ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ MOVIE REVIEW

ಬತ್ತಿಹೋದ ದೇಶಭಕ್ತಿಗೆ ರಾಯಣ್ಣ ಔಷಧಿ..

ಮೂವತ್ತು ಕೋಟಿ ಬಜೆಟ್, ಕನ್ನಡ ಚಿತ್ರರಂಗದಲ್ಲೇ ಅತೀ ದೊಡ್ಡ ಚಿತ್ರ ಎಂಬ ಹೆಗ್ಗಳಿಕೆ, ದರ್ಶನ್ ರಂಥ ಅಜಾನುಬಾಹು ದೇಹ ಮತ್ತು ಅಷ್ಟೇ ಮಟ್ಟದ ಪ್ರೇಕ್ಷಕವರ್ಗ ಹೊಂದಿರುವ ನಾಯಕನಟ, ಈಗಿನ ಮಟ್ಟಕ್ಕೆ ಅಪರೂಪ ಎನಿಸುವ ಐತಿಹಾಸಿಕ ವಿಷಯಾಧಾರಿತ ಕಥೆ, ಸಂಗೊಳ್ಳಿ ರಾಯಣ್ಣನಂಥ ಮೇರುಪುರುಷನ ಮೇಲಿನ ಕಥಾವಸ್ತು.. ಇಷ್ಟು ಸಾಕು ಒಂದು ಚಿತ್ರವನ್ನ 
ಅದ್ಭುತ ಎನಲು. ಆದರೆ ಈ ಅದ್ಭುತವನ್ನ ಅತ್ಯದ್ಭುತ ಮಾಡಲು ನಿರ್ದೇಶಕ ನಾಗಣ್ಣ ಎಡವಿದ್ದಾರೆ. 

ರಾಯಣ್ಣ ಕಿತ್ತೂರು ಸಂಸ್ಥಾನದ ವೀರರಾಣಿ ಚೆನ್ನಮ್ಮಳ ಬಲಗೈ ಭಂಟ. ಸಂಗೊಳ್ಳಿ ಅವನ ಊರು. ಕಥೆ ಆರಂಭವಾಗುವುದು
ಹೀಗೆ. ಬ್ರಿಟಿಷ್ ಅಧಿಕಾರಿ ಥ್ಯಾಕರೆ ರಾಣಿ ಚೆನ್ನಮ್ಮಳ ಬಳಿ ಕಪ್ಪ ಕೇಳಲು ಬರುತ್ತಾನೆ. ರಾಣಿಯು ಫೇಮಸ್ ಸ್ಕೂಲ್ ಫ್ಯಾನ್ಸಿ ಡ್ರೆಸ್ ಡೈಲಾಗ್ 'ನಿಮಗೇಕೆ ಕೊಡಬೇಕು ಕಪ್ಪ' ಎನ್ನುತ್ತಾಳೆ. ಥ್ಯಾಕರೆ ಸಾಹೇಬ ಅಪಮಾನಿತನಾಗಿ ಒಳಸಂಚು ನಡೆಸಿ ಯುದ್ಧಸಾರುತ್ತಾನೆ. ರಾಯಣ್ಣ ಮುಂದಾಳತ್ವದಲ್ಲಿ ಆ ಯುದ್ಧ ಗೆದ್ದು ಕಿತ್ತೂರು ಹರ್ಷೋದ್ಗಾರ ಮಾಡುತ್ತದೆ. ಆ ಯುದ್ಧದಲ್ಲಿ ಥ್ಯಾಕರೆ ಸತ್ತ ಪರಿಣಾಮ ಹೊಸ ಬ್ರಿಟಿಷ್  ಅಧಿಕಾರಿ ಬರುತ್ತಾನೆ. ಅವನು ಮತ್ತೊಂದು ಯುದ್ಧ ಸಾರಿ, ವಿರೋಧ ಪಕ್ಷದ ಕೆಲವರಿಗೆ ಹಣದಾಸೆ ತೋರಿಸಿ ಯುದ್ಧ ಗೆಲ್ಲುತ್ತಾನೆ. ರಾಣಿ, ರಾಯಣ್ಣ ಇತರ ಎಲ್ಲರೂ ಸೇರಿ ಬಂಧಿತರಾಗುತ್ತಾರೆ.
ಐದು ವರ್ಷದ ನಂತರ ರಾಯಣ್ಣ ಮತ್ತು ಇತರರು ಬಿಡುಗಡೆಗೊಳ್ತಾರೆ, ರಾಣಿ ಚೆನ್ನಮ್ಮನ ಹೊರತಾಗಿ. ಅಲ್ಲಿಯತನಕ ಕೇವಲ ವೀರನಾಗಿದ್ದ ರಾಯಣ್ಣ, ಅಲ್ಲಿಂದ ಕ್ರಾಂತಿಕಾರಿ ನಿಲುವುಗಳನ್ನು ತಾಳಿ ಕ್ರಾಂತಿವೀರನಾಗ್ತಾನೆ. ಗೆರಿಲ್ಲಾ ಮಾದರಿಯ ತಂತ್ರಗಳನ್ನು ಹೂಡಿ ಬ್ರಿಟಿಷರನ್ನು ಹೈರಾಣಾಗಿಸುತ್ತಾನೆ. ಕೊನೆಗೆ ಕೆಲ ದೇಶಭ್ರಷ್ಟರ ಕುಯುಕ್ತಿಯಿಂದ ಬ್ರಿಟಿಷರಿಗೆ ಸಿಕ್ಕಿ ಗಲ್ಲು
ಶಿಕ್ಷೆಗೆ ಒಳಗಾಗುತ್ತಾನೆ.


 
ಇಡೀ ಚಿತ್ರಕಥೆ ದೇಶಭಕ್ತಿಯ ಬದಲಾಗಿ ರಾಯಣ್ಣನೊಬ್ಬನನ್ನೇ ವೈಭವೀಕರಿಸುತ್ತದೆ. ಅದೇ ಇಲ್ಲಿ ದೊಡ್ಡ ಕಂದಕವಾಗುತ್ತದೆ.
ಬೇರೆ ಯಾವುದೇ ಒಂದು ಪಾತ್ರಕ್ಕೂ ಮಹತ್ವವೇ ಇಲ್ಲದಂತಾದಾಗ ಮೂರು ಗಂಟೆಗಳ ಕಾಲ ರಾಯಣ್ಣ ನಂಥ ರಾಯಣ್ಣನನ್ನೇ ನೋಡಲು ಬಹಳಷ್ಟು ಬೇಸರವಾಗುತ್ತದೆ. ಜಯಪ್ರದ ರಾಣಿಯ ಪಾತ್ರದಲ್ಲಿ ನೀರಸವಾಗಿ ತೋರುತ್ತಾರೆ. ಉಮಾಶ್ರೀ ಬರಿಯೆ ಒಂದೆರಡು ಪಂಚಿಂಗ್ ಡೈಲಾಗ್ಸ್ ಗೆ ಸೀಮಿತವಾಗುತ್ತಾರೆ. ಇನ್ನು ಶಶಿಕುಮಾರ್ ಸಾಕಷ್ಟು ಸಮಯಗಳ ಕಾಲ ಸ್ಕ್ರೀನ್ ಮೇಲೆ ಕಂಡರೂ ಅವರ ಪಾತ್ರಕ್ಕೆ ಮಹತ್ವವೇ ಇಲ್ಲ. ಇನ್ನು ನಾಯಕಿ ಹಣೆಪಟ್ಟಿ ಹೊತ್ತ ನಿಖಿತಾ ಅಂತೂ ಐಟಂ ಡ್ಯಾನ್ಸರ್ ನಂತೆ  ಒಂದು ಹಾಡಿಗೆ ಮಾತ್ರ ಬಂದು ಹೋಗ್ತಾರೆ.

ಐದು ವರ್ಷದ ನಂತರವೂ ಹುಡುಗನೊಬ್ಬ ದೊಡ್ದವನಾಗದಿರುವುದು, ರಾಯಣ್ಣನ ವಿಗ್ ನೀರಿನ ಫೈಟ್ ನಲ್ಲೂ ಒದ್ದೆಯಾಗದೆ ಇರುವುದು ಹೀಗೆ ಸಾಕಷ್ಟು ಋಣಾತ್ಮಕ ಅಂಶಗಳನ್ನು ಹೊಂದಿದ್ದರು 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಒಂದು ಅಸಾಧಾರಣ ಚಿತ್ರ. ಇಲ್ಲಿ ಮೊದಲು ಸ್ಮರಿಸಬೇಕಿರುವುದು ಕೆಚ್ಚೆದೆಯ ನಿರ್ಮಾಪಕರಾದ ಆನಂದ ಅಪ್ಪುಗೊಳ್ ರವರನ್ನ. ಹಿಂದೆಂದೂ ಮಾಡಿರದ ಶೈಲಿಯಲ್ಲಿ ಚಿತ್ರವನ್ನು  ಕನ್ನಡ ಪ್ರೇಕ್ಷಕರ ಮುಂದೆ ತಂದಿದ್ದಾರೆ. ದರ್ಶನ್ ಕೂಡ ಸಾಕಷ್ಟು ಶ್ರಮವಹಿಸಿದ್ದಾರೆ. ಪೋಷಾಕಿನಲ್ಲಿ ನೋಡಲು ರಾಯಣ್ಣನ ಅಪರಾವತಾರ. ಧ್ವನಿಯೇರಿಸಿ ಡೈಲಾಗ್ಸ್ ಹೇಳಿದರೆ ಮಾತ್ರ ಅದು ಅಭಿನಯ ಅಂತ ನಿರ್ದೇಶಕರು ಭಾವಿಸಿದ್ದಾರೇನೋ ಎಂದು ಒಮ್ಮೊಮ್ಮೆ ಅನಿಸಿದರೆ ಅದು ದರ್ಶನ್ ತಪ್ಪಲ್ಲ.

ಇಂಥ ಮಹಾನ್ ಚಿತ್ರಕ್ಕೆ ತಕ್ಕ ಸಂಗೀತ, ಕ್ಯಾಮೆರ ಕೆಲಸ ಇಲ್ಲದಂತಾಗಿದೆ. ಅಥವಾ ಜನರ ನಿರೀಕ್ಷೆಗೆ ತಕ್ಕುದಾಗಿಲ್ಲ.
ಆದರು ನಮ್ಮ ಬತ್ತಿಹೋದ ದೇಶಭಕ್ತಿಗೆ ಈ ಚಿತ್ರ ಒಂದು ಔಷಧಿ. ಸಂಗೊಳ್ಳಿ ರಾಯಣ್ಣ ನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಹೋಗಿ ನೋಡಿ. ಕ್ಲೈಮಾಕ್ಸ್ ನಲ್ಲಿ ಕಣ್ಣಲ್ಲಿ ನೀರು ಜಿನಿಗೋದ್ ಖಂಡಿತ.

>>>>

~ಹೊಗೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ