bheema teeradalli REVIEW.. a complete look

ಭೀಮಾ ತೀರದಲ್ಲಿ ಒಂದು ವ್ಯಘ್ರ 'ರಕ್ತ'ಚರಿತ್ರೆ...

ಚಂದಪ್ಪ ಹರಿಜನ. ಈತ ಮೇ, 2000 ರಲ್ಲಿ ಪೋಲಿಸ್ ಗನ್ನಿಗೆ ಬಲಿಯಾದ. ಪೋಲಿಸ್ ದಾಖಲೆಯ ಪ್ರಕಾರ ಇವನೊಬ್ಬ ನರಹಂತಕ. ಅವನ ಪ್ರಕಾರ ಅವನು ಅನ್ಯಾಯದ ವಿರುದ್ಧ ಹೋರಾಡುವ ಕ್ರಾಂತಿಕಾರಿ.
ಇದೇ ಎಳೆಯನ್ನು ಆಧರಿಸಿ ಸಿನಿಮಾ ಮಾಡಿದ್ದಾರೆ ನಿರ್ದೇಶಕ ಓಂ ಪ್ರಕಾಶ್ ರಾವ್.




ಸೆನ್ಸಾರ್ ಮಂಡಳಿ  'ಎ' ಪ್ರಮಾಣ ಪತ್ರ ಕೊಟ್ಟಿರುವುದು ಸರಿಯಷ್ಟೆ. ಕಥೆಗೆ ತಕ್ಕಂತೆ ಚಿತ್ರಕತೆ ಇದ್ದರೂ ಅತಿಯಾದ ರಕ್ತಪಾತ ಪ್ರೇಕ್ಷಕರಿಗೆ ಚಿಟ್ಟು ಹಿಡಿಸಬಹುದು. ಚಿತ್ರದ ಮೊದಲಾರ್ಧ ನಿಧಾನಗತಿಯಲ್ಲಿ ಸಾಗುವುದೇ ಮೇಜರ್ ಡ್ರಾಬ್ಯಾಕ್.
ಆದರೆ ನಿಮಗೆ ಅಲ್ಲಲ್ಲಿ ಸಿಗುವ ಪಾತ್ರಗಳು, ಅದರ ದೃಶ್ಯ ವೈಭವ, ಕೆಲವು  ಮೈನವಿರೇಳಿಸುವ ಡೈಲಾಗ್ ಗಳು ನಿಮ್ಮನ್ನು ರೋಮಾಂಚನಗೊಳಿಸಿ ಸಿನಿಮಾಗೂ ನಿಮಗೂ ಜೀವ ಕೊಡುತ್ತದೆ.


ಓಂ ಪ್ರಕಾಶ್ ರಾವ್ ನಿರ್ದೇಶಕನಾಗಿ ಗೆಲ್ಲುವುದು ಪಾತ್ರ ವಿಜೃ೦ಭಣೆಯಲ್ಲಿ , ಚಿತ್ರದಲ್ಲಿ ಕೊಡುವ ಸಂದೇಶದಲ್ಲಿ ಮತ್ತು ಕಥಾವಸ್ತುವಿನ ಆಯ್ಕೆಯಲ್ಲಿ. ಚಿತ್ರದಲ್ಲಿ ಹೇಳಿಕೊಳ್ಳುವಂತ ಕಥೆಯಿಲ್ಲ. ಮೇಲೆ ಹೇಳಿದ ಒನ್ ಲೈನ್ ಎಳೆಯಲ್ಲಿ ಕಥೆ ಮಾಡಿದ್ದಾರೆ. ಶೇಕಡಾ ಎಂಭತ್ತು ಭಾಗ ಉತ್ತರ ಕರ್ನಾಟಕ ಭಾಷೆಯಲ್ಲಿ ಸಂಭಾಷಣೆ ಇರುವುದು ಶ್ಲಾಘನೀಯ ಪ್ರಯತ್ನ. ಅಲ್ಲಲ್ಲಿ ಭಾಷೆ ಕೃತಕವಾಗಿ ಕಂಡರೂ ಅವರ ಪ್ರಯತ್ನ ಮೆಚ್ಚುವಂಥದ್ದು.


ದುನಿಯಾ ವಿಜಯ್ ಗೆ ಹೇಳಿ ಮಾಡಿಸಿದ ಪಾತ್ರ. ಚಂದಪ್ಪನ ಪಾತ್ರಕ್ಕೆ  ಚಂದಗೆ ಒಪ್ಪುತ್ತಾರೆ. ನಾಯಕಿ ಪಾತ್ರದಲ್ಲಿ ಪ್ರಣಿತ ಇದ್ದು ಕಥೆ ಮತ್ತು ಅದರ ನೇಟಿವಿಟಿ ಗೆ ಖಂಡಿತಾ ಅವರ ಬಣ್ಣ, ಉಡುಗೆ-ತೊಡುಗೆ ಒಪ್ಪುವುದಿಲ್ಲ. ಉಳಿದಂತೆ ತಾರಾಗಣದಲ್ಲಿ ಶರತ್ ಲೋಹಿತಾಶ್ವ, ಲೋಕನಾಥ್, ದೊಡ್ಡಣ್ಣ, ಗುರುರಾಜ್ ಹೊಸಕೋಟೆ, ರಾಜು ತಾಳಿಕೋಟೆ, ಶ್ರೀನಿವಾಸಮೂರ್ತಿ, ಸುಚೇಂದ್ರ ಪ್ರಸಾದ್, ಹೊಸ ಪರಿಚಯ 'ಪ್ರತಾಪ್ ರೆಡ್ಡಿ' ಇದ್ದಾರೆ. ಅವರವರ ಪಾತ್ರಕ್ಕೆ ತಕ್ಕಂತೆ ಸಿನಿಮಾದಲ್ಲಿ ಅವರು ಕಿರುಚಾಡುತ್ತಾರೆ. ವ್ಯಘ್ರರಾಗುತ್ತಾರೆ. ಈ ಎಲ್ಲಾ ಘಟಾನುಘಟಿಗಳ ಮಧ್ಯೆ ನಾಯಕನ ತಾಯಿಯ ಪಾತ್ರದಲ್ಲಿ  ಉಮಾಶ್ರಿ ಮಿಂಚುತ್ತಾರೆ. ಪ್ರೇಕ್ಷಕರಿಂದ ಶಿಳ್ಳೆ - ಚಪ್ಪಾಳೆ ಗಳಿಸುತ್ತಾರೆ. 'ಮಾನ್ಯ' ಅಬಕಾರಿ ಸಚಿವ ರೇಣುಕಾಚಾರ್ಯ ಚಿತ್ರದಲ್ಲಿ ಡಿಸಿಪಿ.
  
" ಗಂಡ್ ಮಕ್ಕಳಿಗೆ ಗಂಡ್ಸಾಗೋದು ಹೇಗೆ ಅಂತ ಪಾಠ ಹೇಳ್ಕೊಡ್ಬೇಕಿಲ್ಲ" ಇಂತ ಹಲವು ಪಂಚಿಂಗ್ ಸಾಲುಗಳು ಚಿತ್ರದಲ್ಲಿ ಇದೆಯಂದರೆ ಅದರ ರೂವಾರಿ ಎಂ.ಎಸ್.ರಮೇಶ್ . ಅಣಜಿ ನಾಗರಾಜ್ ಚಿತ್ರಕ್ಕೆ ಹಣ ಹಾಕಿ ಹಲವು ದಿನಗಳ ನಂತರ ಕ್ಯಾಮೆರಾ ಹಿಂದೆ ಕೂಡ ಕೆಲಸ ಮಾಡಿದ್ದಾರೆ. ದ್ವಿತೀಯಾರ್ಧದಲ್ಲಿ ಅವರ ಕ್ಯಾಮೆರ ಹಿಂದಿನ ಶ್ರಮ ಕಾಣುತ್ತದೆ. ಪದೇ ಪದೇ ಸೂರ್ಯನ ಕಿರಣದ ಬ್ಯಾಕ್ ಡ್ರಾಪ್ ನಲ್ಲಿ ಪಾತ್ರಗಳನ್ನು ಸೆರೆಹಿಡಿದ್ದಾರೆ. ಅಭಿಮಾನ್ ರಾಯ್ ಸಂಗೀತಕ್ಕೆ ಹೆಚ್ಚು ಪ್ರಾಮುಖ್ಯತೆ ಇಲ್ಲ. ಏಕೆಂದರೆ ಚಿತ್ರದಲ್ಲಿ ಇರುವುದು ಎರಡೇ  ಹಾಡುಗಳು. ಹಿನ್ನಲೆ ಸಂಗೀತವಂತೂ 'ರಕ್ತ ಚರಿತ್ರ' ದ ಡಿಟ್ಟೋ ಎಂದು ಜನ ಮಾತನಾಡಿ ಕೊಳ್ಳುತ್ತಿದ್ದಾರೆ.


ದೃಶ್ಯಾವಳಿಗಳು ರಕ್ತಸಿಕ್ತವಾಗಿದ್ದರೂ ಅದರ ಒಡನೆಯೇ ಇರುವ ಸಂದೇಶ ಉತ್ತಮವಾಗಿದೆ. ಹಿಂಸೆಯಿಂದ ಕ್ರಾಂತಿ ಮಾಡಿದವನ ಹೆಂಡತಿ ಯಾವತಿದ್ದರೂ ವಿಧವೆಯೇ. ನೀವು ಕ್ರಾಂತಿಕಾರರಾಗಿದ್ದಾರೆ ಸಮಾಜದಲ್ಲೇ ಇದ್ದು ಮಾಡಿ ಎನ್ನುವುದು ಈ ಚಿತ್ರ ಕೊಡುವ ತೂಕದ ಸಂದೇಶ.


~ ಹೊಗೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ