ಈ 'ಪರಿ'ಯ ಕಿರಿಕಿರಿ..
ಸದಭಿರುಚಿಯ ಚಿತ್ರ ಎಂದು ಬಿಡುಗಡೆಯ ಮುನ್ನವೇ ಹಣೆಪಟ್ಟಿಯನ್ನು ಹೊತ್ತುಕೊಂಡ ಈ ಚಿತ್ರ ಸಕಲ ರೀತಿಯಲ್ಲೂ ನಿರಾಶೆ ಮೂಡಿಸುವುದು ಕನ್ನಡ ಪ್ರೇಕ್ಷಕನಿಗೆ ವಿಪರ್ಯಾಸವೆ ಸರಿ. ಬಿಡಿಟಿ ಬ್ಯಾನರ್ನ ಪ್ರಥಮ ಕಾಣಿಕೆ , ಸಂಪನ್ನ ಮುತಾಲಿಕ್ ರ ಕಾದಂಬರಿಯನ್ನು ಆಧರಿಸಿ ಹೊರತಂದಿರುವ ಈ ಚಿತ್ರದಲ್ಲಿ ಮಿಸ್ಸಾಗಿರುವುದು ಒಂದು ಗಟ್ಟಿ ಚಿತ್ರಕಥೆ.
ಬ್ರಾಹ್ಮಣ ಹುಡುಗ 'ಭಾರದ್ವಾಜ' (ರಾಕೇಶ್) ಕೆಳವರ್ಗದ ಯುವತಿ 'ಪರಿ' ಯ (ನಿವೇದಿತ) ಪ್ರೇಮಸಮುದ್ರದಲ್ಲಿ ಬಿದ್ದು ನಂತರ ಪರಿಯನ್ನು ಪಡೆಯಲು ಜನಿವಾರವನ್ನು ಒಗೆದು ನಾಯಕಿಯ ತಂದೆ ಮಾಡುವ 'ಕಳ್ಳ ಸಾರಾಯಿ' ದಂಧೆಯಲ್ಲಿ ಪ್ರವೀಣನಾಗಿ ಅವಳ ತಂದೆಯ ಮೆಚ್ಚುಗೆಗೆ ಪಾತ್ರವಾದರೂ ಕೊನೆಗೆ ಅವಳ ತಂದೆ ನಾಯಕಿಯನ್ನು
ಮತ್ತೊಬ್ಬನಿಗೆ ಕೊಟ್ಟು ಮದುವೆ ಮಾಡಲು ಹೋದಾಗ ಈ ಭಾರದ್ವಾಜ ನಾಯಕಿಯ ತಂದೆ ಮಾತಿಗೆ ಬೆಲೆ ಕೊಟ್ಟು
ಪರಿಯನ್ನು ತ್ಯಜಿಸಿ ತೆರಳುತ್ತಾನೆ. ಸುಮೇಧಾ (ಹರ್ಷಿಕ ಪೂರ್ನಚ್ಚ) ಬಳಿಗೆ. ಆಕೆ ಒಂದು ದೊಡ್ಡ ಡಿಸ್ಟಿಲರಿಯ ಓನರ್. ಅಲ್ಲಿ ತನ್ನ ಕಳ್ಳ ಸಾರಾಯಿ ದಂಧೆಯ ಪ್ರಾವಿಣ್ಯತೆಯನ್ನೇ ತೋರಿ 'ಭಾರದ್ವಾಜ' ಅವಳ ಪ್ರೀತಿಗೂ ಪಾತ್ರನಾಗುತ್ತಾನೆ. ಇನ್ನುಳಿದ ಪರಿಯ ಕಥೆ ಬರಿಯೇ ಕಲಸುಮೇಲೋಗರ.
ನಿರ್ದೇಶಕ ಸುಧೀರ್ ಅತ್ತಾವರ್ ಅವರಿಗೆ ಕಥೆಯ ಹಿಡಿತ ಸಿಕ್ಕಿಲ್ಲವೆಂದು ಮೊದಲಾರ್ಧದಲ್ಲೇ ತಿಳಿಯುತ್ತದೆ. 'ಮುಗಿಲಿನ ಮಾತು ಮುಸಲಧಾರೆ' ಹಾಡಿನ ಮೂಲಕ ವೀರ್ ಸಮರ್ಥ್ ರವರ ಸಂಗೀತ ಇಷ್ಟವಾಗುತ್ತದೆ. ಅನಂತ್ ಅರಸ್ ರವರ ಕ್ಯಾಮೆರಾದ ಏರಿಯಲ್ ಶಾಟ್ಸ್ ಕೆಲವು ಸುಂದರ ದೃಶ್ಯಗಳನ್ನೂ ಸೆರೆಹಿಡಿದಿದೆ.
ಚಿತ್ರದ ವಿಶೇಷ ಎಂದರೆ ಮೂರು ಜನ 'ಪದ್ಮಶ್ರೀ'ಗಳು ಇಲ್ಲಿ ಕೆಲಸ ಮಾಡಿರುವುದು. ಎಂ.ಎಸ್ ಸತ್ಯು ರವರ ಕಲೆ, ನಿಮಾಯ್ ಘೋಷ್ ರ ಸ್ಥಿರ ಛಾಯಾಗ್ರಹಣ, ಉಷಾ ಉತ್ತುಪ್ ರ ಹಾಡುಗಾರಿಕೆ ಇದ್ದರೂ ಅವೆಲ್ಲ ಚಿತ್ರಕ್ಕೆ ಕಳೆ ತರುವಲ್ಲಿ ಹೆಚ್ಚಾಗಿ ಕೆಲಸ ಮಾಡಿಲ್ಲ. 'ಮರಳಿ ಮರೆಯಾಗಿ' (ಸವಾರಿ) ಅಂತ ಭಾವಪೂರ್ಣ ಹಾಡುಗಳನ್ನು ಕೊಟ್ಟ ಸುಧೀರ್ ಅತ್ತಾವರ್ ತಮ್ಮ ಮುಂದಿನ ಚಿತ್ರಗಳಲ್ಲಾದರೂ ಎಚ್ಚೆತ್ತುಕೊಳ್ಳಲಿ ಅಥವಾ ಪುನಃ ಗೀತ ಸಾಹಿತ್ಯಕ್ಕೆ ಮರಳಲಿ.