ಚಿಂಗಾರಿ : ಗಲ್ಲಾಪೆಟ್ಟಿಗೆ ಫುಲ್ಲು ರೀ

ಇದ್ದಕ್ಕಿದ್ದಂಗೆ ಒಂದು  ಸಿನಿಮಾ ವಿಮರ್ಶೆ ಮಾಡಿದಿನಿ. ಯಾಕೆ ಏನು ಕಾಲ ಕೂಡಿ ಬಂದರೆ ಹೇಳ್ತೀನಿ. ಈಗ ಓದಿ.

ಚಿತ್ರ ನಿರ್ದೇಶಕ ಹರ್ಷ ಚಿಂಗಾರಿ ಹಾಡೊಂದರ ಚಿತ್ರೀಕರಣಕ್ಕೆ ಸಕಲೇಶಪುರದಲ್ಲಿ ಸಕಲ ಸಿದ್ಧತೆ ಮಾಡ್ಕೊಂಡಿದ್ರು. ಬೆಳಗ್ಗೆ ಆರು ಘಂಟೆಯಿಂದ ಶೂಟಿಂಗ್ ನಿಗದಿಯಾಗಿತ್ತು. ಇತ್ತ ಅದೇ ದಿನ ರಾಜ್ಯದ ಎಲ್ಲಾ ನ್ಯೂಸ್ ಚಾನೆಲ್ಲುಗಳಲ್ಲಿ ದರ್ಶನ್ ಪತ್ನಿ ಕಿರುಕುಳದ ಆರೋಪದ ಮೇರೆಗೆ ಅರೆಸ್ಟ್ ಆದ ಸುದ್ದಿ ಬಿತ್ತರವಾಗುತಿತ್ತು.


ಅಂದು ಹರ್ಷ ಮತ್ತು ನಿರ್ಮಾಪಕ ತಲೆ ಮೇಲೆ ಕೈಹೊತ್ತು ಕೂರುವಂತೆ ಮಾಡಿದ ಚಿತ್ರ ಇಂದು ಭರ್ಜರಿ ಪ್ರದರ್ಶನ ಕಾಣುತ್ತಾ ಸಾಗಿದೆ. ಜನ ಸಾರಥಿ ಹ್ಯಾಂಗ್ ಓವರ್ನಲ್ಲೇ ಚಿಂಗಾರಿ ನೋಡಲು ಉತ್ಸಾಹ ತೋರಿಸಿದ್ದಾರೆ. ಕನ್ನಡದ ಮಟ್ಟಿಗೆ 'ಚಿಂಗಾರಿ' ವಿಭಿನ್ನ ಪ್ರಯತ್ನ. ಚಿತ್ರದ ಅರ್ಧಕ್ಕಿಂತ ಹೆಚ್ಚು ಭಾಗ ಸ್ವಿಜರ್ಲೆಂಡಿನಲ್ಲಿ ಚಿತ್ರೀಕರಣವಾಗಿದೆ. ಪ್ರೇಕ್ಷರಿಗೆ ಕೊಟ್ಟ ಕಾಸಿಗೆ ಮೋಸವಾಗದಂತೆ ಸ್ವಿಜರ್ಲೆಂಡ್ ತೋರಿಸಲಾಗಿದೆ. ಹರ್ಷ 'ಗೆಳೆಯ' , 'ಬಿರುಗಾಳಿ' ಮಾಡಿ ಅವರ ಅಭಿರುಚಿ ಆಕ್ಷನ್ + ಥ್ರಿಲ್ಲರ್ + ಲವ್ ಎಂದು ಈಗಾಗಲೇ ತೋರಿಸಿದ್ದಾರೆ. ಚಿನ್ಗಾರಿಯಲ್ಲೂ ಅದೇ ಫಾರ್ಮುಲಾ ಅಳವಡಿಸಿಕೊಂಡಿದ್ದಾರೆ.

ಮಾನವ ಕಳ್ಳಸಾಗಣಿಕೆಯ ಮೇಲೆ ಚಿತ್ರದ ಕಥೆ ಹೆಣೆಯಲಾಗಿದೆ. ಚಿತ್ರದ ನಾಯಕಿ ಅವಳ ಗೆಳತಿಯೊಂದಿಗೆ ಸ್ವಿಜರ್ಲೆಂಡ್ ಗೆ ಗಿಟಾರ್ ಆಡಿಶನ್ಸ್ ಗಾಗಿ ಬರುತ್ತಾಳೆ. ಅವಳು ಮತ್ತು ಅವಳ ಗೆಳತಿಯನ್ನು ಭಾರತ ಮೂಲದ ಕಳ್ಳರು ಅಪಹರಿಸುತ್ತಾರೆ. ನಾಯಕ ನಾಯಕಿಯನ್ನು ರಕ್ಷಿಸಲು ಅಲ್ಲಿಗೆ ಹೋಗುತ್ತಾನೆ. ದರ್ಶನ್, ಭಾವನ ಜೊತೆಗೂಡಿ ಅಪಹರಣಕಾರ ಜಾಲ ಪತ್ತೆ ಮಾಡುತ್ತಾರೆ. ಮುಂದೇನಾಗುತ್ತದೆ ಎಂದು ನೀವು ಚಿತ್ರ ನೋಡಿ ಆನಂದಿಸಿ.

ದರ್ಶನ್ ಸ್ಟೈಲಿಶ್ ಸಿಸಿಬಿ ಪೋಲಿಸ್ ಆಗಿ ಅವರ  ಅಭಿಮಾನಿಗಳನ್ನು ಡೈಲಾಗ್ಸ್ , ಸಾಹಸಗಳಿಂದ  ಸಂತೋಷಗೊಳಿಸುತ್ತಾರೆ .ನಾಯಕಿ ದೀಪಿಕಾ ತಮ್ಮಯ್ಯ ರವರ ಲುಕ್ಸ್ ಮತ್ತು ಅಭಿನಯ ಭರವಸೆ ಮೂಡಿಸುವಂತಿಲ್ಲ. ಭಾವನಾಳಂಥ ನಟಿ ಈ ಪಾತ್ರ ಆಯ್ಕೆಮಾಡಿ ಅಚ್ಚರಿಪಡಿಸಿದ್ದಾರೆ. ವಿದೇಶಿ ನೃತ್ಯಗಾರರ  ಸಮಕ್ಕೆ 'ಬಿಚ್ಚಮ್ಮ'ಳಾಗಿದ್ದಾರೆ, ಪಾತ್ರಕ್ಕೆ 'ನ್ಯಾಯ' ಒದಗಿಸಿದ್ದಾರೆ. ಹರಿಕೃಷ್ಣ ಸಂಗೀತ ಆತುರದಲ್ಲಿ ಮಾಡಿದಂತಿದೆ. 'ಕೈ ಕಚ್ಚಾ ಅಸಡ'ದಂತ ಸಾಹಿತ್ಯ ಭಟ್ಟರನ್ನು ಬಿಟ್ಟರೆ ಬೇರೆಯಾರಿಂದಲೂ ಸಾಧ್ಯವಿಲ್ಲ ಬಿಡಿ.

 

ಹರ್ಷ ನಿರ್ದೇಶನಕ್ಕೆ ಮಹತ್ವ ಕೊಟ್ಟು ಈ ಚಿತ್ರದ ಹಾಡುಗಳಲ್ಲಿ ನಿರಾಸೆ ಮೂಡಿಸಿದ್ದಾರೆ. 'ಈ ಸಂಜೆ ಯಾಕಾಗಿದೆ' , 'ಹೂವಿನ ಬಾಣದಂತೆ' ಅಂತ ಹಾಡುಗಳನ್ನು ಹಿಂದಿನ ಚಿತ್ರಗಳಲ್ಲಿ ಕೊಟ್ಟು , ಈ  ಚಿತ್ರದಲ್ಲಿ ಪ್ರೇಕ್ಷಕರಿಗೆ ಲಾಸ್ ಮಾಡಿದ್ದಾರೆ ಅಂತಾನೆ ಹೇಳಬಹುದು. ದರ್ಶನ್ ಹಾಡೊಂದರಲ್ಲಿ ವಿಗ್ ಹಾಕಿದ್ದಾರೆ. ಅದು ಅವರ ಬಿಡುಗಡೆಯಾದ ಮೇಲೆ ಚಿತ್ರಿಸಿದ್ದು ಎಂದು ಗುರುತಿಸುವ ಮಟ್ಟಿಗೆ ಕಾಣುತ್ತದೆ. ಇತರ ಪಾತ್ರಗಳಲ್ಲಿ ಸೃಜನ್ ಲೋಕೇಶ್, ಅರುಣ್ ಸಾಗರ್, ರಮೇಶ್ ಭಟ್ ಇದ್ದಾರೆ.

ನಿರ್ದೇಶಕ ಹರ್ಷ ರವರಿಗೆ ಸ್ವಿಜರ್ಲೆಂಡ್ ನಲ್ಲೂ ಕಾಲು ಕಾಲಿಗೂ ಕನ್ನಡದರೇ  ಸಿಗುತ್ತಾರೆ, ದರ್ಶನ್ ಬಾಯಲ್ಲಿ 'ಕರ್ನಾಟಕ ಪೋಲಿಸ್ ಅಂದ್ರೆ ಏನ್ ಗೊತ್ತ' ಅಂತ ಸ್ವಿಜರ್ಲೆಂಡ್ ನಲ್ಲಿ ಹೇಳಿಸಿದ್ದಾರೆ. ಭಾರತದಲ್ಲಿ ಹೆಂಗಸರನ್ನು ಹೇಗೆ ಪೂಜ್ಯನೀಯವಾಗಿ ಕಾಣುತ್ತೇವೆ ಅಂತ ದೊಡ್ ದೊಡ್ ಡೈಲಾಗ್ ಹೇಳಿಸಿ ಕೊನೆಯಲ್ಲಿ ನಾಯಕಿಯನ್ನು ಮಾತ್ರ ರಕ್ಷಿಸಿ ಅವಳ ಗೆಳತಿಯನ್ನು ಮರೆತೇಬಿಡುತ್ತಾರೆ. ಹೀಗೆ ಅಲ್ಲಿ ಇಲ್ಲಿ ಕೆಲವು ಸನ್ನಿವೇಶಗಳನ್ನು ಬಿಟ್ಟರೆ 'ದಿಸ್ ಇಸ್ ಅ ಗುಡ್ ವಾಚ್'.

1 ಕಾಮೆಂಟ್‌: