ಪಾರಿಜಾತ - ಪ್ರೇಮಿಗಳಿಗೆ ಮುದ ಮಿಕ್ಕಿದವರಿಗೂ ಹದ

ಮತ್ತೊಂದು ರಿವ್ಯೂ.....!!

ಪಾರಿಜಾತ

ನಾಯಕ 'ಬಾಸ್' ಅಲಿಯಾಸ್ ಭಾಸ್ಕರ್  (ದಿಗಂತ್)  ಸೋಮಾರಿ, ನಿರುದ್ಯೋಗಿ ಮತ್ತು ಬೀದಿ ತಿರುಕ, ಅವರ ಹಿಂದಿನ ಸುಮಾರು ಸಿನಿಮಾಗಳಂತೆ ಇಲ್ಲೂ ಬೇಜವಾಬ್ದಾರಿ ಮನುಷ್ಯ. ಹಾಗಂತ ಕೆಲಸ ಹುಡುಕಿಕೊಂಡು ಹೋಗೋ ಪಾರ್ಟಿ ಅಲ್ಲ. ನಿನ್ ಕಾಲ್ ಮೇಲ್ ನೀನ್ ನಿಲ್ಲೋ ಅಂದ್ರೆ ನಾವೇನ್ ನಮ್ ತಾತನ ಕಾಲ್ ಮೇಲ್  ನಿಂತಿದಿವಾ  ಎನ್ನುವ ತಲಾಹರಟೆ. ಮನೇಲಿ ಮದುವೆ ಆಗ್ಬೇಕು ಅಂತ ಪ್ರಸ್ತಾಪ ಮಾಡಿದಾಗ ಎಲ್ಲ ಸೇರಿ ಅವನಿಗೆ ಮಂಗಳಾರತಿ ಮಾಡ್ತಾರೆ, ಕೈಯಲ್ಲಿ ಕೆಲಸ ಇಲ್ಲ ಮದ್ವೆ ಬೇರೆ ಎಂದು ಮೂದಲಿಸುತ್ತಾರೆ. ಅವನು ಮನೆ ಬಿಟ್ಟು ಹೋಗಲು ಸಜ್ಜಾಗುತ್ತಾನೆ. ಗೇಟಿನ ಬಳಿ ಹೋಗುತ್ತಿರಬೇಕಾದರೆ ಅವರ ಅಣ್ಣ ಓಡಿ ಬಂದು...

"ಮಳೆ   ಬರ್ತಾಇದೆ, ಛತ್ರಿ ತಗೊಂಡು ಹೋಗು, 
ಮತ್ತೆ ಅದಕ್ಕೋಸ್ಕರ ಮನೆ ಬಿಟ್ಟು ಹೋಗೋ ನಿರ್ಧಾರ ಕೈ ಬಿಡಬೇಡ " ಅಂತಾನೆ. ಮಧ್ಯಂತರ ವಿರಾಮ. ಪರದೇ  ಮೇಲೆ "ಮಳೆ ನಿಂತ ಮೇಲೆ ಬೆಂಕಿ ತರ ಕೆಲಸ ಮಾಡ್ತಾನೆ" ಎಂಬ ಸಾಲು ಬಿತ್ತರವಾಗತ್ತೆ.
 ಹೀಗೆ ಚಿತ್ರದುದ್ದಕ್ಕೂ ಗಂಭೀರ ಸನ್ನಿವೇಶಗಳೆಲ್ಲ ಹಾಸ್ಯದಲ್ಲಿ ಕೊನೆಯಾಗ್ತವೆ. 


ನಿರ್ದೇಶಕ ಪ್ರಭು ಶ್ರೀನಿವಾಸ್ ಮೂಲತಃ ನೃತ್ಯ ಸಂಯೋಜನಕಾರ. ಕನ್ನಡದಲ್ಲಿ ಹಿಂದೊಮ್ಮೆ 'ಜೀವಾ' ಚಿತ್ರ ಮಾಡಿದ್ದರು. 
ಈಗ 'ಪಾರಿಜಾತ' ವನ್ನು ಪ್ರೇಮಿಗಳ ಮುಂದಿಟ್ಟಿದ್ದಾರೆ. ಇದು ಒಂಥರ ROM -COM  (ರೊಮ್ಯಾಂಟಿಕ್  ಕಾಮಿಡಿ) ಸಬ್ಜೆಕ್ಟ್.
ಚಿತ್ರಕಥೆ ಅತ್ಯಂತ ಸರಳ. ನಾಯಕನ ಬೇಜವಾಬ್ದಾರಿಯನ್ನು ನಾಯಕಿ ಇಷ್ಟಪಟ್ಟರೂ ಮದುವೆ ವಿಷಯ ಬಂದಾಗ ಸಹಜವಾಗಿ ನಿರಾಕರಿಸುತ್ತಾಳೆ. ನಾಯಕ ಸಂಪಾದನೆ ಮಾಡಲು ಶರಣ್ ಜೊತೆಗೂಡಿ ಸಾಲಮಾಡುತ್ತಾನೆ, ಟುಟೋರಿಯಲ್ಸ್ ತೆರೆಯುತ್ತಾನೆ, ಸಾಲ ಕೊಟ್ಟ ಧಣಿಗಳ ಮಗ ಅದೇ ಟುಟೋರಿಯಲ್ಸ್ ನಲ್ಲಿ ಕಲಿತು ಎಸ್ಎಸ್ಎಲ್ಸಿ ಪಾಸ್ ಮಾಡಿದಾಗ ಧಣಿಗಳು ಮೆಚ್ಚಿ ಸಾಕಷ್ಟು ಉಡುಗೊರೆಯನ್ನು ಕೊಡುತ್ತಾರೆ. ಇತ್ತ ಮನೆಯಲ್ಲಿ ಅವನಿಗೆ ಮದುವೆ ಮಾಡಲು ಒಪ್ಪುತ್ತಾರೆ. ಸಿನಿಮಾ ಮುಗಿತು ಅನ್ನುವ ಹೊತ್ತಿಗೆ ಕಥೆಯಲ್ಲಿ ಕೆಲವು ತಿರುವುಗಳು ಸಿಗುತ್ತವೆ. ಅದನ್ನು ನೀವು ಚಿತ್ರಮಂದಿರದಲ್ಲಿ ನೋಡಿ.



ಐoದ್ರಿತ ರೇ ಮತ್ತು ದಿಗಂತ್  ನಡುವಿನ 'ರಸಾಯನ ಶಾಸ್ತ್ರ' ಚೆನ್ನಾಗಿ ಕೆಲಸ ಮಾಡಿದೆ. ಇಬ್ಬರು ಪರದೆ ಮೇಲೆ ಮಿಂಚ್ತಾರೆ.
ಲಿಪ್ಲಾಕ್ ಮಾಡಿದ್ದಾರೆ ಎಂಬ ಗುಲ್ಲು ಸುಳ್ಳು ಎಂದು ಚಿತ್ರದಲ್ಲಿ ತಿಳಿಯುತ್ತದೆ. ತುಟಿಗೆ ತುಟಿ ಒತ್ತುವ  ಹಾಗೆ ತೋರಿಸಿದ್ದಾರೆ ನಿರ್ದೇಶಕರು, ಮಧ್ಯ ಗಾಜಿಟ್ಟು.


ಐoದ್ರಿತ ರೇ ತುಂಡುಡುಗೆಯಲ್ಲಿ ಮಾದಕವಾಗಿ ಕಾಣಿಸುತ್ತಾರೆ. ಅವರ ಮುಖಭಾವ ಈ ಚಿತ್ರದಲ್ಲಿ ಅತ್ಯುತ್ತಮವಾಗಿದೆ, ಅಭಿನಯದಲ್ಲೂ ಪಕ್ವತೆ ಕಾಣುತ್ತಿದೆ. ದಿಗಂತ್ ಗೆ ಈ ಥರದ ಪಾತ್ರ ನೀರು ಕುಡಿದಂತೆ. ಶರಣ್ ಕಾಮಿಡಿ ಬಂದಾಗ ಜನ ಬಾಯ್ತುಂಬಾ ನಗ್ತಾರೆ. ದಿಗಂತ್ ಅಣ್ಣ ನ ಪಾತ್ರದಲ್ಲಿ ಕಾದಲ್ ದಂಡಪಾನಿ ಮಜಾ ಕೊಡುತ್ತಾರೆ. ಮಿಕ್ಕಂತೆ ಸಾಧು ಕೋಕಿಲ, ಪದ್ಮಜಾ ರಾವ್, ಮುಖ್ಯಮಂತ್ರಿ ಚಂದ್ರು ಇದ್ದಾರೆ. ಶಕೀಲಾ, ರಘು ಮುಖರ್ಜೀ ಬಂದು ಹೋಗುತ್ತಾರೆ. ಮನೋಮೂರ್ತಿ ಸಂಗೀತದಲ್ಲಿ 'ನೀ ಮೋಹಿಸು' ಮನಮುಟ್ಟುತ್ತದೆ, ಹಾಸ್ಯ ಸನ್ನಿವೇಶಗಳಲ್ಲಿ ಅವರು ಹಿನ್ನಲೆ ಸಂಗೀತ ಚೆನ್ನಾಗಿ ಜೋಡಿಸಿದ್ದಾರೆ. ಶ್ರೀನಿವಾಸ್ ದೇವಾಮ್ಸನ್ ಕ್ಯಾಮೆರ ಮೋಡಿಯಲ್ಲಿ 'ಓ ಪಾರಿಜಾತ' ಹಾಡಿನ ಮಂಜು ಕವಿದ ವಾತಾವರಣದ ದೃಶ್ಯ ವೈಭವ ಕಾಣಸಿಗುತ್ತದೆ. 


ತಮಿಳಿನ   'ಬಾಸ್ ಎಂಗಿರ ಬಾಸ್ಕರನ್' ರೀಮೇಕಾದ ಈ ಚಿತ್ರವೊಂದು ಈಸಿ ಟೈಮ್ ಪಾಸ್. ಕಥೆ - ಚಿತಕತೆಯ ಕ್ರೆಡಿಟ್ ತಮಿಳಿಗೆ ಸೇರಬೇಕಾದರೂ ಕನ್ನಡದಲ್ಲಿ ಹೆಚ್ಚು ಕಲರ್ಫುಲ್ ಆಗಿ ಬಂದಿದೆ ಎನ್ನುವುದು ಎರಡು ಚಿತ್ರಗಳನ್ನು ನೋಡಿದವರ ಅಭಿಪ್ರಾಯ.

ಚಿಂಗಾರಿ : ಗಲ್ಲಾಪೆಟ್ಟಿಗೆ ಫುಲ್ಲು ರೀ

ಇದ್ದಕ್ಕಿದ್ದಂಗೆ ಒಂದು  ಸಿನಿಮಾ ವಿಮರ್ಶೆ ಮಾಡಿದಿನಿ. ಯಾಕೆ ಏನು ಕಾಲ ಕೂಡಿ ಬಂದರೆ ಹೇಳ್ತೀನಿ. ಈಗ ಓದಿ.

ಚಿತ್ರ ನಿರ್ದೇಶಕ ಹರ್ಷ ಚಿಂಗಾರಿ ಹಾಡೊಂದರ ಚಿತ್ರೀಕರಣಕ್ಕೆ ಸಕಲೇಶಪುರದಲ್ಲಿ ಸಕಲ ಸಿದ್ಧತೆ ಮಾಡ್ಕೊಂಡಿದ್ರು. ಬೆಳಗ್ಗೆ ಆರು ಘಂಟೆಯಿಂದ ಶೂಟಿಂಗ್ ನಿಗದಿಯಾಗಿತ್ತು. ಇತ್ತ ಅದೇ ದಿನ ರಾಜ್ಯದ ಎಲ್ಲಾ ನ್ಯೂಸ್ ಚಾನೆಲ್ಲುಗಳಲ್ಲಿ ದರ್ಶನ್ ಪತ್ನಿ ಕಿರುಕುಳದ ಆರೋಪದ ಮೇರೆಗೆ ಅರೆಸ್ಟ್ ಆದ ಸುದ್ದಿ ಬಿತ್ತರವಾಗುತಿತ್ತು.


ಅಂದು ಹರ್ಷ ಮತ್ತು ನಿರ್ಮಾಪಕ ತಲೆ ಮೇಲೆ ಕೈಹೊತ್ತು ಕೂರುವಂತೆ ಮಾಡಿದ ಚಿತ್ರ ಇಂದು ಭರ್ಜರಿ ಪ್ರದರ್ಶನ ಕಾಣುತ್ತಾ ಸಾಗಿದೆ. ಜನ ಸಾರಥಿ ಹ್ಯಾಂಗ್ ಓವರ್ನಲ್ಲೇ ಚಿಂಗಾರಿ ನೋಡಲು ಉತ್ಸಾಹ ತೋರಿಸಿದ್ದಾರೆ. ಕನ್ನಡದ ಮಟ್ಟಿಗೆ 'ಚಿಂಗಾರಿ' ವಿಭಿನ್ನ ಪ್ರಯತ್ನ. ಚಿತ್ರದ ಅರ್ಧಕ್ಕಿಂತ ಹೆಚ್ಚು ಭಾಗ ಸ್ವಿಜರ್ಲೆಂಡಿನಲ್ಲಿ ಚಿತ್ರೀಕರಣವಾಗಿದೆ. ಪ್ರೇಕ್ಷರಿಗೆ ಕೊಟ್ಟ ಕಾಸಿಗೆ ಮೋಸವಾಗದಂತೆ ಸ್ವಿಜರ್ಲೆಂಡ್ ತೋರಿಸಲಾಗಿದೆ. ಹರ್ಷ 'ಗೆಳೆಯ' , 'ಬಿರುಗಾಳಿ' ಮಾಡಿ ಅವರ ಅಭಿರುಚಿ ಆಕ್ಷನ್ + ಥ್ರಿಲ್ಲರ್ + ಲವ್ ಎಂದು ಈಗಾಗಲೇ ತೋರಿಸಿದ್ದಾರೆ. ಚಿನ್ಗಾರಿಯಲ್ಲೂ ಅದೇ ಫಾರ್ಮುಲಾ ಅಳವಡಿಸಿಕೊಂಡಿದ್ದಾರೆ.

ಮಾನವ ಕಳ್ಳಸಾಗಣಿಕೆಯ ಮೇಲೆ ಚಿತ್ರದ ಕಥೆ ಹೆಣೆಯಲಾಗಿದೆ. ಚಿತ್ರದ ನಾಯಕಿ ಅವಳ ಗೆಳತಿಯೊಂದಿಗೆ ಸ್ವಿಜರ್ಲೆಂಡ್ ಗೆ ಗಿಟಾರ್ ಆಡಿಶನ್ಸ್ ಗಾಗಿ ಬರುತ್ತಾಳೆ. ಅವಳು ಮತ್ತು ಅವಳ ಗೆಳತಿಯನ್ನು ಭಾರತ ಮೂಲದ ಕಳ್ಳರು ಅಪಹರಿಸುತ್ತಾರೆ. ನಾಯಕ ನಾಯಕಿಯನ್ನು ರಕ್ಷಿಸಲು ಅಲ್ಲಿಗೆ ಹೋಗುತ್ತಾನೆ. ದರ್ಶನ್, ಭಾವನ ಜೊತೆಗೂಡಿ ಅಪಹರಣಕಾರ ಜಾಲ ಪತ್ತೆ ಮಾಡುತ್ತಾರೆ. ಮುಂದೇನಾಗುತ್ತದೆ ಎಂದು ನೀವು ಚಿತ್ರ ನೋಡಿ ಆನಂದಿಸಿ.

ದರ್ಶನ್ ಸ್ಟೈಲಿಶ್ ಸಿಸಿಬಿ ಪೋಲಿಸ್ ಆಗಿ ಅವರ  ಅಭಿಮಾನಿಗಳನ್ನು ಡೈಲಾಗ್ಸ್ , ಸಾಹಸಗಳಿಂದ  ಸಂತೋಷಗೊಳಿಸುತ್ತಾರೆ .ನಾಯಕಿ ದೀಪಿಕಾ ತಮ್ಮಯ್ಯ ರವರ ಲುಕ್ಸ್ ಮತ್ತು ಅಭಿನಯ ಭರವಸೆ ಮೂಡಿಸುವಂತಿಲ್ಲ. ಭಾವನಾಳಂಥ ನಟಿ ಈ ಪಾತ್ರ ಆಯ್ಕೆಮಾಡಿ ಅಚ್ಚರಿಪಡಿಸಿದ್ದಾರೆ. ವಿದೇಶಿ ನೃತ್ಯಗಾರರ  ಸಮಕ್ಕೆ 'ಬಿಚ್ಚಮ್ಮ'ಳಾಗಿದ್ದಾರೆ, ಪಾತ್ರಕ್ಕೆ 'ನ್ಯಾಯ' ಒದಗಿಸಿದ್ದಾರೆ. ಹರಿಕೃಷ್ಣ ಸಂಗೀತ ಆತುರದಲ್ಲಿ ಮಾಡಿದಂತಿದೆ. 'ಕೈ ಕಚ್ಚಾ ಅಸಡ'ದಂತ ಸಾಹಿತ್ಯ ಭಟ್ಟರನ್ನು ಬಿಟ್ಟರೆ ಬೇರೆಯಾರಿಂದಲೂ ಸಾಧ್ಯವಿಲ್ಲ ಬಿಡಿ.

 

ಹರ್ಷ ನಿರ್ದೇಶನಕ್ಕೆ ಮಹತ್ವ ಕೊಟ್ಟು ಈ ಚಿತ್ರದ ಹಾಡುಗಳಲ್ಲಿ ನಿರಾಸೆ ಮೂಡಿಸಿದ್ದಾರೆ. 'ಈ ಸಂಜೆ ಯಾಕಾಗಿದೆ' , 'ಹೂವಿನ ಬಾಣದಂತೆ' ಅಂತ ಹಾಡುಗಳನ್ನು ಹಿಂದಿನ ಚಿತ್ರಗಳಲ್ಲಿ ಕೊಟ್ಟು , ಈ  ಚಿತ್ರದಲ್ಲಿ ಪ್ರೇಕ್ಷಕರಿಗೆ ಲಾಸ್ ಮಾಡಿದ್ದಾರೆ ಅಂತಾನೆ ಹೇಳಬಹುದು. ದರ್ಶನ್ ಹಾಡೊಂದರಲ್ಲಿ ವಿಗ್ ಹಾಕಿದ್ದಾರೆ. ಅದು ಅವರ ಬಿಡುಗಡೆಯಾದ ಮೇಲೆ ಚಿತ್ರಿಸಿದ್ದು ಎಂದು ಗುರುತಿಸುವ ಮಟ್ಟಿಗೆ ಕಾಣುತ್ತದೆ. ಇತರ ಪಾತ್ರಗಳಲ್ಲಿ ಸೃಜನ್ ಲೋಕೇಶ್, ಅರುಣ್ ಸಾಗರ್, ರಮೇಶ್ ಭಟ್ ಇದ್ದಾರೆ.

ನಿರ್ದೇಶಕ ಹರ್ಷ ರವರಿಗೆ ಸ್ವಿಜರ್ಲೆಂಡ್ ನಲ್ಲೂ ಕಾಲು ಕಾಲಿಗೂ ಕನ್ನಡದರೇ  ಸಿಗುತ್ತಾರೆ, ದರ್ಶನ್ ಬಾಯಲ್ಲಿ 'ಕರ್ನಾಟಕ ಪೋಲಿಸ್ ಅಂದ್ರೆ ಏನ್ ಗೊತ್ತ' ಅಂತ ಸ್ವಿಜರ್ಲೆಂಡ್ ನಲ್ಲಿ ಹೇಳಿಸಿದ್ದಾರೆ. ಭಾರತದಲ್ಲಿ ಹೆಂಗಸರನ್ನು ಹೇಗೆ ಪೂಜ್ಯನೀಯವಾಗಿ ಕಾಣುತ್ತೇವೆ ಅಂತ ದೊಡ್ ದೊಡ್ ಡೈಲಾಗ್ ಹೇಳಿಸಿ ಕೊನೆಯಲ್ಲಿ ನಾಯಕಿಯನ್ನು ಮಾತ್ರ ರಕ್ಷಿಸಿ ಅವಳ ಗೆಳತಿಯನ್ನು ಮರೆತೇಬಿಡುತ್ತಾರೆ. ಹೀಗೆ ಅಲ್ಲಿ ಇಲ್ಲಿ ಕೆಲವು ಸನ್ನಿವೇಶಗಳನ್ನು ಬಿಟ್ಟರೆ 'ದಿಸ್ ಇಸ್ ಅ ಗುಡ್ ವಾಚ್'.