ಮನಸಿನಲ್ಲಿ ಉಳಿಯುವ ಎದೆಗಾರಿಕೆ !!!
ಎದೆ ಝಲ್ ಎನಿಸೋ ಕಥೆಗೆ ಸ್ವಲ್ಪ ಡಲ್ ಎನಿಸೋ ಟೆಕ್ನಿಕಲ್ ಅಂಶಗಳ ಹೊತ್ತು ಬಂದಿರುವ ಚಿತ್ರವೇ 'ಎದೆಗಾರಿಕೆ'.
ಮಹಿಳಾ ನಿರ್ದೇಶಕರೊಬ್ಬರು ಒಬ್ಬ ಪುರುಷನ ಎದೆಗಾರಿಕೆಯ ಮೇಲೆ ಚಿತ್ರ ಮಾಡಿರುವುದು ಒಳ್ಳೆಯ ಬೆಳವಣಿಗೆ.
ಹಾಗಂತ ಇದು ಮಹಿಳಾ ಪ್ರಧಾನ ಚಿತ್ರವಾಗದೆ ಕಥೆಯಲ್ಲಿ ಪುರುಷ ಪ್ರಾಧಾನ್ಯತೆ ಇದೆ. ಪತ್ರಕರ್ತ ಅಗ್ನಿ ಶ್ರೀಧರ್ ರವರ ಕಿರು ಕಾದಂಬರಿ ಆಧಾರಿತ ಈ ಚಿತ್ರ ಭೂಗತ ಜಗತ್ತಿನ ತಣ್ಣನೆ ಕ್ರೌರ್ಯದ ಕನ್ನಡಿಯಂತಿದೆ.
ಮುಂಬೈನ ಸುಪಾರಿ ಕಿಲ್ಲರ್ ಒಬ್ಬನನ್ನು 'ಉಡಾಯಿಸಲು' ಬೆಂಗಳೂರಿನ ಭೂಗತ ಲೋಕದ ಒಂದು ತಂಡವೊಂದಕ್ಕೆ ದುಬೈ ಇಂದ 'ಆರ್ಡರ್' ಬಂದಿರುತ್ತದೆ. ಆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಅವರು ಬೆಂಗಳೂರಿನಿಂದ ಸಕಲೇಶಪುರಕ್ಕೆ 'ಮುಂಬೈ'ನವನೊಂದಿಗೆ ಹೋಗುತ್ತಾರೆ. ಅಲ್ಲಿ ಕಾಣಸಿಗುವುದೇ ಮನುಷ್ಯನೋರ್ವನ ಎದೆಗಾರಿಕೆ. ಅವನು ಸಾವಿಗೆ ಒಡ್ಡುವ ಎದೆಗಾರಿಕೆ. ಹಾಗಂತ ಅವನು ಕಲ್ಲು ಹೃದಯದವನಲ್ಲ. ಅವನಿಗೂ ಒಬ್ಬಳು ಪ್ರೇಯಸಿ ಇರುತ್ತಾಳೆ. ಸುಪಾರಿ ಒಂದಿದ್ರೆ ಸಾಕು ಎಂಥವರನ್ನು ಬೇಕಾದರೂ ಕೊಲ್ಲಬಲ್ಲ ಆತ ಓರ್ವ ಮುದುಕಿಗೆ ಗುಂಡು ಹೊಡೆಯಲು ನಿರಾಕರಿಸುತ್ತಾನೆ. ಹೀಗೆ ಅವನೆಷ್ಟು ಮನುಷ್ಯ ಹೃದಯೀ ಅಂತ ತೋರಿಸುತ್ತಲೇ ಚಿತ್ರಕಥೆ ಅವನ ಸಾವಿನತ್ತ ಹೊರಳುತ್ತದೆ. ಅವನ ಸಾವು ಅವನಿಗೆ ತಿಳಿದಿರುತ್ತದೆ.
ಇಂಥಾ ಕ್ಲಾಸಿಕ್ ಎನಿಸುವ ಕಥೆಗೆ ಚುರುಕ್ ಎನಿಸುವ ಸಂಭಾಷಣೆ ಇದೆ. ಚಿತ್ರಕಥೆಯಲ್ಲಿ ಧಂ ಇದೆ. ಕೆಲವು ಶಾಟ್ಸ್ ತುಂಬಾನೇ ಅರ್ಥವತ್ತಾಗಿದೆ. ಆದರೆ ಒಟ್ಟಾರೆಯಾಗಿ ನೋಡಿದಾಗ ದೃಶ್ಯಗಳ ಕ್ವಾಲಿಟಿ ಶ್ರೇಷ್ಠ ದರ್ಜೆಯದ್ದಲ್ಲ. ಅದಕ್ಕೆ ಬಜೆಟ್ ಕಾರಣವಿರಬಹುದು. ಈಗಿನ ಎಲ್ಲ ಚಿತ್ರಗಳಲ್ಲಿ ಕಾಣುವ ಕಲರ್ ಗ್ರೇಡಿಂಗ್ ಈ ಚಿತ್ರದಲ್ಲಿ ಕಾಣುವುದೇ ಇಲ್ಲ. ಇದೇ ಚಿತ್ರವನ್ನು ಇನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬಹುದಿತ್ತು, ಸೂಕ್ತ ತಂತ್ರಜ್ಞಾನ ಬಳಸಿದ್ದರೆ.
ಉದಾಹರಣೆಗೆ, ತುಂಬಾ ಭಾವನಾತ್ಮಕ
ಸನ್ನಿವೇಶಗಳಲ್ಲಿ, ಭೂಗತ ಜಗತ್ತನ್ನು ತೋರಿಸುವಾಗ, ಕಾಡಿನಲ್ಲಿ ಚಿತ್ರಿಸುವಾಗ ಕ್ರೇನ್ ಬಳಸಿದ್ದರೆ ಅದು ಕಥೆ ಹೇಳುವ ರೀತಿಯೇ ಬೇರೆ. ಅದು ಹೆಚ್ಚು ಬಳಕೆಯಾಗಿಲ್ಲ. ಕೆಲವು ಋಣಾತ್ಮಕ ಅಂಶಗಳನ್ನು ಬದಿಗೊತ್ತಿ ನೋಡಿದರೆ, 'ಎದೆಗಾರಿಕೆ' ನಿಸ್ಸಂಶಯವಾಗಿ ಒಳ್ಳೆ ಪ್ರಯತ್ನ.
ಅತುಲ್ ಕುಲಕರ್ಣಿ ಅಭಿನಯಕ್ಕೆ ಧಂಗು ಬಡಿಸುವಷ್ಟು ಅದ್ಭುತ. ಅವರ ಮುಂದೆ ಆದಿತ್ಯ, ಸೃಜನ್ ಲೋಕೇಶ್, ಧರ್ಮ ಎಲ್ಲ ಮಾಸ್ಕ್ ಆಗ್ತಾರೆ.
ಮಿಸ್ ಮಾಡ್ದೆ ಚಿತ್ರ ನೋಡಿ.. ಕೊನೆಯಲ್ಲಿ ತಲೆ ಬಿಮ್ ಅಂದ್ರೆ ಚಿತ್ರ ಮಾಡಿದವರಿಗೆ ಸಾರ್ಥಕತೆ...
~ಹೊಗೆ