ANNA BOND MUSIC EXCLUSIVE REVIEW

"ತುಂಬಾ ನಿರೀಕ್ಷೆ ಇಟ್ಕೋಬೇಡಿ.. ಬೇಜಾರಾಯ್ತದೆ.. "

೨೦೧೨ ರ ಬಹು ನಿರೀಕ್ಷಿತ 'ಅಣ್ಣಾ ಬಾಂಡ್' ಚಿತ್ರದ ಆಡಿಯೋ ಏಪ್ರಿಲ್ ೨ ರಂದು ಬಿಡುಗಡೆಯಾಗಿದೆ. ಹರಿಕೃಷ್ಣ ಸಂಗೀತವಿರುವ ಈ ಚಿತ್ರದಲ್ಲಿ ಐದು ಹಾಡುಗಳಿವೆ. ಅದರಲ್ಲಿ ನಾಲ್ಕು ಹೊಸ ಹಾಡುಗಳಿದ್ದು, ಐದನೆಯದು ಚಲಿಸುವ ಮೋಡಗಳು ಚಿತ್ರದ ಸ್ವತಃ ಪುನೀತ್ ರವರೇ ಹಾಡಿದ್ದ  'ಕಾಣದಂತೆ ಮಾಯವಾದೇನೋ' ಗೀತೆಯನ್ನು ರೀಮಿಕ್ಸ್ ಮಾಡಲಾಗಿದೆ.
ಮೊದಲ ಬಾರಿಗೆ ಹಾಡುಗಳನ್ನು ಕೇಳಿದಾಗ ಕೆಲವು ಗೀತೆಗಳಲ್ಲಿ 'ಪರಮಾತ್ಮ'ನ ಛಾಯೆ ಇದೆಯಂದು ಅನಿಸುವುದು ಸಹಜ.
ಆಡಿಯೋ ಬಿಡುಗಡೆಯಾಗುವ ಮುಂಚೆಯೇ 'ತುಂಬಾ ನೋಡಬೇಡಿ, ಲವ್ವು ಆಯ್ತದೆ' ಗೀತೆ ಸಾಕಷ್ಟು ಹೆಸರು ಮಾಡಿತ್ತು. ಅದರಂತೆ ಅದೇ ಹಾಡು ಎಲ್ಲರ ಬಾಯಲ್ಲಿ ಸದ್ಯದಲ್ಲೇ ಗುನುಗುವ ಎಲ್ಲ ನಿರೀಕ್ಷೆ ತೋರಿದೆ.
ಚಿತ್ರದ ಪ್ರತಿಯೊಂದು ಹಾಡಿನ ಬಗ್ಗೆ ವಿಮರ್ಶೆ ಮಾಡಿ ನಿಮ್ಮ ಮುಂದೆ ಇಟ್ಟಿದೇವೆ.


೧. ಬೋಣಿ ಆಗದ ಹೃದಯಾನ  (ಸಾಹಿತ್ಯ : ಯೋಗರಾಜ್ ಭಟ್, ಗಾಯನ : ಟಿಪ್ಪು)
ಭಟ್ಟರು ಪರಮಾತ್ಮದಲ್ಲಿ 'ಯಾವನಿಗೊತ್ತು' ಎಂದು ಬರೆದು, ಇಲ್ಲಿ 'ಬೇಕಿತ್ತಾ ಬೇಕಿತ್ತಾ' ಎಂದು ಲವ್ ಬಗ್ಗೆ ಗೀಚಿದ್ದಾರೆ. ಎರಡೂ ಗೀತೆಗಳು ಒಂದೇ ಥರ ಕೇಳಿಸುತ್ತದೆ. ಆದರೆ ಟಿಪ್ಪು ಧ್ವನಿ ನಿಮ್ಮನ್ನು ಮೋಡಿ ಮಾಡಿಬಿಡುತ್ತದೆ. ಚಿತ್ರದ ಆಲ್ಬಮ್ ನಲ್ಲಿ ಈ ಹಾಡಿಗೆ ಎರಡನೆಯ ಸ್ಥಾನ ಕೊಡಬಹುದು.

೨. ಏನೆಂದು ಹೆಸರಿಡಲಿ (ಸಾಹಿತ್ಯ : ಜಯಂತ್ ಕಾಯ್ಕಿಣಿ , ಗಾಯನ : ಸೋನು ನಿಗಮ್, ಶ್ರೇಯಾ ಘೋಶಾಲ್)
 ಹಾಡು ಶುರುವಾದಾಗ ನಿಮಗೆ ಇದು 'ಆಡಿಸಿ ನೋಡು ಬೀಳಿಸಿ ನೋಡು' ಅಂತ ಅನ್ನಿಸಿದರೆ ಆಶ್ಚರ್ಯವಿಲ್ಲ. ಚಿತ್ರದ ಓನ್ಲಿ ಮೆಲೋಡಿ ಟ್ರ್ಯಾಕ್ ಇದು. ಕಾಯ್ಕಿಣಿ ಸರ್ ಎಂದಿನಂತೆ ಅಪರೂಪದ ಪದಗಳನ್ನು ಹಾಡಿಗೆ ಪೋಣಿಸಿದ್ದಾರೆ. ಸದ್ಯಕ್ಕೆ ಮೂರನೇ ಸ್ಥಾನದಲ್ಲಿದ್ದರೂ ಜನ ಮೇಲಿಂದ ಮೇಲೆ ಕೇಳುತ್ತ ಮೊದಲ ಸ್ಥಾನಕ್ಕೆ ತಂದು ನಿಲ್ಲಿಸುವ ತಾಕತ್ತು ಈ ಹಾಡಿಗಿದೆ.

೩. ಕಾಣದಂತೆ ಮಾಯವಾದೆನೋ (ಸಾಹಿತ್ಯ : ಚಿ. ಉದಯಶಂಕರ್, ಗಾಯನ : ಪುನೀತ್ ರಾಜ್ ಕುಮಾರ್ )
ಪುಟ್ಟ ಬಾಲಕನ ಧ್ವನಿಯಲ್ಲೇ ಈ ಹಾಡು ಚೆಂದ ಕೇಳಿಸುತ್ತದೆ. ಆದರೂ ಪುನೀತ್ ಅಭಿಮಾನಿಗಳಿಗೆ ನಿರಾಶೆ ಮಾಡಬಾರದೆಂದು ನಿರ್ಧರಿಸಿರುವ ನಿರ್ದೇಶಕ 'ಸೂರಿ'ಯ ಈ ಪ್ರಯತ್ನಕ್ಕೆ ಅಭಿಮಾನಿಗಳ ಪರವಾಗಿ ವಂದನೆಗಳು. ಅತ್ಯುನ್ನತ ಮತ್ತು ತೂಕವಾದ ಸಾಹಿತ್ಯ ಹೊಂದಿರುವ ಈ ಗೀತೆಗೆ ರಿಮಿಕ್ಸ್ ಎಂಬ ಒಂದೇ ಕಾರಣದಿಂದ ಐದನೆಯ ಸ್ಥಾನದಲ್ಲಿ ಇರಿಸಲಾಗಿದೆ.

೪. ಹಿ ಇಸ್ ಅಣ್ಣಾ ಬಾಂಡ್ (ಸಾಹಿತ್ಯ : ಯೋಗರಾಜ್ ಭಟ್, ಗಾಯನ : ರಂಜಿತ್, ನವೀನ್, ರಮ್ಯ)
ಬಾಂಡ್ ಶೈಲಿಯ ಸಂಗೀತ ಹೊಂದಿರುವ ಈ ಹಾಡು ನಿಮಗೆ ಒಂದು ರೀತಿಯ ಜೋಶ್ ಕೊಡುವಲ್ಲಿ ಯಶಸ್ವಿಯಾಗುತ್ತದೆ. ಆ ತೆರನಾದ ಬೀಟ್ಸ್ ಇದರಲ್ಲಿದೆ. ಈ ಹಾಡಿಗೆ ಪುನೀತ್ ಹೇಗೆ ಹೆಜ್ಜೆ ಹಾಕಿದ್ದಾರೋ, ಖಂಡಿತ ಮಕ್ಕಳಿಗೆ ಹುಚ್ಚು ಹಿಡಿಸುತ್ತಾರೆ ಎಂದನಿಸುತ್ತದೆ. 'ಗೊಗ್ಗಯಂಗೆ ಗಾಡ್ ಫಾದರ್ ಅಣ್ಣಾ ಬಾಂಡ್, ಕಾಗೆ ಗುಬ್ಬಿ ಸ್ಟೋರಿಯಲ್ಲೂ ಅಣ್ಣಾ ಬಾಂಡ್' ಹೀಗೆ ಬರುವ ಸಾಲುಗಳು ಶೇಕಡಾ ನೂರು ಮಜಾ ಕೊಡುತ್ತದೆ. ಸದ್ಯಕ್ಕೆ ಇದು ನಾಲ್ಕನೆಯ ಸ್ಥಾನದಲ್ಲಿ.

೫. ತುಂಬಾ ನೋಡ್ಬೇಡಿ, ಲವ್ವು ಆಯ್ತದೆ ( ಸಾಹಿತ್ಯ : ಯೋಗರಾಜ್ ಭಟ್, ಗಾಯನ : ಹರಿಕೃಷ್ಣ )
ಮೊದಲನೆಯ ಸ್ಥಾನ ಈ ಹಾಡಿಗೆ  ಆಗಲೇ ಬಂದಾಗಿದೆ. ಭಟ್ರು - ಹರಿ ಗಳ ಮ್ಯಾಜಿಕ್ ಇಲ್ಲಿದೆ. ಹೆಚ್ಚು ಬೀಟ್ಸ್ ಇಲ್ಲದೆ ಬರಿಯ ತಮಟೆ ಸದ್ದಿಗೆ ಹೆಚ್ಚು ಪ್ರಾಶಸ್ತ್ಯ ಕೊಟ್ಟಿದ್ದಾರೆಸಂಗೀತ ನಿರ್ದೇಶಕ. ಲವ್ ಫಿಲಾಸಫಿ ಬೋಧಿಸಿದ್ದಾರೆ ಭಟ್ರು. 'ಟಡನ್ ಟಾ ಟಡನ್' ಈ ಹಾಡಿನ ಮುಖ್ಯ ಆಕರ್ಷಣೆ.

ಹೀಗೆ ಒಂದೊಂದು ಹಾಡು ವಿಭಿನ್ನವಾಗಿದೆ. ಹಾಡುಗಳ ಚಿತ್ರೀಕರಣ ನೋಡಿದ ಮೇಲೆ ಮತ್ತಷ್ಟು ಇಷ್ಟವಾಗಬಹುದು. ಅತಿಯಾದ ನಿರೀಕ್ಷೆ ಇಲ್ಲದೆ ಸುಮ್ಮನೆ ಆರಾಮಾಗಿ ಕೇಳಿದರೆ ಮುದಕೊಡುತ್ತದೆ.
ಚಿತ್ರಕ್ಕೆ ಶುಭ ಹರಿಸಿ ಕಾಯೋಣ. 

~ ಹೊಗೆ

2 ಕಾಮೆಂಟ್‌ಗಳು: