shiva kannada movie review

 ಮಿಷನ್ ಇಂಪಾಸಿಬಲ್ಗೂ  ಶಿವನಿಗೂ 'ಎತ್ತ'ಣಿಂ'ಎತ್ತ' ಸಂಬಂಧ...

 ಟಾಮ್ ಕ್ರ್ಯೂಸ್ 'ಮಿಷನ್ ಇಂಪಾಸಿಬಲ್ 'ಲಿ  ಮಾಡಿದ ಸಾಹಸ ದೃಶ್ಯವೊಂದನ್ನು ಶಿವಣ್ಣನ  ಅಭಿನಯದಲ್ಲಿ ನೋಡ್ಬೇಕು
ಅಂತ ನಿರ್ದೇಶಕ ಓಂಪ್ರಕಾಶ್ ರಾವ್ ಗೆ ಅದ್ಯಾವಾಗ್ ಕನಸು ಬಿದ್ದಿತ್ತೋ ಗೊತ್ತಿಲ್ಲ, ಹಂಗೆ ಅಲ್ಲಿಂದ ಸೀದಾ ತಂದು ಇಳಿಸಿದ್ದಾರೆ. ಅದಿರಲಿ ಬಿಡಿ. ಆ 'ಶಿವ'ನ ಮೇಲೆ ಭಾರ ಹಾಕಿ ಅದನ್ನ ಮರೆತುಬಿಡೋಣ.

ಸಮಾಧಾನದ ಸಂಗತಿಯೆಂದರೆ ಅಂತ ಹೊಸತನವಿಲ್ಲದಿದ್ದರೂ ಈ ಚಿತ್ರಕ್ಕೊಂದು ಕಥೆಯಿದೆ. ಅದೊಂದು ಸೇಡಿನ ಕಥೆ.
ನಾಯಕ (ಶಿವರಾಜಕುಮಾರ್) ಮತ್ತು ನಾಯಕಿಯ(ರಾಗಿಣಿ) ಪೋಷಕರು ಫ್ಯಾಮಿಲಿ ಫ್ರೆಂಡ್ಸ್. ನಾಯಕಿಯ ತಂದೆ ಪತ್ರಕರ್ತ, ನಾಯಕನ ತಂದೆ ಕುದುರೆ ಜಾಕಿ. ಇಬ್ಬರೂ ಪ್ರಾಮಾಣಿಕರು. ಅದೇ ಕಾರಣಕ್ಕೆ ಅವರನ್ನು ಮೂರು ಜನ ಖಳನಾಯಕರು ಕೊಂದುಹಾಕುತ್ತಾರೆ. ಇತ್ತ ನಾಯಕ ನಾಯಕಿ ಬೆಳೆದು ದೊಡ್ಡವರಾದ ಮೇಲೆ ತನ್ನ ಪೋಷಕರನ್ನು ಕೊಂದ ವ್ಯಕ್ತಿಗಳ ಮೇಲೆ ಸೇಡು ತೀರಿಸಿಕೊಳ್ಳುವ ಕಥೆಯೇ 'ಶಿವ'.



ಈ ಕಥೆಯು ಚಿತ್ರಕಥೆ ಆಗುವ ಹಂತದಲ್ಲಿ ಕೊಂಚ ತಿರುವು ಮುರುವುಗಳನ್ನು ಕಂಡರೂ ಅವೆಲ್ಲ ಕನ್ನಡ ಪ್ರೇಕ್ಷಕನಿಗೆ ಹಳೇ  ಮಾಲು. ಒಂದು ಗಟ್ಟಿ ನಿರೂಪಣೆ ಇದ್ದಿದ್ದರೆ ನಿರ್ಮಾಪಕರು ಸುರಿದ ದುಡ್ದಿಗಾದರೂ ಕಳೆ ಬರುತಿತ್ತು.

ಶಿವಣ್ಣ ಕಥೆಯ ಆಯ್ಕೆಯಲ್ಲಿ ಮತ್ತೊಮ್ಮೆ ದುಡುಕಿದಂತೆ ಭಾಸವಾದರೂ ಎಂದಿನಂತೆ 
ತೆರೆಮೇಲೆ ಶಿವ ತಾಂಡವ  ಅಭಿಮಾನಿಗಳಿಗೆ ಹಬ್ಬ. ನಿರ್ದೇಶಕರು ನಾಯಕಿಯ ಪಾತ್ರಕ್ಕೂ ಹೆಚ್ಚು ಒತ್ತುಕೊಟ್ಟಿರುವುದು ಪ್ರೋತ್ಸಾಹಕರ ಸಂಗತಿ. 
ಆದರೆ  ರಾಗಿಣಿಯ ನಟನೆಯಲ್ಲಿ ಅಷ್ಟೇನೂ ವಿಶೇಷ ಇಲ್ಲದಿದ್ರೂ
ಅಂದ ಚಂದಕ್ಕೆ ತಕ್ಕ ವೇದಿಕೆ.
ಖಳನಾಯಕರಾಗಿ ರವಿಶಂಕರ್ ಸುಮ್ಮನೆ ಧ್ವನಿ ಪ್ರದರ್ಶನ ಮಾಡಿದರೆ, ರಂಗಾಯಣ ರಘು ತೆಲುಗು ಮಿಕ್ಸ್ ಕನ್ನಡ ಅಷ್ಟೇನು
ರುಚಿಸುವುದಿಲ್ಲ. ಗುರುದತ್ ಪಾತ್ರಕ್ಕೆ ಮಹತ್ವವಿಲ್ಲ.

ಸತ್ಯ ಹೆಗಡೆ ಟಾಪ್ ಆಂಗಲ್ ಶಾಟ್ಸ್ ನಲ್ಲಿ ಕಾಣುವ ಕ್ಲೈಮ್ಯಾಕ್ಸ್ ದೃಶ್ಯ ಅವರ ಉತ್ತಮ ಕೆಲಸಕ್ಕೆ ಕನ್ನಡಿ. ಗುರುಕಿರಣ್ ಸಂಗೀತ ವೈನಾಗಿದ್ದರೂ ಚಿತ್ರದಲ್ಲಿ ಹಾಡುಗಳ ಕೆಟ್ಟ ಪ್ಲೇಸ್ಮೆಂಟ್ ಮತ್ತು ಸಾಧಾರಣ ಸಂಯೋಜನೆಯಿ0ದಾಗಿ ಸಪ್ಪೆಯಾಗಿ ಕಾಣುತ್ತದೆ.

ಬುಲೆಟ್ ಪ್ರಕಾಶ್, ಶೋಭರಾಜ್ ಮತ್ತು ಶಿವಣ್ಣ ರ ಮಧ್ಯೆ ನಡೆಯುವ ಹಾಸ್ಯ ಸನ್ನಿವೇಶಗಳು ಚಿತ್ರಕ್ಕೆ ಜೀವಾಳ. ಪುಣ್ಯಕ್ಕೆ ಅವು ಬೇರೆ ಭಾಷೆಯಿಂದ ತಂದದ್ದಲ್ಲ ಎಂದು ನಂಬೋಣ.
ಚಿತ್ರದಲ್ಲಿ ಅಂತ ಹೇಳಿಕೊಳ್ಳುವ ಪಂಚಿಂಗ್ ಡೈಲಾಗ್ಸ್ ಇಲ್ಲದಿದ್ದರೂ
ಅಭಿಮಾನಿಗಳು ಶಿವಣ್ಣನ ಅಭಿನಯ, ಸಾಹಸ, ನೃತ್ಯ ನೋಡಿ ತೃಪ್ತಿಪಡ್ಕೊಳ್ತಾರೆ.
ಆದರೆ ಒಂದು ಒಳ್ಳೆಯ ಚಿತ್ರನೋಡಬೇಕೆನ್ನುವ ಆಸೆಯಿಂದ ಬರುವ ಒಬ್ಬ ಕನ್ನಡ ಪ್ರೇಕ್ಷಕ ??? 


~ಹೊಗೆ

GODFATHER KANNADA MOVIE REVIEW

ಗಾಡ್ ಫಾದರ್ ನಲ್ಲಿ ಉಪ್ಪಿದೆ, ರುಚಿಯಿಲ್ಲ !!
ನಿಮಗೇನಾದರೂ ಕಣ್ಣು ಮಂಜಾಗಿದ್ದು, ಈ ಚಿತ್ರವನ್ನ ಮ್ಯೂಟ್ ಮಾಡಿಕೊಂಡು ನೋಡಿದರೆ, ಇದು ತಮಿಳಿನದ್ದೋ ಅಥವಾ ಕನ್ನಡದ್ದೋ ಎಂದು ಗುರುತಿಸುವುದು ಕಷ್ಟವಾಗಬಹುದು. ಏಕೆಂದರೆ ಕಥೆ ಮಾತ್ರವಲ್ಲ, ಪ್ರತಿಯೊಂದು ಶಾಟ್ ಬೈ ಶಾಟ್ ತಮಿಳಿನಿಂದ ಇಳಿಸಿದ್ದಾರೆ. ರೀಮೇಕ್ ಮಾಡೋದು ಎಷ್ಟು ಸುಲಭ ಅಂತ ತೋರಿಸಿದ್ದಾರೆ.

ಇದು ರೀಮೇಕ್ ಎಂಬುದನ್ನು ಮರೆತು ಸುಮ್ಮನೆ ಚಿತ್ರವನ್ನು ನೋಡುವುದಾದರೆ, ಕಥೆಯಲ್ಲಿ ಹೊಸತನವಿದೆ.ಆದರೆ ನಿರೂಪಣೆ ಮಾತ್ರ ಓಬಿರಾಯನ ಮುತ್ತಾತನ ಕಾಲದ್ದು. ಕ್ಲೈಮ್ಯಾಕ್ಸ್ ನಲ್ಲಿ ಪೋಲೀಸ್ ಬರೋದು, ಇಂಟ್ರೋ ಸಾಂಗ್ ನಲ್ಲಿ ಉಪ್ಪಿ ಎಡಗೈಲಿ ಗಿಟಾರ್ ಹಿಡ್ಕೊಂಡು ಕುಣಿಯೋದು, ಆ ಡಬಲ್ ಆಕ್ಟಿಂಗ್ ಫೈಟ್ ಗಳು, ಅಸಹ್ಯದ ಕಾಮಿಡಿ ಇವೆಲ್ಲ ಎಷ್ಟ್ ದಿನಾ ಅಂತ ಪ್ರೇಕ್ಷಕ ನೋಡ್ತಾನೆ ಹೇಳಿ.



ಕಥಾವಸ್ತು ವಿಭಿನ್ನ. ಮರೆಯದಿರಿ, ಅದರ ಕ್ರೆಡಿಟ್ ಸಲ್ಲಬೇಕಾದದ್ದು ತಮಿಳಿಗೆ. ಬಾಲ್ಯದಿಂದ ನಾಟ್ಯವನ್ನೇ  ಮೈಗೂಡಿಸಿಗೊಂಡ ನಾಯಕನಿಗೆ ಅವನ ಮೈಮಾಟವೆಲ್ಲ ನಾಟ್ಯಮಯವಾಗಿ  ಅವನಿಗೆ ಹೆಣ್ಣು ಹುಡುಕುವುದೇ ಶ್ರಮದ ಕೆಲಸವಾಗುತ್ತದೆ. ಅವನ ಬೃಹನ್ನಳೆತನದ ಬಗ್ಗೆ ತಿಳಿಯದ ಒಬ್ಬಳು ಮದುವೆಗೆ ಒಪ್ಪಿ, ಅವನು ಹಸೆಮಣೆಗೆ ನಡೆದು ಬರೋ ಶೈಲಿ ನೋಡೇ ಸುಸ್ತಾಗಿ ಮದುವೆಮನೆಯಿಂದ ಹೊರನಡೆಯುತ್ತಾಳೆ. ಇದರಿಂದ ವ್ಯಗ್ರಗೊಂಡ ನಾಯಕ ಅವನ್ನ ಗಂಡಸ್ತನವನ್ನು ಎತ್ತಿ ತೋರಿಸಲು ಅವಳ ಮೇಲೆ ಅತ್ಯಾಚಾರವೆಸಗಿ ಅವಳಿ ಜವಳಿ ಮಕ್ಕಳನ್ನು ಬೋನಸ್ ಆಗಿ ಕೊಡುತ್ತಾನೆ. ಅದರಲ್ಲಿ ಒಂದನ್ನು ಅವನು ತೆಗೆದುಕೊಂಡು ಬೇರೆಡೆ ಹೋಗುತ್ತಾನೆ. ತನ್ನ ಮಗನಿಗೆ ತನ್ನ ಮೈಮಾಟ ಬರದಿರಲೆಂಬ ಸದ್ಭಾವನೆಯೊಂದಿಗೆ ಅವನು ಜೀವನವಿಡಿ ವೀಲ್ ಚೇರ್ ಮೇಲೆ ಸೆಟಲ್ ಆಗುವ ಭಯಾನಕ ಉಪಾಯ ಹೂಡುತ್ತಾನೆ.
ಇತ್ತ ತಾಯಿಯ ಬಳಿ ಉಳಿದ ಆ ಜವಳಿ ಮಗ, ತಾಯಿಯ ಹುಚ್ಚನಾಗಿ ತಂದೆಯ ಮೇಲೆ ಕಿಚ್ಚನಾಗುತ್ತಾನೆ. ಸದಾ ತಂದೆಯ ಮೇಲೆ ದ್ವೇಷ ಕಾರುತ್ತ ಇರುವ ಈತ ಯಾವಾಗ ತನ್ನ ತಂದೆಯನ್ನೇ ಕೊಲ್ಲುವ ಪ್ರಯತ್ನ ಮಾಡುತ್ತಾನೋ ಆವಾಗ ಕಥೆ ತೆರೆದುಕೊಳ್ಳುತ್ತದೆ.
'ವೀಲ್ ಚೇರ್' ತಂದೆಯ ಮಗನಿಗೆ ಹುಡುಗಿಯೊಬ್ಬಳ ಮೇಲೆ ಲವ್ವಾಗಿ ಮದುವೆ ಸೆಟಲ್ ಆಗಿರುವಾಗ, ಆ 'ತಾಯಿಯ ಹುಚ್ಚ ' ಮದುವೆ  ಮುರಿಯುವ ಪ್ರಯತ್ನ, ತಂದೆಯ ಕೊಲೆಯ ಪ್ರಯತ್ನ ಹೀಗೆ ಏನೇನೊ ಮಾಡುತ್ತಾನೆ. ಕೊನೆಯಲ್ಲಿ ಪೋಲಿಸ್ ಬರುತ್ತಾರೆ. ಎಲ್ಲವೂ 'ಶುಭಂ'ವಾಗುತ್ತದೆ. ಅಲ್ಲಿಗೆ ಮತ್ತೊಂದು ತಮಿಳ್ ಕಥೆಯ ಕನ್ನಡ ಚಿತ್ರ ಮುಗಿಯಿತು.

ಎ ಆರ್ ರೆಹಮಾನ್ ಸಂಗೀತ ಅಂದ್ರೆ ತಮಿಳಿನ ರಾಗಗಳೇ ಇಲ್ಲೂ ಹರಿದಿದೆಯಷ್ಟೇ. ಸ್ಪೆಸಲ್ ಏನೂ ಇಲ್ಲ. ಬಸವರಾಜು ಅವರ ಸಂಕಲನದಲ್ಲಿ ಡಬಲ್ ಆಕ್ಟಿಂಗ್ ಫಿಟ್ ದೃಶ್ಯಗಳು ಇನ್ನೂ ಚೆನ್ನಾಗಿ ಮೂಡಿಬರಬಹುದಿತ್ತು. ಅದು ಶಾಟ್ಸ್ ಮೇಲೆ ಅವಲಂಬಿತವಾದ್ದರಿಂದ ಅವರನ್ನು ಹೆಚ್ಚು ದೂಷಿಸಲಾಗುವುದಿಲ್ಲ. ಛಾಯಗ್ರಹಣ, ನಿರ್ದೇಶನ ಎರಡನ್ನು ತಲೆ ಮೇಲೆ ಹೊತ್ತ ನಿರ್ದೇಶಕ ಶ್ರೀರಾಮ್ ಯಾವ ಪರಿ ರೀಮೇಕ್ ಮಾಡಿದ್ದಾರೆಂದು ಮೇಲೆ ಈಗಾಗಲೇ ಹೇಳಿದ್ದೇವೆ. ವಿ. ಆರ್ ಭಾಸ್ಕರ್ ಸಂಭಾಷಣೆಯಲ್ಲಿ ಹೇಳಿಕೊಳ್ಳುವಂಥದ್ದು ಏನಿಲ್ಲ.

ಜಯಮಾಲ ಪುತ್ರಿ ಸೌಂದರ್ಯ ಕಣ್ಣುಗಳು ಭರವಸೆ ಮೂಡಿಸುತ್ತದೆ. ಕ್ಯಾಥೆರಿನ್ ಎಂಬ ಮತ್ತೊಬ್ಬ ನಾಯಕಿ,ತಾಯಿ ಪಾತ್ರ ಮಾಡಬಹುದು ಅಂತ ಯಾವ ಮಹಾನುಭಾವ ಸೂಚಿಸಿದನೋ ಅವನಿಗೆ ಉಘೆ ಉಘೆ.

ಆದರೆ ಚಿತ್ರದಲ್ಲಿ ಹೇಳಿಕೊಳ್ಳುವ ಅಂಶವೆಂದರೆ ಅದು ಉಪೇಂದ್ರ ಅವರ ಅಭಿನಯ ಮಾತ್ರ. ಅದು ತ್ರಿಪಾತ್ರದಲ್ಲಿ.
ನೃತ್ಯಗಾರನ ಪಾತ್ರದ ಮೈಮಾಟ, ನಡಿಗೆ ಎಲ್ಲ ಅಚ್ಚರಿ ಮೂಡುವಂತೆ ಅಭಿನಯಿಸಿದ್ದಾರೆ. ಭರತನಾಟ್ಯ ಮಾಡುವಾಗ ಇನ್ನು ಸ್ವಲ್ಪ ಶ್ರದ್ಧೆ ವಹಿಸಬೇಕಿತ್ತು ಅಷ್ಟೆ. ಅದಕ್ಕಿಂತ ಹೆಚ್ಚಾಗಿ ಉಪೇಂದ್ರ ರಂಥ ಪ್ರತಿಭಾವಂತರು ಸ್ವಂತ ಕಥೆಗಳಿಗೆ ಆಸ್ಥೆವಹಿಸಿದರೆ
ಆ ಭುವನೇಶ್ವರಿ ತಾಯಿಗೆ ಸವತಿಯರು ಕಮ್ಮಿಯಾದಾರು!!

~ಹೊಗೆ

ROMEO KANNADA MOVIE REVIEW

ರೋಮಿಯೋ ಒಬ್ಬ ಮಾಮೂಲಿ ಪ್ರೇಮಿಯೋ..

ಸಾವಿರ ಸುಳ್ಳು ಹೇಳಿ ಮದುವೆ ಮಾಡು ಅಂತ ಗಾದೆ ಇದ್ರೆ ಅದನ್ನೇ ಈ ಚಿತ್ರದ ನಾಯಕ (ಗಣೇಶ್) ಬಂಡವಾಳ ಮಾಡಿಕೊಂಡು ನಾಯಕಿಗೆ (ಭಾವನಾ) ತನ್ನ ಮನೆ ಡಾಲರ್ಸ್ ಕಾಲೋನಿ, ತನ್ನ ತಂದೆ ಕೊಲೀಗು ಅಂಬಾನಿ ಅಂತೆಲ್ಲ ಡೋಂಗಿ ಹೊಡೆದು ಪ್ರೀತಿ ಪಡೆದುಕೊಳ್ಳುತ್ತಾನೆ. ನಾಯಕಿಯ ತಂದೆ (ಅವಿನಾಶ್) ಮಗಳಿಗೆ ಬೇರೆ ವರನೊಂದಿಗೆ ಮದುವೆ
ಮಾಡಲು ತಯಾರಿ ನಡೆಸುವಾಗ ನಾಯಕ ನಾಯಕಿಯೊಂದಿಗೆ ಪರಾರಿಯಾಗಿ ತರಾತುರಿಯಲ್ಲಿ ಮದುವೆಯಾಗಿ ತನ್ನ ಮನೆಗೆ
ಕರೆತರುತ್ತಾನೆ.ಡಾಲರ್ಸ್ ಕಾಲೋನಿಯಲ್ಲಿ ತನ್ನ ಗಂಡನ ಮನೆಯಿದೆಯೆಂದು ತಿಳಿದಿದ್ದ ನಾಯಕಿಗೆ ತನ್ನ ಗಂಡ ಮಹಾನ್ ಡವ್ 
ರಾಜ ಎಂದು ತಿಳಿಯುತ್ತದೆ. ಆದರೆ ನಾಯಕ ಮಾತ್ರ ತನ್ನದು ಡವ್ ಅಲ್ಲ ಪ್ಯೂರ್ ಲವ್ ಅಂತೆಲ್ಲ ಡೈಲಾಗ್ ಹೊಡೆದ್ರೂ ನಾಯಕಿ ಡೈವೋರ್ಸ್ ಕೇಳುತ್ತಾಳೆ.
ನಿಜವಾಗಲೂ ನನ್ನ ಮೇಲೆ ಪ್ರೀತಿ ಇದ್ರೆ ಡೈವೋರ್ಸ್ ಕೊಡು ಅಂದಾಗ ತ್ಯಾಗಮಯಿ ನಾಯಕ ಡೈವೋರ್ಸ್ ಗೆ  ಒಪ್ಪುತ್ತಾನೆ .
ನಂತರ ನಿರ್ದೇಶಕರು ಕಥೆಯಲ್ಲಿ ಕೆಲವು ಡವ್ ಗಳನ್ನು ಮಾಡಿ ನಾಯಕ ನಾಯಕಿಯನ್ನು ಒಂದಾಗಿಸುತ್ತಾರೆ..



 ವೈದಿ ಕ್ಯಾಮೆರ ಕೈಚಳಕದಲ್ಲಿ ಟ್ರ್ಯಾಕ್ ಶಾಟ್ಸ್ ಉತ್ತಮವಾಗಿದೆ, ಸರವಣನ್ ಸಂಕಲನ ಕೆಲವು ಕಡೆ ಅಷ್ಟು ಹರಿತವಾಗಿಲ್ಲ . ಆದರೆ ಚಿತ್ರದುದ್ದಕ್ಕೂ ನಾಯಕ ತೊಡುವ ಕೂಲಿಂಗ್ ಗ್ಲಾಸ್ ನಲ್ಲಿ ಲೈಟ್ ಬಾಯ್ಸ್, ಅಲ್ಯುಮಿನಿಯಂ ರಿಫ್ಲೆಕ್ಟರ್ಸ್ ಸುಮಾರು ದೃಶ್ಯಗಳಲ್ಲಿ ಕಾಣಿಸುತ್ತದೆ. ಈ ಸಣ್ಣ ತಾಂತ್ರಿಕ ದೋಷವನ್ನ ಸರಿಪಡಿಸದೇ ಇರುವುದು ವಿಪರ್ಯಾಸ .

ಗಣೇಶ್, ಭಾವನ ತಮ್ಮ ಕೆಲಸ ನಿಭಾಯಿಸಿದ್ದಾರೆ. ರಂಗಾಯಣ ರಘು ಇಂತಹದೇ ಪಾತ್ರ ಇನ್ನು ನೂರು ಚಿತ್ರದಲ್ಲಿ ಮಾಡಿದರೂ  ಜನ ಬೇಜಾರ್ ಮಾಡ್ಕೊಳ್ದೇ ನೋಡ್ತಾರೆ ಅನ್ನೋದೇ  ರಘು ಶಕ್ತಿ. ಸಾಧು ಕೋಕಿಲ ಸೆಕೆಂಡ್ ಹೀರೋವಾಗಿ ಕಾಣಿಸಿಕೊಂಡು ಹೆಚ್ಚಿನ ದೃಶ್ಯಗಳಲ್ಲಿ ಅಭಿನಯಿಸಿ ಅಭಿಮಾನಿಗಳಿಗೆ ಕಚಗುಳಿ ಇಡುತ್ತಾರೆ.

ನಿರ್ದೇಶಕ ಪಿ.ಸಿ.ಶೇಖರ್ ದೃಶ್ಯ ವೈಭವ ತೋರಿಸಲು ಹೋಗಿದ್ದಾರೆ ಹೊರತು ಕಥೆ ಹೇಳಲಿಕ್ಕಲ್ಲ. ನೀರಸ ಹಾಗು ಮಾಮೂಲಿ ಕಥೆಗೆ ಕೆಲವು ಉತ್ತಮ ಹಾಡುಗಳನ್ನು ಕೊಟ್ಟಿರುವುದು ಅರ್ಜುನ್ ಜನ್ಯರ ಪ್ರತಿಭೆ ತೋರಿಸುತ್ತದೆ. ಆದರೆ 'ಆಲೋಚನೆ ಆರಾಧನೆ' ಹಾಡಿಗೂ ಅದರ ಹಿಂದಿನ ದೃಶ್ಯಕ್ಕೂ ಸಂಭಂಧವಿಲ್ಲ. ಹಾಗು ಎಲ್ಲರ ಬಾಯಲ್ಲೂ ಗುನುಗುವ ರೋಮಿಯೋ ಶೀರ್ಷಿಕೆ ಹಾಡು ಚಿತ್ರ ಮುಗಿದ ನಂತರ ಬರುವುದು ಶೋಚನೀಯ.

ಬಹುಶಃ ನಟರಾಜ್ ರವರ ಸಂಭಾಷಣೆ ಇರದಿದ್ದರೆ ಇಡೀ ಚಿತ್ರ ಮಂಕಾಗಿ ಬಿಡ್ತಿತ್ತೋ ಏನೋ.

ಆದರೂ ಗಣೇಶ್ ಅಭಿಮಾನಿಗಳಿಗೆ ಈ ಚಿತ್ರದಲ್ಲಿ ಭಾವನಾ ಸ್ಕ್ರೀನ್ ಪ್ರೆಸೆನ್ಸ್, ಸಾಧು,ರಘು ಹಾಸ್ಯದ ಟೈಮಿಂಗ್ ಪಕ್ಕ ಪೈಸಾ ವಸೂಲ್.


~ಹೊಗೆ

ಪೇಪರ್ ದೋಣಿ KANNADA FILM REVIEW

ಪೇಪರ್  ದೋಣಿ ಇಟ್ಕೊಂಡು ಟೈಟಾನಿಕ್ ಲೆವೆಲ್ ಯೋಚನೆ ...

ನಾಯಕ ಚೇತನ್ (ನವೀನ್ ಕೃಷ್ಣ ) ಲೋಕೋದ್ಧಾರಕ. ಹುಟ್ಟು ಹೋರಾಟಗಾರ.
ವಿಷ್ಣುವಿನ ಹನ್ನೊಂದನೆಯ ಅವತಾರಕ್ಕೆ  ಜಸ್ಟ್ ಮಿಸ್ಸು.
ಎಸ್.ಓ.ಎಸ್  ಎಂಬ ಸಂಘಟನೆ ಕಟ್ಕೊಂಡು ಭಯೋತ್ಪಾದನೆ, ಭ್ರಷ್ಟಾಚಾರ, ಬಡತನ ನಿರ್ಮೂಲನೆ, ಉದ್ಯೋಗ ಕ್ರಾಂತಿ.. ಹೀಗೆ ಒಂದ ಎರಡ.. ನಾಯಕನ ತಲೇಲಿ ಓಡೋದು. ಅದನ್ನ ಕಾರ್ಯರೂಪಕ್ಕೆ ತಂದು ಕ್ಷಣಾರ್ಧದಲ್ಲಿ ಸಮಸ್ಯೆ ಬಗೆಹರಿಸೋದು. ಹೀಗೆ ಅಖಿಲ ಭಾರತದ ಎಲ್ಲ ಸಮಸ್ಯೆಗೆ ಪರಿಹಾರ ಕಂಡುಕೊಳ್ತಾ ಸುಮ್ಮನಾಗದೆ ಇಡಿ ವಿಶ್ವದಲ್ಲೇ  ಶಾಂತಿ, ಸುವ್ಯವಸ್ಥೆ  ನೆಲ್ಸೋಹಂಗೆ ಮಾಡುವುದೇ ಈ ಎಸ್.ಓ.ಎಸ್ ಸಂಸ್ಥೆಯ ಗುರಿ.


ಅದೇನೋ ಗಾದೆ ಹೇಳ್ದಂಗಾಯ್ತು.. ನಮ್ ಎಲೆಲೇ ಆನೆ ಸತ್ತು ಬಿದ್ದಿರ್ಬೇಕಾದ್ರೆ, ಪಕ್ಕದ್ ಎಲೇಲಿ ಇರುವೆ ಹುಡುಕ್ದಂಗೆ ಅಂತ..
ಹೀಗೆ ಒಂದು ಹಂತದಲ್ಲಿ ಭಾರತದ ಸಮಸ್ಯೆಗಳನ್ನೇ ಮರೆತು  ಅಲ್ಜೀರಿಯ, ಇತ್ಯೋಪಿಯ, ಸೋಮಾಲಿಯ ದೇಶಗಳ ತೊಂದರೆಗೆಲ್ಲಾ  ನಾಯಕ ಮೂಗು ತೂರಿಸಲು ಹೋದಾಗ ನಿಮ್ಮ ತಲೆ ತಿರುಗಿದರೆ ಆಶ್ಚರ್ಯವಿಲ್ಲ.

ಮೇಲಿನ ಹಾಗೆ ಕಥಾವಸ್ತುವಿನಲ್ಲಿ ಸ್ವಲ್ಪ ವಿಭಿನ್ನತೆ ಇದ್ರೂ, ಇತರೆ ಎಲ್ಲಾ 'ಡಿಫರೆಂಟ್' ಚಿತ್ರಗಳಂತೆ ಇಲ್ಲೂ ತಾಯಿ ಸೆಂಟಿಮೆಂಟ್, ಆಕ್ಷನ್, ಲವ್, ಮರ ಸುತ್ತೋ ಹಾಡುಗಳು, ಹೀಗೆ 'ಡಿಫರೆಂಟ್' ಅಂಶಗಳನ್ನು ತುರುಕಲಾಗಿದೆ. ಒಂದು ಸೀರಿಯಸ್ ಚೇಸಿಂಗ್ ಸೀನೊಂದು  ಸ್ಕೂಲ್ ಪಕ್ಕ ಇರೋ ರೋಡ್ನಲ್ಲಿ ನಡಿತಾ ಇರತ್ತೆ. ಸ್ಕೂಲ್ನಲ್ಲಿ ಜನಗಣಮನ ಹಾಡುವುದನ್ನು ಕೇಳಿ ನಾಯಕ, ಖಳನಾಯಕ, ಗೂಂಡಾಗಳು ಎಲ್ಲ ಒಂದು ಕ್ಷಣ ನಿಂತರೆ ಅದನ್ನ ಕಾಮಿಡಿ ಅನ್ಬೇಕೋ ದೇಶಭಕ್ತಿಯ ಪರಾಕಾಷ್ಠೆ ಅನ್ಬೇಕೋ ಗೊತ್ತಿಲ್ಲ.


ನವೀನ್ ಕೃಷ್ಣ ಮುಳುಗೋ ಪೇಪರ್ ದೋಣಿನ  ಸ್ವಲ್ಪ ಹೊತ್ತಾದರೂ ತೇಲಿಸುವ ಪ್ರಯತ್ನ ಮಾಡಿದ್ದಾರೆ. ಅವರ ಪ್ರತಿಭೆಗೆ ತಕ್ಕ ಚಿತ್ರವಲ್ಲ. ನಾಯಕಿ ಶಾಂತಲ, ತಾಯಿಯ ಪಾತ್ರದಲ್ಲಿ ವಿನಯ ಪ್ರಸಾದ್, ಕ್ರಾಂತಿಕಾರಿ ಪಾತ್ರದ ಅವಿನಾಶ್ ಎಲ್ರೂ ಡಮ್ಮಿ.


ಶ್ರೀಸುಮನ್ ಸಂಗೀತದಲ್ಲಿ 'ಇರಬಹುದ ಇರಬಹುದ' ಹಾಡು ಇಂಪಾಗಿದೆ.
ಛಾಯಾಗ್ರಹಣ, ಸಂಕಲನದಲ್ಲಿ ವಿಶೇಷತೆ ಏನು ಇಲ್ಲ.


ನಿರ್ದೇಶಕ ಆರ್.ಕೆ. ನಾಯಕ್ ಅವರು ಎಂತಹ ಮಹತ್ವಾಕಾಂಕ್ಷಿ ಅಂತ ಈ ಚಿತ್ರದಲ್ಲಿ ಎದ್ದೆದ್ದು ಕಾಣುತ್ತದೆ. ಸ್ಲಂನಲಲ್ಲೇ ಸಾಫ್ಟ್ವೇರು, ಮಾಸಲ್ಲೇ ಮಾಹಿತಿ ತಂತ್ರಜ್ಞಾನ, 2500 ರೂಗಳಿಗೆ ಲಾಪ್ ಟಾಪು, ಹೀಗೆ ಎಲ್ಲೆ  ಮೀರಿ ಅವರ ಕನಸುಗಳು ಪೇಪರ್ ದೋಣಿಯ ಮೂಲಕ ಸಾಗರದಲ್ಲಿ ಈಜಾಡುವ ಪ್ರಯತ್ನ ಮಾಡಿದ್ದಾರೆ. ಅವರ ಪ್ರಯತ್ನ ಪ್ರಶಂಸಾರ್ಹ.ಆದರೆ ಸಿನಿಮಾ ಬದಲು ಒಂದು ಬೀದಿ ನಾಟಕವಾದರೂ 
ಮಾಡಿದ್ರೆ ಪ್ರೇಕ್ಷಕರ ಚೆಪ್ಪಾಳೆ ಗಿಟ್ಟಿಸಬಹುದಿತ್ತು.
~ಹೊಗೆ

'ಸಾಲದ' ಮದುವೆ ಮುಂಜಿ ಪಂಕ್ಸನ್ ಗಳು

'ಸಾಲ' ಮದುವೆ ಮುಂಜಿ ಪಂಕ್ಸನ್ ಗಳು !!

ಹುಡ್ಗೀರು, ಹೆಂಗಸರು, ಮದುವೆ ಇವುಗಳ ಮೇಲೆ ಆಕರ್ಷಣೆ ಇಲ್ಲವೆಂದರೆ  ಒಬ್ಬ ಗಂಡಸನ್ನು ಮಂಗಳಮುಖಿ ಅನ್ನುತ್ತಾರೋ ವಿರಾಗಿ ಅಂತಾರೋ ತಿಳಿಯದು. ಅದು ನಮಗೆ ಬೇಡವಾದ ವಿಚಾರ. ಆದರೆ ಈ ಮದುವೆ, ಮುಂಜಿ, ನಾಮ್ಕರಣ, ಅರ್ವತ್ತೊರ್ಷದ ಶಾಂತಿ, ಬರ್ತಡೆ ಪಾರ್ಟಿ ಇವುಗಳ ಬಗ್ಗೆ ನಿಮಗೆ ವೈರಾಗ್ಯ ಬಂತೋ .. ನಿಮ್ಮನ್ನ ಅಂತರ್ಮುಖಿ ಅಂತ ಜನಗಳು ಬಯ್ತಾರೆ. ಅಂತರ್ಮುಖಿ ಎಂಬ ಪದ ಗೊತ್ತಿರದ ಜನ'ಗೊ'ಳು ನಿಮ್ಮನ್ನ ಹುಚ್ಚಾ ಬೆಪ್ಪ ಎಂದು ಕರೆಯುವುದುಂಟು. ಇನ್ನು ಇಂಗ್ಲೆಂಡಿನ ಬರ್ಮಿಂಗ್ ಹ್ಯಾಮ್  ಪ್ಯಾಲೇಸಿನ ಶೌಚಾಲಯದಲ್ ಹುಟ್ದಂಗಾಡೋರು 'ನಾಟ್ ಸೋ  ಸೋಶಿಯಲ್', 'ಇಂಟ್ರಾವರ್ಟ್' ಎಂಬ ಪದಗುಚ್ಛ ಬಳಸುತ್ತಾರೆ. 

ನಂಗೂ ಸಾಕಾಯ್ತಪ್ಪ.. ಈ ರೀತಿ ಸಮಾರಂಭಗಳಿಗೆ ಹೋಗೀ  ಬಂದು. ಈ ವಯಸ್ಸೇ ಅಂಥದ್ದು. ಅಂದ್ರೆ ಈ 23-24 ರ ಹರೆಯ ಯಾವ್ ಮನುಶ್ಯಂಗೂ ಬೇಡಾಪ್ಪ. ಆಗ ತಾನೇ ಡಿಗ್ರಿ ಮುಗ್ದಿರತ್ತಾ? ನಮ್ ಕಣ್ ಮುಂದೇನೇ ನಾವು ಕಾಲೇಜಿನಲ್ಲಿ ನಮ್ಮ ಜತೆಯಲ್ಲೇ ನಕ್ಕೊಂಡು, 'ನಲ್'ಕೊಂಡು ಓದಿದ  ಹುಡುಗಿಯರಿಗೆಲ್ಲಾ  ಮದುವೆ.. ಬಿಡಿ ಅದು ಎಲ್ಲ ಹುಡುಗರ 'ಪರ್ಸನಲ್' ವಿಷಯ. ಅದಕ್ಕ್ಕೆ ನಾವ್ 'ಕೈ' ಹಾಕೋದು ಸರಿಯಲ್ಲ..

ಅಲ್ಲಾ.. ಈ ಜೀವ್ನ ಇರೋದೇ ಪಂಕ್ಸನ್ ಗಳ್ನ ಅಟೆಂಡ್ ಮಾಡೋದಕ್ಕಾ ಅಂತೊಮ್ಮೆ ನಿಮಗನಿಸಿದರೆ ನಾನು ನೀವು ಸಮಾನ ಮನಸ್ಕರು ಅಂತ. ಆಷಾಡ ಬಿಟ್ರೆ ಮಿಕ್ಕೆಲ್ಲಾ ಮಾಸದಲ್ಲೂ ಈ ಪಂಕ್ಸನ್ ಸಹವಾಸ ತಪ್ಪಿದಲ್ಲ. ನನ್  ಪ್ರಕಾರ ಇವಕ್ಕೆ ಅರ್ಥಾನೇ ಇಲ್ಲಾರೀ..

ಮದುವೆ ಅಂದ್ರೆ ಅಲ್ಲಿ ಬರಿ ಅಳು. ನಗುವಿನ ಮುಖವಾಡದಲ್ಲಿ... ಜಾಸ್ತಿ ಎಕ್ಸ್ಪ್ಲೇನ್  ಮಾಡಲ್ಲ. ಖ್ಯಾತ ನಿರ್ದೇಶಕ ಗುರುಪ್ರಸಾದ್ ಬಾಯಲ್ಲಿ ಮದುವೆ ಅಂದ್ರೆ ಏನ್  ಗೊತ್ತಾ - "ಇಬ್ರನ್ ಮಲಗ್ಸಕ್ಕೆ ಅದೆಷ್ಟ್  ಜನ ಅದೆಷ್ಟ ದಿನ ಎದ್ದಿರ್ಬೇಕಪ್ಪ !!"

ಇನ್ನು ಮುಂಜಿಲಿ ಎರಡು ವಿಧ. ಸೊಂಟದಿಂದ ಮೇಲೆ, ಮತ್ತೊಂದು ಸೊಂಟದ ಕೆಳಗೆ.. ಅವರವರ ಸಂಸ್ಕಾರಕ್ಕೆ ತಕ್ಕಂತೆ.
ಸೋ  ಮುಂಜಿಗೆ ಆಡಂಬರ ಬೇಕಿಲ್ಲ. ಸಂಸ್ಕಾರ ಸಾಕು.


ಗೃಹಪ್ರವೇಶ ಅಂತೂ ಕೇಳಲೇ ಬೇಡಿ. ಅದೊಂದು ಹೊಟ್ಟೆ ಕಿಚ್ಚಿನ ಉತ್ತುಂಗದ ಹಂಗ.. ಆಹ್ವಾನಿತ ಜನರು ಸುಮ್ನೆ ಬಂದು ಊಟ  ಮುಗಿಸಿ ಹೋಗುವ ಬದಲು ಏನೋ ತಾವೇ ಈ ಮನೇಲ್ ಬಂದು ವಾಸಿಸಬೇಕೆನೋ ಎಂಬಂತೆ ಮನೆಯ ಆಕಾರ ಪ್ರಕಾರದ ಬಗ್ಗೆ ಕಾಮೆಂಟ್ ಹೊಡೆಯದೆ ಇರುವುದಿಲ್ಲ. ಈ ಚಂದಕ್ಕೆ ಯಾಕ್ ಆಗ್ದೆರೋ ಜನಗಳ್ನ ಕರೀಬೇಕು?

ನಾಮಕರಣ, ಮೊದಲ ಹುಟ್ಟಿದಹಬ್ಬ, ವೈಕುಂಟ ಸಮಾರಾಧನೆ ಇವೆಲ್ಲ ಎಷ್ಟೇ ಗ್ರ್ಯಾಂಡ್ ಆಗಿ ಮಾಡ್ಕೊಂಡ್ರು ನಿಮಗೆ ಜ್ಞಾಪಕ ಇರಲ್ಲ.

ಇನ್ನು ಅರ್ವತ್ತೊರ್ಷದ ಶಾಂತಿ ಮಾಡ್ಕೊತೀರ..
ರಿಟೈರ್ಡ್ ಆದ ದುಡ್ಡು ಕೈಯಲ್ಲಿರತ್ತೆ. ಆದರೆ ಬರೋ ಜನರು ಯಾವ್ ಮೈಂಡ್ ಸೆಟ್ ನಲ್ಲಿ ಬರ್ತಾರೆ ಅಂತ ನೀವು ಊಹಿಸಕ್ಕು ಆಗಲ್ಲ 
- "ಅಯ್ಯೋ ಪಾಪ.. ಮೂರ್ತಿ ಮನೇಲಿ ಶಾಂತಿ ಕಣ್ರೀ ಇವತ್ತು.. ಪಾಪ ಅವರ ಮನೆ ಕೊನೆ ಫಂಕ್ಷನ್ನು.. ಹೋಗ್ಬರೋಣ ಬನ್ನಿ" .. ಇವೆಲ್ಲ ಬೇಕಾ??


ಇನ್ನು ಪಂಕ್ಸನ್ ಗಳಲ್ಲಿ ಹೇಸಿಗೆ ಹುಟ್ಸೋ ಒಂದು ವಿಷಯ ಅಂದ್ರೆ ಉಡುಗೊರೆ. ನೀವೇ ಯೋಚನೆ ಮಾಡಿ, ಇದುವರ್ಗೂ ಎಷ್ಟ್ ಕಡೆ ಎಷ್ಟ್ ಜನಕ್ಕೆ ನೀವ್ ಗಿಫ್ಟ್ ಕೊಟ್ರಲ್ಲ.. ಅದ್ರಲ್ಲಿ ಎಷ್ಟ್ ಜನಕ್ಕೆ ನೀವು ಮನಃ ಪೂರ್ವಕ ಕೊಟ್ಟಿದ್ದೀರಾ, ಎಷ್ಟ್ ಜನಕ್ಕೆ ಏನೋ ಕೊಡಬೇಕಲ್ಲ ಅಂತಾನೋ ಅಥ್ವಾ ಅವರು ನಿಮ್ಮನೆ ಪಂಕ್ಸನ್ ಬಂದಾಗ ಕೊಟ್ಟಿದ್ರೂ ಅಂತ ವಾಪಸ್ ಮಾಡಿದ್ದೀರಾ.. ಇಷ್ಟ ಸಾಕಲ್ವ ಈ ಉಡುಗೊರೆ ಅನ್ನೋ ಕಾನ್ಸೆಪ್ಟ್ ಮೇಲೆ ಹೇಸಿಗೆ ಹುಟ್ಸಕ್ಕೆ..

ಇನ್ನು  ಬೀಗರೂಟ ಬಾಡೂಟಗಳು ಪ್ರತಿಷ್ಠೆಯ ಪ್ರಶ್ನೆ.. ಕಂಠಪೂರ್ತಿ ಕುಡಿತ, ಗಂಟಲು ಗಂಟ ತಿನ್ನಾಟ .. !!

ಸ್ವಂತ ಹುಟ್ಟಿದಹಬ್ಬ ಆಚರಿಸ್ಕೊಳ್ಳೋದು.. ಬಿಡಿ. ಸಮಯ ಹಾಳು..

ಇನ್ನೊಂದ್ ಇಂಟರೆಸ್ಟಿಂಗ್ ವಿಷಯ.. '' ಯಾರಾರ ನಮ್ಮ ದೇಶದಲ್ಲಿ ಸತ್ಯನಾರಾಯಣ ಪೂಜೆಯನ್ನ ನಿಜವಾದ ಶ್ರದ್ಧೆ ಭಕ್ತಿಯಿಂದ ಮಾಡೋದು ನೋಡಿದಿರಾ.. ಚಾನ್ಸೇ ಇಲ್ಲ. ಊರೌರ್ನೆಲ್ಲ ಕರ್ಕೊಂಡು ಒಂದು ದೊಡ್ಡ ಸಮಾರಮ್ಭವನ್ನೇ ಮಾಡ್ಬೇಕು.. ಪೂಜೆ ಮರಿಬೇಕು. ಬಂದವರೆಡೆಗೆ ಗಮನ ವಹಿಸಬೇಕು. ಅದು ನಮ್ ಜನ್ಗಳ ಸತ್ಯನಾರಾಯಣ ಪೂಜೆಯ ರಿಯಲ್ ಡೆಫಿನಿಶನ್.."

ಸಾಲ ಮಾಡಿಯಾದ್ರು ಪಂಕ್ಸನ್ ಗಳನ್ನ ಜನಗೊಳು ಮಾಡಕ್ಕೂ, ಆ ಸಾಲದಷ್ಟು ಪಂಕ್ಸನ್ ನಾವ್ ಅಟೆಂಡ್  ಮಾಡಕ್ಕು ಸರಿಯಾಗಿದೆ.. ಲಂಚ್ ಬಫೆ ಇದ್ರು , ಎನ್  ಬೇಕೋ ಅದನ್ನ ಮಾತ್ರ ಹಾಕಿಸಿಕೊಳ್ಳುವ ಸೌಕರ್ಯ ಇದ್ರೂ ಜನ ಊಟ ಚೆಲ್ತಾರೆ ಅಂದ್ರೆ.. ನಿಜವಾಗ್ಲೂ ಆ ಜನ ಚೆಲ್ಲೆದ್ದೋಗಿದಾರೆ ಅಂತರ್ಥ.

ಇದೆಲ್ಲ ನಿಂತೋದ್ರೆ  ಜನ ಸೇರೋದಾದರೂ ಎಲ್ಲಿ. ಸತ್ಸಂಗ, ವಿಚಾರ ಸಂಕೀರ್ಣ, ಚಿಂತನೆ-ಸಂವಾದ ಕಾರ್ಯಕ್ರಮಗಳು ಹೆಚ್ಚಾಗಲಿ. ಆಗ ಅವಕ್ಕೂ ಅರ್ಥ ಬರತ್ತೆ.. ಸ್ವಲ್ಪ ದೊಡ್ ಮಾತ್ಗಳು ಬರ್ತಾಇದೆ. ಇಲ್ಲಿಗೆ ಸಾಕಪ್ಪ.. ಲೈಟಾಗಿ ಓವರ್ ಆಗಿದ್ರೆ ಒಸಿ ಅಡ್ಜಸ್ಟ್ ಮಾಡ್ಕೊಳಿ ಪ್ಲೀಸ್ :)

ಉಸ್ಸಪ್ಪಾ ಈ 'ಪಂಕ್ಸನ್' ಮುಗಿತು... ನಿಮ್ಮ ಕಮೆಂಟ್ ನಮಗೆ ಉಡುಗೊರೆ :)
~ಹೊಗೆ

Addoori kannada film review

ಕಲ್  ಕಲರ್ ಅದ್ದೂರಿ..
ಅದು ಬಣ್ಣದ ಲೋಕ. ಆ ಲೋಕದಲ್ಲಿ ಇರೋದು ಇಬ್ರು ಮಾತ್ರ. ಅದು ಅಚ್ಚು  ರಚ್ಚು ಲವ್ ಸ್ಟೋರಿ.
ಅಚ್ಚು (ಧ್ರುವ ಸರ್ಜಾ) ಡಿಚ್  ಮಾಡ್ದ ಅಂತ ಜಗಳ ಮಾಡಿ ಅವನನ್ನು ಬಿಡಲು ರಚ್ಚು (ರಾಧಿಕಪಂಡಿತ್) ನಿರ್ಧರಿಸುತ್ತಾಳೆ. ಆದ್ರೆ ಈ ಅಚ್ಚು ಅಷ್ಟು ಸುಲಭವಾಗಿ ಪ್ರೀತಿನ ಬಿಡ್ಕೊಡ್ದೆ ಹೆಂಗಾರು ಅವಳಿಗೆ ಟಚ್ ಆಗೋ ಹಂಗೆ ಮಾಡಿ ಪುನಃ ಪ್ರೀತಿ ಪಡಿತೀನಿ, "ಥೂ ಅಂತ ಉಗಿದರೂ ನಿನ್ನೆ ಪ್ರೀತಿ ಮಾಡುತ್ತೀನಿ ಹೋಗೆ" ಎಂದು ಹಾಡುತ್ತಾನೆ.
ಅವಳು ವಾಪಸು ಊರಿಗೆ ಹೋಗಲು ಏಳು ದಿನ ಸಮಯವಿರುತ್ತದೆ. ಅಚ್ಚು ಅಷ್ಟರೊಳಗೆ ಕಳೆದುಹೋದ ಪ್ರೀತಿಯನ್ನು ಗಿಟ್ಟಿಸಿಕೊಳ್ಳಬೇಕಾಗುತ್ತದೆ. ಈ ಅಚ್ಚು ಏನೇ ಸರ್ಕಸ್ ಮಾಡಿದ್ರೂ ಒಪ್ಪದ ರಚ್ಚು ಸಾಕ್ಷಾತ್ ರಚ್ಚೆ ಹಿಡಿದು ಒಲ್ಲೆ ಎನ್ನುತ್ತಾಳೆ.
ಅಷ್ಟಕ್ಕೂ ಇವರಬ್ಬರ ಮಧ್ಯೆ ಜಗಳವಾಗಲು ಕಾರಣ ಏನು ಅಂತ ಪ್ರೇಕ್ಷಕನ ಪ್ರಶ್ನೆಗೆ ರಚ್ಚು "ಪ್ರೀತಿಸುವ ಹುಡುಗಿಯರ ಯಾರು ಕಾಯಿಸಬಾರದು" ಎಂದು ಉತ್ತರಿಸುತಾಳೆ. ಕೊನೆಗೆ ಅಚ್ಚು ಆ  ದಿನ ಏತಕ್ಕೆ  ಲೇಟಾಗಿ ಬಂದ ಅಂತ ತಿಳಿದು ರಚ್ಚು ಪುನಃ ಅವನನ್ನು ಕಚ್ಚಿಕೊಳ್ಳುತ್ತಾಳೆ.





ಧ್ರುವ ಸರ್ಜಾ ನೃತ್ಯ, ಸಾಹಸ ಅದ್ದೂರಿ. ಅಭಿನಯಕ್ಕೆ ಇನ್ನೊಂದೆರಡು ಪಿಚ್ಚರ್ ಆಗ್ಬೇಕು. ರಾಧಿಕ ಪಂಡಿತ್ ರಚ್ಚುವಾಗಿ ಅಚ್ಚು ಮೆಚ್ಚು. ಎ.ಪಿ ಅರ್ಜುನ್ ಪಟ್ಟ ಶ್ರಮದಿಂದ ಚಿತ್ರ ಸಂಭ್ರಮಯುತವಾಗಿದೆ. ನಿರೂಪಣೆ, ಕಥೆ ಎಲ್ಲಕ್ಕೂ ಫುಲ್ ಮಾರ್ಕ್ಸ್.
ಸಂಭಾಷಣೆ ಮತ್ತು ಕಥೆಯ ವೇಗ ಡಲ್ ಡಲ್. ಆದರೆ ಪ್ರತಿಯೊಂದ್ ಫ್ರೇಮು ಒಂದು ಕಲ್ಪನಾ ಲೋಕ. ಕಣ್ಣಿಗೆ ಬಣ್ಣದ ಹಬ್ಬ.
ಇದರಲ್ಲಿ ಸೂರ್ಯ ಕಿರಣ್ ಕ್ಯಾಮೆರ ಕೈಚಳಕವೂ  ಇದೆ. ಟ್ರ್ಯಾಕಿಂಗ್ ಶಾಟ್ಸ್ ಚಿತ್ರದ ವೇಗಕ್ಕೊಂದು ಕಳೆ. ದೀಪು ಸಂಕಲನ ನಿರ್ದೇಶಕನ ಆಣತಿಯಂತೆ. ರವಿವರ್ಮ ಸಾಹಸ ನಿರ್ದೇಶನದಲ್ಲಿ ಒಂದು ಬ್ಯಾಸ್ಕೆಟ್ ಬಾಲ್ ಫೈಟ್ ಮಸ್ತ್ ಮಸ್ತ್. ನಾಯಕ ಹೊಸಮುಖನಾದರೂ ಹರಿಕೃಷ್ಣ ಗೆ ಅವರ ಸಂಗೀತದಿಂದಲೇ ಜನರನ್ನು ಚಿತ್ರಮಂದಿರಕ್ಕೆ ಕರೆತರುವ  ತಾಕತ್ತಿದೆ.


ಅಚ್ಚು ರಚ್ಚು ಲವ್ ಸ್ಟೋರಿ ನಿಮಗೂ ಮೆಚ್ಚುಗೆ ಆಗತ್ತೆ. ಆದರೆ ಅದ್ದೂರಿ ಅನ್ಸಲ್ಲ.

~ಹೊಗೆ

"VILLAIN" KANNADA MOVIE REVIEW

ಸಂಭಾಷಣೆ ಹೀರೋ.. ಮಿಕ್ಕಿದ್ದೆಲ್ಲಾ 'ವಿಲನ್'.
ನಾಯಕ 'ಟಿಪ್ಪು' (ಆದಿತ್ಯ)ರೌಡಿ. ನಾಯಕಿ ಅನು (ರಾಗಿಣಿ) 
ಈ ರೌಡಿಯ ಪರಿಚಯವೇ ಇಲ್ಲದಿದ್ದರೂ ಹೆಸರನ್ನು ಉಪಯೋಗಿಸಿ ಅವಳ 'ಮಾನ'ವನ್ನು ಏರಿಯಾ ಹುಡುಗರಿಂದ 
ರಕ್ಷಿಸಿಕೊಳ್ಳುತ್ತಿರುತ್ತಾಳೆ. ನಂತರ ಟಿಪ್ಪು ಅವಳಿಗೆ ಬೇರೆ ಹೆಸರಿನಲ್ಲಿ ತನ್ನ ಪರಿಚಯ ಮಾಡಿಕೊಂಡು ಸ್ನೇಹಮಾಡುತ್ತಾನೆ. ಸ್ನೇಹ ಪ್ರೀತಿಯಾಗಲು ಅಲ್ಲೊಂದು ಇಂಪಾದ ಹಾಡು - 'ಕಣ್ಣಲೆ ಸಂಭಾಷಣೆ'. ನಾಯಕಿಗೊಬ್ಬ ತಮ್ಮ.
ಅವನು ಕ್ರೈಂ ರಿಪೋರ್ಟರ್. ಕೊಲೆಯೊಂದನ್ನು ತನ್ನ ಕ್ಯಾಮೆರದಲ್ಲಿ ಸೆರೆಹಿಡಿದು ಕೊಲೆಪಾತಕರಾದ ರಾಜಕಾರಣಿ (ಶೋಭರಾಜ್) ಮತ್ತು ಜಮೀಲ್ (ರಂಗಾಯಣ ರಘು) ರವರ ಕೆಂಗಣ್ಣಿಗೆ ಗುರಿಯಾಗಿ ಸಾಯುತ್ತಾನೆ.
ಟಿಪ್ಪು ತನ್ನ ಬಾಮೈದನನ್ನು ಕೊಂದವರ ವಿರುದ್ಧ ಸಾಕ್ಷಿ ಹೇಳಲು ಅಣಿಯಾಗುತ್ತಿದ್ದರೆ, ಇಲ್ಲಿ ನಾಯಕಿ ಅನುಗೆ ತನ್ನ ಪ್ರಿಯತಮ ದೊಡ್ಡ ರೌಡಿ ಎಂದು ತಿಳಿಯುತ್ತದೆ. ನಂಬಿಕೆ ದ್ರೋಹದ ಆರೋಪದ ಮೇಲೆ ಟಿಪ್ಪುವನ್ನು ದೂರಮಾಡಿದಾಗ ಅಲ್ಲೊಂದು ಕೈಲಾಶ್ ಖೇರ್ ಧ್ವನಿಯಲ್ಲಿ
ವಿರಹ ಗೀತೆ. ಕೊನೆಗೆ ಅವರಿವರಿಂದ ಪ್ರೀತಿ ಪಾಠ ಕಲಿತು ನಾಯಕಿ ಮನಸುಬದಲಾಯಿಸುತ್ತಾಳೆ. ಇತ್ತ ನಾಯಕ ಕೆಟ್ಟವರನ್ನು ಕ್ಲೈಮ್ಯಾಕ್ಸ್ ಫೈಟಲ್ಲಿ  ಮಟ್ಟಹಾಕಿ ಪೋಲೀಸರಿಗೊಪ್ಪಿಸಿ
ಅವರಿಗೆ ಶಿಕ್ಷೆ ಕೊಡಿಸುತ್ತಾನೆ. ಇಲ್ಲಿಗೆ ಮುಕ್ತಾಯ ಮತ್ತೊಂದು ಕನ್ನಡ ಚಿತ್ರ.
ಚಿತ್ರದಲ್ಲಿ ಚೆನ್ನಾಗಿದೆ ಅಂತ ಒಂದಂಶ ಇದ್ದರೆ ಅದು ಎಂ.ಎಸ್.ರಮೇಶ್  ಅವರ ಸಂಭಾಷಣೆ. ಅವರ ದೈತ್ಯ ಪ್ರತಿಭೆಗೆ ಎಂದೂ ಮುಪ್ಪಿಲ್ಲ. ಷ್ಟನ್ನು ಬಿಟ್ಟರೆ ಚಿತ್ರದಲ್ಲಿ ಉಪ್ಪಿಲ್ಲ. ಸ್ವಲ್ಪ ಖಾರ ತುಂಬಲು ಒಂದು ಐಟಂ ನೃತ್ಯ ಮತ್ತು ರಾಗಿಣಿ 'ಚರ್ಮೋ'ತ್ಸವವಿದೆ. ನಿರ್ದೇಶಕ ಎಂ.ಎಸ್.ರಮೇಶ್  'ವಿಲನ್' ಅಂತ ಚಿತ್ರಕ್ಕೆ ಹೆಸರಿಟ್ಟು ನಾಯಕನ ಕೈಲಿ ಮ್ಯಾಂಡಲಿನ್, ಮೌತ್ ಆರ್ಗನ್ ಹಿಡಿಸಿದ್ದಾರೆ. ಬೀದಿಯಲ್ಲಿ  ನಿಂತು ಪ್ರೀತಿಗಾಗಿ ಅಂಗಲಾಚುವಂತೆ ಮಾಡಿದ್ದಾರೆ. ಒಂದೂ ಆಯುಧವಿಲ್ಲದೆ ಮರದ ದಿಮ್ಮಿಗಳಲ್ಲೇ ಹೊಡೆದಾಡಿಸಿದ್ದಾರೆ.
ಒಟ್ಟಿನಲ್ಲಿ ಹೆಸರಿಗೆ ತಕ್ಕಂತ ಚಿತ್ರವಾಗಿರದೆ ಇಂತ ಚಿತ್ರಕ್ಕೆ ಅತ್ಯವಶ್ಯಕವಾದ ಪಾತ್ರ ವಿಜ್ರುಂಭಣೆಯೇ  ಇಲ್ಲದೆ ನೀರಸ ನಿರೂಪಣೆ, ಸಾದಾ ಕಥೆ ಹೆಣೆದ ನಿರ್ದೇಶಕನೇ ಈ ಚಿತ್ರದ ವಿಲನ್ ಇರಬಹುದು.
ಹಾಡುಗಳನ್ನು ಬೇಕಾದ ಬೇಡವಾದ ಎಲ್ಲ ಕಡೆ ತುರುಕಲಾಗಿದೆ. ನಗಿಸುವ ವ್ಯರ್ಥ ಪ್ರಯತ್ನ ಮಾಡಲಾಗಿದೆ. ತಾಂತ್ರಿಕವಾಗಿ ಕೂಡ ಚಿತ್ರದಲ್ಲಿ ಏನು ಇಲ್ಲ.  ಕಥೆಯ ತಿರುವಿಗೆ ಕಾರಣವಾಗುವ 'ರೆಕಾರ್ಡೆಡ್ ಕ್ಯಾಸೆಟ್'ನ್ನು ನಂತರದಲ್ಲಿ ಮರೆತಿದ್ದಾರೆ. ಈ ರೀತಿ ಹಲವು ನ್ಯೂನ್ಯತೆ ವೈಫಲ್ಯತೆಗಳ ನಡುವೆ ಈ ಚಿತ್ರವನ್ನು ನೀವು ನೋಡಲೆಬೇಕೆಂದರೆ ಅದು ಚಿತ್ರದುದ್ದಕ್ಕೂ ಇರುವ ತೂಕದ ಸಂಭಾಷಣೆಗಾಗಿ ಮಾತ್ರ.

~ಹೊಗೆ