DASHAMUKHA COMPLETE REVIEW..

ಹತ್ತು ಜನ್ಮಕ್ಕಾಗೋ ಅಷ್ಟು ಸಹನೆ ಇದ್ದರೆ 'ದಶ'ಮುಖ ನಿಮಗೆ ಸಹಿಸುತ್ತೆ.

ಸೆನ್ಸಾರ್ ಬೋರ್ಡ್ ನಿಂದ ಸದಾ 'ಎ' ಸ್ವೀಕರಿಸುತ್ತಿದ್ದ ನಿರ್ದೇಶಕ ರವಿ ಶ್ರೀವತ್ಸ ಈ ಬಾರಿ 'ಯುಎ' ತೆಗೆದುಕೊಂಡಿರುವುದೇ 
ಈ ಚಿತ್ರದ ಅವರ ಬಹು ದೊಡ್ಡ ಸಾಧನೆ. 1957 ರಲ್ಲಿ ಬಂದ ಇಂಗ್ಲೀಷಿನ '12 ಆಂಗ್ರಿ ಮೆನ್' ಹಿಂದಿಯಲ್ಲಿ 'ಏಕ್ ರುಕಾ ಹುವಾ ಫೈಸಲಾ' ಆಗಿತ್ತು. ಕನ್ನಡದಲ್ಲಿ 'ದಶಮುಖ'ನಾಗಿ ಬಂದಿದೆ.

ಒಂದು ಕೊಲೆ ಪ್ರಕರಣವನ್ನು ನಮ್ಮ ನ್ಯಾಯಾಲಯ ಬಗೆಹರಿಸಲಾಗದೆ ಹತ್ತು ಜನ ಸಾಮಾನ್ಯರನ್ನು ಗುರುತಿಸಿ ಅವರಿಗೆ 
ಆ ಗುರುತರ ಜವಾಬ್ದಾರಿಯನ್ನು ವಹಿಸಿಬಿಡುತ್ತೆ. ಈ ರೀತಿ 'ಜ್ಯೂರಿ ಸಿಸ್ಟಂ' ನಮ್ಮ ಸಂವಿಧಾನದಲ್ಲಿ  ಇಲ್ಲದಿದ್ದರೂ ಒಂದು ಸಿನಿಮಾ ಮಟ್ಟಿಗೆ ಪ್ರೇಕ್ಷಕ ಸಹಿಸಿಕೊಳ್ಳಬಹುದು. ಪ್ರಕರಣವನ್ನು ಬಗೆಹರಿಸಲು ಬರುವ ಹತ್ತು ಜನರು ವಿವಿಧ ಹಿನ್ನಲೆಯುಳ್ಳವರೂ, ಬೇರೆ ಬೇರೆ ಪೀಳಿಗೆಯವರು. ನಿಜ ಹೇಳ್ಬೇಕು ಅಂದ್ರೆ ಪ್ರತಿಯೊಬ್ಬರದೂ ಅವರದೇ ಆದ ಒಂದು ತಲೆ ಪ್ರತಿಷ್ಟೆ. ಅಂತ ಮಹಾಸಮಾಗಮದ 2  ಗಂಟೆಗಳ ಕಾಲದ ರೌಂಡ್ ಟೇಬಲ್ ಮೀಟಿಂಗ್ ಏ ಈ ದಶಮುಖ.

ಹುಡುಗನೊಬ್ಬ ತನ್ನ ತಂದೆಯನ್ನೇ ಕೊಂದ ಆರೋಪದ ಮೇರೆಗೆ ಬಂಧನಗೊಳಗಾಗುತ್ತಾನೆ. ಇದನ್ನು ಬಗೆಹರಿಸಲು ಬರುವ ಈ ಹತ್ತು ಜನರಲ್ಲಿ ಒಂಭತ್ತು ಜನ ಆರೋಪಿಯನ್ನು ಅಪರಾಧಿ ಎಂದರೆ ಕ್ರೇಜಿಸ್ಟಾರ್ ರವಿಚಂದ್ರನ್ ಮಾತ್ರ ಅವನನ್ನು ನಿರಪರಾಧಿಯೆಂದು ಹೇಳಿ ಕಥೆಗೆ ನಾಂದಿ ಹಾಡುತ್ತಾರೆ. ಚಿತ್ರ ಸಾಗುತ್ತ ಮಿಕ್ಕಿದ ಒಂಭತ್ತು ಜನರನ್ನು ತಮ್ಮ ವಾದದ ಮೂಲಕ ರವಿ ಹೇಗೆ ಕೇಸನ್ನೇ ಉಲ್ಟಾ ಹೊಡೆಸುತ್ತಾರೆ ಎಂದು ಚಿತ್ರಮಂದಿರದಲ್ಲಿ ನೋಡಿ. ಶ್ರೀಧರ್ ಸಂಭ್ರಮ್ ಸಂಗೀತ ಡಲ್ ಹೊಡೆದರೆ ಸಾಧು ಕೋಕಿಲ ಹಿನ್ನಲೆ ಸಂಗೀತ ಅಲ್ಲಲ್ಲಿ ಅವರ ಪ್ರತಿಭೆಗೆ ಕನ್ನಡಿ ಹಿಡಿಯುತ್ತದೆ. ಲಕ್ಷ್ಮಣ್ ರೆಡ್ಡಿಯ ಕತ್ತರಿ ಕೆಲಸ ಕೆಲವೆಡೆ ಕಳೆ ಕೊಡುತ್ತದೆ.

ರವಿ ಸರ್ ಜೊತೆ ದೇವರಾಜ್, ಅನಂತನಾಗ್, ದತ್ತಣ್ಣ, ಅವಿನಾಶ್, ಮಾಳವಿಕಾ, ಅಚ್ಯುತ್ ರಾವ್, ರವಿ ಕಾಳೆ ಇತರ ಜ್ಯೂರಿಗಳಾಗಿ ಅಭನಯಿಸಿದ್ದಾರೆ. ಬಹಳ ದಿನಗಳ ನಂತರ ಫೀಲ್ಡ್  ಗೆ ಬಂದಿರುವ ಸರಿತಾ ಅಭಿನಯ ಮರೆತಿಲ್ಲ. ಆರೋಪಿಯ ಪಾತ್ರದಲ್ಲಿ ಬಿರುಗಾಳಿ ಚೇತನ್ ಇದ್ದು, ಅವನ ಪ್ರೇಯಸಿಯಾಗಿ ಆಕಾಂಕ್ಷಾ ಮನ್ಸುಖಾನಿ ಇದ್ದಾರೆ.

ಮಾಥ್ಯೂ ರಾಜನ್ ರವರ ಕ್ಯಾಮೆರಗೆ  ಹೆಚ್ಚು ಕೆಲಸವಿಲ್ಲ. ಕಾರಣ ಬರಿಯ ನಾಲ್ಕು ಗೋಡೆಗಳ ಮಧ್ಯೆ ನಡೆಯುವ ಈ ಸಿನಿಮಾದಲ್ಲಿ  ತರ್ಕ ವಾದಗಳಿಗೆ ಹೆಚ್ಚು ಒತ್ತು . ಆದರೆ ಅದೇ ತರ್ಕಗಳಲ್ಲಿ ಹುರುಳಿಲ್ಲದಾಗ ಪ್ರೇಕ್ಷಕನಿಗೆ ನಿರಾಸೆಯಾಗತ್ತೆ. ಉದಾಹರಣೆಗೆ - ಆರೋಪಿಯ ಪಾತ್ರದ ಚೇತನ್ ಅವನ ತಂದೆಯ ಪಾತ್ರದಲ್ಲಿ ಬರುವ ಹಿರಿಯ ನಟ ಸುದರ್ಶನ್ ಇವರಿಬ್ಬರ ನಡುವೆ ಎತ್ತರದ ಅಂತರ ಕೇಸಿನ ಪ್ರಮುಖ ಸಾಕ್ಷಿಗಳಲ್ಲಿ ಒಂದು. ಆದರೆ ಅದೇ ಚೇತನ್ 5 ' 4 " ಮತ್ತು ಸುದರ್ಶನ್ 6 ' 2  "  ಎತ್ತರ ಇದ್ದಾರೆ ಎನ್ನುವುದು ಚೇತನ್ ನನ್ನು ನೋಡಿದ ಯಾವ ದಡ್ಡನೂ ನಂಬುವುದಿಲ್ಲ.   ಚಿತ್ರ ನಿಜವಾಗಲು ಒಂದು ವಿಭಿನ್ನ ಪ್ರಯತ್ನವಾದರೂ ಕನ್ನಡ ಪ್ರೇಕ್ಷಕನ ನಾಡಿಗೆ ತಕ್ಕುದಾದದಲ್ಲ.

ದಶಮುಖ ಎಂಥಹಾ ತಲೆನೋವು ಮುಲಾಮಿಗಾದರೂ  ಸವಾಲ್ ಒಡ್ಡುತ್ತೆ  ಅಂತಾನೆ 
ಮೊದಲ ದಿನದ  ಪ್ರೇಕ್ಷಕ..  

~ ಹೊಗೆ

1 ಕಾಮೆಂಟ್‌: