GODFATHER KANNADA MOVIE REVIEW

ಗಾಡ್ ಫಾದರ್ ನಲ್ಲಿ ಉಪ್ಪಿದೆ, ರುಚಿಯಿಲ್ಲ !!
ನಿಮಗೇನಾದರೂ ಕಣ್ಣು ಮಂಜಾಗಿದ್ದು, ಈ ಚಿತ್ರವನ್ನ ಮ್ಯೂಟ್ ಮಾಡಿಕೊಂಡು ನೋಡಿದರೆ, ಇದು ತಮಿಳಿನದ್ದೋ ಅಥವಾ ಕನ್ನಡದ್ದೋ ಎಂದು ಗುರುತಿಸುವುದು ಕಷ್ಟವಾಗಬಹುದು. ಏಕೆಂದರೆ ಕಥೆ ಮಾತ್ರವಲ್ಲ, ಪ್ರತಿಯೊಂದು ಶಾಟ್ ಬೈ ಶಾಟ್ ತಮಿಳಿನಿಂದ ಇಳಿಸಿದ್ದಾರೆ. ರೀಮೇಕ್ ಮಾಡೋದು ಎಷ್ಟು ಸುಲಭ ಅಂತ ತೋರಿಸಿದ್ದಾರೆ.

ಇದು ರೀಮೇಕ್ ಎಂಬುದನ್ನು ಮರೆತು ಸುಮ್ಮನೆ ಚಿತ್ರವನ್ನು ನೋಡುವುದಾದರೆ, ಕಥೆಯಲ್ಲಿ ಹೊಸತನವಿದೆ.ಆದರೆ ನಿರೂಪಣೆ ಮಾತ್ರ ಓಬಿರಾಯನ ಮುತ್ತಾತನ ಕಾಲದ್ದು. ಕ್ಲೈಮ್ಯಾಕ್ಸ್ ನಲ್ಲಿ ಪೋಲೀಸ್ ಬರೋದು, ಇಂಟ್ರೋ ಸಾಂಗ್ ನಲ್ಲಿ ಉಪ್ಪಿ ಎಡಗೈಲಿ ಗಿಟಾರ್ ಹಿಡ್ಕೊಂಡು ಕುಣಿಯೋದು, ಆ ಡಬಲ್ ಆಕ್ಟಿಂಗ್ ಫೈಟ್ ಗಳು, ಅಸಹ್ಯದ ಕಾಮಿಡಿ ಇವೆಲ್ಲ ಎಷ್ಟ್ ದಿನಾ ಅಂತ ಪ್ರೇಕ್ಷಕ ನೋಡ್ತಾನೆ ಹೇಳಿ.



ಕಥಾವಸ್ತು ವಿಭಿನ್ನ. ಮರೆಯದಿರಿ, ಅದರ ಕ್ರೆಡಿಟ್ ಸಲ್ಲಬೇಕಾದದ್ದು ತಮಿಳಿಗೆ. ಬಾಲ್ಯದಿಂದ ನಾಟ್ಯವನ್ನೇ  ಮೈಗೂಡಿಸಿಗೊಂಡ ನಾಯಕನಿಗೆ ಅವನ ಮೈಮಾಟವೆಲ್ಲ ನಾಟ್ಯಮಯವಾಗಿ  ಅವನಿಗೆ ಹೆಣ್ಣು ಹುಡುಕುವುದೇ ಶ್ರಮದ ಕೆಲಸವಾಗುತ್ತದೆ. ಅವನ ಬೃಹನ್ನಳೆತನದ ಬಗ್ಗೆ ತಿಳಿಯದ ಒಬ್ಬಳು ಮದುವೆಗೆ ಒಪ್ಪಿ, ಅವನು ಹಸೆಮಣೆಗೆ ನಡೆದು ಬರೋ ಶೈಲಿ ನೋಡೇ ಸುಸ್ತಾಗಿ ಮದುವೆಮನೆಯಿಂದ ಹೊರನಡೆಯುತ್ತಾಳೆ. ಇದರಿಂದ ವ್ಯಗ್ರಗೊಂಡ ನಾಯಕ ಅವನ್ನ ಗಂಡಸ್ತನವನ್ನು ಎತ್ತಿ ತೋರಿಸಲು ಅವಳ ಮೇಲೆ ಅತ್ಯಾಚಾರವೆಸಗಿ ಅವಳಿ ಜವಳಿ ಮಕ್ಕಳನ್ನು ಬೋನಸ್ ಆಗಿ ಕೊಡುತ್ತಾನೆ. ಅದರಲ್ಲಿ ಒಂದನ್ನು ಅವನು ತೆಗೆದುಕೊಂಡು ಬೇರೆಡೆ ಹೋಗುತ್ತಾನೆ. ತನ್ನ ಮಗನಿಗೆ ತನ್ನ ಮೈಮಾಟ ಬರದಿರಲೆಂಬ ಸದ್ಭಾವನೆಯೊಂದಿಗೆ ಅವನು ಜೀವನವಿಡಿ ವೀಲ್ ಚೇರ್ ಮೇಲೆ ಸೆಟಲ್ ಆಗುವ ಭಯಾನಕ ಉಪಾಯ ಹೂಡುತ್ತಾನೆ.
ಇತ್ತ ತಾಯಿಯ ಬಳಿ ಉಳಿದ ಆ ಜವಳಿ ಮಗ, ತಾಯಿಯ ಹುಚ್ಚನಾಗಿ ತಂದೆಯ ಮೇಲೆ ಕಿಚ್ಚನಾಗುತ್ತಾನೆ. ಸದಾ ತಂದೆಯ ಮೇಲೆ ದ್ವೇಷ ಕಾರುತ್ತ ಇರುವ ಈತ ಯಾವಾಗ ತನ್ನ ತಂದೆಯನ್ನೇ ಕೊಲ್ಲುವ ಪ್ರಯತ್ನ ಮಾಡುತ್ತಾನೋ ಆವಾಗ ಕಥೆ ತೆರೆದುಕೊಳ್ಳುತ್ತದೆ.
'ವೀಲ್ ಚೇರ್' ತಂದೆಯ ಮಗನಿಗೆ ಹುಡುಗಿಯೊಬ್ಬಳ ಮೇಲೆ ಲವ್ವಾಗಿ ಮದುವೆ ಸೆಟಲ್ ಆಗಿರುವಾಗ, ಆ 'ತಾಯಿಯ ಹುಚ್ಚ ' ಮದುವೆ  ಮುರಿಯುವ ಪ್ರಯತ್ನ, ತಂದೆಯ ಕೊಲೆಯ ಪ್ರಯತ್ನ ಹೀಗೆ ಏನೇನೊ ಮಾಡುತ್ತಾನೆ. ಕೊನೆಯಲ್ಲಿ ಪೋಲಿಸ್ ಬರುತ್ತಾರೆ. ಎಲ್ಲವೂ 'ಶುಭಂ'ವಾಗುತ್ತದೆ. ಅಲ್ಲಿಗೆ ಮತ್ತೊಂದು ತಮಿಳ್ ಕಥೆಯ ಕನ್ನಡ ಚಿತ್ರ ಮುಗಿಯಿತು.

ಎ ಆರ್ ರೆಹಮಾನ್ ಸಂಗೀತ ಅಂದ್ರೆ ತಮಿಳಿನ ರಾಗಗಳೇ ಇಲ್ಲೂ ಹರಿದಿದೆಯಷ್ಟೇ. ಸ್ಪೆಸಲ್ ಏನೂ ಇಲ್ಲ. ಬಸವರಾಜು ಅವರ ಸಂಕಲನದಲ್ಲಿ ಡಬಲ್ ಆಕ್ಟಿಂಗ್ ಫಿಟ್ ದೃಶ್ಯಗಳು ಇನ್ನೂ ಚೆನ್ನಾಗಿ ಮೂಡಿಬರಬಹುದಿತ್ತು. ಅದು ಶಾಟ್ಸ್ ಮೇಲೆ ಅವಲಂಬಿತವಾದ್ದರಿಂದ ಅವರನ್ನು ಹೆಚ್ಚು ದೂಷಿಸಲಾಗುವುದಿಲ್ಲ. ಛಾಯಗ್ರಹಣ, ನಿರ್ದೇಶನ ಎರಡನ್ನು ತಲೆ ಮೇಲೆ ಹೊತ್ತ ನಿರ್ದೇಶಕ ಶ್ರೀರಾಮ್ ಯಾವ ಪರಿ ರೀಮೇಕ್ ಮಾಡಿದ್ದಾರೆಂದು ಮೇಲೆ ಈಗಾಗಲೇ ಹೇಳಿದ್ದೇವೆ. ವಿ. ಆರ್ ಭಾಸ್ಕರ್ ಸಂಭಾಷಣೆಯಲ್ಲಿ ಹೇಳಿಕೊಳ್ಳುವಂಥದ್ದು ಏನಿಲ್ಲ.

ಜಯಮಾಲ ಪುತ್ರಿ ಸೌಂದರ್ಯ ಕಣ್ಣುಗಳು ಭರವಸೆ ಮೂಡಿಸುತ್ತದೆ. ಕ್ಯಾಥೆರಿನ್ ಎಂಬ ಮತ್ತೊಬ್ಬ ನಾಯಕಿ,ತಾಯಿ ಪಾತ್ರ ಮಾಡಬಹುದು ಅಂತ ಯಾವ ಮಹಾನುಭಾವ ಸೂಚಿಸಿದನೋ ಅವನಿಗೆ ಉಘೆ ಉಘೆ.

ಆದರೆ ಚಿತ್ರದಲ್ಲಿ ಹೇಳಿಕೊಳ್ಳುವ ಅಂಶವೆಂದರೆ ಅದು ಉಪೇಂದ್ರ ಅವರ ಅಭಿನಯ ಮಾತ್ರ. ಅದು ತ್ರಿಪಾತ್ರದಲ್ಲಿ.
ನೃತ್ಯಗಾರನ ಪಾತ್ರದ ಮೈಮಾಟ, ನಡಿಗೆ ಎಲ್ಲ ಅಚ್ಚರಿ ಮೂಡುವಂತೆ ಅಭಿನಯಿಸಿದ್ದಾರೆ. ಭರತನಾಟ್ಯ ಮಾಡುವಾಗ ಇನ್ನು ಸ್ವಲ್ಪ ಶ್ರದ್ಧೆ ವಹಿಸಬೇಕಿತ್ತು ಅಷ್ಟೆ. ಅದಕ್ಕಿಂತ ಹೆಚ್ಚಾಗಿ ಉಪೇಂದ್ರ ರಂಥ ಪ್ರತಿಭಾವಂತರು ಸ್ವಂತ ಕಥೆಗಳಿಗೆ ಆಸ್ಥೆವಹಿಸಿದರೆ
ಆ ಭುವನೇಶ್ವರಿ ತಾಯಿಗೆ ಸವತಿಯರು ಕಮ್ಮಿಯಾದಾರು!!

~ಹೊಗೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ