KATAARIVEERA SURASUNDARAANGI REVIEW

ಥಳಥಳಿಸುವ 3ಡಿಯಲ್ಲಿ ನಳನಳಿಸುವ ಸಂಭಾಷಣೆಯ ಮಧ್ಯೆ ಒಂದು ಬಣಗುಟ್ಟುವ ಕಥೆ..
ಕುರ್ಚಿಗಾಗಿ ಕದನ, ದಿಡ್ಹೀರ್ ಚುನಾವಣೆ, ನಂಗಾನಾಚ್, ಅಧಿಕಾರಿಗಳ ವರ್ಗಾವಣೆ, ಪ್ರೀತಿಯ ನಡುವೆ ಬರುವ ಹಿರಿಯರ ಪ್ರತಿಷ್ಠೆಯ ಪ್ರಶ್ನೆ, ಪ್ರೇಮಿಗಳ ಹೋರಾಟ ಇದೆಲ್ಲಾ ಭೂಲೋಕದಲ್ಲಲ್ಲದೆ ಪರಲೋಕದಲ್ಲೂ ಇದೆ ಎಂದು ತೋರಿಸಿ
ಎಲ್ಲೇ ಹೋದರು ಈ ಸಾಮಾಜಿಕ ಪಿಡುಗುಗಳು ತಪ್ಪಿದಲ್ಲ ಎಂದು ಮಾರ್ಮಿಕವಾಗಿ ಹೇಳುತಾರೆ ಸ್ವತಃ ಚಿತ್ರಕಥೆ-ಸಂಭಾಷಣೆ  ಬರೆದಿರುವ ಉಪೇಂದ್ರ. ಅವರ ಬಾಯಿಂದ ಬರುವ ಪುಂಖಾನುಪುಂಖ ಪದಪುಂಜಗಳು ಕಿವಿಗೆ ಹಿತ, ಮನಸ್ಸಿಗೆ ಮುದ ಕೊಟ್ಟು ಬುದ್ಧಿಗೆ ಚುರುಕು ಮುಟ್ಟಿಸುವುದನ್ನು ಮರೆಯುವುದಿಲ್ಲ. ಆದರೂ ಚಿತ್ರದಲ್ಲಿ ಹೇಳಿಕೊಳ್ಳುವಂಥ ಕಥೆಯೇ ಇಲ್ಲ. ಎರಡನೆಯ ಭಾಗದಲ್ಲಿ 3ಡಿ ಎಫೆಕ್ಟ್ಸ್ ಹುಡುಕಿದರೂ ಸಿಗುವುದಿಲ್ಲ.


ಭೂಲೋಕದಲ್ಲಿ ಉಪೇಂದ್ರ (ಉಪೇಂದ್ರ) 'ಅನಿಸಿದ್ದು ಮಾಡುವ ಪುಣ್ಯಾತ್ಮನಾಗಿ' ಅವನಿಗೆ ಬೇಕಾದ ಕೆಲಸಗಳನ್ನು ಮಾಡುತ್ತಾ ಕೊನೆಗೊಮ್ಮೆ ಡಾನ್ ಆಗುವ ಹೆಬ್ಬಯಕೆಗೆ ನೀರೆರೆದು ಪೋಷಿಸಿ ದೊಡ್ಡ ಡಾನ್ ನಂತೆ ಪೋಸ್ ಕೊಡುತ್ತಿರುವಾಗ ಆಕಸ್ಮಿಕ ಸಾವನ್ನಪ್ಪಿ ಇಹಲೋಕ ತ್ಯಜಿಸುತ್ತಾನೆ. ಪಾಪ-ಪುಣ್ಯಗಳೆರಡನ್ನು  ಸಮಾನವಾಗಿ ಮಾಡಿ ಯಮನ ತಲೆಗೆ ಹುಳ ಬಿಟ್ಟು 15 ದಿನ ನರಕ , 15 ದಿನ ಸ್ವರ್ಗ ದರ್ಶನದ 'ಶಿಕ್ಷೆ' ಪಡೆಯುತ್ತಾನೆ. ಸ್ವರ್ಗದಲ್ಲಿ ಸುರಸುಂದರಾಂಗಿ ಇಂದ್ರಜೆಗೆ (ರಮ್ಯ)  ಮರುಳಾಗಿ ಅವಳನ್ನು ಮೋಹಿಸಿ ಬಲೆಗೆ ಹಾಕಿಕೊಳ್ಳುತ್ತಾನೆ. ಇವರಿಬ್ಬರ ಮದುವೆಗೆ ಯಮೇಂದ್ರರು ಅಡ್ಡಿ ಬಂದಾಗ ಭೂಲೋಕಕ್ಕೇ ಓಡಿ ಬರುವ ತೀರ್ಮಾನಕ್ಕೆ ಬಂದಾಗ ಅಲ್ಲೊಂದು ಫೈಟ್. ಹೀಗೆ ಮಾಡುವಾಗ ಹುಲುಮಾನವ ಉಪೇಂದ್ರ ಯಮನನ್ನು ಗೆಲ್ಲುವುದಾದರೂ ಹೇಗೆ ಎಂಬುದೇ ಕಥೆಯ ಸ್ವಾರಸ್ಯ. ಆದರೆ ಸ್ವಾರಸ್ಯವನ್ನ ಹಿಡಿದಿಡುವಲ್ಲಿ ನಿರ್ದೇಶಕ ಸುರೇಶ್ ಕೃಷ್ಣ (ಬಾಷಾ,ಕದಂಬ ಖ್ಯಾತಿ) ಸೋಲುತ್ತಾರೆ.
ಚಿತ್ರದಲ್ಲಿ ಟಿಪಿಕಲ್ ಉಪೇಂದ್ರ ಅಭಿನಯವಿದೆ.ರಮ್ಯ ಸ್ವತಃ  ಡಬ್ ಮಾಡದೇ ಇರುವುದು ಕನ್ನಡಿಗರಿಗೆ ಸಂತಸದ ಸುದ್ದಿ.  ಅಂಬರೀಷ್ ಯಮನಾಗಿ ಚಿತ್ರದ ಸ್ಟಾರ್ ವಾಲ್ಯೂ ಹೆಚ್ಚಿಸಿದರೂ, ಅವರ ಸಂಭಾಷಣೆಯಲ್ಲಿ ಅದುಲುಬದಲಾಗುವ  'ಹಕಾರ ಅಕಾರ'ಗಳ ಬಗ್ಗೆ ಅವರಷ್ಟೇ ದೊಡ್ಡ ಮನಸ್ಸಿನ ಪ್ರೇಕ್ಷಕ ಮರೆತುಬಿಡುವುದು ಲೇಸು.
ಕನ್ನಡಕ್ಕೆ ಪ್ರಥಮ ಸಂಪೂರ್ಣ 3ಡಿ ಚಿತ್ರ ತರುವಲ್ಲಿ ವೇಣು ರವರ ಕ್ಯಾಮೆರ ಕೆಲಸಕ್ಕೆ ಜೈ ಅನ್ನಲೇಬೇಕು. ಅವರಿಗೆ ಈ ವರ್ಷದ ರಾಜ್ಯ ಪ್ರಶಸ್ತಿ ಬರುವ ಎಲ್ಲ ಸಾಧ್ಯತೆಗಳಿವೆ. 
ಗ್ರಾಫಿಕ್ಸ್ ಕೆಲಸದ ಸ್ವರ್ಗ ನರಕ ಲೋಕಗಳನ್ನು 3ಡಿಯಲ್ಲಿ ನೋಡುವುದೇ ಒಂದು ಹಬ್ಬ. ಕಳೆದ ವರ್ಷ 'ಸಂಜು ವೆಡ್ಸ್ ಗೀತ' ಗೆ ಅತ್ಯುತ್ತಮ ಸಂಕಲನ  ಪ್ರಶಸ್ತಿ ಪಡೆದ ಜಾನಿ ಹರ್ಷ ಮತ್ತೊಮ್ಮೆ ಕೈಚಳಕ ತೋರಿಸಿದ್ದಾರೆ.
'ಝುಂಝುಂತಾ' ಹಾಡು, ಹಿನ್ನಲೆ ಸಂಗೀತಕ್ಕೆ ಹರಿಕ್ರಿಷ್ಣಗೆ ಒಂದು ಚಪ್ಪಾಳೆಯಿರಲಿ. 
ಇಷ್ಟು ದೊಡ್ಡ ಬಜೆಟ್ ಚಿತ್ರಕ್ಕೆ ಬೆನ್ನೆಲುಬಾಗಿ ನಿಂತ ನಿರ್ಮಾಪಕ ಮುನಿರತ್ನಗೆ ದೊಡ್ಡ ಸಲಾಮು. ಸದಾ ಹೊಸತು ಯೋಚಿಸುವ ಉಪೇಂದ್ರ ರವರಿಗೆ ಅಭಿನಂದನೆ.
ಸ್ವಾರಸ್ಯ ಕಥಾನಕ ಇದ್ದಿದ್ದರೆ ಈ 'ಕಠಾರಿ ವೀರ' ಪ್ರತಿಯೊಬ್ಬರೂ ನೋಡಲೇಬೇಕಾದ ಚಿತ್ರವಾಗ್ತಿತ್ತು. 
~ಹೊಗೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ