ಸ್ಪೆಷಲ್ ಡೈರೆಕ್ಟರ್ ಇಂದ ಒಂದು 'ಒಂಟಿ ಮನೆ' ಕಥೆ.

ಎದ್ದೇಳು ಮಂಜುನಾಥ ಚಿತ್ರದಲ್ಲಿ ಕಣ್ಣುಗಳನ್ನು ದಾನ ಮಾಡಿ ಎಂಬ ಸಂದೇಶವನ್ನು 
ಸಾರಲು ವಿಶೇಷಾದ್ಭುತವಾಗಿ ಕಥೆ ನಿರೂಪಿಸಿದ್ದ ಗುರುಪ್ರಸಾದ್, ಈ ಬಾರಿ ಮನುಷ್ಯ ಸಂಬಂಧಗಳ ಈಗಿನ ಪರಿಸ್ಥಿತಿಯನ್ನು ಮಾರ್ಮಿಕವಾಗಿ ಹೇಳಿದ್ದಾರೆ ತಮ್ಮ 'ಡೈರೆಕ್ಟರ್ಸ್ ಸ್ಪೆಷಲ್' ಮೂಲಕ.

ಅದಕ್ಕಾಗಿ ಅವರು ಆರಿಸಿಕೊಂಡದ್ದು ಒಂದು ಒಂಟಿ ಮನೆ, ಒಂದಷ್ಟು ರಸವತ್ತಾದ ಸಂಭಾಷಣೆ, ಕೆಲವು ಕಂಡು ಕೇಳರಿಯದ ಸ್ವಯಂಕೃತ ಪೌರಾಣಿಕ ಕತೆಗಳು ಮತ್ತು ರಂಗಾಯಣ ರಘು.

ಕಥೆ ಆಸಕ್ತಿಕರವಾಗಿ ತೆರೆದುಕೊಳ್ಳುವುದೇ ನಾಯಕ ಮನೆಗೆ ತಂದ ರೆಡಿಮೇಡ್ ಅಪ್ಪ, ಅಮ್ಮ, ಅಣ್ಣ, ತಂಗಿ ಪಾತ್ರಗಳು ನಾಯಕನನ್ನೇ ಕೊಲ್ಲಲು ಹವಿಣಿಸಿದಾಗ. ನಾಯಕನ ಬಳಿ ಇರುವ ಸುಮಾರು ಅರ್ಧ ಕೋಟಿಯಷ್ಟು ದುಡ್ಡನ್ನು ಎಗರಿಸಲು ಅವರು ವಿವಿಧ ರೀತಿಯಲ್ಲಿ ಪರದಾಡುವ ಮಜಲುಗಳನ್ನು ತೋರಿಸಿದ್ದರೆ ಅದು ಒಂದು ಮಾಮೂಲಿ ಸಿನಿಮಾವಾಗಿ ಬಿಡುತ್ತಿತ್ತು. ಇಲ್ಲೇ ಗುರುಪ್ರಸಾದ್ ಗೆಲ್ಲುವುದು. ಕಥೆಯಲ್ಲಿ ಮುಂದೆ ಹೆಚ್ಚೇನು ಆಗದೆ ಬರಿ ಮೈಮನಗಳನ್ನು ಮುಟ್ಟಿ ತಟ್ಟುವ ಸಂಭಾಷಣೆ ಇಂದಲೇ ಕಥೆಯನ್ನು ಮುಂದೆ ಸಾಗಿಸಿಕೊಂಡು ಹೊಗುವುದನ್ನು ನೋಡುವುದೇ, ಅದಕ್ಕಿಂತ ಹೆಚ್ಚಾಗಿ ಕೇಳುವುದೇ ಕಿವಿಗೆ ಹಬ್ಬ.



ನೀವೇನಾದರೂ ಟೈಟಲ್ ನೋಡ್ಕಂಡು ಇದು ಕನ್ನಡ ಚಿತ್ರರಂಗವನ್ನು ವಿಡಂಬಿಸೋ ಚಿತ್ರ ಅಂದುಕೊಂಡು ಹೋದರೆ ಅಲ್ಲಿ ನಿಮಗಾಗುವುದು ಒಂದು ದೊಡ್ಡ ಮೋಸ. ಆದರೂ ಎಂದಿನಂತೆ ಚಿತ್ರರಂಗದವರ ಕಾಲೆಳೆಯುವುದನ್ನು ಗುರುಗಳು ಇಲ್ಲೂ ಮುಂದುವರೆಸಿದ್ದಾರೆ. ಆದರೆ ಪ್ರೇಮ್ ಪ್ರಸ್ತಾಪವೇ ಇರದೇ ಕಾತರದಿಂದ ಕಾದಿದ್ದ ಪ್ರೇಕ್ಷಕರ ಕಿವಿಗೆ 'ದಾಸ್ವಾಳ' ಇಟ್ಟಿದ್ದಾರೆ.

ರಂಗಾಯಣದ ಎರಡು ಪ್ರತಿಭೆಗಳು ಇಡೀ ಚಿತ್ರವನ್ನೇ ಆವರಿಸಿಕೊಂಡಿದೆ. ಒಂದು, ರಂಗಯಾಣ ರಘು. ಅವರ ದೈತ್ಯ ಪ್ರತಿಭೆ ಈ ಚಿತ್ರದಲ್ಲಿದೆ ಎಂದು ಅವರ ದೈತ್ಯ ಹೊಟ್ಟೆಯನ್ನು ಪೋಸ್ಟರ್ ಗಳಲ್ಲಿ ಬಿಟ್ಟಿದ್ದ ಗುರು ಮಾತಿಗೆ ತಪ್ಪದ ಹಾಗೆ ನಡೆದುಕೊಂಡಿದ್ದಾರೆ. ರಘು ಅಲ್ಲಲ್ಲಿ ಜಗ್ಗೇಶ್ ರನ್ನು ನೆನಪಿಸುತ್ತಾರೆ ಮತ್ತು ಅವರ ಸೋಮಾರಿ ಮಂಜುನಾಥನ ವಿಸ್ತೃತ ರೂಪವಂತೆಯೇ  ಕಾಣಿಸುತ್ತಾರೆ. ಆದರೂ, ಇತರ ಚಿತ್ರಗಳಂತೆ ರಘು ಅವರ ಕೈಯಲ್ಲಿ ಅತಿರೇಕದ ಅಭಿನಯಮಾಡಿಸದೆ  ರಂಗಾಯಣ ರಘುಗೆ  ಹೊಸರೂಪಕೊಟ್ಟಿದ್ದಾರೆ ಗುರು.

ಇನ್ನು ನಾಯಕ ನಟ 'ಸ್ಪೆಷಲ್ ಸ್ಟಾರ್' ಧನಂಜಯ ಕೂಡ ರಂಗಾಯಣದ ಮತ್ತೊಂದು ಪ್ರತಿಭೆ. ಅವರದ್ದು ಪ್ರಬುದ್ಧ ಪಾತ್ರ,  ಅಷ್ಟೇ ಪ್ರೌಢ ನಟನೆ. ಮೊದಲ ಚಿತ್ರದಲ್ಲೇ ಇಂತಹದೊಂದು ಸೂಕ್ಷ್ಮ ಅಭಿನಯ ಅವರಿಂದ ಮುಂದೆ ಹೆಚ್ಚಿನದ್ದನ್ನು ಅಪೇಕ್ಷಿಸುವಂತೆ ಮಾಡುತ್ತದೆ. ಗುರು, ನಾಯಕನ ಮೊದಲ ಚಿತ್ರವೆಂದು 
ಒಂದು ಅತ್ಯದ್ಭುತವಾದ ಪರಿಚಯ ಮಾಡಿಕೊಡುತ್ತಾರೆ, ಚಿತ್ರದ ಶುರುವಿನಲ್ಲಿ.

ಮಹೇಂದ್ರ ಸಿಂಹ ಅವರ ಛಾಯಾಗ್ರಹಣದಲ್ಲಿ ಬೆಳಕಿನ ಸಂಯೋಜನೆ ತುಂಬಾ 
ಚೊಕ್ಕದಾಗಿದೆ. ಪಾಪ ಅವರಿಗೆ ಒಂದು ಸಣ್ಣ ಮನೆಯಲ್ಲಿ ಎಲ್ಲಿ ತಾನೇ ಕ್ಯಾಮೆರ ಇಡಕ್ಕೆ ಜಾಗ ಇರತ್ತೆ ಹೇಳಿ. ಅನೂಪ್ ಸಿಳೀನ್ ಹಿನ್ನಲೆ ಸಂಗೀತ ಎಂದಿನಂತೆ ಸೌಂಡ್ ಅಂಡ್ ಸ್ಪೆಷಲ್.

ಚಿತ್ರದ ಕೊನೆಯಲ್ಲಿ ಗುರುಪ್ರಸಾದ್ ಕಾಣಿಸಿಕೊಂಡು ಚಿತ್ರಕ್ಕೆ ಸಿನಿಮೀಯ ಅಂತ್ಯ ಕೊಡ್ತಾರೆ. ಅದು ಬಹಳ ಅವಶ್ಯಕವಾಗಿತ್ತು ಬಿಡಿ. ಇಲ್ದಿದ್ರೆ ಸಿನಿಮಾ ಉದ್ದ ನಡೆಯುವ ಕಥೆಗೂ ಚಿತ್ರದ ಶೀರ್ಷಿಕೆಗೂ ಸಂಬಂಧಾನೆ ಇರುತ್ತಿರಲಿಲ್ಲ.

ಒಟ್ಟಿನಲ್ಲಿ ಹೇಳಬೇಕಾದರೆ ಲವ್, ಅಣ್ಣ-ತಂಗಿ,ಮದರ್ ಸೆಂಟಿಮೆಂಟ್, ಆಕ್ಷನ್, ಲಾಂಗು ಮಚ್ಚು ಇವೆಲ್ಲಾ ಏನು ಇರದೇ ಕೊನೆಗೊಂದು ಗಟ್ಟಿ ಕತೆಯೂ ಇರದ ಮತ್ತು 
ಗಾಂಧಿನಗರದ ಸಿದ್ಧ ಸೂತ್ರಗಳನ್ನು ಹಾರಿಬಿಟ್ಟ ಒಂದು ಟಿಪಿಕಲ್ ಗುರುಪ್ರಸಾದ್ ಸಿನಿಮಾ 'ಡೈರೆಕ್ಟರ್ಸ್ ಸ್ಪೆಷಲ್' !!


~ಹೊಗೆ

ಮುಗ್ಧಯುದ್ಧಕ್ಕೆ ಹರಿ ಅವರ ವಿಮರ್ಶೆ

ನನ್ನ ಮೊದಲ ಕಿರುಚಿತ್ರ 'ಮುಗ್ಧಯುದ್ಧ' ಕ್ಕೆ ಕನ್ನಡಪ್ರಭ ಪತ್ರಿಕೆಯ ಜನಪ್ರಿಯ ಪತ್ರಕರ್ತ ಹರಿ ಅವರ ವಿಮರ್ಶೆ : 




ಕಿರುಚಿತ್ರವನ್ನು ಇಲ್ಲಿ ನೋಡಬಹುದು.

~ಹೊಗೆ
ನಾಲ್ಕು ವರ್ಷದಿಂದ ಬೆಂಗಳೂರಿನಲ್ಲಿ ನೆಲೆಸಿರೋ ಆಕೆ ಕೇಳ್ತಾಳೆ  "Who is Rajkumar" !!!

ಹಲವು ಕಾಡುವ ಘಟನೆಗಳು

ಘಟನೆ ೧:

ಅವನ ಹೆಸರು ಭಾರ್ಗವ. ಪ್ರತಿಷ್ಠಿತ ಐಟಿ ಕಂಪನಿಯೊಂದರಲ್ಲಿ ಕೆಲಸ. ಸುಮಾರು ೨ ವರ್ಷದಿಂದ ಬೆಂಗಳೊರಿನಲ್ಲಿ ನೆಲೆಸಿದ್ದಾನೆ. ಅವನ ಊರು ತಿರುಪತಿ. ಇಷ್ಟು ದಿನ ಯಾವುದೋ ತೆಲುಗಿನವರೇ ನಡೆಸುವ ಪಿಜಿಯಲ್ಲಿದ್ದ ಆತ, ಈಗ ತನ್ನ ತಂದೆ ತಾಯಿಯನ್ನು ಬೆಂಗಳೂರಿಗೆ ಕರೆತರಲು ನಿರ್ಧರಿಸಿದ್ದಾನೆ. ಈ ಊರು ಅವನಿಗೆ ಬಾಳಾನೆ ಹೊಂದಿಕೆಯಾಗಿದೆಯಂತೆ.
ಅವನಿಗೆ ಹೊಂದಿಕೆ ಆಗಿರೋದಲ್ಲ. ಈ ಬೆಂಗಳೂರೇ ಹಾಗೆ, ಎಲ್ಲರನ್ನು ಹೊಂದಿಸಿಕೊಂಡು ಬಿಡುತ್ತದೆ. ೨ ವರ್ಷದಿಂದ ಇಲ್ಲಿದ್ದರೂ ಒಂದು ನಯಾಪೈಸೆ ಕನ್ನಡ ಕಲಿಯದೆ ಇಲ್ಲಿ ಬಾಳಿ ಬದುಕಿದ್ದಾನೆ ಈ ಭಾರ್ಗವ ಕುಮಾರ. Wow ಅಲ್ವ. ಒಮ್ಮೆ ನಾನು ಅವನು ಹೀಗೆ ಮಾತಿಗೆ ಸಿಕ್ಕಾಗ ಆದ ಸಂಭಾಷಣೆ ಹೀಗಿತ್ತು.

ನಾನು - What man? 
Heard that you are staying with your parents now.

ಆತ - Ya man. I made them shift here. 
We got a rented house in Banashankari.

ನಾನು - Nice locality. Till now, you were staying in martalli and you managed in telugu everywhere. Now Banashankari is kind of old bangalore dude. You have to learn Kannada.

ಆತ - No dude. Actually my house owner is also Telugu guy. So no worries. We can manage with Telugu only. Infact, we got it for a cheaper rate as we were telugu.

ನಾನು ಒಂದು ಕ್ಷಣ ಅವಕ್ಕಾದೆ. ಏನು ತೋಚದೆ ಮೇಲ್ ಬಾಕ್ಸ್ ರಿಫ್ರೆಶ್ ಮಾಡಿದೆ. ಹೊಸ ಮೇಲೊಂದು ಬಂದಿತ್ತು. ಅದರತ್ತ ಬಲವಂತವಾಗಿ ಗಮನ ಹರಿಸಿದೆ.
-------

ಘಟನೆ ೨:
ಉತ್ತರಪ್ರದೇಶದ ಕಾನ್ಪುರದ ಯುವತಿಯೊಬ್ಬಳು ಹೊಸದಾಗಿ ಬೆಂಗಳೂರಿಗೆ ಕೆಲಸ ಅರಸಿ ಬಂದಿರುತ್ತಾಳೆ. ಆ ಮಹಾತಾಯಿಯನ್ನು ಅಷ್ಟು ದೂರದಿಂದ ಬೆಂಗಳೂರಿಗೆ ಬರಲು ಅದೇನು ಸೆಳವು ಈ ಊರಲ್ಲಿ ಎಂದು ತಿಳಿದುಕೊಳ್ಳಲು ಪ್ರಶ್ನಿಸಿದಾಗ, ಅವಳು ಹೀಗೆ ಹೇಳ್ತಾಳೆ.
"ನಾನು ನನ್ನ ತಾಯಿಗೆ ಕೇಳಿದೆ. ಡೆಲ್ಲಿ, ಮುಂಬೈ, ಬೆಂಗಳೂರು ಈ ಮೂವರಲ್ಲಿ ನಾ ಎಲ್ಲಿ ಹೋಗಿ ಕೆಲ್ಸಕ್ಕೆ ಸೇರಲಿ ಅನ್ತ. ನನ್ನ ತಾಯಿ ಅಂದ್ರು, ಡೆಲ್ಲಿ ಸುರಕ್ಷಿತವಲ್ಲ, ಮುಂಬೈ ಸುರಕ್ಷಿತವೂ ಅಲ್ಲ, ಆರ್ಥಿಕವಾಗಿಯೂ ಅಲ್ಲಿ ತಂಗುವಿಕೆ ಕಷ್ಟ. ಬೆಂಗಳೂರು ದೂರವಾದರು ಅಲ್ಲಿಯ ಸಂಸೃತಿಯಲ್ಲಿ ಹೆಚ್ಚೇನು ವ್ಯತ್ಯಾಸವಾಗಲಾರದು. ಆದ್ರಿಂದ ಬೆಂಗಳೂರಿಗೆ ಬಂದೆ" ಅಂತ ಸ್ಪಷ್ಟ ಉತ್ತರ ಕೊಟ್ಟಳು ಆ ಕಾನ್ಪುರದ ಬಾಲೆ. 
ನಾನೂರು ಚಿಲ್ಲರೆ ಕಿಮೀ ದೂರದ ದೇಶದ ರಾಜಧಾನಿ ಬಿಟ್ಟು, ಎಲ್ಲರನ್ನು ಬಾಚಿತಬ್ಬುವ ಆರ್ಥಿಕ ರಾಜಧಾನಿ ಮುಂಬೈಯನ್ನು ಬದಿಗೊತ್ತಿ, ಸಾವಿರದ ಎಂಟುನೂರು ಕಿಮೀ ದೂರದ ಬೆಂಗಳೂರು ಆಕೆಯನ್ನು ಭರಸೆಳೆದಿತ್ತು.
-------

ಘಟನೆ ೩:
ಹೆಸರು ವಿನಯ್. ಪಕ್ಕದ ಆಂಧ್ರದವ. ಇತ್ತೀಚೆಗಷ್ಟೆ ಅವ ಬೆಂಗಳೂರಿನಿಂದ ಚೆನ್ನೈಗೆ ಹೋಗಬೇಕಾಯ್ತು. ಅಲ್ಲಿ ಮತ್ತೊಂದು ಕಂಪನಿಯಲ್ಲಿ ಹೆಚ್ಚಿನ ಸಂಬಳದ ಕೆಲಸ ಸಿಕ್ಕಿತ್ತು. ಅವನಿಗೊಂದು ಗಿಫ್ಟ್ ಕೊಟ್ಟು ಕಳಿಸುವ ಸಂದರ್ಭದಲ್ಲಿ ನಮ್ಮ ತಂಡದ ಕೆಲ ತಮಿಳರು,  ಚೆನ್ನೈ ನಲ್ಲಿ ಹೇಗೆ ಬದುಕಬೇಕು, ಅಲ್ಲಿ ತಮಿಳು ಕಲಿಯಲೇಬೇಕು, ಅದು ಬೆಂಗಳೂರಿನಂತಲ್ಲ ಎಂಬ ಮೊದಲಾದ ಟಿಪ್ಸ್ ಕೊಡುತ್ತಿದ್ದರು. ಆಗ ಅವನಂದ. "ನಾನು ಬೆಂಗಳೂರಿಗೆ ಬರುವಾಗ ಯಾರೂ ಇಂಥ ಟಿಪ್ ಕೊಡಲೇ ಇಲ್ಲ" ಅಂತ.
 -------

 ಘಟನೆ ೪:
ಅಲ್ಲೊಂದು ಮಾಮೂಲಿ ಟೀಮ್ ಮೀಟಿಂಗ್ ನಡೀತಿತ್ತು. ಎಲ್ಲ ಸೇರಿ ಹರಟೋದು, ಕಿಚಾಯಿಸೋದು ನಡೀತಿತ್ತು. ಹಾಗೆ ಮಾತು ಬೆಂಗಳೂರು, ಸಿಟಿ ಬಸ್ಸು, ಕನ್ನಡ, ಚಿತ್ರಗಳು ಹೀಗೆ ಸಾಗುತಿತ್ತು. ಆಗ ಅಲ್ಲೊಂದು ಪ್ರಶ್ನೆ ಒಬ್ಬಳ ಬಾಯಿಂದ ಹಾರಿ ಬಂತು ನೋಡಿ. ಪಿತ್ತ ಒಂದೇ ಸಮಕ್ಕೆ ನೆತ್ತಿಗೇರಿತ್ತು.ಅವಳಾಡಿದ ಮಾತೇನು ಗೊತ್ತಾ.
"Who is Rajkumar?" ಅನ್ನೋದೆ.
ಥತ್ ಅವಳ ಮೊಕಕ್ಕಿಷ್ಟು ಅನ್ಕೊಂಡೆ.. ಬರೋಬ್ಬರಿ ನಾಕು ವರ್ಷಗಳ ಬೆಂಗಳೂರಿನಲ್ಲಿ ಇದ್ದಾಳೆ ಉತ್ತರದ ಯುವತಿ. ತಕ್ಷಣ ಎದ್ದು ನಿಂತು ಅಣ್ಣಾವ್ರ ಬಗ್ಗೆ ಇದ್ಬದ್ ವಿಷಯವನ್ನೆಲ್ಲಾ ' ರಣಚಂಡಿಗೆ ಔತಣವೀಯುವ ' ಫೋರ್ಸಲ್ಲಿ ಹೇಳಿಬಿಡೋಣ ಅನ್ನಿಸ್ತು. ಆದರೆ ಹೇಳುವ ಭರದಲ್ಲಿ ಮುಖ್ಯ ವಿಷಯಗಳು ಮರೆತು ಅಣ್ಣಾವ್ರಿಗೆ ಧಕ್ಕೆ ಆಗಬಾರದು ಅಂತ ಸುಮ್ಮನೆ ಬಡಬಡಿಸುವ ಉದ್ರೇಕವನ್ನು ತಡೆಹಿಡಿದೆ. ಅಣ್ಣಾವ್ರಂಥ ಅವರನ್ನೇ ಅವಳಿಗೆ ಗೊತ್ತುಮಾಡಿಸದಿರುವ ಅವಳ ಸುತ್ತಮುತ್ತಲಿನ ಬೆಂಗಳೂರಿಗೆ ಹಿಡಿಶಾಪಹಾಕುತ್ತ ಕೂತೆ. ಸಿಕ್ಕ ಸಿಕ್ಕ ಕನ್ನಡಿಗ ಗೆಳೆಯರಿಗೆಲ್ಲ ವಿಷಯ ತಿಳಿಸಿದೆ. ಅವರು ಈ ಅತಿರೇಕವನ್ನು ಕಂಡು ನನ್ನಂತೆಯೇ ಭಾವಾವೇಶಕ್ಕೆ ಒಳಗಾಗುತ್ತಾರೆ ಎಂದು ನಿರೀಕ್ಷಿಸುತ್ತ ಇದ್ದರೆ, ಅಲ್ಲಾಗಿದ್ದೆ ಬೇರೆ. ಮುಕ್ಕಾಲು ಜನ 'ಅದು ಕಾಮನ್ ಮಗ, ನಮ್ ಆಫೀಸ್ ಅಲ್ಲೂ ಎಷ್ಟೊಂದ್ ಜನಕ್ಕೆ ರಾಜ್ಕುಮಾರ್' ಗೊತ್ತಿಲ್ಲ ಅಂದಾಗ ನನ್ನೆದೆ ಕಂಪಿಸಿತು. ಏಕೆಂದರೆ ರಾಜ್ ಒಬ್ಬ ಮನುಶ್ಯನಲ್ಲ. ಅವರೊಂದು ಸಂಸ್ಕೃತಿಯ  ಪ್ರತೀಕ, ಒಂದು ನಾಡಿನ ಪ್ರತಿನಿಧಿ, ಒಂದು ಭಾಷೆಯ ಲಾಂಛನ, ಕನ್ನಡ ನಾಡಿನ ಜನರ ಹೃದಯಸಾಮ್ರಜ್ಯದಲ್ಲಿ ನೆಲೆಸಿರೋ ಒಬಾ ದೈವೀಪುರುಷ. ಅಂಥವರನ್ನೇ ನಾವು ನಮ್ಮ 'ಅತಿಥಿ'ಗಳಿಗೆ ಪರಿಚಯ ಮಾಡಿಕೊಡುವಲ್ಲಿ ವಿಫಲರಾಗಿದ್ದೇವೆ ಅಂದ್ರೆ ಇದೊಂಥರ ಹೆಂಗಾಯ್ತು ಅಂದ್ರೆ "ಆಗ್ರಾ ಗೆ ಕರೆದು ತಾಜ್ಮಹಲ್ ತೋರಿಸದೆ ಇರೋ ಹಾಗೆ ಆಯ್ತು".


ಬರಿಯ ತೆರೆಯಮೇಲೆ ಭರ್ಜರಿಯಾಗಿ,  ಮಾತ್ರವಲ್ಲದೆ ಆಚೆ ತಮ್ಮ ಸರಳತನದಿಂದಲೇ ವಿಜೃಂಭಿಸಿದ ರಾಜಕುಮಾರ್ ನನ್ನೇ ನಮ್ಮ ಅತಿಥಿಗಳಿಗೆ ಪರಿಚಯಿಸದ ನಾವು ಅವರ್ಣನೀಯವಾಗಿ ಕನ್ನಡಕ್ಕೆ ದುಡಿದ, ಶ್ರಮಿಸಿದ,  ಎತ್ತಿಹಿಡಿದ ಕುವೆಂಪು, ಕಾರಂತರಂಥ ಲೆಕ್ಕವಿಲ್ಲದಷ್ಟು ಮಹಾಶಯರನ್ನು ಪರಿಚಯಿಸುತ್ತೀವಾ. ಅವರ ಪರಿಚಯ ನಮ್ಗಿದ್ರೆ ತಾನೇ ನಾವು ಮಿಕ್ಕವರಿಗೆ ಅವರ ಬಗ್ಗೆ ಹೇಳೋದು. ಹೀಗೆ ಸಾಗ್ತಿದ್ರೆ ಮುಂದೊಂದಿನ ಕರ್ನಾಟಕದಲ್ಲಿ ಕನ್ನಡಿಗರೇ ಇತರರ  'ಅತಿಥಿ'ಗಳಾಗುವುದು ನಮಪ್ಪ್ರಾಣೆ ಅತಿಶಯವೇನಲ್ಲ !!!

~ಹೊಗೆ

YAARE KOOGADALI MOVIE REVIEW

ಯಾರೇ ಕೂಗಾಡಲಿ, ಕ್ಯಾರೆ ಎನ್ನದ 'ಹುಡುಗರು'.. !!

ನೋಡ್ ನೋಡ್ತಾ ಮೊದಲಾರ್ಧ ಮುಗಿದೇ ಹೋಗತ್ತೆ. ಕಥೆ ಕುತೂಹಲ ಘಟ್ಟ ಮುಟ್ಟತ್ತೆ. 'ಅಬ್ಬಾ' ಅಷ್ಟೊಂದು ವೇಗ, ಆದರೂ ಅತ್ಯಂತ ನೀಟು. ಮಧ್ಯಂತರದ ನಂತರವೂ ಅಷ್ಟೇ ವೇಗ ಕಾಪಾಡಿಕೊಂಡರೂ ಕ್ಲೈಮ್ಯಾಕ್ಸ್ ಗೆ ಬಂದು ನಿಂತಾಗ ಇಡೀ ಸಿನಿಮಾ 'ಅಷ್ಟಕ್ಕಷ್ಟೇ' ಅನಿಸಿಬಿಡತ್ತೆ.




ಕಥೆ-ಚಿತ್ರಕಥೆ :

ಕುಮಾರ್ (ಅಪ್ಪು) ನಟೇಶನ (ಯೋಗಿ) ಸಂಗ ಆಸ್ಪತ್ರೆ ಒಂದರಿಂದ ತಪ್ಪಿಸಿಕೊಂಡು ಬರ್ತಾರೆ. ಊರು ಸೇರಿ ಪೆಟ್ರೋಲ್ ಬಂಕೊಂದರಲ್ಲಿ ಕೆಲಸಕ್ಕೆ ಸೇರಿ, ಇನ್ನೂ  ಹೆಚ್ಚು ಸಾಧಿಸುವ ಛಲದಲ್ಲಿ ತಮ್ಮದೇ 'ಪೈಡ್ ಸರ್ವೀಸ್' ಕಂಪನಿಯೊಂದನ್ನ ಶುರುಮಾಡ್ತಾರೆ. ಅದೇ ದೊಡ್ಡದಾಗಿ ಬೆಳೆದು ಹತ್ತಾರು ನಿರುದ್ಯೋಗಿಗಳಿಗೆ ಕೆಲಸ ಕೊಡ್ತಾರೆ. ಈ ಮಧ್ಯೆ ಕುಮಾರ್ ನನ್ನು ಗ್ಯಾಂಗೊಂದು ಚಿತ್ರದ ಶುರುವಿಂದಲೂ ಹುಡುಕುತ್ತಿರುತ್ತೆ. ಅವರೆಲ್ಲಾ ಅವನ ಸಂಬಂಧಿಕರೇ. ಕುಮಾರ್ ಊರಿನಿಂದ ತಪ್ಪಿಸಿಕೊಂಡು ಬಂದಿರುವ ದೊಡ್ಡ ಹುಚ್ಚ, ಮಾನಸಿಕ ರೋಗಿ ಎಂದು ಬಿಂಬಿಸುವ ಹೊತ್ತಿಗೆ ಮಧ್ಯಂತರ.
ಮುಂದೆ, ಎಲ್ಲಾರು ಮಾಡುವುದು ಆಸ್ತಿಗಾಗಿ ಎಂಬಂತೆ ಹೊಡೆದಾಟ ಬಡಿದಾಟಗಳು ಎಗ್ಗಿಲ್ಲದೇ ನಡೆಯುತ್ತದೆ. ನಾಯಕ ಎಲ್ಲರನ್ನು ಬಡಿದು ಬಗ್ಗಿಸಿ ನಾಯಕಿಯನ್ನು ವರಿಸುತ್ತಾನೆ. ಅಲ್ಲಿಗೆ 'ಎಲ್ಲರ ಕೂಗಾಟ' ನಿಂತು ಯಾಪಿ ಎಂಡಿಂಗ್ !!



ತಮಿಳಿನ 'ಪೋರಾಲಿ' ಚಿತ್ರದ ನಿರ್ದೇಶಕ ಸಮುದ್ರಖಣಿ ಇಲ್ಲಿಯೂ ನಿರ್ದೇಶನದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಚಿತ್ರಕಥೆಯ ಆ ಓಟ, ಮೊದಲಾರ್ಧದ ಅತ್ಯಂತ ಬಿಗಿ ನಿರೂಪಣೆ ಎಲ್ಲವೂ ಸೂಪರ್. ಆದರೆ ಹಾಡುಗಳ ಪ್ಲೇಸ್ಮೆಂಟ್, ಮಿತಿ ಮೀರಿದ ಹಿಂಸೆ, ಕ್ಲೀಷೆಯಾಗಿ ಉಳಿಯುವ ಕಥೆ ಚಿತ್ರಕ್ಕೆ ಬಿದ್ದ ಹೊಡೆತಗಳು.
'ವಾಜಪೇಯಿ, ಕಲಾಂ, ಹಜಾರೆ ಎಲ್ಲಾ ಬ್ಯಾಚುಲರ್ ಗಳೇ, ದೇಶಾನೆ ಅವ್ರಿಗೆ ಕೊಟ್ಟಿದ್ವಿ, ಬ್ಯಾಚುಲರ್ ಗಳಿಗೆ ಮನೆ ಬಾಡಿಗೆ ಕೊಡಕ್ಕೆ ಯೋಚ್ನೆ ಮಾಡ್ತಾರೆ' ಮುಂತಾದ ಚುರುಕು ಸಂಭಾಷಣೆ ಬಂದಾಗ ಗುರುಪ್ರಸಾದ್ ಕಾಣಿಸುತ್ತಾರೆ.

ಪುನೀತ್: 
ಪುನೀತ್ ರ ಸುಮಾರುಎಲ್ಲಾ ಚಿತ್ರಗಳಂತೆ ಇಲ್ಲಿಯೂ ಅವರನ್ನ ಅತ್ಯಂತ ಸಂಭಾವಿತನಂತೆ ತೋರಿಸಲಾಗಿದೆ. ಹುಡುಗಿಯನ್ನು ಕಣ್ಣೆತ್ತಿ ನೋಡಲ್ಲ, ಐಟಮ್ ಡ್ಯಾನ್ಸರನ್ನು  ಮುಟ್ಟಲ್ಲ, ನಾಯಕಿಯೇ ಪ್ರಪೋಸ್ ಮಾಡ್ಬೇಕು ಇತ್ಯಾದಿ.
ಒಂದು ಹೊಸತನವೆಂದರೆ ಅದು ಪುನೀತ್ ರ ದ್ವಿತೀಯಾರ್ಧದ ಪಾತ್ರ. ಪೋಷಾಕಿನಲ್ಲು, ಪೋಷಣೆಯಲ್ಲೂ. ಅದು ಅಪ್ಪು ನ ಇಮೇಜಿಗೆ ವಿರುದ್ಧದ ಪಾತ್ರ. ಅದರಲ್ಲೂ ಅಪ್ಪು ಸೈ ಎನಿಸಿ ಇಮೇಜಾತೀತ ನಟರಾಗಿ ಹೊರಹೊಮ್ಮಿದ್ದಾರೆ.

ಹಾಡು:
ಹರಿಕೃಷ್ಣ ರ ಹಿನ್ನಲೆ ಸಂಗೀತ ಚಿತ್ರದ ವೇಗಕ್ಕೆ ಮತ್ತಷ್ಟು ಬಲಕೊಟ್ಟಿದೆ. ಆದರೆ ಹಾಡುಗಳು ನಿರಾಸೆ ಮೂಡಿಸುತ್ತದೆ. ಅದರ ರಾಗ ಸಂಯೋಜನೆಯಿಂದಲ್ಲ. ಅವುಗಳ ಪ್ಲೇಸ್ಮೆಂಟ್ ಇಂದ. 'ಹಲ್ಲೋ 123' ಐಟಮ್ ನಂಬರ್ 'ಪಂಕಜ'ಳ ನೆನಪಿಗಾದರೆ, 'ಕೆಂಪಾದೋ ಕೆಂಪಾದೋ' ಹಾಡು ಚಿತ್ರದ ಆ ಹಂತಕ್ಕೆ ಅಷ್ಟೇನೂ ಅವಶ್ಯವಲ್ಲ.

ಇತರೆ:
ಭಾವನ ಪ್ರಪೋಸ್ ಮಾಡೋ ದೃಶ್ಯದಲ್ಲಿ ಹೈಲೈಟ್ ಆಗ್ತಾರೆ. ಯೋಗಿಯ ಪಾತ್ರ ಪೋಷಣೆಯಲ್ಲಿ 'ಹುಡುಗರು' ಚಿತ್ರದ ಛಾಯೆಯಿದೆ. ದೀಪು ಸಂಕಲನ ನಿಜಕ್ಕೂ ಚೆನ್ನಾಗಿದೆ. 'ಏನ್ ಸ್ಪೀಡ್ ಗುರು ಫಿಲಮ್ಮು' ಅನ್ಸಿದ್ರೆ ಕ್ರೆಡಿಟ್ಸ್ ಟು ದೀಪು.
ಸುಕುಮಾರ್ ಕ್ಯಾಮೆರ ಕೆಲಸ ಚೇಸಿಂಗ್, ಫೈಟ್ ದೃಶ್ಯಗಳು ಮತ್ತು ಕೆಲವು ಲಾಂಗ್ ಶಾಟ್ ಗಳು ಚಿತ್ರಕ್ಕೆ ಕಳೆತರುತ್ತವೆ.

ಲಾಸ್ಟ್ ಪಂಚ್:
ಮನುಷ್ಯ ಸಂಘಜೀವಿ ಎಂಬ ಸಂದೇಶ ಚಿತ್ರ ಶುರುವಾಗುವ ಮುಂಚೆಯೇ ಹೇಳುವುದು ಹಾಲಿವುಡ್ ಸ್ಟೈಲ್ ಆಫ್ ಮೇಕಿಂಗ್. ಇದನ್ನ ಸಾರಲು ತಮಿಳಿನ ಒಂದು ಚಿತ್ರವನ್ನು ಡಾ! ರಾಜ್ ಸಂಸ್ಥೆ  ಕನ್ನಡಕ್ಕೆ ರೀಮೇಕ್ ಮಾಡುವ ಬದಲು
ಇದೇ ಸಂದೇಶವನ್ನು ಹೇಳಲು ಇದರಪ್ಪನಂತಹ ಕಥೆಗಳು ಕನ್ನಡದಲ್ಲಿ ಸಿಗುತ್ತಿದ್ದವು ಎಂದೆನಿಸುವುದು ಪ್ರತಿಯೊಬ್ಬ ಸ್ವಾಬಿಮಾನಿ ಕನ್ನಡಿಗನ ಒಮ್ಮತ ಅಭಿಪ್ರಾಯ.



~ಹೊಗೆ

EDEGAARIKE MOVIE REVIEW

 ಮನಸಿನಲ್ಲಿ ಉಳಿಯುವ ಎದೆಗಾರಿಕೆ !!!

ಎದೆ ಝಲ್ ಎನಿಸೋ ಕಥೆಗೆ ಸ್ವಲ್ಪ ಡಲ್ ಎನಿಸೋ  ಟೆಕ್ನಿಕಲ್ ಅಂಶಗಳ ಹೊತ್ತು ಬಂದಿರುವ ಚಿತ್ರವೇ 'ಎದೆಗಾರಿಕೆ'.
ಮಹಿಳಾ ನಿರ್ದೇಶಕರೊಬ್ಬರು ಒಬ್ಬ ಪುರುಷನ ಎದೆಗಾರಿಕೆಯ ಮೇಲೆ ಚಿತ್ರ ಮಾಡಿರುವುದು ಒಳ್ಳೆಯ ಬೆಳವಣಿಗೆ. 
ಹಾಗಂತ ಇದು ಮಹಿಳಾ ಪ್ರಧಾನ ಚಿತ್ರವಾಗದೆ ಕಥೆಯಲ್ಲಿ ಪುರುಷ ಪ್ರಾಧಾನ್ಯತೆ ಇದೆ. ಪತ್ರಕರ್ತ ಅಗ್ನಿ ಶ್ರೀಧರ್ ರವರ  ಕಿರು ಕಾದಂಬರಿ ಆಧಾರಿತ ಈ ಚಿತ್ರ ಭೂಗತ ಜಗತ್ತಿನ ತಣ್ಣನೆ ಕ್ರೌರ್ಯದ ಕನ್ನಡಿಯಂತಿದೆ.

 ಮುಂಬೈನ ಸುಪಾರಿ ಕಿಲ್ಲರ್ ಒಬ್ಬನನ್ನು 'ಉಡಾಯಿಸಲು' ಬೆಂಗಳೂರಿನ ಭೂಗತ ಲೋಕದ ಒಂದು ತಂಡವೊಂದಕ್ಕೆ ದುಬೈ ಇಂದ 'ಆರ್ಡರ್' ಬಂದಿರುತ್ತದೆ. ಆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಅವರು ಬೆಂಗಳೂರಿನಿಂದ ಸಕಲೇಶಪುರಕ್ಕೆ 'ಮುಂಬೈ'ನವನೊಂದಿಗೆ ಹೋಗುತ್ತಾರೆ. ಅಲ್ಲಿ ಕಾಣಸಿಗುವುದೇ ಮನುಷ್ಯನೋರ್ವನ ಎದೆಗಾರಿಕೆ. ಅವನು ಸಾವಿಗೆ ಒಡ್ಡುವ ಎದೆಗಾರಿಕೆ. ಹಾಗಂತ ಅವನು ಕಲ್ಲು ಹೃದಯದವನಲ್ಲ. ಅವನಿಗೂ ಒಬ್ಬಳು ಪ್ರೇಯಸಿ ಇರುತ್ತಾಳೆ. ಸುಪಾರಿ ಒಂದಿದ್ರೆ ಸಾಕು ಎಂಥವರನ್ನು ಬೇಕಾದರೂ ಕೊಲ್ಲಬಲ್ಲ ಆತ ಓರ್ವ ಮುದುಕಿಗೆ ಗುಂಡು ಹೊಡೆಯಲು ನಿರಾಕರಿಸುತ್ತಾನೆ. ಹೀಗೆ ಅವನೆಷ್ಟು ಮನುಷ್ಯ ಹೃದಯೀ ಅಂತ ತೋರಿಸುತ್ತಲೇ ಚಿತ್ರಕಥೆ ಅವನ ಸಾವಿನತ್ತ ಹೊರಳುತ್ತದೆ. ಅವನ ಸಾವು ಅವನಿಗೆ ತಿಳಿದಿರುತ್ತದೆ.

ಇಂಥಾ ಕ್ಲಾಸಿಕ್ ಎನಿಸುವ ಕಥೆಗೆ ಚುರುಕ್ ಎನಿಸುವ ಸಂಭಾಷಣೆ ಇದೆ. ಚಿತ್ರಕಥೆಯಲ್ಲಿ ಧಂ ಇದೆ. ಕೆಲವು ಶಾಟ್ಸ್ ತುಂಬಾನೇ ಅರ್ಥವತ್ತಾಗಿದೆ. ಆದರೆ ಒಟ್ಟಾರೆಯಾಗಿ ನೋಡಿದಾಗ ದೃಶ್ಯಗಳ ಕ್ವಾಲಿಟಿ ಶ್ರೇಷ್ಠ ದರ್ಜೆಯದ್ದಲ್ಲ. ಅದಕ್ಕೆ ಬಜೆಟ್ ಕಾರಣವಿರಬಹುದು. ಈಗಿನ ಎಲ್ಲ ಚಿತ್ರಗಳಲ್ಲಿ ಕಾಣುವ ಕಲರ್ ಗ್ರೇಡಿಂಗ್ ಈ ಚಿತ್ರದಲ್ಲಿ ಕಾಣುವುದೇ ಇಲ್ಲ. ಇದೇ ಚಿತ್ರವನ್ನು ಇನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬಹುದಿತ್ತು, ಸೂಕ್ತ ತಂತ್ರಜ್ಞಾನ ಬಳಸಿದ್ದರೆ. 
ಉದಾಹರಣೆಗೆ, ತುಂಬಾ ಭಾವನಾತ್ಮಕ 
ಸನ್ನಿವೇಶಗಳಲ್ಲಿ, ಭೂಗತ ಜಗತ್ತನ್ನು ತೋರಿಸುವಾಗ, ಕಾಡಿನಲ್ಲಿ ಚಿತ್ರಿಸುವಾಗ ಕ್ರೇನ್ ಬಳಸಿದ್ದರೆ ಅದು ಕಥೆ ಹೇಳುವ ರೀತಿಯೇ ಬೇರೆ. ಅದು ಹೆಚ್ಚು ಬಳಕೆಯಾಗಿಲ್ಲ. ಕೆಲವು ಋಣಾತ್ಮಕ ಅಂಶಗಳನ್ನು  ಬದಿಗೊತ್ತಿ ನೋಡಿದರೆ, 'ಎದೆಗಾರಿಕೆ' ನಿಸ್ಸಂಶಯವಾಗಿ ಒಳ್ಳೆ ಪ್ರಯತ್ನ.

ಅತುಲ್ ಕುಲಕರ್ಣಿ ಅಭಿನಯಕ್ಕೆ ಧಂಗು ಬಡಿಸುವಷ್ಟು ಅದ್ಭುತ. ಅವರ ಮುಂದೆ ಆದಿತ್ಯ, ಸೃಜನ್ ಲೋಕೇಶ್, ಧರ್ಮ ಎಲ್ಲ ಮಾಸ್ಕ್ ಆಗ್ತಾರೆ.


ಮಿಸ್ ಮಾಡ್ದೆ ಚಿತ್ರ ನೋಡಿ.. ಕೊನೆಯಲ್ಲಿ ತಲೆ ಬಿಮ್ ಅಂದ್ರೆ ಚಿತ್ರ ಮಾಡಿದವರಿಗೆ ಸಾರ್ಥಕತೆ...

~ಹೊಗೆ

DRAMA KANAADA MOVIE REVIEW

ಭಟ್ರು ಕಥೆ ಹೇಳ್ತಾವ್ರೆ .. ಒಂದ್ಸಲ ಹೋಗ್ಬನ್ನಿ.. !!

ಜೀವನ ನಾಟಕರಂಗ, ನಾವೆಲ್ಲ ಪಾತ್ರಧಾರಿಗಳು, ದೇವರೇ ಸೂತ್ರಧಾರ ಎಂಬ ಅನಾದಿಕಾಲದ ನುಡಿಯನ್ನು ನಿರ್ದೇಶಕರು
ಚಿಕ್ಕದಾಗಿ ಚೊಕ್ಕದಾಗಿ 'ಬೊಂಬೆ ಆಡ್ಸೋನು ಮೇಲೆ ಕುಂತವ್ನೆ' ಅಂತ ಹೇಳಿ ತುಂಡ್ ಹೈಕಳ ಕೈಯಲ್ಲಿ ಒಂದು ನಾಟಕೀಯ ತಿರುವುಗಳಿರುವ ಡ್ರಾಮಾ ಆಡಿಸಿದ್ದಾರೆ. ಮುಂಗಾರುಮಳೆ,ಗಾಳಿಪಟ ನಂತರ ಭಟ್ರ ಕಡೆಯಿಂದ ಅಂಥಾ  ಒಂದು ಗಟ್ಟಿ ಕಥೆಯುಳ್ಳ ಚಿತ್ರ ಬಂದಿಲ್ಲವೆನ್ನುವ ಆರೋಪದಿಂದ ಒಂದು ಪಕ್ಕಾ 'ಡ್ರಾಮ' ಆಡಿಸಿ ಆರೋಪ ಮುಕ್ತರಾಗಿದ್ದಾರೆ.

ಕಥೆಯಲ್ಲಿ ಎಂದಿನಂತೆ (ಭಟ್ರ ಸ್ಟೈಲ್) ಓತ್ಲಾ ಹೊಡೆಯುವ ಇಬ್ಬರು ನಾಯಕರು. ಅವರಿಗೆ ತುಂಡ್ ಹೈಕಳು ಎಂಬ ನಾಮಕರಣ. ಹಿಂಗೇ ಓತ್ಲಾ ತಿರುಗೋ ಇಬ್ಬರ ಚೇಷ್ಟೆ ತರಲೆಗಳು ಸಾಗ್ತಿದ್ದಂತೆ ಕಥೆ ನಾಯಕಿ(ರಾಧಿಕಾ ಪಂಡಿತ್) ಕಡೆಗೆ ಮುಖ ಮಾಡುತ್ತದೆ. ಪ್ರಾಣಕ್ಕೆ ಅಪಾಯವಿರುವ ನಾಯಕಿ, ನಾಯಕಿ ತಂದೆ ಅದಕ್ಕೆ ಕಾರಣರಾಗಿರುವುದು, ನಾಯಕ ನಾಯಕಿ ಭೇಟಿ, ಲವ್ವು ಗಿವ್ವು ಇತ್ಯಾದಿಗಳ ಜೊತೆಗೆ ಚಿತ್ರದಲ್ಲಿ ದೊಡ್ಡ ನಾಟಕವೇ ಅಡಗಿದೆ. ಇದರ ಜೊತೆಗೆ ಇರುವ ಮತ್ತೊಂದು ವಿಶೇಷ ಅಂಶ ಎಂದರೆ ಆಧ್ಯಾತ್ಮ. ಇಷ್ಟು ದಿನ ಭಟ್ರ ಹಾಡುಗಳಲ್ಲಿ ಅಡಗಿದ್ದ ತತ್ವಶಾಸ್ತ್ರ, 'ಡ್ರಾಮಾ'ದ ಕಥೆಯಲ್ಲಿ  ಬೆರೆತು ಇನ್ನು ಕೊಂಚ ಸಾಗಿ ಅಧ್ಯಾತ್ಮಿಕ ಅಂಶಗಳನ್ನ ಬೆರೆಸಿ ಪ್ರೇಕ್ಷಕರನ್ನ ಮತ್ತಷ್ಟು ಕಥೆಯೊಂದಿಗೆ ಒಡಗೂಡಿಸಿಕೊಳ್ಳುವ ತಂತ್ರ ಎನ್ನಬಹುದೇನೋ. ಆ ನಿಟ್ಟಿನಲ್ಲಿ ಚಿತ್ರಕಥೆ ಯಶಸ್ವಿಯಾಗಿದೆ.



ಯಶ್ ಸಾಹಸ, ನೃತ್ಯಗಳಲ್ಲಿ ಮಿಂಚಿ ಬರೀ ತುಂಡ್ ಅಭಿನಯ ಅನ್ಸ್ಕೊಳದೆ ಕ್ಲೈಮಾಕ್ಸ್ನಲ್ಲಿ ಅತ್ತು ಪರಿಪೂರ್ಣತೆ ಮೆರೆದಿದ್ದಾರೆ.
ಇನ್ನು ಸತೀಶ್ ಗೆ ಮತ್ತದೇ ಹಳ್ಳಿ ಸೊಗಡಿನ ಡೈಲಾಗ್ ಡೆಲಿವರಿಯಲ್ಲೇ ಸೈ ಎನಿಸಿಕೊಳ್ತಾರೆ. ರಾಧಿಕ ಪಂಡಿತ್ ರ ನಾಯಕಿಯ ಪಾತ್ರಕ್ಕೆ ಭಟ್ರು ಪುನಃ 'ನಂದಿನಿ' ಅನ್ನೋ ಹೆಸರಿಟ್ಟಿರುವುದು ಗಮನಿಸಬೇಕಾದ ಅಂಶ.ಪಂಡಿತ್ ಹಿಂದೆಂದಿಗಿಂತ ಮುದ್ದಾಗಿ ಕಾಣ್ತಾರೆ. ಸಿಂಧು ಲೋಕನಾಥ್ ಮೂಕಾಭಿನಯದಲ್ಲಿ ಮುಗ್ಧ ಲುಕ್ಸ್. ಸುಚೇಂದ್ರ ಪ್ರಸಾದ್ ಭಾವಾವೇಗದ ಕಾಲೇಜ್ ಪ್ರಾಂಶುಪಾಲರ ಜಟಿಲ ಪಾತ್ರವನ್ನ ಸಲೀಸಾಗಿ ಅಭಿನಯಿಸಿದ್ದಾರೆ. ಇನ್ನು ಅಂಬರೀಷ್ ಗೆ ಪರದೆಯ ಮೇಲೆ ವಿಶಿಷ್ಟ ಸ್ಥಾನ ಕಲ್ಪಿಸಲಾಗಿದೆ. ಬೊಂಬೆ ಶಾಸ್ತ್ರದವನ ಪಾತ್ರದಲ್ಲಿ ಅವರದು ಪ್ರಬುದ್ಧ ನಟನೆ.

ಮಳೆ ನಂತರ ಭಟ್ರು ಕಾಮೆರಮ್ಯಾನ್ ಕೃಷ್ಣ ಜೊತೆ ಕೆಲಸ ಮಾಡಿರೋದು ಇದರಲ್ಲೇ. ಸಾಕಷ್ಟು ಗ್ಯಾಪ್ ಆದರೂ ಅವರಿಬ್ಬರ ಜೋಡಿ ಮತ್ತೊಮ್ಮೆ ಕೆಲಸಮಾಡಿದೆ. ಕೃಷ್ಣ ಅಂದಮೇಲೆ ಸಾಕಷ್ಟು ಏರಿಯಲ್ ಮತ್ತು ಹ್ಯಾಂಡ್ ಹೆಲ್ಡ್ ಶಾಟ್ಸ್ ಇರಲೇಬೇಕು.
ಅವೇ ಒಮ್ಮೊಮ್ಮೆ ಕಥೆ ಹೇಳುತ್ತವೆ.ರವಿವರ್ಮ ಸಾಹಸದಲ್ಲಿ ಒಂದು ಫೈಟ್ ಮಜಬೂತಾಗಿ ಮೂಡಿಬಂದಿದೆ, ಏನೋ ನಿಜವಾಗಲು ಹೊಡೆದಾಡುತ್ತಿದ್ದಾರೆ ಎನ್ನುವಷ್ಟು. ಒಂದು ಬಿಟ್ ಅನ್ನು ಬಿಟ್ರೆ ಉಳಿದೆಲ್ಲ ಹಾಡುಗಳನ್ನು ಭಟ್ರೇ ಬರ್ದಿರೋದು ಅವರ ಪ್ರತಿಭೆಗೆ ಕನ್ನಡಿ. ಹರಿಕೃಷ್ಣ ಹಾಡುಗಳು ಮತ್ತು ಹಿನ್ನಲೆ ಸಂಗೀತ ಒಂದಕ್ಕೊಂದು ಸ್ಪರ್ಧೆಗೆ ಬಿದ್ದಂತೆ ಸಕ್ಕಾತಾಗಿ ಮೂಡಿಬಂದಿದೆ.

ಒಟ್ನಲ್ಲಿ ತುಂಡ್ ಹೈಕಳ ಸಾವಾಸ ಚೆನ್ನಾಗೈತೆ. ಮನರಂಜನೆಯ ರಸದೂಟ ಕೊಡೋದ್ರಿಂದ ಉಪವಾಸ ದೂರದ ಮಾತು. ಭಟ್ರು ಅಪರೂಪಕ್ಕೆ ಕಥೆ ಮಾಡವ್ರೆ .. ಕೊನೆಗ್ ಒಂದು ಅರ್ಥವತ್ತಾದ ಸಂದೇಶವಿದೆ. ಹೋಗಿ ನೋಡ್ಕೊಮ್ಬನ್ನಿ. !!!


~ಹೊಗೆ

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ MOVIE REVIEW

ಬತ್ತಿಹೋದ ದೇಶಭಕ್ತಿಗೆ ರಾಯಣ್ಣ ಔಷಧಿ..

ಮೂವತ್ತು ಕೋಟಿ ಬಜೆಟ್, ಕನ್ನಡ ಚಿತ್ರರಂಗದಲ್ಲೇ ಅತೀ ದೊಡ್ಡ ಚಿತ್ರ ಎಂಬ ಹೆಗ್ಗಳಿಕೆ, ದರ್ಶನ್ ರಂಥ ಅಜಾನುಬಾಹು ದೇಹ ಮತ್ತು ಅಷ್ಟೇ ಮಟ್ಟದ ಪ್ರೇಕ್ಷಕವರ್ಗ ಹೊಂದಿರುವ ನಾಯಕನಟ, ಈಗಿನ ಮಟ್ಟಕ್ಕೆ ಅಪರೂಪ ಎನಿಸುವ ಐತಿಹಾಸಿಕ ವಿಷಯಾಧಾರಿತ ಕಥೆ, ಸಂಗೊಳ್ಳಿ ರಾಯಣ್ಣನಂಥ ಮೇರುಪುರುಷನ ಮೇಲಿನ ಕಥಾವಸ್ತು.. ಇಷ್ಟು ಸಾಕು ಒಂದು ಚಿತ್ರವನ್ನ 
ಅದ್ಭುತ ಎನಲು. ಆದರೆ ಈ ಅದ್ಭುತವನ್ನ ಅತ್ಯದ್ಭುತ ಮಾಡಲು ನಿರ್ದೇಶಕ ನಾಗಣ್ಣ ಎಡವಿದ್ದಾರೆ. 

ರಾಯಣ್ಣ ಕಿತ್ತೂರು ಸಂಸ್ಥಾನದ ವೀರರಾಣಿ ಚೆನ್ನಮ್ಮಳ ಬಲಗೈ ಭಂಟ. ಸಂಗೊಳ್ಳಿ ಅವನ ಊರು. ಕಥೆ ಆರಂಭವಾಗುವುದು
ಹೀಗೆ. ಬ್ರಿಟಿಷ್ ಅಧಿಕಾರಿ ಥ್ಯಾಕರೆ ರಾಣಿ ಚೆನ್ನಮ್ಮಳ ಬಳಿ ಕಪ್ಪ ಕೇಳಲು ಬರುತ್ತಾನೆ. ರಾಣಿಯು ಫೇಮಸ್ ಸ್ಕೂಲ್ ಫ್ಯಾನ್ಸಿ ಡ್ರೆಸ್ ಡೈಲಾಗ್ 'ನಿಮಗೇಕೆ ಕೊಡಬೇಕು ಕಪ್ಪ' ಎನ್ನುತ್ತಾಳೆ. ಥ್ಯಾಕರೆ ಸಾಹೇಬ ಅಪಮಾನಿತನಾಗಿ ಒಳಸಂಚು ನಡೆಸಿ ಯುದ್ಧಸಾರುತ್ತಾನೆ. ರಾಯಣ್ಣ ಮುಂದಾಳತ್ವದಲ್ಲಿ ಆ ಯುದ್ಧ ಗೆದ್ದು ಕಿತ್ತೂರು ಹರ್ಷೋದ್ಗಾರ ಮಾಡುತ್ತದೆ. ಆ ಯುದ್ಧದಲ್ಲಿ ಥ್ಯಾಕರೆ ಸತ್ತ ಪರಿಣಾಮ ಹೊಸ ಬ್ರಿಟಿಷ್  ಅಧಿಕಾರಿ ಬರುತ್ತಾನೆ. ಅವನು ಮತ್ತೊಂದು ಯುದ್ಧ ಸಾರಿ, ವಿರೋಧ ಪಕ್ಷದ ಕೆಲವರಿಗೆ ಹಣದಾಸೆ ತೋರಿಸಿ ಯುದ್ಧ ಗೆಲ್ಲುತ್ತಾನೆ. ರಾಣಿ, ರಾಯಣ್ಣ ಇತರ ಎಲ್ಲರೂ ಸೇರಿ ಬಂಧಿತರಾಗುತ್ತಾರೆ.
ಐದು ವರ್ಷದ ನಂತರ ರಾಯಣ್ಣ ಮತ್ತು ಇತರರು ಬಿಡುಗಡೆಗೊಳ್ತಾರೆ, ರಾಣಿ ಚೆನ್ನಮ್ಮನ ಹೊರತಾಗಿ. ಅಲ್ಲಿಯತನಕ ಕೇವಲ ವೀರನಾಗಿದ್ದ ರಾಯಣ್ಣ, ಅಲ್ಲಿಂದ ಕ್ರಾಂತಿಕಾರಿ ನಿಲುವುಗಳನ್ನು ತಾಳಿ ಕ್ರಾಂತಿವೀರನಾಗ್ತಾನೆ. ಗೆರಿಲ್ಲಾ ಮಾದರಿಯ ತಂತ್ರಗಳನ್ನು ಹೂಡಿ ಬ್ರಿಟಿಷರನ್ನು ಹೈರಾಣಾಗಿಸುತ್ತಾನೆ. ಕೊನೆಗೆ ಕೆಲ ದೇಶಭ್ರಷ್ಟರ ಕುಯುಕ್ತಿಯಿಂದ ಬ್ರಿಟಿಷರಿಗೆ ಸಿಕ್ಕಿ ಗಲ್ಲು
ಶಿಕ್ಷೆಗೆ ಒಳಗಾಗುತ್ತಾನೆ.


 
ಇಡೀ ಚಿತ್ರಕಥೆ ದೇಶಭಕ್ತಿಯ ಬದಲಾಗಿ ರಾಯಣ್ಣನೊಬ್ಬನನ್ನೇ ವೈಭವೀಕರಿಸುತ್ತದೆ. ಅದೇ ಇಲ್ಲಿ ದೊಡ್ಡ ಕಂದಕವಾಗುತ್ತದೆ.
ಬೇರೆ ಯಾವುದೇ ಒಂದು ಪಾತ್ರಕ್ಕೂ ಮಹತ್ವವೇ ಇಲ್ಲದಂತಾದಾಗ ಮೂರು ಗಂಟೆಗಳ ಕಾಲ ರಾಯಣ್ಣ ನಂಥ ರಾಯಣ್ಣನನ್ನೇ ನೋಡಲು ಬಹಳಷ್ಟು ಬೇಸರವಾಗುತ್ತದೆ. ಜಯಪ್ರದ ರಾಣಿಯ ಪಾತ್ರದಲ್ಲಿ ನೀರಸವಾಗಿ ತೋರುತ್ತಾರೆ. ಉಮಾಶ್ರೀ ಬರಿಯೆ ಒಂದೆರಡು ಪಂಚಿಂಗ್ ಡೈಲಾಗ್ಸ್ ಗೆ ಸೀಮಿತವಾಗುತ್ತಾರೆ. ಇನ್ನು ಶಶಿಕುಮಾರ್ ಸಾಕಷ್ಟು ಸಮಯಗಳ ಕಾಲ ಸ್ಕ್ರೀನ್ ಮೇಲೆ ಕಂಡರೂ ಅವರ ಪಾತ್ರಕ್ಕೆ ಮಹತ್ವವೇ ಇಲ್ಲ. ಇನ್ನು ನಾಯಕಿ ಹಣೆಪಟ್ಟಿ ಹೊತ್ತ ನಿಖಿತಾ ಅಂತೂ ಐಟಂ ಡ್ಯಾನ್ಸರ್ ನಂತೆ  ಒಂದು ಹಾಡಿಗೆ ಮಾತ್ರ ಬಂದು ಹೋಗ್ತಾರೆ.

ಐದು ವರ್ಷದ ನಂತರವೂ ಹುಡುಗನೊಬ್ಬ ದೊಡ್ದವನಾಗದಿರುವುದು, ರಾಯಣ್ಣನ ವಿಗ್ ನೀರಿನ ಫೈಟ್ ನಲ್ಲೂ ಒದ್ದೆಯಾಗದೆ ಇರುವುದು ಹೀಗೆ ಸಾಕಷ್ಟು ಋಣಾತ್ಮಕ ಅಂಶಗಳನ್ನು ಹೊಂದಿದ್ದರು 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಒಂದು ಅಸಾಧಾರಣ ಚಿತ್ರ. ಇಲ್ಲಿ ಮೊದಲು ಸ್ಮರಿಸಬೇಕಿರುವುದು ಕೆಚ್ಚೆದೆಯ ನಿರ್ಮಾಪಕರಾದ ಆನಂದ ಅಪ್ಪುಗೊಳ್ ರವರನ್ನ. ಹಿಂದೆಂದೂ ಮಾಡಿರದ ಶೈಲಿಯಲ್ಲಿ ಚಿತ್ರವನ್ನು  ಕನ್ನಡ ಪ್ರೇಕ್ಷಕರ ಮುಂದೆ ತಂದಿದ್ದಾರೆ. ದರ್ಶನ್ ಕೂಡ ಸಾಕಷ್ಟು ಶ್ರಮವಹಿಸಿದ್ದಾರೆ. ಪೋಷಾಕಿನಲ್ಲಿ ನೋಡಲು ರಾಯಣ್ಣನ ಅಪರಾವತಾರ. ಧ್ವನಿಯೇರಿಸಿ ಡೈಲಾಗ್ಸ್ ಹೇಳಿದರೆ ಮಾತ್ರ ಅದು ಅಭಿನಯ ಅಂತ ನಿರ್ದೇಶಕರು ಭಾವಿಸಿದ್ದಾರೇನೋ ಎಂದು ಒಮ್ಮೊಮ್ಮೆ ಅನಿಸಿದರೆ ಅದು ದರ್ಶನ್ ತಪ್ಪಲ್ಲ.

ಇಂಥ ಮಹಾನ್ ಚಿತ್ರಕ್ಕೆ ತಕ್ಕ ಸಂಗೀತ, ಕ್ಯಾಮೆರ ಕೆಲಸ ಇಲ್ಲದಂತಾಗಿದೆ. ಅಥವಾ ಜನರ ನಿರೀಕ್ಷೆಗೆ ತಕ್ಕುದಾಗಿಲ್ಲ.
ಆದರು ನಮ್ಮ ಬತ್ತಿಹೋದ ದೇಶಭಕ್ತಿಗೆ ಈ ಚಿತ್ರ ಒಂದು ಔಷಧಿ. ಸಂಗೊಳ್ಳಿ ರಾಯಣ್ಣ ನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಹೋಗಿ ನೋಡಿ. ಕ್ಲೈಮಾಕ್ಸ್ ನಲ್ಲಿ ಕಣ್ಣಲ್ಲಿ ನೀರು ಜಿನಿಗೋದ್ ಖಂಡಿತ.

>>>>

~ಹೊಗೆ