಬ ಮಲೆನಾಡಿನ ಸರ್ಕಾರಿ ತಾತ್ಕಾಲಿಕ ಹುದ್ದೆಯ ವನಪಾಲಕನ ಹೆಸರು. ಅವನಿಗೆ ಜೀವನದಲ್ಲಿ ಎರಡು ಸಮಸ್ಯೆಗಳು. ಒಂದು ಬಹುದಿನಗಳಿಂದ ಇತ್ಯರ್ಥವಾಗದ ಅವನ ಕಾಯಂ ಸರ್ಕಾರಿ ಹುದ್ದೆಯ ಆಕಾಂಕ್ಷೆ ಮತ್ತೊಂದು ಕಾರಣವಿಲ್ಲದೆ ಚಾರಣಿಗನೊಂದಿಗೆ ಓಡಿ ಹೋದ ಅವನ ಹೆಂಡತಿ. ತಾನೇನೂ ಅಷ್ಟು ಕೆಟ್ಟ ಗಂಡನಲ್ಲದಿದ್ದರೂ ಹೆಂಡತಿ ಏಕೆ ಬಿಟ್ಟುಹೋದಳೆಂದು ಅವನಿಗೆ ಕಾಡುತ್ತಿರುವಾಗ ಅವನ ಸಹಾಯಕ್ಕೆ ಬರುವುದು ಭಾರತದ ಸಂಸ್ಕೃತಿಯ ರಕ್ಷಕನೆಂದು ಕರೆದುಕೊಳ್ಳುವ ಒಬ್ಬ ಮನುಷ್ಯ. ಆತ ತನ್ನ ಪ್ರಚೋದನಕಾರಿ ಮಾತುಗಳಿಂದ, ಜಟ್ಟನ ಹೆಂಡತಿ ಓಡಿಹೋದದ್ದಕ್ಕೂ ಈಗಾಗುತ್ತಿರುವ ಅತಿಯಾದ ಪಾಶ್ಚಾತ್ಯದ ಪ್ರಭಾವಕ್ಕೂ ಸಂಬಂಧ ಕಲ್ಪಿಸಿ ಜಟ್ಟನನ್ನು ತಮ್ಮ ಸಂಘದ ಕಾರ್ಯಕರ್ತನನ್ನಾಗಿ ಮಾಡುವಲ್ಲಿ ಯಶಸ್ವಿಯಾಗ್ತಾನೆ.

ಅದೇ ಹೊತ್ತಿಗೆ ಜಟ್ಟನ ಕಾಡಿನ ರಸ್ತೆಯಲ್ಲಿ ತುಂಡುಡುಗೆಯ ಪಾನದ ನಶೆಯಲ್ಲಿ ಕಾರು ಚಲಾಯಿಸಿ ಅಪಘಾತಕ್ಕೀಡಾದ ಹುಡುಗಿಯೊಬ್ಬಳು ಆಗ ತಾನೇ ಕಚ್ಚಲು ಕಲಿತ ಮಗುವೊಂದಕ್ಕೆ ಹೆಬ್ಬೆರಳು ಸಿಕ್ಕಂತೆ ಜಟ್ಟನಿಗಾಗಿರುವ ಮಾನಸಿಕ ಪ್ರಚೋದನೆಗೆ ಸರಿಯಾದ ಬಲಿಯಂತೆ ಸಿಕ್ಕಿಕೊಳ್ಳುತ್ತಾಳೆ. ಆದರೆ ಆಕೆ ಉಗ್ರಸ್ತ್ರೀವಾದಿಯಾದ ಕಾರಣ ಜಟ್ಟ ಮೀನು ಹಿಡಿಯಲು ಹೋಗಿ ಮೊಸಳೆ ಹಿಡಿದು ಬಿಡಿಸಿಕೊಳ್ಳಲಾಗದ ಅಸಹಯಾಕ ಸ್ಥಿತಿಯಲ್ಲಿ ಬೀಳುತ್ತಾನೆ. ಇದರ ಮಧ್ಯೆ ಜಟ್ಟನ ದಿನನಿತ್ಯದ ಕೆಲಸವಾದ ಕಾಡುಗಳ್ಳರ ಪತ್ತೆ, ಮರ ಸಂರಕ್ಷಣೆ, ನಿಷ್ಟಾವಂತ ಅಧಿಕಾರಿಯ ಒಡನಾಟ, ಖದೀಮರ ರಾಜಕೀಯ ಪ್ರಭಾವ  ಇತ್ಯಾದಿಗಳು ಬಿಡುವಿಲ್ಲದೇ ನಡೆಯುತ್ತಿರುವಂತೆ ಕಥೆಗೆ ಇನ್ನಷ್ಟು ಆಯಾಮ ಅತ್ಯಂತ ಸಹಜವಾಗಿ ದೊರೆಯುತ್ತದೆ. ಇದು ಸಿನಿಮಾದ ಮೊದಲ ಗೆಲುವು. ಎಲ್ಲಿ ಸಹಜ ಮತ್ತು ನಿರಾಯಸಾವಾಗಿ ಕಥೆಗೆ ಆಯಾಮ ದೊರೆಯುತ್ತ ಹೋಗುತ್ತೋ ಆ ಕೃತಿ ನೋಡುಗರಿಗೆ ಆಪ್ಯಾಯಮಾನವಾಗುತ್ತದೆ, ಬದುಕಿಗೆ ಹತ್ತಿರವಾಗತ್ತೆ.

ಹೀಗೆ ಕಥೆ ತೆರೆದುಕೊಳ್ಳುತ್ತಿದ್ದಂತೆ ಸಂಸ್ಕೃತಿ-ಸ್ವಾತಂತ್ರ್ಯಗಳ ನಡುವಿನ ಘರ್ಷಣೆ ಶುರುವಾಗಿ ಇದು ಜಟ್ಟನೊಬ್ಬನ ಸಮಸ್ಯೆಯಾಗಿ ಉಳಿಯದೇ ಪ್ರೇಕ್ಷಕನ ತಲೆಯೊಳಗೆ ಹೊಕ್ಕಿ ಮನದೊಳಗೆ ಪ್ರಶ್ನೆಗಳು ಭುಗಿಲೇಳುತ್ತವೆ. ತೆರೆಯ ಮೇಲಿನ ಜಟ್ಟನೊಬ್ಬನ ಕ್ಷುಲ್ಲಕ ಎನಿಸುವ ಜೀವನ ಬೃಹತ್ ಸಮಸ್ಯೆಯ ರಾಯಭಾರಿಯಾಗಿ ಹೊರಹೊಮ್ಮುತ್ತದೆ.

ಮುಗ್ಧ ಜಟ್ಟ ಬಂಧಿಯಾಗಿ ಹಿಡಿದಿಟ್ಟ ದಿಟ್ಟ ಮಹಿಳೆ ಸಾಗರಿಕ ಜಟ್ಟನ ಪ್ರಶ್ನೆಗಳಿಗೆ ಉತ್ತರವಾಗದೇ ಸಮಸ್ಯೆಯಾಗಿ ಕೂರುತ್ತಾಳೆ. ಜಟ್ಟ ಅವಳಿಗೆ ಸೀರೆ ಉಡಲು ಹೇಳಿದರೆ ತನ್ನ ಚಾಕಚಕ್ಯತೆಯಿಂದ ಜಟ್ಟನೇ ಸೀರೆ ಉಡುವಂತೆ ಮಾಡ್ತಾಳೆ.
ಸಾಮ ದಾನ ಬೇಧ ದಂಡ ಯಾವುದಕ್ಕೂ ಬಗ್ಗದೇ ಜಟ್ಟನನ್ನು ತನ್ನ ಹಠದ ಮೂಲಕವೆ ಸೋಲಿಸಿ ಪ್ರಥಮ ಗೆಲುವಿನ ನಗೆ ಬೀರ್ತಾಳೆ ಸಾಗರಿಕ.

ಇತ್ತ ಜಟ್ಟನ ವೃತ್ತಿಜೀವನದಲ್ಲಿ ಅವನ ಮೇಲಧಿಕಾರಿ ತನ್ನ ಪ್ರಾಮಾಣಿಕತೆ, ಸಹನೆ, ದಕ್ಷತೆ ಎಲ್ಲ ಸದ್ಗುಣಗಳಿಂದ ಜಟ್ಟನ ಮನಸಿನ ಮೇಲೆ ಅಪಾರವಾಗಿ ಪ್ರಭಾವಬೀರುತ್ತಾನೆ. ಕಾಣೆಯಾಗಿರುವ ಸಾಗರಿಕಾಳನ್ನು ಪೋಲಿಸರಿಂದ ಹುಡುಕಲು ಸಾಧ್ಯವಾಗದೆ ಇರುವಾಗ ಅದನ್ನು ರಾಜಕೀಯವಾಗಿ ಬಳಸಿಕೊಳ್ಳುವಬಂಡವಾಳಶಾಹಿಗಳು ಕಾಡಿನ ಸಿಬ್ಬಂದಿಯ ಮೇಲೆ 
ರಾಜಕೀಯವಾಗಿ ಆ ಆಪಾದನೆಯನ್ನು ತಂದು ಪ್ರಾಮಾಣಿಕ
ಮೇಲಧಿಕಾರಿಯ ವರ್ಗಾವಣೆಗೆ ದಾಳ ಹಾಕುತ್ತರೆ. ಇದನ್ನ ತಿಳಿದ ಜಟ್ಟ ತಾನು ಅತ್ಯಂತ ಗೌರವಿಸುವ ತನ್ನ ಮೇಲಧಿಕಾರಿಯ ವರ್ಗಾವಣೆಗೆ ತಾನೇ ನೈತಿಕ ಹೊಣೆ ಎಂದು ತಿಳಿದಾಗ ಮಾನಸಿಕ ಕುಸಿಯುತ್ತಾನೆ.

ಇದರ ನಡುವೆ ಬಿಟ್ಟುಹೋದ ಹೆಂಡತಿ ವಾಪಸ್ಸು ಬರುತ್ತಾಳೆ, ಅಷ್ಟರಲ್ಲಾಗಲೇ ಜಟ್ಟ ತನಗರಿವಿಲ್ಲದಂತೆ ಸಹನಾಮೂರ್ತಿಯಾಗಿ ರೂಪುಗೊಂಡಿರುತ್ತಾನೆ. ಹೆಂಡತಿ ಮೇಲಿದ್ದ ಕೋಪ ತನಗೆತಾನೆ ಇಳಿದು ಹೋಗಿ ಅವಳ ಕಥೆಯನ್ನು ವಿನಮ್ರವಾಗಿ ಕೇಳುತ್ತಾನಲ್ಲದೇ ಮರಳಿದ ಹೆಂಡತಿಯನ್ನು ಸ್ವೀಕರಿಸುತ್ತಾನೆ. ಇದಾದ ನಂತರ ಬರುವ ಹೆಂಡತಿಯ ಪ್ರಿಯಕರ, ಜಟ್ಟ ನಂಬುವ ಮಾದಿತಾಯಿ ಎಂಬ ಗ್ರಾಮದೇವತೆಯ ಮೇಲೆ ಅಧ್ಯಯನ ಮಾಡಲು ಬರುವ ಪ್ರೊಫೆಸರ್
ಪಾತ್ರಗಳು ಕಥೆಯ ತಿರುವಿಗೆ ಸಾಕಷ್ಟು ಪುಷ್ಠಿಕೊಡುತ್ತವೆ.

ಕೊನೆಗೆ ಜಟ್ಟನ ಸಾವಗುತ್ತದೆ. ಜಟ್ಟನಿಗೆ ಸಂಸ್ಕೃತಿಯ ಪಾಠ ಮಾಡಿ ಅವನನ್ನು ಸಕಲ ಸಂಕಷ್ಟಕ್ಕೆ ಸಿಲುಕಿಸಿದ ಸಂಸ್ಕೃತಿ ರಕ್ಷಕ  ಅವಕಾಶವಾದಿಯಾಗಿ ಟೀವಿಗಳಲ್ಲಿ ಸಂದರ್ಶನ ಕೊಡುತ್ತಿದ್ದರೆ, ಪ್ರಗತಿಪರ ಮಹಿಳೆಯ ಸಂಕೇತವಾಗಿರುವ ಸಾಗರಿಕ ಜಟ್ಟನ ಕೊಲೆಯಂತಹ ಕ್ರೂರ ಕೆಲಸದಲ್ಲಿ ಭಾಗಿಯಾದರೂ  ನಿರಪರಾಧಿಯಾಗಿ ಹೊರಬರುತ್ತಾಳೆ. ಹೀಗೆ ಜಟ್ಟನ ಸಾವಿಗೆ ವೈರುಧ್ಯಗಳು ಎಂದು ಬಿಂಬಿತವಾದ ಸಾಂಸ್ಕೃತಿಕತೆ ಮತ್ತ ಪ್ರಗತಿಪರತೆ ನೇರವಾಗಿ ಭಾಗಿಯಾಗ್ತವೆ. ಇದನ್ನು ಸಾವಿರ ಜನ ಸಾವಿರ ಥರ ಅರ್ಥೈಸಬಹುದು- ಅದು ಒಂದು ಸಿನಿಮಾದ ನಿರ್ದೇಶಕನಿಗೆ ನಿಜವಾದ ಗೆಲುವು. ಹೀಗೆ ಜಟ್ಟ ಯಾವುದೇ ಒಂದು ನಿಲುವಿಗೆ ಶರಣಾಗದೇ ತರ್ಕಕ್ಕೆ ನಿಲುಕದ ಸಿನಿಮಾ ಆಗುವ ಸಂಭವಗಳೇ ಹೆಚ್ಚು.

ಇನ್ನು ಸಿನಿಮಾ ನಿರ್ಮಾಣದಲ್ಲೂ ಬಹಳಷ್ಟು ವಿಶೇಷಗಳಿವೆ ಈ ಜಟ್ಟನಲ್ಲಿ. ಟೈಟಲ್ ಕಾರ್ಡ್ ನಲ್ಲಿ ಬಳಸಿರುವ ಅರ್ಥಪೂರ್ಣ ಕಲಾಕೃತಿಗಳು ಸಿನಿಮಾ ಶುರುವಾತ್ತಿಗೆ ವಿಶೇಷ ಮೆರುಗು ಕೊಡುತ್ತವೆ. ಚಿತ್ರದ ಎರಡನೇ ನಾಯಕ  ಕಿಶೋರ್ ಅಂದರೆ ಮೊದಲನೇ ನಾಯಕ ಚಿತ್ರದ ಲೋಕೇಶನ್ - ಗೇರುಸೊಪ್ಪ ಸುತ್ತಮುತ್ತದ ಕಾಡು ಪ್ರದೇಶ. ಕಿಶೋರ್ ನೀಲಿ ಕಂಗಳ ವಿಶಿಷ್ಟ ಓಟದ ಜಟ್ಟನಾಗಿ ಪ್ರೇಕ್ಷಕನ ಮನದಲ್ಲಿ ಗಟ್ಟಿಯಾಗಿ ಕೂರುತ್ತಾರೆ. ಚಿತ್ರದ ಆರ್ಥಿಕ ಗೆಲುವನ್ನು ಮುಂದಿಟ್ಟುಕೊಂಡು ಕಿಶೋರ್ ಬದಲು ಯಾರಾದರೂ ಒಳ್ಳೆಯ ಬಾಕ್ಸ್ ಆಫೀಸ್ ಓಪನಿಂಗ್ ಕೊಡುವ ನಾಯಕನನ್ನು ಹಾಕೊಬೋದಿತ್ತು ಅಂತಂದ್ರೆ ಕಿಶೋರ್ ಹಿಡಿದಿರುಸುವ ಅಭಿನಯಕ್ಕೆ ಅದಕ್ಕಿಂತ ಹೆಚ್ಚು ಅವಮಾನ ಮಾಡಲು ಸಾಧ್ಯವಿಲ್ಲ. ನಾಯಕಿ ಸುಕೃತ ಸಾಗರಿಕ ಪಾತ್ರಕ್ಕೆ ಪರಿಪೂರ್ಣ ನ್ಯಾಯಸಲ್ಲಿಸದಿದ್ರೂ ಅಲ್ಲಲ್ಲಿ ಅವರ ಮನೋಜ್ಞ ಅಭಿನಯದಿಂದ ಮತ್ತು ಪಾತ್ರದಷ್ಟೇ ದಿಟ್ಟತನದ ಪ್ರದರ್ಶನದಿಂದ ಪ್ರೇಕ್ಷಕರನ್ನು ಸುಲಭವಾಗಿ ಗೆಲ್ಲುತ್ತಾರೆ. ಪಾವನ ಜಟ್ಟನ ಹೆಂಡತಿ ಪಾತ್ರದಲ್ಲಿ ಮುದ್ದು ಮುದ್ದಾಗಿ ಕಂಡು ಇಷ್ಟವಾದರೆ ಫಾರೆಸ್ಟ್ ಆಫಿಸರ್ ಭೀಮ್ಕುಮಾರ್ ಪಾತ್ರದಲ್ಲಿ ಪ್ರೇಮ್ ಕುಮಾರ್ ಗಮನಸೆಳೆಯುತ್ತಾರೆ.

ಕಿರಣ್ ಹಂಪಾಪುರ ಅವರು ಕಾಡಿನ ಹಸಿರು ತೋರಣವನ್ನು ಕ್ಯಾಮೆರಾದಲ್ಲಿ ಓರಣವಾಗಿ ಸೆರೆಹಿಡಿದಿದ್ದಾರೆ. ಕ್ಲೈಮ್ಯಾಕ್ಸ್ ನಲ್ಲಿ ಕತ್ತಲನ್ನೇ ಬೆರಗುಗೊಳಸಿಸುವ ಸಾಹಸ ದೃಶ್ಯಗಳು, ಮೊದಲಾರ್ಧದಲ್ಲಿ ಜಟ್ಟ ಕಾಡುಗಳ್ಳರನ್ನು ಹಿಡಿದುಬಡೀವಾಗ ಹಿನ್ನಲೆಯಲ್ಲಿ ಸೆರೆಹಿಡಿದ ರೈಲು ಚಲಿಸುವ ಶಾಟ್, ಜಟ್ಟನ ಹೆಂಡತಿ ಪುನರಾಗಮನವಾದಾಗ ಕತ್ತಲ ಮೂಲಕ ಸೃಷ್ಟಿಸುವ ಭಯ ಇವೆಲ್ಲ ಚಿತ್ರದ ದೃಶ್ಯವೈಭವಕ್ಕೆ ಕಲಶಪ್ರಾಯವಾಗುವಂಥ ಕೆಲವಂಶಗಳು.

ಸಂಭಾಷಣೆ ಕೆಲವೊಮ್ಮೆ ತೀರ ವಾಚ್ಯವೆನೆಸಿದರೂ ಕೆಲವು ಮಾತುಗಳ ತೂಕದ ಮುಂದೆ ವಾಚ್ಯ ಗೀಚ್ಯ ಮ್ಯಾಟರ್ ಆಗೋದಿಲ್ಲ. ಸಂಸ್ಕೃತಿ ಮತ್ತು ನಾಗರೀಕತೆ ಹುಟ್ಟಿದ್ದು ಗಂಡಸಿಂದ, ಬೆಸ್ಟ್ ಸಂಸ್ಕೃತಿ - ಜಾತಿ ಪದ್ಧತಿ , ಕಾಡುಪ್ರಾಣಿ  ಪಳಗಿಸೋನು - ಹೆಂಡತಿಯನ್ನು ಪಳಗಿಸಲಾಗ್ಲಿಲ್ವ , ಶಿವ ಪಾರ್ವತಿ ಸಂಸಾರ ಮತ್ತು ಡೆಮಾಕ್ರಸಿ ಮಾತುಗಳು ಹೀಗೆ ನಮಗೊಂದೈವತ್ತು ಫೇಸ್ ಬುಕ್ ಸ್ಟೇಟಸ್ ಗಳಿಗೆ ಆಗುವಷ್ಟು ಸರಕನ್ನು ಗಿರಿರಾಜ್ ನಮಗೊದಗಿಸುತ್ತಾರೆ.

ಭೀಮ್ ಕುಮಾರ್ ಜಟ್ಟನಿಗೆ ಅವಳನ್ನ ಚೆನಾಗ್ ನೋಡ್ಕೋ ಅನ್ನೋದು, ಸಾಗರಿಕಾ ಜಟ್ಟನಿಗೆ ನೀನು ಮೊದಲಿನ ತರ ಇಲ್ಲ ಅನ್ನೋದು, ಜಟ್ಟ ಕೋಪದಲ್ಲಿ ಮದ್ಯವನ್ನು  ಸೌದೆಯ ಕೆಂಡದ ಮೇಲೆ ಸುರಿದಾಗ ಬೆಂಕಿ ಹತ್ತಿಕೊಳ್ಳುವ ದೃಶ್ಯ - ಹೀಗೆ ಮದ್ಯ ಸುರಿದೇ ಕೊನೆಯಲ್ಲಿ ಸಾಗರಿಕ ಜಟ್ಟನನ್ನು ಸುಡುವುದು, ಕೊನೆಗೆ
ಸಾಗರಿಕ ಜಟ್ಟನನ್ನು ಕೊಂದು ಮಾದಿ ತಾಯಿಯ ದೇಹಾಕರವಿರುವಂತೆ ತೊಡೆಯಗಲಿಸಿ ಕೂರುವುದು ಅಸಂಖ್ಯ ವಿಚಾರಗಳನ್ನು 
ಬಹಳ ಸೂಚ್ಯವಾಗಿ ತೋರಿಸಿದ್ದಾರೆ ಮಾಂತ್ರಿಕ ಗಿರಿರಾಜ್.

ಚಿತ್ರದ ಗೀತಸಾಹಿತ್ಯವೂ ಸಂಭಾಷಣೆಯಷ್ಟೇ ತೂಕವುಳ್ಳದ್ದಾಗಿದ್ದು ಜೊತೆಗೆ ಪದಗಳ ಲಾಲಿತ್ಯ ಮತ್ತು ಆಶ್ಲೆ-ಅಭಿಲಾಷ್ ಸಂಗೀತದಿಂದ ಹಾಡುಗಳು ಮಜಬೂತಾಗಿ ಮೂಡಿಬಂದಿದೆ.

ಮಲೆನಾಡಿನ ಭಾಷೆ ಬಳಕೆ ಕಿವಿಗೆ ಇಂಪಾಗಿ ಕೇಳಿಸಿದರೂ ಸ್ವಲ್ಪ ಅಲ್ಲಿ ಇಲ್ಲಿ ಆ ಭಾಷೆಯ ಸೊಗಡು ಮಿಸ್ಸಾದಂತಾಗುವುದು,  ಹಿನ್ನಲೆ ಸಂಗೀತದಲ್ಲಿ ಕೆಲವೆಡೆ ಅನನುಭವ ಗೋಚರಿಸುವುದು, ಜಟ್ಟ ಮನೆಗೆ ನಡಿಗೆಯೊಂದೇ ಮಾರ್ಗ ಎಂದು ಚಿತ್ರದಲ್ಲಿ ಬಿಂಬಿತವಾದರೂ ಕೆಲವು ಶಾಟ್ ಗಳಲ್ಲಿ ಮನೆಯ ಸುತ್ತ ಗಾಡಿ ಚಕ್ರದ ಗುರುತುಗಳು ಕಾಣುವುದು, ಚಿಕ್ಕ ಚಿಕ್ಕ ಪಾತ್ರಗಳಲ್ಲಿ ಕಾಣಬರುವವರ ಅನನುಭವ ಎದ್ದು ಕಾಣುವುದು ಮುಂತಾದವು ಚಿತ್ರದ ನಕಾರಾತ್ಮಕ ಅಂಶಗಳಾಗಿದೆ.

ಸಿನಿಮಾ ಮೇಕಿಂಗ್, ಅಭಿನಯ, ಹಾಡುಗಳು, ಸ್ಟಾರ್ ವಾಲ್ಯೂ,  ಸಂಭಾಷಣೆ, ಸಾಹಸ ಇವೆಲ್ಲವನ್ನೂ ಮೀರಿ ಜಟ್ಟ ನಿಲ್ಲುವುದು ಸಿನಿಮಾದೊಳಗಿರುವ ವಿಷಯದಿಂದ. ಸಿನಿಮಾದ ಮೂಲ ವಿಚಾರ ಪ್ರೇಕ್ಷಕರಿಗೆ ವಿನಿಮಯವಾದಾಗ ತಾನೇ ಸಿನಿಮಾದ ನೈಜ ಯಶಸ್ಸು. ಅದು ಜಟ್ಟದಲ್ಲಾಗುತ್ತದೆ. ನೋಡುಗರ ಮನದಲ್ಲಿ ಅಚ್ಚು ಒತ್ತುತ್ತದೆ.

ಜಟ್ಟನದು ಪ್ರೀತಿಯೊಂದೆ ಪ್ರಾರ್ಥನೆ ಮಿಕ್ಕೆಲ್ಲವೂ ನಿಮ್ಮ ವೈಚಾರಿಕ ನಿಲುವಿಗೆ ಬಿಟ್ಟದ್ದು.

~ಹೊಗೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ