GODFATHER KANNADA MOVIE REVIEW

ಗಾಡ್ ಫಾದರ್ ನಲ್ಲಿ ಉಪ್ಪಿದೆ, ರುಚಿಯಿಲ್ಲ !!
ನಿಮಗೇನಾದರೂ ಕಣ್ಣು ಮಂಜಾಗಿದ್ದು, ಈ ಚಿತ್ರವನ್ನ ಮ್ಯೂಟ್ ಮಾಡಿಕೊಂಡು ನೋಡಿದರೆ, ಇದು ತಮಿಳಿನದ್ದೋ ಅಥವಾ ಕನ್ನಡದ್ದೋ ಎಂದು ಗುರುತಿಸುವುದು ಕಷ್ಟವಾಗಬಹುದು. ಏಕೆಂದರೆ ಕಥೆ ಮಾತ್ರವಲ್ಲ, ಪ್ರತಿಯೊಂದು ಶಾಟ್ ಬೈ ಶಾಟ್ ತಮಿಳಿನಿಂದ ಇಳಿಸಿದ್ದಾರೆ. ರೀಮೇಕ್ ಮಾಡೋದು ಎಷ್ಟು ಸುಲಭ ಅಂತ ತೋರಿಸಿದ್ದಾರೆ.

ಇದು ರೀಮೇಕ್ ಎಂಬುದನ್ನು ಮರೆತು ಸುಮ್ಮನೆ ಚಿತ್ರವನ್ನು ನೋಡುವುದಾದರೆ, ಕಥೆಯಲ್ಲಿ ಹೊಸತನವಿದೆ.ಆದರೆ ನಿರೂಪಣೆ ಮಾತ್ರ ಓಬಿರಾಯನ ಮುತ್ತಾತನ ಕಾಲದ್ದು. ಕ್ಲೈಮ್ಯಾಕ್ಸ್ ನಲ್ಲಿ ಪೋಲೀಸ್ ಬರೋದು, ಇಂಟ್ರೋ ಸಾಂಗ್ ನಲ್ಲಿ ಉಪ್ಪಿ ಎಡಗೈಲಿ ಗಿಟಾರ್ ಹಿಡ್ಕೊಂಡು ಕುಣಿಯೋದು, ಆ ಡಬಲ್ ಆಕ್ಟಿಂಗ್ ಫೈಟ್ ಗಳು, ಅಸಹ್ಯದ ಕಾಮಿಡಿ ಇವೆಲ್ಲ ಎಷ್ಟ್ ದಿನಾ ಅಂತ ಪ್ರೇಕ್ಷಕ ನೋಡ್ತಾನೆ ಹೇಳಿ.



ಕಥಾವಸ್ತು ವಿಭಿನ್ನ. ಮರೆಯದಿರಿ, ಅದರ ಕ್ರೆಡಿಟ್ ಸಲ್ಲಬೇಕಾದದ್ದು ತಮಿಳಿಗೆ. ಬಾಲ್ಯದಿಂದ ನಾಟ್ಯವನ್ನೇ  ಮೈಗೂಡಿಸಿಗೊಂಡ ನಾಯಕನಿಗೆ ಅವನ ಮೈಮಾಟವೆಲ್ಲ ನಾಟ್ಯಮಯವಾಗಿ  ಅವನಿಗೆ ಹೆಣ್ಣು ಹುಡುಕುವುದೇ ಶ್ರಮದ ಕೆಲಸವಾಗುತ್ತದೆ. ಅವನ ಬೃಹನ್ನಳೆತನದ ಬಗ್ಗೆ ತಿಳಿಯದ ಒಬ್ಬಳು ಮದುವೆಗೆ ಒಪ್ಪಿ, ಅವನು ಹಸೆಮಣೆಗೆ ನಡೆದು ಬರೋ ಶೈಲಿ ನೋಡೇ ಸುಸ್ತಾಗಿ ಮದುವೆಮನೆಯಿಂದ ಹೊರನಡೆಯುತ್ತಾಳೆ. ಇದರಿಂದ ವ್ಯಗ್ರಗೊಂಡ ನಾಯಕ ಅವನ್ನ ಗಂಡಸ್ತನವನ್ನು ಎತ್ತಿ ತೋರಿಸಲು ಅವಳ ಮೇಲೆ ಅತ್ಯಾಚಾರವೆಸಗಿ ಅವಳಿ ಜವಳಿ ಮಕ್ಕಳನ್ನು ಬೋನಸ್ ಆಗಿ ಕೊಡುತ್ತಾನೆ. ಅದರಲ್ಲಿ ಒಂದನ್ನು ಅವನು ತೆಗೆದುಕೊಂಡು ಬೇರೆಡೆ ಹೋಗುತ್ತಾನೆ. ತನ್ನ ಮಗನಿಗೆ ತನ್ನ ಮೈಮಾಟ ಬರದಿರಲೆಂಬ ಸದ್ಭಾವನೆಯೊಂದಿಗೆ ಅವನು ಜೀವನವಿಡಿ ವೀಲ್ ಚೇರ್ ಮೇಲೆ ಸೆಟಲ್ ಆಗುವ ಭಯಾನಕ ಉಪಾಯ ಹೂಡುತ್ತಾನೆ.
ಇತ್ತ ತಾಯಿಯ ಬಳಿ ಉಳಿದ ಆ ಜವಳಿ ಮಗ, ತಾಯಿಯ ಹುಚ್ಚನಾಗಿ ತಂದೆಯ ಮೇಲೆ ಕಿಚ್ಚನಾಗುತ್ತಾನೆ. ಸದಾ ತಂದೆಯ ಮೇಲೆ ದ್ವೇಷ ಕಾರುತ್ತ ಇರುವ ಈತ ಯಾವಾಗ ತನ್ನ ತಂದೆಯನ್ನೇ ಕೊಲ್ಲುವ ಪ್ರಯತ್ನ ಮಾಡುತ್ತಾನೋ ಆವಾಗ ಕಥೆ ತೆರೆದುಕೊಳ್ಳುತ್ತದೆ.
'ವೀಲ್ ಚೇರ್' ತಂದೆಯ ಮಗನಿಗೆ ಹುಡುಗಿಯೊಬ್ಬಳ ಮೇಲೆ ಲವ್ವಾಗಿ ಮದುವೆ ಸೆಟಲ್ ಆಗಿರುವಾಗ, ಆ 'ತಾಯಿಯ ಹುಚ್ಚ ' ಮದುವೆ  ಮುರಿಯುವ ಪ್ರಯತ್ನ, ತಂದೆಯ ಕೊಲೆಯ ಪ್ರಯತ್ನ ಹೀಗೆ ಏನೇನೊ ಮಾಡುತ್ತಾನೆ. ಕೊನೆಯಲ್ಲಿ ಪೋಲಿಸ್ ಬರುತ್ತಾರೆ. ಎಲ್ಲವೂ 'ಶುಭಂ'ವಾಗುತ್ತದೆ. ಅಲ್ಲಿಗೆ ಮತ್ತೊಂದು ತಮಿಳ್ ಕಥೆಯ ಕನ್ನಡ ಚಿತ್ರ ಮುಗಿಯಿತು.

ಎ ಆರ್ ರೆಹಮಾನ್ ಸಂಗೀತ ಅಂದ್ರೆ ತಮಿಳಿನ ರಾಗಗಳೇ ಇಲ್ಲೂ ಹರಿದಿದೆಯಷ್ಟೇ. ಸ್ಪೆಸಲ್ ಏನೂ ಇಲ್ಲ. ಬಸವರಾಜು ಅವರ ಸಂಕಲನದಲ್ಲಿ ಡಬಲ್ ಆಕ್ಟಿಂಗ್ ಫಿಟ್ ದೃಶ್ಯಗಳು ಇನ್ನೂ ಚೆನ್ನಾಗಿ ಮೂಡಿಬರಬಹುದಿತ್ತು. ಅದು ಶಾಟ್ಸ್ ಮೇಲೆ ಅವಲಂಬಿತವಾದ್ದರಿಂದ ಅವರನ್ನು ಹೆಚ್ಚು ದೂಷಿಸಲಾಗುವುದಿಲ್ಲ. ಛಾಯಗ್ರಹಣ, ನಿರ್ದೇಶನ ಎರಡನ್ನು ತಲೆ ಮೇಲೆ ಹೊತ್ತ ನಿರ್ದೇಶಕ ಶ್ರೀರಾಮ್ ಯಾವ ಪರಿ ರೀಮೇಕ್ ಮಾಡಿದ್ದಾರೆಂದು ಮೇಲೆ ಈಗಾಗಲೇ ಹೇಳಿದ್ದೇವೆ. ವಿ. ಆರ್ ಭಾಸ್ಕರ್ ಸಂಭಾಷಣೆಯಲ್ಲಿ ಹೇಳಿಕೊಳ್ಳುವಂಥದ್ದು ಏನಿಲ್ಲ.

ಜಯಮಾಲ ಪುತ್ರಿ ಸೌಂದರ್ಯ ಕಣ್ಣುಗಳು ಭರವಸೆ ಮೂಡಿಸುತ್ತದೆ. ಕ್ಯಾಥೆರಿನ್ ಎಂಬ ಮತ್ತೊಬ್ಬ ನಾಯಕಿ,ತಾಯಿ ಪಾತ್ರ ಮಾಡಬಹುದು ಅಂತ ಯಾವ ಮಹಾನುಭಾವ ಸೂಚಿಸಿದನೋ ಅವನಿಗೆ ಉಘೆ ಉಘೆ.

ಆದರೆ ಚಿತ್ರದಲ್ಲಿ ಹೇಳಿಕೊಳ್ಳುವ ಅಂಶವೆಂದರೆ ಅದು ಉಪೇಂದ್ರ ಅವರ ಅಭಿನಯ ಮಾತ್ರ. ಅದು ತ್ರಿಪಾತ್ರದಲ್ಲಿ.
ನೃತ್ಯಗಾರನ ಪಾತ್ರದ ಮೈಮಾಟ, ನಡಿಗೆ ಎಲ್ಲ ಅಚ್ಚರಿ ಮೂಡುವಂತೆ ಅಭಿನಯಿಸಿದ್ದಾರೆ. ಭರತನಾಟ್ಯ ಮಾಡುವಾಗ ಇನ್ನು ಸ್ವಲ್ಪ ಶ್ರದ್ಧೆ ವಹಿಸಬೇಕಿತ್ತು ಅಷ್ಟೆ. ಅದಕ್ಕಿಂತ ಹೆಚ್ಚಾಗಿ ಉಪೇಂದ್ರ ರಂಥ ಪ್ರತಿಭಾವಂತರು ಸ್ವಂತ ಕಥೆಗಳಿಗೆ ಆಸ್ಥೆವಹಿಸಿದರೆ
ಆ ಭುವನೇಶ್ವರಿ ತಾಯಿಗೆ ಸವತಿಯರು ಕಮ್ಮಿಯಾದಾರು!!

~ಹೊಗೆ

ROMEO KANNADA MOVIE REVIEW

ರೋಮಿಯೋ ಒಬ್ಬ ಮಾಮೂಲಿ ಪ್ರೇಮಿಯೋ..

ಸಾವಿರ ಸುಳ್ಳು ಹೇಳಿ ಮದುವೆ ಮಾಡು ಅಂತ ಗಾದೆ ಇದ್ರೆ ಅದನ್ನೇ ಈ ಚಿತ್ರದ ನಾಯಕ (ಗಣೇಶ್) ಬಂಡವಾಳ ಮಾಡಿಕೊಂಡು ನಾಯಕಿಗೆ (ಭಾವನಾ) ತನ್ನ ಮನೆ ಡಾಲರ್ಸ್ ಕಾಲೋನಿ, ತನ್ನ ತಂದೆ ಕೊಲೀಗು ಅಂಬಾನಿ ಅಂತೆಲ್ಲ ಡೋಂಗಿ ಹೊಡೆದು ಪ್ರೀತಿ ಪಡೆದುಕೊಳ್ಳುತ್ತಾನೆ. ನಾಯಕಿಯ ತಂದೆ (ಅವಿನಾಶ್) ಮಗಳಿಗೆ ಬೇರೆ ವರನೊಂದಿಗೆ ಮದುವೆ
ಮಾಡಲು ತಯಾರಿ ನಡೆಸುವಾಗ ನಾಯಕ ನಾಯಕಿಯೊಂದಿಗೆ ಪರಾರಿಯಾಗಿ ತರಾತುರಿಯಲ್ಲಿ ಮದುವೆಯಾಗಿ ತನ್ನ ಮನೆಗೆ
ಕರೆತರುತ್ತಾನೆ.ಡಾಲರ್ಸ್ ಕಾಲೋನಿಯಲ್ಲಿ ತನ್ನ ಗಂಡನ ಮನೆಯಿದೆಯೆಂದು ತಿಳಿದಿದ್ದ ನಾಯಕಿಗೆ ತನ್ನ ಗಂಡ ಮಹಾನ್ ಡವ್ 
ರಾಜ ಎಂದು ತಿಳಿಯುತ್ತದೆ. ಆದರೆ ನಾಯಕ ಮಾತ್ರ ತನ್ನದು ಡವ್ ಅಲ್ಲ ಪ್ಯೂರ್ ಲವ್ ಅಂತೆಲ್ಲ ಡೈಲಾಗ್ ಹೊಡೆದ್ರೂ ನಾಯಕಿ ಡೈವೋರ್ಸ್ ಕೇಳುತ್ತಾಳೆ.
ನಿಜವಾಗಲೂ ನನ್ನ ಮೇಲೆ ಪ್ರೀತಿ ಇದ್ರೆ ಡೈವೋರ್ಸ್ ಕೊಡು ಅಂದಾಗ ತ್ಯಾಗಮಯಿ ನಾಯಕ ಡೈವೋರ್ಸ್ ಗೆ  ಒಪ್ಪುತ್ತಾನೆ .
ನಂತರ ನಿರ್ದೇಶಕರು ಕಥೆಯಲ್ಲಿ ಕೆಲವು ಡವ್ ಗಳನ್ನು ಮಾಡಿ ನಾಯಕ ನಾಯಕಿಯನ್ನು ಒಂದಾಗಿಸುತ್ತಾರೆ..



 ವೈದಿ ಕ್ಯಾಮೆರ ಕೈಚಳಕದಲ್ಲಿ ಟ್ರ್ಯಾಕ್ ಶಾಟ್ಸ್ ಉತ್ತಮವಾಗಿದೆ, ಸರವಣನ್ ಸಂಕಲನ ಕೆಲವು ಕಡೆ ಅಷ್ಟು ಹರಿತವಾಗಿಲ್ಲ . ಆದರೆ ಚಿತ್ರದುದ್ದಕ್ಕೂ ನಾಯಕ ತೊಡುವ ಕೂಲಿಂಗ್ ಗ್ಲಾಸ್ ನಲ್ಲಿ ಲೈಟ್ ಬಾಯ್ಸ್, ಅಲ್ಯುಮಿನಿಯಂ ರಿಫ್ಲೆಕ್ಟರ್ಸ್ ಸುಮಾರು ದೃಶ್ಯಗಳಲ್ಲಿ ಕಾಣಿಸುತ್ತದೆ. ಈ ಸಣ್ಣ ತಾಂತ್ರಿಕ ದೋಷವನ್ನ ಸರಿಪಡಿಸದೇ ಇರುವುದು ವಿಪರ್ಯಾಸ .

ಗಣೇಶ್, ಭಾವನ ತಮ್ಮ ಕೆಲಸ ನಿಭಾಯಿಸಿದ್ದಾರೆ. ರಂಗಾಯಣ ರಘು ಇಂತಹದೇ ಪಾತ್ರ ಇನ್ನು ನೂರು ಚಿತ್ರದಲ್ಲಿ ಮಾಡಿದರೂ  ಜನ ಬೇಜಾರ್ ಮಾಡ್ಕೊಳ್ದೇ ನೋಡ್ತಾರೆ ಅನ್ನೋದೇ  ರಘು ಶಕ್ತಿ. ಸಾಧು ಕೋಕಿಲ ಸೆಕೆಂಡ್ ಹೀರೋವಾಗಿ ಕಾಣಿಸಿಕೊಂಡು ಹೆಚ್ಚಿನ ದೃಶ್ಯಗಳಲ್ಲಿ ಅಭಿನಯಿಸಿ ಅಭಿಮಾನಿಗಳಿಗೆ ಕಚಗುಳಿ ಇಡುತ್ತಾರೆ.

ನಿರ್ದೇಶಕ ಪಿ.ಸಿ.ಶೇಖರ್ ದೃಶ್ಯ ವೈಭವ ತೋರಿಸಲು ಹೋಗಿದ್ದಾರೆ ಹೊರತು ಕಥೆ ಹೇಳಲಿಕ್ಕಲ್ಲ. ನೀರಸ ಹಾಗು ಮಾಮೂಲಿ ಕಥೆಗೆ ಕೆಲವು ಉತ್ತಮ ಹಾಡುಗಳನ್ನು ಕೊಟ್ಟಿರುವುದು ಅರ್ಜುನ್ ಜನ್ಯರ ಪ್ರತಿಭೆ ತೋರಿಸುತ್ತದೆ. ಆದರೆ 'ಆಲೋಚನೆ ಆರಾಧನೆ' ಹಾಡಿಗೂ ಅದರ ಹಿಂದಿನ ದೃಶ್ಯಕ್ಕೂ ಸಂಭಂಧವಿಲ್ಲ. ಹಾಗು ಎಲ್ಲರ ಬಾಯಲ್ಲೂ ಗುನುಗುವ ರೋಮಿಯೋ ಶೀರ್ಷಿಕೆ ಹಾಡು ಚಿತ್ರ ಮುಗಿದ ನಂತರ ಬರುವುದು ಶೋಚನೀಯ.

ಬಹುಶಃ ನಟರಾಜ್ ರವರ ಸಂಭಾಷಣೆ ಇರದಿದ್ದರೆ ಇಡೀ ಚಿತ್ರ ಮಂಕಾಗಿ ಬಿಡ್ತಿತ್ತೋ ಏನೋ.

ಆದರೂ ಗಣೇಶ್ ಅಭಿಮಾನಿಗಳಿಗೆ ಈ ಚಿತ್ರದಲ್ಲಿ ಭಾವನಾ ಸ್ಕ್ರೀನ್ ಪ್ರೆಸೆನ್ಸ್, ಸಾಧು,ರಘು ಹಾಸ್ಯದ ಟೈಮಿಂಗ್ ಪಕ್ಕ ಪೈಸಾ ವಸೂಲ್.


~ಹೊಗೆ