"VILLAIN" KANNADA MOVIE REVIEW

ಸಂಭಾಷಣೆ ಹೀರೋ.. ಮಿಕ್ಕಿದ್ದೆಲ್ಲಾ 'ವಿಲನ್'.
ನಾಯಕ 'ಟಿಪ್ಪು' (ಆದಿತ್ಯ)ರೌಡಿ. ನಾಯಕಿ ಅನು (ರಾಗಿಣಿ) 
ಈ ರೌಡಿಯ ಪರಿಚಯವೇ ಇಲ್ಲದಿದ್ದರೂ ಹೆಸರನ್ನು ಉಪಯೋಗಿಸಿ ಅವಳ 'ಮಾನ'ವನ್ನು ಏರಿಯಾ ಹುಡುಗರಿಂದ 
ರಕ್ಷಿಸಿಕೊಳ್ಳುತ್ತಿರುತ್ತಾಳೆ. ನಂತರ ಟಿಪ್ಪು ಅವಳಿಗೆ ಬೇರೆ ಹೆಸರಿನಲ್ಲಿ ತನ್ನ ಪರಿಚಯ ಮಾಡಿಕೊಂಡು ಸ್ನೇಹಮಾಡುತ್ತಾನೆ. ಸ್ನೇಹ ಪ್ರೀತಿಯಾಗಲು ಅಲ್ಲೊಂದು ಇಂಪಾದ ಹಾಡು - 'ಕಣ್ಣಲೆ ಸಂಭಾಷಣೆ'. ನಾಯಕಿಗೊಬ್ಬ ತಮ್ಮ.
ಅವನು ಕ್ರೈಂ ರಿಪೋರ್ಟರ್. ಕೊಲೆಯೊಂದನ್ನು ತನ್ನ ಕ್ಯಾಮೆರದಲ್ಲಿ ಸೆರೆಹಿಡಿದು ಕೊಲೆಪಾತಕರಾದ ರಾಜಕಾರಣಿ (ಶೋಭರಾಜ್) ಮತ್ತು ಜಮೀಲ್ (ರಂಗಾಯಣ ರಘು) ರವರ ಕೆಂಗಣ್ಣಿಗೆ ಗುರಿಯಾಗಿ ಸಾಯುತ್ತಾನೆ.
ಟಿಪ್ಪು ತನ್ನ ಬಾಮೈದನನ್ನು ಕೊಂದವರ ವಿರುದ್ಧ ಸಾಕ್ಷಿ ಹೇಳಲು ಅಣಿಯಾಗುತ್ತಿದ್ದರೆ, ಇಲ್ಲಿ ನಾಯಕಿ ಅನುಗೆ ತನ್ನ ಪ್ರಿಯತಮ ದೊಡ್ಡ ರೌಡಿ ಎಂದು ತಿಳಿಯುತ್ತದೆ. ನಂಬಿಕೆ ದ್ರೋಹದ ಆರೋಪದ ಮೇಲೆ ಟಿಪ್ಪುವನ್ನು ದೂರಮಾಡಿದಾಗ ಅಲ್ಲೊಂದು ಕೈಲಾಶ್ ಖೇರ್ ಧ್ವನಿಯಲ್ಲಿ
ವಿರಹ ಗೀತೆ. ಕೊನೆಗೆ ಅವರಿವರಿಂದ ಪ್ರೀತಿ ಪಾಠ ಕಲಿತು ನಾಯಕಿ ಮನಸುಬದಲಾಯಿಸುತ್ತಾಳೆ. ಇತ್ತ ನಾಯಕ ಕೆಟ್ಟವರನ್ನು ಕ್ಲೈಮ್ಯಾಕ್ಸ್ ಫೈಟಲ್ಲಿ  ಮಟ್ಟಹಾಕಿ ಪೋಲೀಸರಿಗೊಪ್ಪಿಸಿ
ಅವರಿಗೆ ಶಿಕ್ಷೆ ಕೊಡಿಸುತ್ತಾನೆ. ಇಲ್ಲಿಗೆ ಮುಕ್ತಾಯ ಮತ್ತೊಂದು ಕನ್ನಡ ಚಿತ್ರ.
ಚಿತ್ರದಲ್ಲಿ ಚೆನ್ನಾಗಿದೆ ಅಂತ ಒಂದಂಶ ಇದ್ದರೆ ಅದು ಎಂ.ಎಸ್.ರಮೇಶ್  ಅವರ ಸಂಭಾಷಣೆ. ಅವರ ದೈತ್ಯ ಪ್ರತಿಭೆಗೆ ಎಂದೂ ಮುಪ್ಪಿಲ್ಲ. ಷ್ಟನ್ನು ಬಿಟ್ಟರೆ ಚಿತ್ರದಲ್ಲಿ ಉಪ್ಪಿಲ್ಲ. ಸ್ವಲ್ಪ ಖಾರ ತುಂಬಲು ಒಂದು ಐಟಂ ನೃತ್ಯ ಮತ್ತು ರಾಗಿಣಿ 'ಚರ್ಮೋ'ತ್ಸವವಿದೆ. ನಿರ್ದೇಶಕ ಎಂ.ಎಸ್.ರಮೇಶ್  'ವಿಲನ್' ಅಂತ ಚಿತ್ರಕ್ಕೆ ಹೆಸರಿಟ್ಟು ನಾಯಕನ ಕೈಲಿ ಮ್ಯಾಂಡಲಿನ್, ಮೌತ್ ಆರ್ಗನ್ ಹಿಡಿಸಿದ್ದಾರೆ. ಬೀದಿಯಲ್ಲಿ  ನಿಂತು ಪ್ರೀತಿಗಾಗಿ ಅಂಗಲಾಚುವಂತೆ ಮಾಡಿದ್ದಾರೆ. ಒಂದೂ ಆಯುಧವಿಲ್ಲದೆ ಮರದ ದಿಮ್ಮಿಗಳಲ್ಲೇ ಹೊಡೆದಾಡಿಸಿದ್ದಾರೆ.
ಒಟ್ಟಿನಲ್ಲಿ ಹೆಸರಿಗೆ ತಕ್ಕಂತ ಚಿತ್ರವಾಗಿರದೆ ಇಂತ ಚಿತ್ರಕ್ಕೆ ಅತ್ಯವಶ್ಯಕವಾದ ಪಾತ್ರ ವಿಜ್ರುಂಭಣೆಯೇ  ಇಲ್ಲದೆ ನೀರಸ ನಿರೂಪಣೆ, ಸಾದಾ ಕಥೆ ಹೆಣೆದ ನಿರ್ದೇಶಕನೇ ಈ ಚಿತ್ರದ ವಿಲನ್ ಇರಬಹುದು.
ಹಾಡುಗಳನ್ನು ಬೇಕಾದ ಬೇಡವಾದ ಎಲ್ಲ ಕಡೆ ತುರುಕಲಾಗಿದೆ. ನಗಿಸುವ ವ್ಯರ್ಥ ಪ್ರಯತ್ನ ಮಾಡಲಾಗಿದೆ. ತಾಂತ್ರಿಕವಾಗಿ ಕೂಡ ಚಿತ್ರದಲ್ಲಿ ಏನು ಇಲ್ಲ.  ಕಥೆಯ ತಿರುವಿಗೆ ಕಾರಣವಾಗುವ 'ರೆಕಾರ್ಡೆಡ್ ಕ್ಯಾಸೆಟ್'ನ್ನು ನಂತರದಲ್ಲಿ ಮರೆತಿದ್ದಾರೆ. ಈ ರೀತಿ ಹಲವು ನ್ಯೂನ್ಯತೆ ವೈಫಲ್ಯತೆಗಳ ನಡುವೆ ಈ ಚಿತ್ರವನ್ನು ನೀವು ನೋಡಲೆಬೇಕೆಂದರೆ ಅದು ಚಿತ್ರದುದ್ದಕ್ಕೂ ಇರುವ ತೂಕದ ಸಂಭಾಷಣೆಗಾಗಿ ಮಾತ್ರ.

~ಹೊಗೆ

2 ಕಾಮೆಂಟ್‌ಗಳು: