'ಕಡ್ಡಿಪುಡಿ'ಯಲ್ಲಿ ರೌಡಿಸಂನ ಅಂದರ್ ಬಾಹರ್.

ರಾಧಿಕ ಪಂಡಿತ್ ರ ಪಾತ್ರ 'ಉಮಾ' ರಾಜಕೀಯ ಪ್ರವೇಶದ ದೃಶ್ಯಗಳು ಬರುತ್ತಿದ್ದಂತೆ ಚಿತ್ರ ದಿಕ್ಕುತಪ್ಪುತ್ತಿದೆ ಎಂದಿನಿಸುವಾಗಲೇ ಆ ರಾಜಕೀಯ ಎಳೆಯ ಕೊಂಡಿಯನ್ನು ಮತ್ತೆಲ್ಲಿಗೋ ಲಿಂಕಿಸಿ ಕೊನೆಗೆ ಈ ರೌಡಿಸಂ ನಲ್ಲಿ ಎಂದೆಂದಿಗೂ ಅಲ್ಪವಿರಾಮವಷ್ಟೇನಾ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿ ಸೂರಿ ಕಡ್ಡಿಪುಡಿಯ ನಶೆಯನ್ನು ಪ್ರೇಕ್ಷಕರ ತಲೆಗೇರಿಸುತ್ತಾರೆ.

ಸಿನಿಮಾದಲ್ಲಿರುವುದು ದೃಶ್ಯವೈಭವ, ಅಭಿನಯದ ವೈಭವೀಕರಣವಲ್ಲ. ಅದಕ್ಕಾಗಿ ಇದೊಂದು ಒಳ್ಳೆಯ ಸಿನಿಮಾವಾಗಲು ಎಲ್ಲ ಅರ್ಹತೆ ಹೊಂದಿದೆ. 'ಆನಂದ'ನಾಗಿ ಶಿವಣ್ಣನನ್ನು ನೋಡಲು ಪರಮಾನಂದ. ರಾಧಿಕ ಪಂಡಿತ್ ಚಿತ್ರದಲ್ಲಿ ಜೂನಿಯರ್ ಆರ್ಟಿಸ್ಟ್ ಆದರೂ, ಅಭಿನಯದಲ್ಲಿ 'ಸೀನಿಯರ್ಸ್'ಗೇ ಸೆಡ್ಡುಹೊಡಿತಾರೆ. ರಂಗಾಯಣ ರಘು ಪಾತ್ರವನ್ನು ಸೂರಿ ಎಷ್ಟು ಬೇಕೋ ಅಷ್ಟು ಮಾತ್ರ ಉಪಯೋಗಿಸಿದ್ದಾರೆ, ಅದೇನು ಸುಲಭದ ಕೆಲಸವಾ ಅಷ್ಟು ಪ್ರತಿಭಾವಂತನನ್ನು ಕಮ್ಮಿ ಬಳಸಿಕೊಳ್ಳುವುದು. ಚಿತ್ರದಲ್ಲಿ ಮೂರು ಜನ ರೇಪಿಸ್ಟ್ ಗಳಿದ್ದಾರೆ, ಅದೆಲ್ಲಿಂದ ಕರ್ಕೊಂಡ್ ಬಂದ್ರು ಅವರನ್ನ ಅನ್ನಿಸುವ ಹಾಗಿದೆ ಅವರ ಪಾತ್ರ ಪೋಷಣೆ. 'ಇನ್ನುಳಿದ ಪಾತ್ರಗಳು' ಎನ್ನುವ ಪ್ರಮೇಯ ಬರದ ಹಾಗೆ ಎಲ್ಲ ಪಾತ್ರಗಳಿಗೂ ಮಹತ್ವವಿದೆ. ಅದರಲ್ಲೂ ಮಳೆ, ಛತ್ರಿ, ಲಾಂಗುಗಳು ನಿಮಗೆ ಥ್ರಿಲ್ ಕೊಡುವಂಥ ಪಾತ್ರಗಳಾಗಿವೆ.


ರೌಡಿ ಪಂಟರ್ ಕಡ್ಡಿಪುಡಿ 'ಆಮ್ ಆದ್ಮಿ' ಆನಂದನಾಗಿ ಮತ್ತೆ  ಚಾಣಾಕ್ಷ ರಾಕ್ಷಸನಾಗಿ ಹೊರಹೊಮ್ಮುವ ಕಥೆ ಈ ಚಿತ್ರದ್ದು. ನಾನೆಷ್ಟು ಕನ್ನಡ ಪ್ರೇಮಿಯಾದರೂ ಇಲ್ಲಿ 'ಚಿತ್ರಕಥೆ' ಎಂಬ ಪದವನ್ನು ನನ್ನ ಕೈಯಲ್ಲಿ ಬಳಸಲಾಗುತ್ತಿಲ್ಲ. ಇಲ್ಲಿರುವುದು ನಿಜವಾದ ಸ್ಕ್ರೀನ್ ಪ್ಲೇ, ದೃಶ್ಯಗಳೊಂದಿಗೆ ನಡೆಯುವ ಆಟ. ಅತಿ ಸಹಜವಾಗಿ ಘಟನೆಗಳು ಸಂಭಿವಿಸುತ್ತಾ ಸಾಗುತ್ತದೆ. ಅದಕ್ಕೆ,  ಕೆಲವು ಕಾಲ ಏನೂ 'ಕಥೆ'ನೇ ಇಲ್ವಲ್ಲ ಅನ್ನಿಸಿಬಿಡುವ ಎಲ್ಲ ಲಕ್ಷಣಗಳಿವೆ. 

ರೌಡಿಸಂನ ಒಳಗು -ಹೊರಗನ್ನು ತೋರಿಸುವಾಗ ಶಿವಣ್ಣನ ಹಿಂದಿನ ಚಿತ್ರ 'ಅಂದರ್ ಬಾಹರ್' ಶೀರ್ಷಿಕೆ ಅನ್ಯಾಯವಾಗಿ ಜ್ಞಾಪಕ ಬಂದುಬಿಡತ್ತೆ ಇಲ್ಲಿ. 'ಸೌಂದರ್ಯ ಸಮರ' ಹಾಡು ಕಮರ್ಷಿಯಲ್ ಸಿನಿಮಾದ ಆರ್ಟ್ ಅಂಶವೋ ಅಥವಾ ಆರ್ಟಿಸ್ಟಿಕ್ ಸಿನಿಮಾದ ಕಮರ್ಷಿಯಲ್ ಎಲಿಮೆಂಟೊ ಅನ್ನುವ ಗೊಂದಲ ಉಳಿಯುತ್ತದೆ. ಅಷ್ಟರ ಮಟ್ಟಿಗೆ, ಆ ಕಮರ್ಷಿಯಲ್ - ಆರ್ಟ್ ಗಳ ಕಿರಿದಾದ ಪಥದಲ್ಲಿ ಚಿತ್ರ ಸಾಗುತ್ತದೆ.


ಚಿತ್ರದ ಶುರುವಿನಲ್ಲಿ ಶಿವಣ್ಣನ ಹೆಸರನ್ನು ವೈಭವೀಕರಿಸದೇ ಸಿಂಪಲ್ಲಾಗಿ ಕಾರಿನ ವೈಪರ್ ಮೇಲೆ ತೋರಿಸುತ್ತಲೇ ಸೂರಿ ಸೂಕ್ಷ್ಮವಾಗಿ ಹೇಳುತ್ತಾರೆ ಇದು ಚಟಕ್ಕೆ ಮಾಡಿದ ಸಿನಿಮಾ ಅಲ್ಲ ಅಂತ. ಸೂರಿ ಶಾಟ್ ಕಂಪೊಸಿಷನ್ ಗಾಗಿ, ಕೃಷ್ಣರ ಬೆಳಕಿನೊಂದಿಗಿನ ಆಟಕ್ಕಾಗಿ, ಶಿವಣ್ಣರ  ಪ್ರಾಮಾಣಿಕ ಪ್ರಯತ್ನಕ್ಕಾಗಿ, ಇಂತಹ ಸಿನಿಮಾ ಮಾಡಲು ಧೈರ್ಯ ಮಾಡಿದ ನಿರ್ಮಾಪಕರಿಗಾಗಿ, ಹರಿಕ್ರಷ್ಣರ ಪ್ರತಿಭೆಗಾಗಿ ಈ ಸಿನಿಮಾ ನೋಡಲೇಬೇಕು. 

ಕನ್ನಡದ ಕ್ಲಾಸಿಕ್ ಚಿತ್ರಗಳ ಪಟ್ಟಿಗೆ 120 ನಿಮಿಷಗಳ 'ಕಡ್ಡಿಪುಡಿ' ಸೇರುವ ಎಲ್ಲ ಸಾಧ್ಯತೆ ಎದ್ದುಕಾಣುತ್ತದೆ. ಆದರೆ ದುರದೃಷ್ಟವಶಾತ್ ಕಡ್ಡಿಪುಡಿ 150 ನಿಮಿಷದ ಸಿನಿಮಾ.

~ಹೊಗೆ

1 ಕಾಮೆಂಟ್‌: