"VILLAIN" KANNADA MOVIE REVIEW

ಸಂಭಾಷಣೆ ಹೀರೋ.. ಮಿಕ್ಕಿದ್ದೆಲ್ಲಾ 'ವಿಲನ್'.
ನಾಯಕ 'ಟಿಪ್ಪು' (ಆದಿತ್ಯ)ರೌಡಿ. ನಾಯಕಿ ಅನು (ರಾಗಿಣಿ) 
ಈ ರೌಡಿಯ ಪರಿಚಯವೇ ಇಲ್ಲದಿದ್ದರೂ ಹೆಸರನ್ನು ಉಪಯೋಗಿಸಿ ಅವಳ 'ಮಾನ'ವನ್ನು ಏರಿಯಾ ಹುಡುಗರಿಂದ 
ರಕ್ಷಿಸಿಕೊಳ್ಳುತ್ತಿರುತ್ತಾಳೆ. ನಂತರ ಟಿಪ್ಪು ಅವಳಿಗೆ ಬೇರೆ ಹೆಸರಿನಲ್ಲಿ ತನ್ನ ಪರಿಚಯ ಮಾಡಿಕೊಂಡು ಸ್ನೇಹಮಾಡುತ್ತಾನೆ. ಸ್ನೇಹ ಪ್ರೀತಿಯಾಗಲು ಅಲ್ಲೊಂದು ಇಂಪಾದ ಹಾಡು - 'ಕಣ್ಣಲೆ ಸಂಭಾಷಣೆ'. ನಾಯಕಿಗೊಬ್ಬ ತಮ್ಮ.
ಅವನು ಕ್ರೈಂ ರಿಪೋರ್ಟರ್. ಕೊಲೆಯೊಂದನ್ನು ತನ್ನ ಕ್ಯಾಮೆರದಲ್ಲಿ ಸೆರೆಹಿಡಿದು ಕೊಲೆಪಾತಕರಾದ ರಾಜಕಾರಣಿ (ಶೋಭರಾಜ್) ಮತ್ತು ಜಮೀಲ್ (ರಂಗಾಯಣ ರಘು) ರವರ ಕೆಂಗಣ್ಣಿಗೆ ಗುರಿಯಾಗಿ ಸಾಯುತ್ತಾನೆ.
ಟಿಪ್ಪು ತನ್ನ ಬಾಮೈದನನ್ನು ಕೊಂದವರ ವಿರುದ್ಧ ಸಾಕ್ಷಿ ಹೇಳಲು ಅಣಿಯಾಗುತ್ತಿದ್ದರೆ, ಇಲ್ಲಿ ನಾಯಕಿ ಅನುಗೆ ತನ್ನ ಪ್ರಿಯತಮ ದೊಡ್ಡ ರೌಡಿ ಎಂದು ತಿಳಿಯುತ್ತದೆ. ನಂಬಿಕೆ ದ್ರೋಹದ ಆರೋಪದ ಮೇಲೆ ಟಿಪ್ಪುವನ್ನು ದೂರಮಾಡಿದಾಗ ಅಲ್ಲೊಂದು ಕೈಲಾಶ್ ಖೇರ್ ಧ್ವನಿಯಲ್ಲಿ
ವಿರಹ ಗೀತೆ. ಕೊನೆಗೆ ಅವರಿವರಿಂದ ಪ್ರೀತಿ ಪಾಠ ಕಲಿತು ನಾಯಕಿ ಮನಸುಬದಲಾಯಿಸುತ್ತಾಳೆ. ಇತ್ತ ನಾಯಕ ಕೆಟ್ಟವರನ್ನು ಕ್ಲೈಮ್ಯಾಕ್ಸ್ ಫೈಟಲ್ಲಿ  ಮಟ್ಟಹಾಕಿ ಪೋಲೀಸರಿಗೊಪ್ಪಿಸಿ
ಅವರಿಗೆ ಶಿಕ್ಷೆ ಕೊಡಿಸುತ್ತಾನೆ. ಇಲ್ಲಿಗೆ ಮುಕ್ತಾಯ ಮತ್ತೊಂದು ಕನ್ನಡ ಚಿತ್ರ.
ಚಿತ್ರದಲ್ಲಿ ಚೆನ್ನಾಗಿದೆ ಅಂತ ಒಂದಂಶ ಇದ್ದರೆ ಅದು ಎಂ.ಎಸ್.ರಮೇಶ್  ಅವರ ಸಂಭಾಷಣೆ. ಅವರ ದೈತ್ಯ ಪ್ರತಿಭೆಗೆ ಎಂದೂ ಮುಪ್ಪಿಲ್ಲ. ಷ್ಟನ್ನು ಬಿಟ್ಟರೆ ಚಿತ್ರದಲ್ಲಿ ಉಪ್ಪಿಲ್ಲ. ಸ್ವಲ್ಪ ಖಾರ ತುಂಬಲು ಒಂದು ಐಟಂ ನೃತ್ಯ ಮತ್ತು ರಾಗಿಣಿ 'ಚರ್ಮೋ'ತ್ಸವವಿದೆ. ನಿರ್ದೇಶಕ ಎಂ.ಎಸ್.ರಮೇಶ್  'ವಿಲನ್' ಅಂತ ಚಿತ್ರಕ್ಕೆ ಹೆಸರಿಟ್ಟು ನಾಯಕನ ಕೈಲಿ ಮ್ಯಾಂಡಲಿನ್, ಮೌತ್ ಆರ್ಗನ್ ಹಿಡಿಸಿದ್ದಾರೆ. ಬೀದಿಯಲ್ಲಿ  ನಿಂತು ಪ್ರೀತಿಗಾಗಿ ಅಂಗಲಾಚುವಂತೆ ಮಾಡಿದ್ದಾರೆ. ಒಂದೂ ಆಯುಧವಿಲ್ಲದೆ ಮರದ ದಿಮ್ಮಿಗಳಲ್ಲೇ ಹೊಡೆದಾಡಿಸಿದ್ದಾರೆ.
ಒಟ್ಟಿನಲ್ಲಿ ಹೆಸರಿಗೆ ತಕ್ಕಂತ ಚಿತ್ರವಾಗಿರದೆ ಇಂತ ಚಿತ್ರಕ್ಕೆ ಅತ್ಯವಶ್ಯಕವಾದ ಪಾತ್ರ ವಿಜ್ರುಂಭಣೆಯೇ  ಇಲ್ಲದೆ ನೀರಸ ನಿರೂಪಣೆ, ಸಾದಾ ಕಥೆ ಹೆಣೆದ ನಿರ್ದೇಶಕನೇ ಈ ಚಿತ್ರದ ವಿಲನ್ ಇರಬಹುದು.
ಹಾಡುಗಳನ್ನು ಬೇಕಾದ ಬೇಡವಾದ ಎಲ್ಲ ಕಡೆ ತುರುಕಲಾಗಿದೆ. ನಗಿಸುವ ವ್ಯರ್ಥ ಪ್ರಯತ್ನ ಮಾಡಲಾಗಿದೆ. ತಾಂತ್ರಿಕವಾಗಿ ಕೂಡ ಚಿತ್ರದಲ್ಲಿ ಏನು ಇಲ್ಲ.  ಕಥೆಯ ತಿರುವಿಗೆ ಕಾರಣವಾಗುವ 'ರೆಕಾರ್ಡೆಡ್ ಕ್ಯಾಸೆಟ್'ನ್ನು ನಂತರದಲ್ಲಿ ಮರೆತಿದ್ದಾರೆ. ಈ ರೀತಿ ಹಲವು ನ್ಯೂನ್ಯತೆ ವೈಫಲ್ಯತೆಗಳ ನಡುವೆ ಈ ಚಿತ್ರವನ್ನು ನೀವು ನೋಡಲೆಬೇಕೆಂದರೆ ಅದು ಚಿತ್ರದುದ್ದಕ್ಕೂ ಇರುವ ತೂಕದ ಸಂಭಾಷಣೆಗಾಗಿ ಮಾತ್ರ.

~ಹೊಗೆ

BREAKING NEWS - KANNADA MOVIE REVIEW

ಬ್ರೇಕಿಂಗ್ ನ್ಯೂಸ್: 'ಮೇಷ್ಟ್ರು' ಪಾಠ ಬೋರ್ ಹೊಡ್ಸಲ್ಲ..
ರಾಜಕಾರಣಿ ಮುದ್ದೆ ತಿಂದದ್ದು, ಸಿನಿಮಾ ತಾರೆಯ ಮಗು ಒದ್ದೆ ಮಾಡಿದ್ದು,  ಈ ತರದ ಕ್ಷುಲ್ಲಕ ವಿಷಯಗಳನ್ನೆಲ್ಲಾ ಸುದ್ದಿ ಮಾಡಿ ಬೆಳಗಿಂದ ರಾತ್ರಿ 'ಬ್ರೇಕಿಂಗ್ ನ್ಯೂಸ್' ಬಿತ್ತರಿಸುವ ಮಾಧ್ಯಮಗಳಿಗೆ ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಚುಚ್ಚು ಮದ್ದು ನೀಡಿದ್ದಾರೆ.
ಅದು ತಮ್ಮ ಚಿತ್ರದ 'ಬ್ರೇಕಿಂಗ್ ನ್ಯೂಸ್'ನ  ಹಾಸ್ಯ ಮಿಶ್ರಿತ ನಿರೂಪಣೆಯ ಮೂಲಕ.

ಕ್ಷಣಕ್ಕೊಂದು ಸುದ್ದಿಯಲ್ಲದ ಸುದ್ದಿ ಸ್ಫೋಟಿಸಿ ಸಾಮಾನ್ಯ ಜನರ ಸಣ್ಣ ಪುಟ್ಟ ಜಗಳಗಳನ್ನೇ ಬಂಡಾಯವಾಗಿಸಿಕೊಂಡು  'ಟಿ.ಆರ್.ಪಿ' ಎಂಬ ಪೆಡಂಭೂತದ ಹಿಂದೆ ಬಿದ್ದಿರುವ ಈಗಿನ ಕೆಲವು ಮಾಧ್ಯಮಗಳಿಗೆ ಈ ಚಿತ್ರ ಒಂದು ಉತ್ತಮ ಸಂದೇಶ. ಅದಕ್ಕಿಂತ ಹೆಚ್ಚಾಗಿ  ಬ್ರೇಕಿಂಗ್ ನ್ಯೂಸ್ ಎಂದ ಮಾತ್ರಕ್ಕೆ ಬಾಯಿಬಿಟ್ಟುಕೊಂಡು ನೋಡುವ ಮಹಾಜನಗಳಿಗೆ ಮೇಷ್ಟ್ರು ವಿಭಿನ್ನ ರೀತಿಯಲ್ಲಿ ತಿಳಿಹೇಳಿದ್ದಾರೆ.ಆದರೂ ಈ 'ಬ್ರೇಕಿಂಗ್ ನ್ಯೂಸ್' ಯುಗದಲ್ಲಿ,  ಕ್ಲೈಮ್ಯಾಕ್ಸ್ ನಲ್ಲಿ ಪೋಲಿಸ್ ಬರೋದು, ಕೊನೆಗೆ ನಾಯಕ ನಾಯಕಿ ಸುಸೂತ್ರವಾಗಿ  ಮದುವೆಯಾಗೋದು ಇವೆಲ್ಲ ಅನಾದಿಕಾಲದ ಚಿತ್ರಗಳಿಂದ ನೋಡಿ ನಮಗೆ ಬೇಸರವಾಗಿದೆ ಅನ್ನೋದು ನಿರ್ದೇಶಕರು ಮರೆತಿದ್ದಾರೆ.
ಅರ್ಜುನ್ (ಅಜಯ್ ರಾವ್) 'ಸಕಾಲ ಟಿವಿ'ಯ ಪ್ರೋಗ್ರ್ಯಾಮ್ ಹೆಡ್. ರಾಗಿ ಮುದ್ದೆ, ಕಬ್ಬಡಿ ಮುಂತಾದ ದೇಶೀಯ ವಸ್ತುಗಳ ಮೇಲೆ ಚಾನೆಲ್ ನಲ್ಲಿ ಕಾರ್ಯಕ್ರಮ ಮಾಡುತ್ತಿದ್ದ ಅವನಿಗೆ ಚಾನೆಲ್ ಮ್ಯಾನೇಜರ್ 'ಟಿ.ಆರ್.ಪಿ'  ಹೆಚ್ಚಿಸುವ ಕ್ರಿಕೆಟ್, ಸಿನಿಮಾ, ಸ್ಕ್ಯಾಂ ಗಳ ಮೇಲೆ ಕಾರ್ಯಕ್ರಮ ಮಾಡಲಿಲ್ಲವೇಕೆಂದು ಅವನಿಗೆ ಛೀಮಾರಿ ಹಾಕಿ ಅವನ ತಲೆಯಲ್ಲಿ 'ಸೆನ್ಸೇಷನಲ್ ನ್ಯೂಸ್'  ಎಂಬ ಬೀಜವನ್ನು ಬಿತ್ತುತ್ತಾರೆ. 

ಅದೇ ಸಂದರ್ಭದಲ್ಲಿ ಲೋಕಾಯುಕ್ತ ಸೋಮಶೇಖರ್ (ಅನಂತ್ ನಾಗ್) ರಾಜ್ಯದ ದೊಡ್ಡ ಹಗರಣಗಳನ್ನು ಬಯಲುಮಾಡಿರುತ್ತಾರೆ. ಅವರನ್ನು ಎಕ್ಸ್ಕ್ಲೂಸಿವ್  ಸಂದರ್ಶನ  ಮಾಡಿ 'ಸೆನ್ಸೇಷನಲ್ ನ್ಯೂಸ್'  ತರ್ತೀನಿ ಅಂತ ಹೊರಟ ಅರ್ಜುನ್ ಗೆ ಯಡವಟ್ಟಾಗಿ ಕೆಲಸ ಕಳೆದುಕೊಳ್ಳುತ್ತಾನೆ. ಆ ಯಡವಟ್ಟಿಗೆ ಕಾರಣವಾದ ಸ್ವತಹ ಲೋಕಾಯುಕ್ತರ ಮಗಳು 'ಶ್ರದ್ಧಾ'ಳನ್ನು  (ರಾಧಿಕ ಪಂಡಿತ್) ಅಪಹರಿಸಿ ನಿಗೂಢ ಜಾಗದಲ್ಲಿ ಅವಳನ್ನು ಬಚ್ಚಿಟ್ಟು 'ಸಕಾಲ ಟಿವಿ'ಗೆ ದೊಡ್ಡ ಸುದ್ದಿ ಕೊಟ್ಟು ಮನೆಮಾತಾಗುತಾನೆ. ಇತ್ತ ಲೋಕಾಯುಕ್ತರ ಮಗಳನ್ನು ಖದೀಮರು ಅಪಹರಿಸಿ 'ಡಿನೋಟಿಫಿಕೇಶನ್ ' ಕೇಸ್ ಖುಲಾಸೆ ಮಾಡಲು ಬೇಡಿಕೆ ಇಡುತ್ತಾರೆ. ಆ ಹೊತ್ತಿಗಾಗಲೇ ಅರ್ಜುನ್ - ಶ್ರದ್ಧಾ ನಡುವೆ ಪ್ರೇಮಾಂಕುರವಾಗಿ ಅರ್ಜುನನೇ ಮುಂದೆ ನಿಂತು ಅವಳನ್ನು ಖದೀಮರಿಂದ  ಬಿದಿಡಿಸುವ ಹೊತ್ತಿಗೆ ಪ್ರೇಕ್ಷಕನಿಗೆ 'ಬ್ರೇಕಿಂಗ್ ನ್ಯೂಸ್' ಕೊಂಚ ಸಪ್ಪೆಯಾಗಿಹೋಗಿರುತ್ತದೆ.

ಅಜಯ್ ರಾವ್ ನಿಮ್ಮ ಮನೆಮಗನ ಹಾಗೆ ಕಂಡರೆ ಅದು ಅವರ ಅಭಿನಯಕ್ಕೆ ಸಂದ ದೊಡ್ಡ ಪ್ರಶಸ್ತಿ. ರಾಧಿಕ ಪಂಡಿತ್ ಗೆ ಈ ಪಾತ್ರ ತುಂಬಾ ಸಲೀಸು. ಅನಂತ್ ನಾಗ್ 'ಸಂತೋಷ್ ಹೆಗ್ಡೆ'ಯ ಅಪರಾವತಾರ. ಅರುಣ್ ಸಾಗರ್ ಚಿತ್ರದಲ್ಲಿ ನಗ್ನ ಚಿತ್ರಕಾರನಾಗಿ ಒಂದು ಪ್ಲ್ಯಾಸ್ಟಿಕ್ ಸಾಕು ಮಾನ ಮುಚ್ಚಲು ಎಂದು ತಮ್ಮ ಕಲಾತ್ಮಕತೆ  ತೋರಿಸಿದ್ದಾರೆ. ರಂಗಾಯಣ ರಘು ಗೆ ಹೆಚ್ಚಿನ ಸ್ಕೋಪ್ ಇಲ್ಲ.

ಮನೋಮೂರ್ತಿ ಗೆ ಸಹಾಯಕರಾಗಿ ಮುಂಗಾರುಮಳೆ ಚಿತ್ರಕ್ಕೆ  ಅತ್ಯುತ್ತಮ ಸಂಗೀತ ಜೋಡಿಸಿದ್ದ ಸ್ಟೀಫನ್ ಪ್ರಯೋಗ್ ರ ಸಂಗೀತದಲ್ಲಿ 'ಓಡಿ ಹೋಗೋಣ' ಮತ್ತು 'ಸಂಬಂಧ  ಸನಿರಿಸ'  ಗೀತೆಗಳು ನೆನಪಿನಲ್ಲಿರುತ್ತದೆ. 'ಸಂಬಂಧ  ಸನಿರಿಸ'  ಹಾಡಿನಲ್ಲಿ ಮೋಹನ್ ಬಿ ಕೆರೆಯ ಕಲೆಗೆ ಬೆಲೆ, ಕೆಕೆ ಕ್ಯಾಮೆರಾ ಕೆಲಸಕ್ಕೆ ಅವರಿಗೆ ಚಾಮರ ಬೀಸಲೇಬೇಕು. ಬಸವರಾಜ್ ಅರಸ್ ಎಡಿಟಿಂಗ್ ನಿರ್ದೇಶಕನ ಆಣತಿಯಂತೆ.

ಇಂತಹ ಗಂಭೀರ ವಿಷಯದ ಬಗ್ಗೆ ಹೆಚ್ಚು ಲೆಕ್ಚರ್ ಕೊಡದೇ ಹಾಸ್ಯದ ಅಲೆಯಲ್ಲೇ ಸಾಗುವ ಚಿತ್ರಕಥೆಯಲ್ಲಿ ಕೆಲವು ಲೋಪದೋಷಗಳಿವೆ. ಹಾಸ್ಯ ಸಂಭಾಷಣೆಗಳು  ಎಲ್ಲ ಕಡೆ ನಿಮಗೆ ನಗು ತರಿಸುವುದಿಲ್ಲ. ಅಭಿನಯದ ಮೂಲಕವೆ ಕಾಮಿಡಿ ತೆಗೆಯಲು ಕನ್ನಡದಲ್ಲಿ ಚ್ಯಾಪ್ಲಿನ್, ಬೀನ್ ಗಳಿಲ್ಲವಲ್ಲ.
ಫೈಟ್ಸ್, ಹಾಡುಗಳು ಕೇವಲ ಕಮರ್ಷಿಯಲ್ ಕಾರಣಗಳಿಗೆ ತುರುಕಿದಂತಾಗಿ 'ನಾಗತಿ'ತನ ಕಳೆದು ಹೋಗಿದೆ. ಚಿತ್ರದಲ್ಲಿ ರೈತರ ಜಮೀನನ್ನು ಕಿತ್ತುಕೊಳ್ಳುವ ಬಂಡವಾಳಶಾಹಿಗಳಿಗೆ ಧಿಕ್ಕಾರ ಕೂಗಿಸುವ  ಮೇಷ್ಟ್ರುಅದೇ ಚಿತ್ರದ ಟೈಟಲ್ ಕಾರ್ಡ್ ನಲ್ಲಿ  'ನೈಸ್'ಆಗಿ ಕೆಲವರಿಗೆ 
ಧನ್ಯವಾದ ಹೇಳುವುದು ಎಷ್ಟರ ಮಟ್ಟಿಗೆ ಸರಿ ಅಂತ ಜನ ನಿರ್ಧರಿಸಲಿ.

ಇಷ್ಟು ದಿನ ಬರಿ ಟಿವಿಯಲ್ಲಿ 'ಬ್ರೇಕಿಂಗ್ ನ್ಯೂಸ್' ಕಾಟ ನೋಡುತ್ತಿದ್ದ ನಿಮಗೆ ಬೆಳ್ಳಿ ಪರದೆಯ ಮೇಲೆ 'ಬ್ರೇಕಿಂಗ್ ನ್ಯೂಸ್' ಆಟ ಇಷ್ಟವಾಗಬಹುದು!!




~ಹೊಗೆ

KATAARIVEERA SURASUNDARAANGI REVIEW

ಥಳಥಳಿಸುವ 3ಡಿಯಲ್ಲಿ ನಳನಳಿಸುವ ಸಂಭಾಷಣೆಯ ಮಧ್ಯೆ ಒಂದು ಬಣಗುಟ್ಟುವ ಕಥೆ..
ಕುರ್ಚಿಗಾಗಿ ಕದನ, ದಿಡ್ಹೀರ್ ಚುನಾವಣೆ, ನಂಗಾನಾಚ್, ಅಧಿಕಾರಿಗಳ ವರ್ಗಾವಣೆ, ಪ್ರೀತಿಯ ನಡುವೆ ಬರುವ ಹಿರಿಯರ ಪ್ರತಿಷ್ಠೆಯ ಪ್ರಶ್ನೆ, ಪ್ರೇಮಿಗಳ ಹೋರಾಟ ಇದೆಲ್ಲಾ ಭೂಲೋಕದಲ್ಲಲ್ಲದೆ ಪರಲೋಕದಲ್ಲೂ ಇದೆ ಎಂದು ತೋರಿಸಿ
ಎಲ್ಲೇ ಹೋದರು ಈ ಸಾಮಾಜಿಕ ಪಿಡುಗುಗಳು ತಪ್ಪಿದಲ್ಲ ಎಂದು ಮಾರ್ಮಿಕವಾಗಿ ಹೇಳುತಾರೆ ಸ್ವತಃ ಚಿತ್ರಕಥೆ-ಸಂಭಾಷಣೆ  ಬರೆದಿರುವ ಉಪೇಂದ್ರ. ಅವರ ಬಾಯಿಂದ ಬರುವ ಪುಂಖಾನುಪುಂಖ ಪದಪುಂಜಗಳು ಕಿವಿಗೆ ಹಿತ, ಮನಸ್ಸಿಗೆ ಮುದ ಕೊಟ್ಟು ಬುದ್ಧಿಗೆ ಚುರುಕು ಮುಟ್ಟಿಸುವುದನ್ನು ಮರೆಯುವುದಿಲ್ಲ. ಆದರೂ ಚಿತ್ರದಲ್ಲಿ ಹೇಳಿಕೊಳ್ಳುವಂಥ ಕಥೆಯೇ ಇಲ್ಲ. ಎರಡನೆಯ ಭಾಗದಲ್ಲಿ 3ಡಿ ಎಫೆಕ್ಟ್ಸ್ ಹುಡುಕಿದರೂ ಸಿಗುವುದಿಲ್ಲ.


ಭೂಲೋಕದಲ್ಲಿ ಉಪೇಂದ್ರ (ಉಪೇಂದ್ರ) 'ಅನಿಸಿದ್ದು ಮಾಡುವ ಪುಣ್ಯಾತ್ಮನಾಗಿ' ಅವನಿಗೆ ಬೇಕಾದ ಕೆಲಸಗಳನ್ನು ಮಾಡುತ್ತಾ ಕೊನೆಗೊಮ್ಮೆ ಡಾನ್ ಆಗುವ ಹೆಬ್ಬಯಕೆಗೆ ನೀರೆರೆದು ಪೋಷಿಸಿ ದೊಡ್ಡ ಡಾನ್ ನಂತೆ ಪೋಸ್ ಕೊಡುತ್ತಿರುವಾಗ ಆಕಸ್ಮಿಕ ಸಾವನ್ನಪ್ಪಿ ಇಹಲೋಕ ತ್ಯಜಿಸುತ್ತಾನೆ. ಪಾಪ-ಪುಣ್ಯಗಳೆರಡನ್ನು  ಸಮಾನವಾಗಿ ಮಾಡಿ ಯಮನ ತಲೆಗೆ ಹುಳ ಬಿಟ್ಟು 15 ದಿನ ನರಕ , 15 ದಿನ ಸ್ವರ್ಗ ದರ್ಶನದ 'ಶಿಕ್ಷೆ' ಪಡೆಯುತ್ತಾನೆ. ಸ್ವರ್ಗದಲ್ಲಿ ಸುರಸುಂದರಾಂಗಿ ಇಂದ್ರಜೆಗೆ (ರಮ್ಯ)  ಮರುಳಾಗಿ ಅವಳನ್ನು ಮೋಹಿಸಿ ಬಲೆಗೆ ಹಾಕಿಕೊಳ್ಳುತ್ತಾನೆ. ಇವರಿಬ್ಬರ ಮದುವೆಗೆ ಯಮೇಂದ್ರರು ಅಡ್ಡಿ ಬಂದಾಗ ಭೂಲೋಕಕ್ಕೇ ಓಡಿ ಬರುವ ತೀರ್ಮಾನಕ್ಕೆ ಬಂದಾಗ ಅಲ್ಲೊಂದು ಫೈಟ್. ಹೀಗೆ ಮಾಡುವಾಗ ಹುಲುಮಾನವ ಉಪೇಂದ್ರ ಯಮನನ್ನು ಗೆಲ್ಲುವುದಾದರೂ ಹೇಗೆ ಎಂಬುದೇ ಕಥೆಯ ಸ್ವಾರಸ್ಯ. ಆದರೆ ಸ್ವಾರಸ್ಯವನ್ನ ಹಿಡಿದಿಡುವಲ್ಲಿ ನಿರ್ದೇಶಕ ಸುರೇಶ್ ಕೃಷ್ಣ (ಬಾಷಾ,ಕದಂಬ ಖ್ಯಾತಿ) ಸೋಲುತ್ತಾರೆ.
ಚಿತ್ರದಲ್ಲಿ ಟಿಪಿಕಲ್ ಉಪೇಂದ್ರ ಅಭಿನಯವಿದೆ.ರಮ್ಯ ಸ್ವತಃ  ಡಬ್ ಮಾಡದೇ ಇರುವುದು ಕನ್ನಡಿಗರಿಗೆ ಸಂತಸದ ಸುದ್ದಿ.  ಅಂಬರೀಷ್ ಯಮನಾಗಿ ಚಿತ್ರದ ಸ್ಟಾರ್ ವಾಲ್ಯೂ ಹೆಚ್ಚಿಸಿದರೂ, ಅವರ ಸಂಭಾಷಣೆಯಲ್ಲಿ ಅದುಲುಬದಲಾಗುವ  'ಹಕಾರ ಅಕಾರ'ಗಳ ಬಗ್ಗೆ ಅವರಷ್ಟೇ ದೊಡ್ಡ ಮನಸ್ಸಿನ ಪ್ರೇಕ್ಷಕ ಮರೆತುಬಿಡುವುದು ಲೇಸು.
ಕನ್ನಡಕ್ಕೆ ಪ್ರಥಮ ಸಂಪೂರ್ಣ 3ಡಿ ಚಿತ್ರ ತರುವಲ್ಲಿ ವೇಣು ರವರ ಕ್ಯಾಮೆರ ಕೆಲಸಕ್ಕೆ ಜೈ ಅನ್ನಲೇಬೇಕು. ಅವರಿಗೆ ಈ ವರ್ಷದ ರಾಜ್ಯ ಪ್ರಶಸ್ತಿ ಬರುವ ಎಲ್ಲ ಸಾಧ್ಯತೆಗಳಿವೆ. 
ಗ್ರಾಫಿಕ್ಸ್ ಕೆಲಸದ ಸ್ವರ್ಗ ನರಕ ಲೋಕಗಳನ್ನು 3ಡಿಯಲ್ಲಿ ನೋಡುವುದೇ ಒಂದು ಹಬ್ಬ. ಕಳೆದ ವರ್ಷ 'ಸಂಜು ವೆಡ್ಸ್ ಗೀತ' ಗೆ ಅತ್ಯುತ್ತಮ ಸಂಕಲನ  ಪ್ರಶಸ್ತಿ ಪಡೆದ ಜಾನಿ ಹರ್ಷ ಮತ್ತೊಮ್ಮೆ ಕೈಚಳಕ ತೋರಿಸಿದ್ದಾರೆ.
'ಝುಂಝುಂತಾ' ಹಾಡು, ಹಿನ್ನಲೆ ಸಂಗೀತಕ್ಕೆ ಹರಿಕ್ರಿಷ್ಣಗೆ ಒಂದು ಚಪ್ಪಾಳೆಯಿರಲಿ. 
ಇಷ್ಟು ದೊಡ್ಡ ಬಜೆಟ್ ಚಿತ್ರಕ್ಕೆ ಬೆನ್ನೆಲುಬಾಗಿ ನಿಂತ ನಿರ್ಮಾಪಕ ಮುನಿರತ್ನಗೆ ದೊಡ್ಡ ಸಲಾಮು. ಸದಾ ಹೊಸತು ಯೋಚಿಸುವ ಉಪೇಂದ್ರ ರವರಿಗೆ ಅಭಿನಂದನೆ.
ಸ್ವಾರಸ್ಯ ಕಥಾನಕ ಇದ್ದಿದ್ದರೆ ಈ 'ಕಠಾರಿ ವೀರ' ಪ್ರತಿಯೊಬ್ಬರೂ ನೋಡಲೇಬೇಕಾದ ಚಿತ್ರವಾಗ್ತಿತ್ತು. 
~ಹೊಗೆ

ANNA BOND MOVIE REVIEW

ಮೊದಲಾರ್ಧ 'ಅಣ್ಣಾ' ಸೂಪರ್.. ದ್ವಿತೀಯಾರ್ಧ ಢಂ ಢಂ ಢಮಾರ್ !!

"ಕಾಮ ಖ್ಯಾತಿ ಕಾಸು ಇದೇ ಜೀವನ" - ಬಾಂಡ್ ಚಿತ್ರದ ಮೊದಲಾರ್ಧದ ಯಶಸ್ಸಿಗೆ ಇಂತಹ  ಕಚಗುಳಿ ಸಂಭಾಷಣೆಯೇ ಸೋಪಾನ. ಸೂರಿ ಸಂಭಾಷಣೆ ಚಿತ್ರದ ನಾಯಕ, ಚಿತ್ರಕಥೆ ಸೆಕಂಡ್ ಹೀರೋ.. ಆದರೆ ಖಳನಾಯಕನ ಪಾತ್ರದಲ್ಲಿರುವುದು ಇಬ್ಬರು - ಕಥೆ ಮತ್ತು ಕ್ಲೈಮ್ಯಾಕ್ಸ್.



ಬಾಂಡ್ ರವಿ (ಪುನೀತ್)  ಕರಾಟೆ, ಸಮಾಜ ಸೇವೆ, ಉಳುಕು ತೆಗೆಯುವುದು ಇವೆ ಅವನ ಕಸುಬಲ್ಲದ ಕಸುಬು. ಅವನಿಗೆ ಚಪಾತಿಬಾಬು (ರಂಗಾಯಣ ರಘು) ಅಂತ ಅಪಾಪೋಲಿ ಸಾಥ್ . ಮೀರ (ಪ್ರಿಯಮಣಿ) ಮತ್ತು ದಿವ್ಯ (ನಿಧಿ) ಡಾಕ್ಯುಮೆಂಟರಿ ಮಾಡಲು ಬಾಂಡ್ ರವಿಯ ಊರಿಗೆ ಬರುತ್ತಾರೆ. ಮೀರ ಳ ನಗುವಿಗೆ  ಬಾಂಡ್ ರವಿ ಕ್ಲೀನ್ ಬೌಲ್ಡ್. ಆ ಊರಿನ ಬಾನಮತಿ, ದೆವ್ವ ಮತ್ತು ಇತರ ಮೂಢನಂಬಿಕೆಗಳ ಮೇಲೆ ಡಾಕ್ಯುಮೆಂಟರಿ ಮಾಡುವಾಗ ಬರುವ ಹಾಸ್ಯದ ಸನ್ನಿವೇಶಗಳು ನಕ್ಕು ನಕ್ಕು ಸುಸ್ತುಪಡಿಸುತ್ತದೆ.
ಕಥೆ ಮುಂದೆ ಸಾಗುತ್ತ ಖಳನಾಯಕನ ಚಾರ್ಲಿ (ಜಾಕಿ ಶರಫ್) ಪ್ರವೇಶ. ಅವನ ದ್ವೇಷಕ್ಕೆ ಮೀರಳನ್ನು ಅಪಹರಿಸಿದಾಗ ಬಾಂಡ್ ರವಿ, ಅಣ್ಣ ಬಾಂಡ್ ಆಗಿ ಶತ್ರುಗಳನ್ನು ಸದೆಬಡಿಯುತ್ತಾನೆ. ಚಾರ್ಲಿ ಏಕೆ ಮೀರಾಳನ್ನು ಅಪಹರಿಸುತ್ತಾನೆ ಎಂದು ನೀವು ಚಿತ್ರಮಂದಿರದಲ್ಲಿ ನೋಡಿ.

ಡಿಫರೆಂಟ್ ಡ್ಯಾನಿ, ರವಿವರ್ಮ ಒಬ್ಬರಿಗೊಬ್ಬರು ಪಂದ್ಯ ಕಟ್ಟಿದವರಂತೆ ಸಾಹಸ ದೃಶ್ಯಗಳನ್ನು ಮಾಡಿಸಿದ್ದಾರೆ. ಹರಿಕೃಷ್ಣ ಸಂಗೀತ ಜಾಕಿಯ ಮಟ್ಟಕ್ಕಲ್ಲದಿದ್ದರೂ ಖುಷಿ ಕೊಟ್ಟು ಕುಣಿಸುತ್ತದೆ. ಸತ್ಯ ಹೆಗಡೆ ಎಂಬ ಮಾಂತ್ರಿಕ ಇಲ್ಲದಿದ್ದರೆ ಈ ಚಿತ್ರ ಡಲ್ ಆಗ್ತಿತ್ತೋ ಏನೋ ಎನ್ನುವಷ್ಟರ ಮಟ್ಟಿಗೆ ಕ್ಯಾಮೆರ ಕೆಲಸ ಮಾಡಿದ್ದಾರೆ. ದೀಪುವಿನ ಸಂಕಲನ ಕುದುರೆಯಷ್ಟೇ ವೇಗಭರಿತ. ಇಮ್ರಾನ್ ನೃತ್ಯ ಒಂದೊಂದು ಹಾಡಿನಲ್ಲೂ ವಿಭಿನ್ನ. ಒಟ್ಟಿನಲ್ಲಿ ಈ ಚಿತ್ರ ತಾಂತ್ರಿಕ ಕುಶಲತೆಯ ಔನ್ನತ್ಯದಲ್ಲಿದೆ.

ಅಪ್ಪು ಸಾಹಸದಲ್ಲಿ ಹಿಂದೆಂದಿಗಿಂತ ಉತ್ತಮ. ಪ್ರೀತಿಯನ್ನು ವ್ಯಕ್ತಪಡಿಸುವಾಗ ಮುಗ್ಧತೆ, ಸಾಹಸದಲ್ಲಿನ ವ್ಯಗ್ರತೆಗೆ ಯಾರೂ ಸಾಟಿಯಿಲ್ಲ. ಪ್ರಿಯಮಣಿ ಮೈಕೈ ತುಂಬಿದರೂ ಸುಂದರಿ. ನಿಧಿಯ ಪಾತ್ರ ಚಿಕ್ಕದಾದರೂ ತುಂಬಾ ಇಷ್ಟವಾಗುತ್ತಾಳೆ. ಜಾಕಿ ಶರಫ್ ಅಭಿನಯಿಸಿ ಅವರೇ ಡಬ್ ಮಾಡಿರುವುದು ಪ್ರಶಂಸನೀಯ. ರಂಗಾಯಣ ರಘು ಚಿತ್ರದ ನಿಜವಾದ ಪೈಸಾ ವಸೂಲ್.

ನಿರ್ದೇಶಕ ಸೂರಿ ಚಿತ್ರಕಥೆಯಲ್ಲಿನ ವೇಗದ ಕಡೆಗೆ ಗಮನೆ ಹರಿಸಿ ಕಥೆಯನ್ನೇ ಮರೆತಂತಿದೆ. ಆದರೂ ಅಪ್ಪು ಅಭಿಮಾನಿಗಳಿಗೆ ಮೋಸವಿಲ್ಲ. ದ್ವಿತೀಯಾರ್ಧದಲ್ಲಿ ಹೆಚ್ಚೇನೂ ಆಗದೆ ಬರಿ ಢಂ ಢಂ ಅಂತ ಸಾಹಸಕ್ಕೆ ಪ್ರಾಧಾನ್ಯತೆ. ಹಾಗಂತ ಯಾವುದೋ ಕಾಂಜಿ ಪೀಂಜಿ ಫೈಟ್ಸ್ ಅಲ್ಲ.. ಪ್ರತಿಯೊಂದು ಮೈನವಿರೇಳಿಸುವಂಥದ್ದು.
ಮೊದಲ ದಿನದ ಪ್ರೇಕ್ಷಕನ ಮಾತು - ಫಸ್ಟ್ ಹಾಫ್ ಬೆಂಕಿ, ಸೆಕಂಡ್ ಹಾಫ್ ಹೊಗೆ.

~ಹೊಗೆ