DRAMA KANAADA MOVIE REVIEW

ಭಟ್ರು ಕಥೆ ಹೇಳ್ತಾವ್ರೆ .. ಒಂದ್ಸಲ ಹೋಗ್ಬನ್ನಿ.. !!

ಜೀವನ ನಾಟಕರಂಗ, ನಾವೆಲ್ಲ ಪಾತ್ರಧಾರಿಗಳು, ದೇವರೇ ಸೂತ್ರಧಾರ ಎಂಬ ಅನಾದಿಕಾಲದ ನುಡಿಯನ್ನು ನಿರ್ದೇಶಕರು
ಚಿಕ್ಕದಾಗಿ ಚೊಕ್ಕದಾಗಿ 'ಬೊಂಬೆ ಆಡ್ಸೋನು ಮೇಲೆ ಕುಂತವ್ನೆ' ಅಂತ ಹೇಳಿ ತುಂಡ್ ಹೈಕಳ ಕೈಯಲ್ಲಿ ಒಂದು ನಾಟಕೀಯ ತಿರುವುಗಳಿರುವ ಡ್ರಾಮಾ ಆಡಿಸಿದ್ದಾರೆ. ಮುಂಗಾರುಮಳೆ,ಗಾಳಿಪಟ ನಂತರ ಭಟ್ರ ಕಡೆಯಿಂದ ಅಂಥಾ  ಒಂದು ಗಟ್ಟಿ ಕಥೆಯುಳ್ಳ ಚಿತ್ರ ಬಂದಿಲ್ಲವೆನ್ನುವ ಆರೋಪದಿಂದ ಒಂದು ಪಕ್ಕಾ 'ಡ್ರಾಮ' ಆಡಿಸಿ ಆರೋಪ ಮುಕ್ತರಾಗಿದ್ದಾರೆ.

ಕಥೆಯಲ್ಲಿ ಎಂದಿನಂತೆ (ಭಟ್ರ ಸ್ಟೈಲ್) ಓತ್ಲಾ ಹೊಡೆಯುವ ಇಬ್ಬರು ನಾಯಕರು. ಅವರಿಗೆ ತುಂಡ್ ಹೈಕಳು ಎಂಬ ನಾಮಕರಣ. ಹಿಂಗೇ ಓತ್ಲಾ ತಿರುಗೋ ಇಬ್ಬರ ಚೇಷ್ಟೆ ತರಲೆಗಳು ಸಾಗ್ತಿದ್ದಂತೆ ಕಥೆ ನಾಯಕಿ(ರಾಧಿಕಾ ಪಂಡಿತ್) ಕಡೆಗೆ ಮುಖ ಮಾಡುತ್ತದೆ. ಪ್ರಾಣಕ್ಕೆ ಅಪಾಯವಿರುವ ನಾಯಕಿ, ನಾಯಕಿ ತಂದೆ ಅದಕ್ಕೆ ಕಾರಣರಾಗಿರುವುದು, ನಾಯಕ ನಾಯಕಿ ಭೇಟಿ, ಲವ್ವು ಗಿವ್ವು ಇತ್ಯಾದಿಗಳ ಜೊತೆಗೆ ಚಿತ್ರದಲ್ಲಿ ದೊಡ್ಡ ನಾಟಕವೇ ಅಡಗಿದೆ. ಇದರ ಜೊತೆಗೆ ಇರುವ ಮತ್ತೊಂದು ವಿಶೇಷ ಅಂಶ ಎಂದರೆ ಆಧ್ಯಾತ್ಮ. ಇಷ್ಟು ದಿನ ಭಟ್ರ ಹಾಡುಗಳಲ್ಲಿ ಅಡಗಿದ್ದ ತತ್ವಶಾಸ್ತ್ರ, 'ಡ್ರಾಮಾ'ದ ಕಥೆಯಲ್ಲಿ  ಬೆರೆತು ಇನ್ನು ಕೊಂಚ ಸಾಗಿ ಅಧ್ಯಾತ್ಮಿಕ ಅಂಶಗಳನ್ನ ಬೆರೆಸಿ ಪ್ರೇಕ್ಷಕರನ್ನ ಮತ್ತಷ್ಟು ಕಥೆಯೊಂದಿಗೆ ಒಡಗೂಡಿಸಿಕೊಳ್ಳುವ ತಂತ್ರ ಎನ್ನಬಹುದೇನೋ. ಆ ನಿಟ್ಟಿನಲ್ಲಿ ಚಿತ್ರಕಥೆ ಯಶಸ್ವಿಯಾಗಿದೆ.



ಯಶ್ ಸಾಹಸ, ನೃತ್ಯಗಳಲ್ಲಿ ಮಿಂಚಿ ಬರೀ ತುಂಡ್ ಅಭಿನಯ ಅನ್ಸ್ಕೊಳದೆ ಕ್ಲೈಮಾಕ್ಸ್ನಲ್ಲಿ ಅತ್ತು ಪರಿಪೂರ್ಣತೆ ಮೆರೆದಿದ್ದಾರೆ.
ಇನ್ನು ಸತೀಶ್ ಗೆ ಮತ್ತದೇ ಹಳ್ಳಿ ಸೊಗಡಿನ ಡೈಲಾಗ್ ಡೆಲಿವರಿಯಲ್ಲೇ ಸೈ ಎನಿಸಿಕೊಳ್ತಾರೆ. ರಾಧಿಕ ಪಂಡಿತ್ ರ ನಾಯಕಿಯ ಪಾತ್ರಕ್ಕೆ ಭಟ್ರು ಪುನಃ 'ನಂದಿನಿ' ಅನ್ನೋ ಹೆಸರಿಟ್ಟಿರುವುದು ಗಮನಿಸಬೇಕಾದ ಅಂಶ.ಪಂಡಿತ್ ಹಿಂದೆಂದಿಗಿಂತ ಮುದ್ದಾಗಿ ಕಾಣ್ತಾರೆ. ಸಿಂಧು ಲೋಕನಾಥ್ ಮೂಕಾಭಿನಯದಲ್ಲಿ ಮುಗ್ಧ ಲುಕ್ಸ್. ಸುಚೇಂದ್ರ ಪ್ರಸಾದ್ ಭಾವಾವೇಗದ ಕಾಲೇಜ್ ಪ್ರಾಂಶುಪಾಲರ ಜಟಿಲ ಪಾತ್ರವನ್ನ ಸಲೀಸಾಗಿ ಅಭಿನಯಿಸಿದ್ದಾರೆ. ಇನ್ನು ಅಂಬರೀಷ್ ಗೆ ಪರದೆಯ ಮೇಲೆ ವಿಶಿಷ್ಟ ಸ್ಥಾನ ಕಲ್ಪಿಸಲಾಗಿದೆ. ಬೊಂಬೆ ಶಾಸ್ತ್ರದವನ ಪಾತ್ರದಲ್ಲಿ ಅವರದು ಪ್ರಬುದ್ಧ ನಟನೆ.

ಮಳೆ ನಂತರ ಭಟ್ರು ಕಾಮೆರಮ್ಯಾನ್ ಕೃಷ್ಣ ಜೊತೆ ಕೆಲಸ ಮಾಡಿರೋದು ಇದರಲ್ಲೇ. ಸಾಕಷ್ಟು ಗ್ಯಾಪ್ ಆದರೂ ಅವರಿಬ್ಬರ ಜೋಡಿ ಮತ್ತೊಮ್ಮೆ ಕೆಲಸಮಾಡಿದೆ. ಕೃಷ್ಣ ಅಂದಮೇಲೆ ಸಾಕಷ್ಟು ಏರಿಯಲ್ ಮತ್ತು ಹ್ಯಾಂಡ್ ಹೆಲ್ಡ್ ಶಾಟ್ಸ್ ಇರಲೇಬೇಕು.
ಅವೇ ಒಮ್ಮೊಮ್ಮೆ ಕಥೆ ಹೇಳುತ್ತವೆ.ರವಿವರ್ಮ ಸಾಹಸದಲ್ಲಿ ಒಂದು ಫೈಟ್ ಮಜಬೂತಾಗಿ ಮೂಡಿಬಂದಿದೆ, ಏನೋ ನಿಜವಾಗಲು ಹೊಡೆದಾಡುತ್ತಿದ್ದಾರೆ ಎನ್ನುವಷ್ಟು. ಒಂದು ಬಿಟ್ ಅನ್ನು ಬಿಟ್ರೆ ಉಳಿದೆಲ್ಲ ಹಾಡುಗಳನ್ನು ಭಟ್ರೇ ಬರ್ದಿರೋದು ಅವರ ಪ್ರತಿಭೆಗೆ ಕನ್ನಡಿ. ಹರಿಕೃಷ್ಣ ಹಾಡುಗಳು ಮತ್ತು ಹಿನ್ನಲೆ ಸಂಗೀತ ಒಂದಕ್ಕೊಂದು ಸ್ಪರ್ಧೆಗೆ ಬಿದ್ದಂತೆ ಸಕ್ಕಾತಾಗಿ ಮೂಡಿಬಂದಿದೆ.

ಒಟ್ನಲ್ಲಿ ತುಂಡ್ ಹೈಕಳ ಸಾವಾಸ ಚೆನ್ನಾಗೈತೆ. ಮನರಂಜನೆಯ ರಸದೂಟ ಕೊಡೋದ್ರಿಂದ ಉಪವಾಸ ದೂರದ ಮಾತು. ಭಟ್ರು ಅಪರೂಪಕ್ಕೆ ಕಥೆ ಮಾಡವ್ರೆ .. ಕೊನೆಗ್ ಒಂದು ಅರ್ಥವತ್ತಾದ ಸಂದೇಶವಿದೆ. ಹೋಗಿ ನೋಡ್ಕೊಮ್ಬನ್ನಿ. !!!


~ಹೊಗೆ

2 ಕಾಮೆಂಟ್‌ಗಳು: