ಪೇಪರ್ ದೋಣಿ KANNADA FILM REVIEW

ಪೇಪರ್  ದೋಣಿ ಇಟ್ಕೊಂಡು ಟೈಟಾನಿಕ್ ಲೆವೆಲ್ ಯೋಚನೆ ...

ನಾಯಕ ಚೇತನ್ (ನವೀನ್ ಕೃಷ್ಣ ) ಲೋಕೋದ್ಧಾರಕ. ಹುಟ್ಟು ಹೋರಾಟಗಾರ.
ವಿಷ್ಣುವಿನ ಹನ್ನೊಂದನೆಯ ಅವತಾರಕ್ಕೆ  ಜಸ್ಟ್ ಮಿಸ್ಸು.
ಎಸ್.ಓ.ಎಸ್  ಎಂಬ ಸಂಘಟನೆ ಕಟ್ಕೊಂಡು ಭಯೋತ್ಪಾದನೆ, ಭ್ರಷ್ಟಾಚಾರ, ಬಡತನ ನಿರ್ಮೂಲನೆ, ಉದ್ಯೋಗ ಕ್ರಾಂತಿ.. ಹೀಗೆ ಒಂದ ಎರಡ.. ನಾಯಕನ ತಲೇಲಿ ಓಡೋದು. ಅದನ್ನ ಕಾರ್ಯರೂಪಕ್ಕೆ ತಂದು ಕ್ಷಣಾರ್ಧದಲ್ಲಿ ಸಮಸ್ಯೆ ಬಗೆಹರಿಸೋದು. ಹೀಗೆ ಅಖಿಲ ಭಾರತದ ಎಲ್ಲ ಸಮಸ್ಯೆಗೆ ಪರಿಹಾರ ಕಂಡುಕೊಳ್ತಾ ಸುಮ್ಮನಾಗದೆ ಇಡಿ ವಿಶ್ವದಲ್ಲೇ  ಶಾಂತಿ, ಸುವ್ಯವಸ್ಥೆ  ನೆಲ್ಸೋಹಂಗೆ ಮಾಡುವುದೇ ಈ ಎಸ್.ಓ.ಎಸ್ ಸಂಸ್ಥೆಯ ಗುರಿ.


ಅದೇನೋ ಗಾದೆ ಹೇಳ್ದಂಗಾಯ್ತು.. ನಮ್ ಎಲೆಲೇ ಆನೆ ಸತ್ತು ಬಿದ್ದಿರ್ಬೇಕಾದ್ರೆ, ಪಕ್ಕದ್ ಎಲೇಲಿ ಇರುವೆ ಹುಡುಕ್ದಂಗೆ ಅಂತ..
ಹೀಗೆ ಒಂದು ಹಂತದಲ್ಲಿ ಭಾರತದ ಸಮಸ್ಯೆಗಳನ್ನೇ ಮರೆತು  ಅಲ್ಜೀರಿಯ, ಇತ್ಯೋಪಿಯ, ಸೋಮಾಲಿಯ ದೇಶಗಳ ತೊಂದರೆಗೆಲ್ಲಾ  ನಾಯಕ ಮೂಗು ತೂರಿಸಲು ಹೋದಾಗ ನಿಮ್ಮ ತಲೆ ತಿರುಗಿದರೆ ಆಶ್ಚರ್ಯವಿಲ್ಲ.

ಮೇಲಿನ ಹಾಗೆ ಕಥಾವಸ್ತುವಿನಲ್ಲಿ ಸ್ವಲ್ಪ ವಿಭಿನ್ನತೆ ಇದ್ರೂ, ಇತರೆ ಎಲ್ಲಾ 'ಡಿಫರೆಂಟ್' ಚಿತ್ರಗಳಂತೆ ಇಲ್ಲೂ ತಾಯಿ ಸೆಂಟಿಮೆಂಟ್, ಆಕ್ಷನ್, ಲವ್, ಮರ ಸುತ್ತೋ ಹಾಡುಗಳು, ಹೀಗೆ 'ಡಿಫರೆಂಟ್' ಅಂಶಗಳನ್ನು ತುರುಕಲಾಗಿದೆ. ಒಂದು ಸೀರಿಯಸ್ ಚೇಸಿಂಗ್ ಸೀನೊಂದು  ಸ್ಕೂಲ್ ಪಕ್ಕ ಇರೋ ರೋಡ್ನಲ್ಲಿ ನಡಿತಾ ಇರತ್ತೆ. ಸ್ಕೂಲ್ನಲ್ಲಿ ಜನಗಣಮನ ಹಾಡುವುದನ್ನು ಕೇಳಿ ನಾಯಕ, ಖಳನಾಯಕ, ಗೂಂಡಾಗಳು ಎಲ್ಲ ಒಂದು ಕ್ಷಣ ನಿಂತರೆ ಅದನ್ನ ಕಾಮಿಡಿ ಅನ್ಬೇಕೋ ದೇಶಭಕ್ತಿಯ ಪರಾಕಾಷ್ಠೆ ಅನ್ಬೇಕೋ ಗೊತ್ತಿಲ್ಲ.


ನವೀನ್ ಕೃಷ್ಣ ಮುಳುಗೋ ಪೇಪರ್ ದೋಣಿನ  ಸ್ವಲ್ಪ ಹೊತ್ತಾದರೂ ತೇಲಿಸುವ ಪ್ರಯತ್ನ ಮಾಡಿದ್ದಾರೆ. ಅವರ ಪ್ರತಿಭೆಗೆ ತಕ್ಕ ಚಿತ್ರವಲ್ಲ. ನಾಯಕಿ ಶಾಂತಲ, ತಾಯಿಯ ಪಾತ್ರದಲ್ಲಿ ವಿನಯ ಪ್ರಸಾದ್, ಕ್ರಾಂತಿಕಾರಿ ಪಾತ್ರದ ಅವಿನಾಶ್ ಎಲ್ರೂ ಡಮ್ಮಿ.


ಶ್ರೀಸುಮನ್ ಸಂಗೀತದಲ್ಲಿ 'ಇರಬಹುದ ಇರಬಹುದ' ಹಾಡು ಇಂಪಾಗಿದೆ.
ಛಾಯಾಗ್ರಹಣ, ಸಂಕಲನದಲ್ಲಿ ವಿಶೇಷತೆ ಏನು ಇಲ್ಲ.


ನಿರ್ದೇಶಕ ಆರ್.ಕೆ. ನಾಯಕ್ ಅವರು ಎಂತಹ ಮಹತ್ವಾಕಾಂಕ್ಷಿ ಅಂತ ಈ ಚಿತ್ರದಲ್ಲಿ ಎದ್ದೆದ್ದು ಕಾಣುತ್ತದೆ. ಸ್ಲಂನಲಲ್ಲೇ ಸಾಫ್ಟ್ವೇರು, ಮಾಸಲ್ಲೇ ಮಾಹಿತಿ ತಂತ್ರಜ್ಞಾನ, 2500 ರೂಗಳಿಗೆ ಲಾಪ್ ಟಾಪು, ಹೀಗೆ ಎಲ್ಲೆ  ಮೀರಿ ಅವರ ಕನಸುಗಳು ಪೇಪರ್ ದೋಣಿಯ ಮೂಲಕ ಸಾಗರದಲ್ಲಿ ಈಜಾಡುವ ಪ್ರಯತ್ನ ಮಾಡಿದ್ದಾರೆ. ಅವರ ಪ್ರಯತ್ನ ಪ್ರಶಂಸಾರ್ಹ.ಆದರೆ ಸಿನಿಮಾ ಬದಲು ಒಂದು ಬೀದಿ ನಾಟಕವಾದರೂ 
ಮಾಡಿದ್ರೆ ಪ್ರೇಕ್ಷಕರ ಚೆಪ್ಪಾಳೆ ಗಿಟ್ಟಿಸಬಹುದಿತ್ತು.
~ಹೊಗೆ

'ಸಾಲದ' ಮದುವೆ ಮುಂಜಿ ಪಂಕ್ಸನ್ ಗಳು

'ಸಾಲ' ಮದುವೆ ಮುಂಜಿ ಪಂಕ್ಸನ್ ಗಳು !!

ಹುಡ್ಗೀರು, ಹೆಂಗಸರು, ಮದುವೆ ಇವುಗಳ ಮೇಲೆ ಆಕರ್ಷಣೆ ಇಲ್ಲವೆಂದರೆ  ಒಬ್ಬ ಗಂಡಸನ್ನು ಮಂಗಳಮುಖಿ ಅನ್ನುತ್ತಾರೋ ವಿರಾಗಿ ಅಂತಾರೋ ತಿಳಿಯದು. ಅದು ನಮಗೆ ಬೇಡವಾದ ವಿಚಾರ. ಆದರೆ ಈ ಮದುವೆ, ಮುಂಜಿ, ನಾಮ್ಕರಣ, ಅರ್ವತ್ತೊರ್ಷದ ಶಾಂತಿ, ಬರ್ತಡೆ ಪಾರ್ಟಿ ಇವುಗಳ ಬಗ್ಗೆ ನಿಮಗೆ ವೈರಾಗ್ಯ ಬಂತೋ .. ನಿಮ್ಮನ್ನ ಅಂತರ್ಮುಖಿ ಅಂತ ಜನಗಳು ಬಯ್ತಾರೆ. ಅಂತರ್ಮುಖಿ ಎಂಬ ಪದ ಗೊತ್ತಿರದ ಜನ'ಗೊ'ಳು ನಿಮ್ಮನ್ನ ಹುಚ್ಚಾ ಬೆಪ್ಪ ಎಂದು ಕರೆಯುವುದುಂಟು. ಇನ್ನು ಇಂಗ್ಲೆಂಡಿನ ಬರ್ಮಿಂಗ್ ಹ್ಯಾಮ್  ಪ್ಯಾಲೇಸಿನ ಶೌಚಾಲಯದಲ್ ಹುಟ್ದಂಗಾಡೋರು 'ನಾಟ್ ಸೋ  ಸೋಶಿಯಲ್', 'ಇಂಟ್ರಾವರ್ಟ್' ಎಂಬ ಪದಗುಚ್ಛ ಬಳಸುತ್ತಾರೆ. 

ನಂಗೂ ಸಾಕಾಯ್ತಪ್ಪ.. ಈ ರೀತಿ ಸಮಾರಂಭಗಳಿಗೆ ಹೋಗೀ  ಬಂದು. ಈ ವಯಸ್ಸೇ ಅಂಥದ್ದು. ಅಂದ್ರೆ ಈ 23-24 ರ ಹರೆಯ ಯಾವ್ ಮನುಶ್ಯಂಗೂ ಬೇಡಾಪ್ಪ. ಆಗ ತಾನೇ ಡಿಗ್ರಿ ಮುಗ್ದಿರತ್ತಾ? ನಮ್ ಕಣ್ ಮುಂದೇನೇ ನಾವು ಕಾಲೇಜಿನಲ್ಲಿ ನಮ್ಮ ಜತೆಯಲ್ಲೇ ನಕ್ಕೊಂಡು, 'ನಲ್'ಕೊಂಡು ಓದಿದ  ಹುಡುಗಿಯರಿಗೆಲ್ಲಾ  ಮದುವೆ.. ಬಿಡಿ ಅದು ಎಲ್ಲ ಹುಡುಗರ 'ಪರ್ಸನಲ್' ವಿಷಯ. ಅದಕ್ಕ್ಕೆ ನಾವ್ 'ಕೈ' ಹಾಕೋದು ಸರಿಯಲ್ಲ..

ಅಲ್ಲಾ.. ಈ ಜೀವ್ನ ಇರೋದೇ ಪಂಕ್ಸನ್ ಗಳ್ನ ಅಟೆಂಡ್ ಮಾಡೋದಕ್ಕಾ ಅಂತೊಮ್ಮೆ ನಿಮಗನಿಸಿದರೆ ನಾನು ನೀವು ಸಮಾನ ಮನಸ್ಕರು ಅಂತ. ಆಷಾಡ ಬಿಟ್ರೆ ಮಿಕ್ಕೆಲ್ಲಾ ಮಾಸದಲ್ಲೂ ಈ ಪಂಕ್ಸನ್ ಸಹವಾಸ ತಪ್ಪಿದಲ್ಲ. ನನ್  ಪ್ರಕಾರ ಇವಕ್ಕೆ ಅರ್ಥಾನೇ ಇಲ್ಲಾರೀ..

ಮದುವೆ ಅಂದ್ರೆ ಅಲ್ಲಿ ಬರಿ ಅಳು. ನಗುವಿನ ಮುಖವಾಡದಲ್ಲಿ... ಜಾಸ್ತಿ ಎಕ್ಸ್ಪ್ಲೇನ್  ಮಾಡಲ್ಲ. ಖ್ಯಾತ ನಿರ್ದೇಶಕ ಗುರುಪ್ರಸಾದ್ ಬಾಯಲ್ಲಿ ಮದುವೆ ಅಂದ್ರೆ ಏನ್  ಗೊತ್ತಾ - "ಇಬ್ರನ್ ಮಲಗ್ಸಕ್ಕೆ ಅದೆಷ್ಟ್  ಜನ ಅದೆಷ್ಟ ದಿನ ಎದ್ದಿರ್ಬೇಕಪ್ಪ !!"

ಇನ್ನು ಮುಂಜಿಲಿ ಎರಡು ವಿಧ. ಸೊಂಟದಿಂದ ಮೇಲೆ, ಮತ್ತೊಂದು ಸೊಂಟದ ಕೆಳಗೆ.. ಅವರವರ ಸಂಸ್ಕಾರಕ್ಕೆ ತಕ್ಕಂತೆ.
ಸೋ  ಮುಂಜಿಗೆ ಆಡಂಬರ ಬೇಕಿಲ್ಲ. ಸಂಸ್ಕಾರ ಸಾಕು.


ಗೃಹಪ್ರವೇಶ ಅಂತೂ ಕೇಳಲೇ ಬೇಡಿ. ಅದೊಂದು ಹೊಟ್ಟೆ ಕಿಚ್ಚಿನ ಉತ್ತುಂಗದ ಹಂಗ.. ಆಹ್ವಾನಿತ ಜನರು ಸುಮ್ನೆ ಬಂದು ಊಟ  ಮುಗಿಸಿ ಹೋಗುವ ಬದಲು ಏನೋ ತಾವೇ ಈ ಮನೇಲ್ ಬಂದು ವಾಸಿಸಬೇಕೆನೋ ಎಂಬಂತೆ ಮನೆಯ ಆಕಾರ ಪ್ರಕಾರದ ಬಗ್ಗೆ ಕಾಮೆಂಟ್ ಹೊಡೆಯದೆ ಇರುವುದಿಲ್ಲ. ಈ ಚಂದಕ್ಕೆ ಯಾಕ್ ಆಗ್ದೆರೋ ಜನಗಳ್ನ ಕರೀಬೇಕು?

ನಾಮಕರಣ, ಮೊದಲ ಹುಟ್ಟಿದಹಬ್ಬ, ವೈಕುಂಟ ಸಮಾರಾಧನೆ ಇವೆಲ್ಲ ಎಷ್ಟೇ ಗ್ರ್ಯಾಂಡ್ ಆಗಿ ಮಾಡ್ಕೊಂಡ್ರು ನಿಮಗೆ ಜ್ಞಾಪಕ ಇರಲ್ಲ.

ಇನ್ನು ಅರ್ವತ್ತೊರ್ಷದ ಶಾಂತಿ ಮಾಡ್ಕೊತೀರ..
ರಿಟೈರ್ಡ್ ಆದ ದುಡ್ಡು ಕೈಯಲ್ಲಿರತ್ತೆ. ಆದರೆ ಬರೋ ಜನರು ಯಾವ್ ಮೈಂಡ್ ಸೆಟ್ ನಲ್ಲಿ ಬರ್ತಾರೆ ಅಂತ ನೀವು ಊಹಿಸಕ್ಕು ಆಗಲ್ಲ 
- "ಅಯ್ಯೋ ಪಾಪ.. ಮೂರ್ತಿ ಮನೇಲಿ ಶಾಂತಿ ಕಣ್ರೀ ಇವತ್ತು.. ಪಾಪ ಅವರ ಮನೆ ಕೊನೆ ಫಂಕ್ಷನ್ನು.. ಹೋಗ್ಬರೋಣ ಬನ್ನಿ" .. ಇವೆಲ್ಲ ಬೇಕಾ??


ಇನ್ನು ಪಂಕ್ಸನ್ ಗಳಲ್ಲಿ ಹೇಸಿಗೆ ಹುಟ್ಸೋ ಒಂದು ವಿಷಯ ಅಂದ್ರೆ ಉಡುಗೊರೆ. ನೀವೇ ಯೋಚನೆ ಮಾಡಿ, ಇದುವರ್ಗೂ ಎಷ್ಟ್ ಕಡೆ ಎಷ್ಟ್ ಜನಕ್ಕೆ ನೀವ್ ಗಿಫ್ಟ್ ಕೊಟ್ರಲ್ಲ.. ಅದ್ರಲ್ಲಿ ಎಷ್ಟ್ ಜನಕ್ಕೆ ನೀವು ಮನಃ ಪೂರ್ವಕ ಕೊಟ್ಟಿದ್ದೀರಾ, ಎಷ್ಟ್ ಜನಕ್ಕೆ ಏನೋ ಕೊಡಬೇಕಲ್ಲ ಅಂತಾನೋ ಅಥ್ವಾ ಅವರು ನಿಮ್ಮನೆ ಪಂಕ್ಸನ್ ಬಂದಾಗ ಕೊಟ್ಟಿದ್ರೂ ಅಂತ ವಾಪಸ್ ಮಾಡಿದ್ದೀರಾ.. ಇಷ್ಟ ಸಾಕಲ್ವ ಈ ಉಡುಗೊರೆ ಅನ್ನೋ ಕಾನ್ಸೆಪ್ಟ್ ಮೇಲೆ ಹೇಸಿಗೆ ಹುಟ್ಸಕ್ಕೆ..

ಇನ್ನು  ಬೀಗರೂಟ ಬಾಡೂಟಗಳು ಪ್ರತಿಷ್ಠೆಯ ಪ್ರಶ್ನೆ.. ಕಂಠಪೂರ್ತಿ ಕುಡಿತ, ಗಂಟಲು ಗಂಟ ತಿನ್ನಾಟ .. !!

ಸ್ವಂತ ಹುಟ್ಟಿದಹಬ್ಬ ಆಚರಿಸ್ಕೊಳ್ಳೋದು.. ಬಿಡಿ. ಸಮಯ ಹಾಳು..

ಇನ್ನೊಂದ್ ಇಂಟರೆಸ್ಟಿಂಗ್ ವಿಷಯ.. '' ಯಾರಾರ ನಮ್ಮ ದೇಶದಲ್ಲಿ ಸತ್ಯನಾರಾಯಣ ಪೂಜೆಯನ್ನ ನಿಜವಾದ ಶ್ರದ್ಧೆ ಭಕ್ತಿಯಿಂದ ಮಾಡೋದು ನೋಡಿದಿರಾ.. ಚಾನ್ಸೇ ಇಲ್ಲ. ಊರೌರ್ನೆಲ್ಲ ಕರ್ಕೊಂಡು ಒಂದು ದೊಡ್ಡ ಸಮಾರಮ್ಭವನ್ನೇ ಮಾಡ್ಬೇಕು.. ಪೂಜೆ ಮರಿಬೇಕು. ಬಂದವರೆಡೆಗೆ ಗಮನ ವಹಿಸಬೇಕು. ಅದು ನಮ್ ಜನ್ಗಳ ಸತ್ಯನಾರಾಯಣ ಪೂಜೆಯ ರಿಯಲ್ ಡೆಫಿನಿಶನ್.."

ಸಾಲ ಮಾಡಿಯಾದ್ರು ಪಂಕ್ಸನ್ ಗಳನ್ನ ಜನಗೊಳು ಮಾಡಕ್ಕೂ, ಆ ಸಾಲದಷ್ಟು ಪಂಕ್ಸನ್ ನಾವ್ ಅಟೆಂಡ್  ಮಾಡಕ್ಕು ಸರಿಯಾಗಿದೆ.. ಲಂಚ್ ಬಫೆ ಇದ್ರು , ಎನ್  ಬೇಕೋ ಅದನ್ನ ಮಾತ್ರ ಹಾಕಿಸಿಕೊಳ್ಳುವ ಸೌಕರ್ಯ ಇದ್ರೂ ಜನ ಊಟ ಚೆಲ್ತಾರೆ ಅಂದ್ರೆ.. ನಿಜವಾಗ್ಲೂ ಆ ಜನ ಚೆಲ್ಲೆದ್ದೋಗಿದಾರೆ ಅಂತರ್ಥ.

ಇದೆಲ್ಲ ನಿಂತೋದ್ರೆ  ಜನ ಸೇರೋದಾದರೂ ಎಲ್ಲಿ. ಸತ್ಸಂಗ, ವಿಚಾರ ಸಂಕೀರ್ಣ, ಚಿಂತನೆ-ಸಂವಾದ ಕಾರ್ಯಕ್ರಮಗಳು ಹೆಚ್ಚಾಗಲಿ. ಆಗ ಅವಕ್ಕೂ ಅರ್ಥ ಬರತ್ತೆ.. ಸ್ವಲ್ಪ ದೊಡ್ ಮಾತ್ಗಳು ಬರ್ತಾಇದೆ. ಇಲ್ಲಿಗೆ ಸಾಕಪ್ಪ.. ಲೈಟಾಗಿ ಓವರ್ ಆಗಿದ್ರೆ ಒಸಿ ಅಡ್ಜಸ್ಟ್ ಮಾಡ್ಕೊಳಿ ಪ್ಲೀಸ್ :)

ಉಸ್ಸಪ್ಪಾ ಈ 'ಪಂಕ್ಸನ್' ಮುಗಿತು... ನಿಮ್ಮ ಕಮೆಂಟ್ ನಮಗೆ ಉಡುಗೊರೆ :)
~ಹೊಗೆ

Addoori kannada film review

ಕಲ್  ಕಲರ್ ಅದ್ದೂರಿ..
ಅದು ಬಣ್ಣದ ಲೋಕ. ಆ ಲೋಕದಲ್ಲಿ ಇರೋದು ಇಬ್ರು ಮಾತ್ರ. ಅದು ಅಚ್ಚು  ರಚ್ಚು ಲವ್ ಸ್ಟೋರಿ.
ಅಚ್ಚು (ಧ್ರುವ ಸರ್ಜಾ) ಡಿಚ್  ಮಾಡ್ದ ಅಂತ ಜಗಳ ಮಾಡಿ ಅವನನ್ನು ಬಿಡಲು ರಚ್ಚು (ರಾಧಿಕಪಂಡಿತ್) ನಿರ್ಧರಿಸುತ್ತಾಳೆ. ಆದ್ರೆ ಈ ಅಚ್ಚು ಅಷ್ಟು ಸುಲಭವಾಗಿ ಪ್ರೀತಿನ ಬಿಡ್ಕೊಡ್ದೆ ಹೆಂಗಾರು ಅವಳಿಗೆ ಟಚ್ ಆಗೋ ಹಂಗೆ ಮಾಡಿ ಪುನಃ ಪ್ರೀತಿ ಪಡಿತೀನಿ, "ಥೂ ಅಂತ ಉಗಿದರೂ ನಿನ್ನೆ ಪ್ರೀತಿ ಮಾಡುತ್ತೀನಿ ಹೋಗೆ" ಎಂದು ಹಾಡುತ್ತಾನೆ.
ಅವಳು ವಾಪಸು ಊರಿಗೆ ಹೋಗಲು ಏಳು ದಿನ ಸಮಯವಿರುತ್ತದೆ. ಅಚ್ಚು ಅಷ್ಟರೊಳಗೆ ಕಳೆದುಹೋದ ಪ್ರೀತಿಯನ್ನು ಗಿಟ್ಟಿಸಿಕೊಳ್ಳಬೇಕಾಗುತ್ತದೆ. ಈ ಅಚ್ಚು ಏನೇ ಸರ್ಕಸ್ ಮಾಡಿದ್ರೂ ಒಪ್ಪದ ರಚ್ಚು ಸಾಕ್ಷಾತ್ ರಚ್ಚೆ ಹಿಡಿದು ಒಲ್ಲೆ ಎನ್ನುತ್ತಾಳೆ.
ಅಷ್ಟಕ್ಕೂ ಇವರಬ್ಬರ ಮಧ್ಯೆ ಜಗಳವಾಗಲು ಕಾರಣ ಏನು ಅಂತ ಪ್ರೇಕ್ಷಕನ ಪ್ರಶ್ನೆಗೆ ರಚ್ಚು "ಪ್ರೀತಿಸುವ ಹುಡುಗಿಯರ ಯಾರು ಕಾಯಿಸಬಾರದು" ಎಂದು ಉತ್ತರಿಸುತಾಳೆ. ಕೊನೆಗೆ ಅಚ್ಚು ಆ  ದಿನ ಏತಕ್ಕೆ  ಲೇಟಾಗಿ ಬಂದ ಅಂತ ತಿಳಿದು ರಚ್ಚು ಪುನಃ ಅವನನ್ನು ಕಚ್ಚಿಕೊಳ್ಳುತ್ತಾಳೆ.





ಧ್ರುವ ಸರ್ಜಾ ನೃತ್ಯ, ಸಾಹಸ ಅದ್ದೂರಿ. ಅಭಿನಯಕ್ಕೆ ಇನ್ನೊಂದೆರಡು ಪಿಚ್ಚರ್ ಆಗ್ಬೇಕು. ರಾಧಿಕ ಪಂಡಿತ್ ರಚ್ಚುವಾಗಿ ಅಚ್ಚು ಮೆಚ್ಚು. ಎ.ಪಿ ಅರ್ಜುನ್ ಪಟ್ಟ ಶ್ರಮದಿಂದ ಚಿತ್ರ ಸಂಭ್ರಮಯುತವಾಗಿದೆ. ನಿರೂಪಣೆ, ಕಥೆ ಎಲ್ಲಕ್ಕೂ ಫುಲ್ ಮಾರ್ಕ್ಸ್.
ಸಂಭಾಷಣೆ ಮತ್ತು ಕಥೆಯ ವೇಗ ಡಲ್ ಡಲ್. ಆದರೆ ಪ್ರತಿಯೊಂದ್ ಫ್ರೇಮು ಒಂದು ಕಲ್ಪನಾ ಲೋಕ. ಕಣ್ಣಿಗೆ ಬಣ್ಣದ ಹಬ್ಬ.
ಇದರಲ್ಲಿ ಸೂರ್ಯ ಕಿರಣ್ ಕ್ಯಾಮೆರ ಕೈಚಳಕವೂ  ಇದೆ. ಟ್ರ್ಯಾಕಿಂಗ್ ಶಾಟ್ಸ್ ಚಿತ್ರದ ವೇಗಕ್ಕೊಂದು ಕಳೆ. ದೀಪು ಸಂಕಲನ ನಿರ್ದೇಶಕನ ಆಣತಿಯಂತೆ. ರವಿವರ್ಮ ಸಾಹಸ ನಿರ್ದೇಶನದಲ್ಲಿ ಒಂದು ಬ್ಯಾಸ್ಕೆಟ್ ಬಾಲ್ ಫೈಟ್ ಮಸ್ತ್ ಮಸ್ತ್. ನಾಯಕ ಹೊಸಮುಖನಾದರೂ ಹರಿಕೃಷ್ಣ ಗೆ ಅವರ ಸಂಗೀತದಿಂದಲೇ ಜನರನ್ನು ಚಿತ್ರಮಂದಿರಕ್ಕೆ ಕರೆತರುವ  ತಾಕತ್ತಿದೆ.


ಅಚ್ಚು ರಚ್ಚು ಲವ್ ಸ್ಟೋರಿ ನಿಮಗೂ ಮೆಚ್ಚುಗೆ ಆಗತ್ತೆ. ಆದರೆ ಅದ್ದೂರಿ ಅನ್ಸಲ್ಲ.

~ಹೊಗೆ