ದ್ವೈತ - ಒಂದ್ ಬ್ಲಾಗು, ಎರಡು ವ್ಯಥೆ

ದೃಶ್ಯ ೧:
 ಬೆಂಗಳೂರಿನ ಸಾಫ್ಟ್ ವೇರ್ ಇಂಜಿನಿಯರೊಬ್ಬ ಹೆಲ್ಮೆಟ್ ಇಲ್ಲದೆ ಬೈಕ್ ಓಡಿಸುವಾಗ ಸಿಕ್ಕಿಹಾಕೊತಾನೆ.
ಸ್ಟೂಡೆಂಟ್ ಆದಾಗ ಯಾವತ್ತೂ ಹೆಲ್ಮೆಟ್ ಧರಿಸದಿದ್ದರೂ ಒಂದು ಬಾರಿಯೂ ಸಿಕ್ಕಿಬೀಳದೇ ತಪ್ಪಿಸಿಕೊಳ್ಳುತಿದ್ದ ಅವನ ಕೌಶಲತೆ ಈಗ ಇದ್ದಕಿದ್ದಂತೆ ಮಾಯವಾಗಿದೆ.
ತಲೇಲಿರೋ ಪೆಂಡಿಂಗ್ ಕೆಲಸಗಳು, ತಲೆಗೆ ಹತ್ತದ ಕೋಡು, ವೀಕ್ಲಿ ರಿಪೋರ್ಟುಗಳಲ್ಲಿ ಕ್ಲೈಂಟ್ಸಿಗೆ ಸುಳ್ ಸುಳ್ ಕೆಲಸ ತೋರಿಸುವ ರಗಳೆಗಳು ಇವೆಲ್ಲ ಅವನ ತಲೆಗೆ ತುಂಬಿ ಅವನು ಯೌವನದಲ್ಲೂ ಬಲಿತ ಗೆಡ್ಡೆಯಂತಾಗಿದ್ದಾನೆ.

ಹೀಗೆ ಅವನು ಮತ್ತೊಮ್ಮೆ ಸಿಕ್ಕಿಬಿದ್ದಾಗ...
ಮಾಮ- ಏನಪ್ಪಾ? ಏನ್ ಓದ್ತಾ ಇದ್ಯಾ?
ಸಾ.ಇಂ - ಸರ್, ಓದಿದ್ದೆಲ್ಲಾ ಆಗಿ, ಈಗ ದೊಡ್ ಸಾಫ್ಟ್ ವೇರ್ ಕಂಪನಿಯಲ್ಲಿ ಸಣ್ಣ ಕೆಲಸದಲ್ಲಿದ್ದೀನಿ
ಮಾಮ - (ಸ್ವಗತ - ಓ ಸಾಫ್ಟ್ವೇರು.. ಬಾಚ್ಕೊ ಬಾಚ್ಕೊ..) ಬನ್ನಿ ಸಾರ್.. ಡಿ ಎಲ್ ತೋರ್ಸಿ ಆಮೇಲ್ ಸಾಹೇಬ್ರತ್ರ 200 ರೂ ಫೈನ್ ಕಟ್ಟು.
(ತಿಂಗಳ ಕೊನೆ, ಕಾಸೆಲ್ಲಾ ಗೋತಾ, ರೂಮ್ ಬಾಡಿಗೆ, ವೀಕೆಂಡ್ ಪಾರ್ಟಿ, ಮಲ್ಟಿಪ್ಲೆಕ್ಸಲ್ಲಿ ಸಿನಿಮಾ, ಆಫೀಸಿನಲ್ಲಿ ಯಾವ್ ಯಾವನ್ದೋ ಮದುವೆ, ಮುಂಜಿಗೆಲ್ಲ ಕಲೆಕ್ಶನ್)
ಸಾ.ಇಂ - ಸಾರ್, ನೀವೆ ನೋಡಿ ಸರ್. I HAVE ONLY 20 BUCKS. ತಿಂಗಳ ಕೊನೆ, ಎಲ್ಲ ದುಡ್ಡು ಮನೆಗ್ ಕಳ್ಸಿಬಿಟ್ಟಿದಿನಿ. ತಾಯಾಣೆ ಬ್ಯಾಂಕ್ನಲ್ಲು ಇಲ್ಲ ಸರ್ !!
(ಇದ್ದಕಿದ್ದಂತೆ ಅವನ್ ಜೇಬಿನಿಂದ ಸ್ಮಾರ್ಟ್ ಫೋನ್ ತೆಗೆದು, ಮೊಬೈಲ್ ಬ್ಯಾಂಕಿಂಗ್ ಮೂಲಕ ಅವನ ಬ್ಯಾಂಕ್ ಬ್ಯಾಲೆನ್ಸ್ ಕೇವಲ 512 ರೂ ಅಂತ ತೋರಿಸ್ತಾನೆ)
ಮಾಮ - ಬಲ್ ನನ್ ಮಕ್ಳು ಕಣ್ರಯ್ಯ ನೀವು. ಒಟ್ಟೆಗ್ ಇಟ್ಟಿಲ್ಲ ಅಂದ್ರು ಜುಟ್ಟಿಗೆ ಮಲ್ಗೆ ಊವು ಅನ್ನಂಗೆ ಕೈಯಲ್ಲಿ ಕಾಸಿಲ್ಲ ಅಂತ ಏಳಕ್ಕೆ ಈ ಶೋಕಿ ಫೋನ್ ಬೇರೆ. ನಮ್ ಸಾಹೇಬ್ರತ್ರನೂ BLACKBERRY ಐತೆ.
ಮತ್ತೊಮ್ಮೆ ಅವನ ಪರ್ಸ್ ನೋಡಿ ಮಾವ್ನೋರು ಹೀಗ್ ಹೇಳ್ತಾರೆ..
"ಹೋಗ್ಲಿ.. ದುಡ್ಡಿಲ್ದೇ ಹೋದ್ರಿಲ್ಲಾ, ನಿನ್ ಪರ್ಸಲ್ಲಿ ಅದಿದ್ಯಲ್ಲ ಅದೇ ಕೊಡು. ಇವತ್ತಿಗೆ ಸಾಕಾಯ್ತದೆ"
ಸಾಫ್ಟ್ ವೇರ್ ಇಂಜಿನಿಯರ್ ಮಂಕು ಬಡಿದಂತೆ ನಿಂತಿರ್ತಾನೆ. ಮಾಮ ಮತ್ತೊಮ್ಮೆ ಕೇಳ್ತಾನೆ.
ಇವ ಇರೋ ಮೂರು 50 ರೂ ಬೆಲೆಯ ಸೊಡೆಕ್ಸೋ ಕೂಪನ್ ಅವನ ಕೈಗಿಟ್ಟು ಮರೆಯಾಗ್ತಾನೆ...



 ದೃಶ್ಯ ೨:
 ಒಬ್ಬ ಕರೀಕೋಟು ಮತ್ತು ಅವನ ಇಬ್ಬರು ಗೆಳೆಯರು ಬೆಂಗಳೂರಿನ ರಸ್ತೆಯೊಂದರಲ್ಲಿ ತ್ರಿಬ್ಸ್ ಹೋಗ್ತಾ ಇದ್ರು.
 ಸಹಜವಾಗಿ ಓರ್ವ ಟ್ರ್ಯಾಫಿಕ್ ಪೋಲಿಸ್ ಅವನನ್ನ ತಡೆದು ನಿಲ್ಲಿಸಿ ಫೈನ್ ಕಟ್ಟಲು ಹೇಳಿದ.
ಪೋಲೀಸ್ ಮತ್ತು ವಕೀಲರ ಮಧ್ಯೆ ಯಾವತ್ತು ಒಂದು ಸಮನ್ವಯವಿರುತ್ತದೆ.
ಆದರಿಲ್ಲಿ ಅವರಿಬ್ಬರ ನಡುವೆ ಏನೇನ್ ಮಾತ್ ಬಂತೋ, ಯಾರ‍್ಯಾರ್ ಅಪ್ಪ ಅಮ್ಮ ಇವರಿಬ್ಬರ ಜಗಳದಲ್ಲಿ ಬಂದ್ ಹೋದ್ರೋ ಕೊನೇಗ್ ಕೈ ಕೈ ಮಿಲಾಯಿಸೋ ತನಕ ಹೋದ್ರು.

ಸಾಮನ್ಯವಾಗಿ ಆ ಜನಕ್ಕೆ ಒಂದು ತೆರನಾದ ಅಹಂಕಾರವಿರುತ್ತೆ, ಅಧಿಕಾರದ ಅಮಲು ಎಂದರೆ ತಪ್ಪಲ್ಲ ಬಿಡಿ.
ಅವರು ಯಾರಿಗಾದರೂ ಏನ್ಬೇಕಾದರೂ ಬೈಯಬಹುದು. ಮೇಲೆ ಹೇಳಿದ ಹಾಗೆ ಆ ಸಾಫ್ಟ್ ವೇರ್ ಇಂಜಿನಿಯರನ್ನ ನಾಯಿಗಿಂತ ಕಡೆಯಾಗಿ ನೋಡಿದ ಹಾಗೆ.

ಆದರೆ ಇಲ್ಲಾದ ಸಮಸ್ಯೆ ಏನೆಂದರೆ ರಿಸೀವಿಂಗ್ ಎಂಡ್ ನಲ್ಲಿ ಇದ್ದಿದ್ದು ನ್ಯಾಯಾಂಗದ ಮತ್ತೊಂದು ಪೀಸು.
ಅದು ಕರೀಕೋಟಿನವ. ಅವ ಸೀದಾ ಹೋಗಿ ಸಂಘಕ್ಕೆ ಹೇಳ್ದ. ಸಂಘದವರು ಆ ಪೋಲೀಸನ್ನು ಸಸ್ಪೆಂಡ್ ಮಾಡಿ ಅಂತ "ಆರ್ಡರ್" ಮಾಡುದ್ರು. ಆ ಡಿಪಾರ್ಟ್ಮೆಂಟ್ ನವರು ಅಷ್ಟು ತಲೆಗ್ ಹಚ್ಕೊಳಿಲ್ಲ. ಕರೀಕೋಟಿನ ಸಂಘ ಸ್ವಲ್ಪ ದಿನ ನೋಡಿತು.
ದೇಶದ ಇತಿಹಾಸದಲ್ಲೆ ಒಂದು ಕೆಟ್ಟ ಪ್ರತಿಭಟನೆಗೆ ನಾಂದಿ ಆಯ್ತು.

ಮೇಲ್ಗಡೆ ನಡೆದ ಸೇಮ್ ಸೀನ್. ಈ ಬಾರಿ ಸಿಕ್ಕಿಹಾಕೊಂಡಿದ್ದು ಲಾಯರ್.

ಪೋ - ಓ ಹೊ ಹೊ. ಲಾಯರ್ ಸಾಹೇಬ್ರು. ನಮಸ್ಕಾರ. ಬರ್ಬೇಕು ಬರ್ಬೇಕು.

ಲಾ - ಏನದು ವ್ಯಂಗ್ಯ? ಅದಕ್ಕೆಲ್ಲಾ ಟೈಮ್ ಇಲ್ಲ ಈಗ.. ಸಂಘದ ಜನರಲ್ ಬಾಡಿ ಮೀಟಿಂಗ್ ಗೆ ಹೋಗ್ಬೇಕು. ನನ್ಯಾಕ್ ತಡೆದೆ?

ಪೋ - ಹೆಲ್ಮೆಟ್ ಹಾಕಿಲ್ದೇ ಇರೋದಕ್ಕೆ ಫೈನ್ ಕೊಟ್ಟು ನೀನ್ ಎಲ್ಬೇಕಾದ್ರೂ ಹೋಗು.

ಲಾ - ಫೈನ್ ಕಟ್ಟೋ ಜಾಯಮಾನ್ ನಮ್ದಲ್ಲ.. ಅಷ್ಟಿದ್ರೆ ಬೇಗ ಒಂದು ನೋಟೀಸ್ ಕೋಡು, ನಾನು ಕೋರ್ಟಲ್ಲಿ ನೋಡ್ಕೋತೀನಿ.

ಪೋ - ಇನ್ನು ನಿಮ್ ಕೊಬ್ಬು ಕಮ್ಮಿ ಆಗಿಲ್ಲ ಅಲ್ವಾ? ಮೊನ್ನೆ ಮಾಡಿದ್ ನಿಮ್ ಹಾಳ್ ಮೆರವಣಿಗೆಯಿಂದ ಪಬ್ಲಿಕ್ ಕೈಲಿ ಇನ್ನು ಬೈಸ್ಕೊತಾ ಇದ್ದೀರ..

ಲಾ - ಅದೆಲ್ಲಾ ಮೀಡಿಯದವರ ಕೆಲಸ. ನಮ್ಮನ್ನ ಕೆಟ್ಟದಾಗಿ ತೋರಿಸಿದಾರೆ.

ಪೋ - ಕೆಟ್ದಾಗಿ ಮಾಡಿದ್ರೆ ಕೆಟ್ದಾಗೆ ತೊರ‍್ಸದು. ಅಲ್ಲಾ, ಎಂಟು ಗಂಟೆ ಕಾಲ ನಗರದ ಹೃದಯ ಭಾಗದಲ್ಲಿರೋ ಮೈಸೂರ್ ಬ್ಯಾಂಕ್ ಸರ್ಕಲ್ನಲ್ಲಿ ಜಾಮ್ ಮಾಡೋದ್ ಒಂದು ಸ್ಟ್ರೈಕಾ !
ಥೂ.. ಅದು ದೇಶದ್ರೋಹದಷ್ಟೇ ಸಮ. ಎಷ್ಟ್ ಜನ ಟ್ರೈನ್, ಬಸ್, ಫ್ಲೈಟ್ ಮಿಸ್ ಮಾಡ್ಕೊಂಡ್ರು.. ಎಷ್ಟ್ ಜನ ರೋಗಿಗಳು ಆಸ್ಪತ್ರೆಗ್ ತೆರಳದೇ ಪರದಾದಿಡ್ರು, ಎಷ್ಟ್ ಜನ ಕಂದಮ್ಮಗಳು ಸ್ಕೂಲ್ ಬಸ್ನಲ್ಲೇ ಜಾಮಲ್ಲಿ ಸಿಕ್ಕಿ
ಹಸಿದು ಕೂತಿದ್ರು. ಇದ್ಯಾವುದಕ್ಕೂ ಬೆಲೆನೇ ಇಲ್ದೇ ಅಮಾನವೀಯರಾಗಿ ನಡ್ಕೊಂಡ್ರಲ್ಲಾ!

ಲಾ - ಎಂಟ್ ಗಂಟೆ ಮಾಡಿದ್ದು ನಾವಲ್ಲ. ಸ್ಟ್ರೈಕ್ ಶುರುವಾಗಿ ಐದು ಗಂಟೆ ಕಾಲವಾದ್ರೂ ನಿಮ್ ಕಮಿಷನರ್ ಸ್ಥಳಕ್ಕೆ ಬರದೇ ಕೂತಿದ್ರಲ್ಲ. ಅದು ನಿಮ್ ತಪ್ಪು.

ಪೋ - ಹೌದೌದು. ನಿಮ್ ವೃತ್ತಿಗೆ ಬೆಲೆ ಕೊಟ್ಟು ಲಾಠಿ ಚಾರ್ಜ್ ಮಾಡದೇ ಬಿಟ್ರಲ್ಲ.. ಅದು ನಮ್ ತಪ್ಪೇ!!

ಈ ಮೇಲಿನದು ನಿಲ್ಲದ ವಾದ.
ಮುಗಿಯದ ಕಲಾಪ.
ಆದರೆ ಜನಸಾಮನ್ಯರು ವಿನಾಕಾರಣ ಮತ್ತೊಮ್ಮೆ ಸಂತ್ರಸ್ತರಾದರು.
ಹೀಗೆ ವಿನಾಕಾರಣ ನಾವು ಸಂತ್ರಸ್ತರಾಗುತ್ತಲೇ ಇರುತ್ತೇವೆ. ನಮಗೆ ರೂಢಿಯಾಗಿಬಿಟ್ಟಿದೆ.

ನಾವು ಏನಾದರು ಮಾಡಲೇಬೇಕು, ಒಗ್ಗೂಡಬೇಕು, "ಜನಸಾಮಾನ್ಯ ಸಂಘ"ವೊಂದನ್ನು ಕಟ್ಟಿ ಹೋರಾಡಬೇಕು ಅಂತೆಲ್ಲ ಬರೆಯುವುದು ತೀರ ಬಾಲಿಶವಾದುದು.
ಹಾಗೆ ಸಂಘವೊಂದು ಬಂದರೆ ಅದು ಮತ್ತೊಂದು ಕೆಟ್ಟ ರಾಜಕೀಯ ಪಕ್ಷವಾಗಬಹುದಷ್ಟೆ.
ವಿಧಿಯಾಟ, ಕಲಿಯುಗ ನಮ್ ಪಾಡೆ ಇಷ್ಟು ಅಂದ್ರೆ ದೇವರ ಮೇಲೆ ತುಂಬಾ ಭಾರ ಹಾಕ್ದಂಗಾಗತ್ತೆ..
"ಏನ್ ಮಾಡದೋ ನಂಗೊಂತು ಗೊತ್ತಾಯ್ತಾಲ್ಲ"

3 ಕಾಮೆಂಟ್‌ಗಳು: