YAARE KOOGADALI MOVIE REVIEW

ಯಾರೇ ಕೂಗಾಡಲಿ, ಕ್ಯಾರೆ ಎನ್ನದ 'ಹುಡುಗರು'.. !!

ನೋಡ್ ನೋಡ್ತಾ ಮೊದಲಾರ್ಧ ಮುಗಿದೇ ಹೋಗತ್ತೆ. ಕಥೆ ಕುತೂಹಲ ಘಟ್ಟ ಮುಟ್ಟತ್ತೆ. 'ಅಬ್ಬಾ' ಅಷ್ಟೊಂದು ವೇಗ, ಆದರೂ ಅತ್ಯಂತ ನೀಟು. ಮಧ್ಯಂತರದ ನಂತರವೂ ಅಷ್ಟೇ ವೇಗ ಕಾಪಾಡಿಕೊಂಡರೂ ಕ್ಲೈಮ್ಯಾಕ್ಸ್ ಗೆ ಬಂದು ನಿಂತಾಗ ಇಡೀ ಸಿನಿಮಾ 'ಅಷ್ಟಕ್ಕಷ್ಟೇ' ಅನಿಸಿಬಿಡತ್ತೆ.




ಕಥೆ-ಚಿತ್ರಕಥೆ :

ಕುಮಾರ್ (ಅಪ್ಪು) ನಟೇಶನ (ಯೋಗಿ) ಸಂಗ ಆಸ್ಪತ್ರೆ ಒಂದರಿಂದ ತಪ್ಪಿಸಿಕೊಂಡು ಬರ್ತಾರೆ. ಊರು ಸೇರಿ ಪೆಟ್ರೋಲ್ ಬಂಕೊಂದರಲ್ಲಿ ಕೆಲಸಕ್ಕೆ ಸೇರಿ, ಇನ್ನೂ  ಹೆಚ್ಚು ಸಾಧಿಸುವ ಛಲದಲ್ಲಿ ತಮ್ಮದೇ 'ಪೈಡ್ ಸರ್ವೀಸ್' ಕಂಪನಿಯೊಂದನ್ನ ಶುರುಮಾಡ್ತಾರೆ. ಅದೇ ದೊಡ್ಡದಾಗಿ ಬೆಳೆದು ಹತ್ತಾರು ನಿರುದ್ಯೋಗಿಗಳಿಗೆ ಕೆಲಸ ಕೊಡ್ತಾರೆ. ಈ ಮಧ್ಯೆ ಕುಮಾರ್ ನನ್ನು ಗ್ಯಾಂಗೊಂದು ಚಿತ್ರದ ಶುರುವಿಂದಲೂ ಹುಡುಕುತ್ತಿರುತ್ತೆ. ಅವರೆಲ್ಲಾ ಅವನ ಸಂಬಂಧಿಕರೇ. ಕುಮಾರ್ ಊರಿನಿಂದ ತಪ್ಪಿಸಿಕೊಂಡು ಬಂದಿರುವ ದೊಡ್ಡ ಹುಚ್ಚ, ಮಾನಸಿಕ ರೋಗಿ ಎಂದು ಬಿಂಬಿಸುವ ಹೊತ್ತಿಗೆ ಮಧ್ಯಂತರ.
ಮುಂದೆ, ಎಲ್ಲಾರು ಮಾಡುವುದು ಆಸ್ತಿಗಾಗಿ ಎಂಬಂತೆ ಹೊಡೆದಾಟ ಬಡಿದಾಟಗಳು ಎಗ್ಗಿಲ್ಲದೇ ನಡೆಯುತ್ತದೆ. ನಾಯಕ ಎಲ್ಲರನ್ನು ಬಡಿದು ಬಗ್ಗಿಸಿ ನಾಯಕಿಯನ್ನು ವರಿಸುತ್ತಾನೆ. ಅಲ್ಲಿಗೆ 'ಎಲ್ಲರ ಕೂಗಾಟ' ನಿಂತು ಯಾಪಿ ಎಂಡಿಂಗ್ !!



ತಮಿಳಿನ 'ಪೋರಾಲಿ' ಚಿತ್ರದ ನಿರ್ದೇಶಕ ಸಮುದ್ರಖಣಿ ಇಲ್ಲಿಯೂ ನಿರ್ದೇಶನದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಚಿತ್ರಕಥೆಯ ಆ ಓಟ, ಮೊದಲಾರ್ಧದ ಅತ್ಯಂತ ಬಿಗಿ ನಿರೂಪಣೆ ಎಲ್ಲವೂ ಸೂಪರ್. ಆದರೆ ಹಾಡುಗಳ ಪ್ಲೇಸ್ಮೆಂಟ್, ಮಿತಿ ಮೀರಿದ ಹಿಂಸೆ, ಕ್ಲೀಷೆಯಾಗಿ ಉಳಿಯುವ ಕಥೆ ಚಿತ್ರಕ್ಕೆ ಬಿದ್ದ ಹೊಡೆತಗಳು.
'ವಾಜಪೇಯಿ, ಕಲಾಂ, ಹಜಾರೆ ಎಲ್ಲಾ ಬ್ಯಾಚುಲರ್ ಗಳೇ, ದೇಶಾನೆ ಅವ್ರಿಗೆ ಕೊಟ್ಟಿದ್ವಿ, ಬ್ಯಾಚುಲರ್ ಗಳಿಗೆ ಮನೆ ಬಾಡಿಗೆ ಕೊಡಕ್ಕೆ ಯೋಚ್ನೆ ಮಾಡ್ತಾರೆ' ಮುಂತಾದ ಚುರುಕು ಸಂಭಾಷಣೆ ಬಂದಾಗ ಗುರುಪ್ರಸಾದ್ ಕಾಣಿಸುತ್ತಾರೆ.

ಪುನೀತ್: 
ಪುನೀತ್ ರ ಸುಮಾರುಎಲ್ಲಾ ಚಿತ್ರಗಳಂತೆ ಇಲ್ಲಿಯೂ ಅವರನ್ನ ಅತ್ಯಂತ ಸಂಭಾವಿತನಂತೆ ತೋರಿಸಲಾಗಿದೆ. ಹುಡುಗಿಯನ್ನು ಕಣ್ಣೆತ್ತಿ ನೋಡಲ್ಲ, ಐಟಮ್ ಡ್ಯಾನ್ಸರನ್ನು  ಮುಟ್ಟಲ್ಲ, ನಾಯಕಿಯೇ ಪ್ರಪೋಸ್ ಮಾಡ್ಬೇಕು ಇತ್ಯಾದಿ.
ಒಂದು ಹೊಸತನವೆಂದರೆ ಅದು ಪುನೀತ್ ರ ದ್ವಿತೀಯಾರ್ಧದ ಪಾತ್ರ. ಪೋಷಾಕಿನಲ್ಲು, ಪೋಷಣೆಯಲ್ಲೂ. ಅದು ಅಪ್ಪು ನ ಇಮೇಜಿಗೆ ವಿರುದ್ಧದ ಪಾತ್ರ. ಅದರಲ್ಲೂ ಅಪ್ಪು ಸೈ ಎನಿಸಿ ಇಮೇಜಾತೀತ ನಟರಾಗಿ ಹೊರಹೊಮ್ಮಿದ್ದಾರೆ.

ಹಾಡು:
ಹರಿಕೃಷ್ಣ ರ ಹಿನ್ನಲೆ ಸಂಗೀತ ಚಿತ್ರದ ವೇಗಕ್ಕೆ ಮತ್ತಷ್ಟು ಬಲಕೊಟ್ಟಿದೆ. ಆದರೆ ಹಾಡುಗಳು ನಿರಾಸೆ ಮೂಡಿಸುತ್ತದೆ. ಅದರ ರಾಗ ಸಂಯೋಜನೆಯಿಂದಲ್ಲ. ಅವುಗಳ ಪ್ಲೇಸ್ಮೆಂಟ್ ಇಂದ. 'ಹಲ್ಲೋ 123' ಐಟಮ್ ನಂಬರ್ 'ಪಂಕಜ'ಳ ನೆನಪಿಗಾದರೆ, 'ಕೆಂಪಾದೋ ಕೆಂಪಾದೋ' ಹಾಡು ಚಿತ್ರದ ಆ ಹಂತಕ್ಕೆ ಅಷ್ಟೇನೂ ಅವಶ್ಯವಲ್ಲ.

ಇತರೆ:
ಭಾವನ ಪ್ರಪೋಸ್ ಮಾಡೋ ದೃಶ್ಯದಲ್ಲಿ ಹೈಲೈಟ್ ಆಗ್ತಾರೆ. ಯೋಗಿಯ ಪಾತ್ರ ಪೋಷಣೆಯಲ್ಲಿ 'ಹುಡುಗರು' ಚಿತ್ರದ ಛಾಯೆಯಿದೆ. ದೀಪು ಸಂಕಲನ ನಿಜಕ್ಕೂ ಚೆನ್ನಾಗಿದೆ. 'ಏನ್ ಸ್ಪೀಡ್ ಗುರು ಫಿಲಮ್ಮು' ಅನ್ಸಿದ್ರೆ ಕ್ರೆಡಿಟ್ಸ್ ಟು ದೀಪು.
ಸುಕುಮಾರ್ ಕ್ಯಾಮೆರ ಕೆಲಸ ಚೇಸಿಂಗ್, ಫೈಟ್ ದೃಶ್ಯಗಳು ಮತ್ತು ಕೆಲವು ಲಾಂಗ್ ಶಾಟ್ ಗಳು ಚಿತ್ರಕ್ಕೆ ಕಳೆತರುತ್ತವೆ.

ಲಾಸ್ಟ್ ಪಂಚ್:
ಮನುಷ್ಯ ಸಂಘಜೀವಿ ಎಂಬ ಸಂದೇಶ ಚಿತ್ರ ಶುರುವಾಗುವ ಮುಂಚೆಯೇ ಹೇಳುವುದು ಹಾಲಿವುಡ್ ಸ್ಟೈಲ್ ಆಫ್ ಮೇಕಿಂಗ್. ಇದನ್ನ ಸಾರಲು ತಮಿಳಿನ ಒಂದು ಚಿತ್ರವನ್ನು ಡಾ! ರಾಜ್ ಸಂಸ್ಥೆ  ಕನ್ನಡಕ್ಕೆ ರೀಮೇಕ್ ಮಾಡುವ ಬದಲು
ಇದೇ ಸಂದೇಶವನ್ನು ಹೇಳಲು ಇದರಪ್ಪನಂತಹ ಕಥೆಗಳು ಕನ್ನಡದಲ್ಲಿ ಸಿಗುತ್ತಿದ್ದವು ಎಂದೆನಿಸುವುದು ಪ್ರತಿಯೊಬ್ಬ ಸ್ವಾಬಿಮಾನಿ ಕನ್ನಡಿಗನ ಒಮ್ಮತ ಅಭಿಪ್ರಾಯ.



~ಹೊಗೆ

EDEGAARIKE MOVIE REVIEW

 ಮನಸಿನಲ್ಲಿ ಉಳಿಯುವ ಎದೆಗಾರಿಕೆ !!!

ಎದೆ ಝಲ್ ಎನಿಸೋ ಕಥೆಗೆ ಸ್ವಲ್ಪ ಡಲ್ ಎನಿಸೋ  ಟೆಕ್ನಿಕಲ್ ಅಂಶಗಳ ಹೊತ್ತು ಬಂದಿರುವ ಚಿತ್ರವೇ 'ಎದೆಗಾರಿಕೆ'.
ಮಹಿಳಾ ನಿರ್ದೇಶಕರೊಬ್ಬರು ಒಬ್ಬ ಪುರುಷನ ಎದೆಗಾರಿಕೆಯ ಮೇಲೆ ಚಿತ್ರ ಮಾಡಿರುವುದು ಒಳ್ಳೆಯ ಬೆಳವಣಿಗೆ. 
ಹಾಗಂತ ಇದು ಮಹಿಳಾ ಪ್ರಧಾನ ಚಿತ್ರವಾಗದೆ ಕಥೆಯಲ್ಲಿ ಪುರುಷ ಪ್ರಾಧಾನ್ಯತೆ ಇದೆ. ಪತ್ರಕರ್ತ ಅಗ್ನಿ ಶ್ರೀಧರ್ ರವರ  ಕಿರು ಕಾದಂಬರಿ ಆಧಾರಿತ ಈ ಚಿತ್ರ ಭೂಗತ ಜಗತ್ತಿನ ತಣ್ಣನೆ ಕ್ರೌರ್ಯದ ಕನ್ನಡಿಯಂತಿದೆ.

 ಮುಂಬೈನ ಸುಪಾರಿ ಕಿಲ್ಲರ್ ಒಬ್ಬನನ್ನು 'ಉಡಾಯಿಸಲು' ಬೆಂಗಳೂರಿನ ಭೂಗತ ಲೋಕದ ಒಂದು ತಂಡವೊಂದಕ್ಕೆ ದುಬೈ ಇಂದ 'ಆರ್ಡರ್' ಬಂದಿರುತ್ತದೆ. ಆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಅವರು ಬೆಂಗಳೂರಿನಿಂದ ಸಕಲೇಶಪುರಕ್ಕೆ 'ಮುಂಬೈ'ನವನೊಂದಿಗೆ ಹೋಗುತ್ತಾರೆ. ಅಲ್ಲಿ ಕಾಣಸಿಗುವುದೇ ಮನುಷ್ಯನೋರ್ವನ ಎದೆಗಾರಿಕೆ. ಅವನು ಸಾವಿಗೆ ಒಡ್ಡುವ ಎದೆಗಾರಿಕೆ. ಹಾಗಂತ ಅವನು ಕಲ್ಲು ಹೃದಯದವನಲ್ಲ. ಅವನಿಗೂ ಒಬ್ಬಳು ಪ್ರೇಯಸಿ ಇರುತ್ತಾಳೆ. ಸುಪಾರಿ ಒಂದಿದ್ರೆ ಸಾಕು ಎಂಥವರನ್ನು ಬೇಕಾದರೂ ಕೊಲ್ಲಬಲ್ಲ ಆತ ಓರ್ವ ಮುದುಕಿಗೆ ಗುಂಡು ಹೊಡೆಯಲು ನಿರಾಕರಿಸುತ್ತಾನೆ. ಹೀಗೆ ಅವನೆಷ್ಟು ಮನುಷ್ಯ ಹೃದಯೀ ಅಂತ ತೋರಿಸುತ್ತಲೇ ಚಿತ್ರಕಥೆ ಅವನ ಸಾವಿನತ್ತ ಹೊರಳುತ್ತದೆ. ಅವನ ಸಾವು ಅವನಿಗೆ ತಿಳಿದಿರುತ್ತದೆ.

ಇಂಥಾ ಕ್ಲಾಸಿಕ್ ಎನಿಸುವ ಕಥೆಗೆ ಚುರುಕ್ ಎನಿಸುವ ಸಂಭಾಷಣೆ ಇದೆ. ಚಿತ್ರಕಥೆಯಲ್ಲಿ ಧಂ ಇದೆ. ಕೆಲವು ಶಾಟ್ಸ್ ತುಂಬಾನೇ ಅರ್ಥವತ್ತಾಗಿದೆ. ಆದರೆ ಒಟ್ಟಾರೆಯಾಗಿ ನೋಡಿದಾಗ ದೃಶ್ಯಗಳ ಕ್ವಾಲಿಟಿ ಶ್ರೇಷ್ಠ ದರ್ಜೆಯದ್ದಲ್ಲ. ಅದಕ್ಕೆ ಬಜೆಟ್ ಕಾರಣವಿರಬಹುದು. ಈಗಿನ ಎಲ್ಲ ಚಿತ್ರಗಳಲ್ಲಿ ಕಾಣುವ ಕಲರ್ ಗ್ರೇಡಿಂಗ್ ಈ ಚಿತ್ರದಲ್ಲಿ ಕಾಣುವುದೇ ಇಲ್ಲ. ಇದೇ ಚಿತ್ರವನ್ನು ಇನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬಹುದಿತ್ತು, ಸೂಕ್ತ ತಂತ್ರಜ್ಞಾನ ಬಳಸಿದ್ದರೆ. 
ಉದಾಹರಣೆಗೆ, ತುಂಬಾ ಭಾವನಾತ್ಮಕ 
ಸನ್ನಿವೇಶಗಳಲ್ಲಿ, ಭೂಗತ ಜಗತ್ತನ್ನು ತೋರಿಸುವಾಗ, ಕಾಡಿನಲ್ಲಿ ಚಿತ್ರಿಸುವಾಗ ಕ್ರೇನ್ ಬಳಸಿದ್ದರೆ ಅದು ಕಥೆ ಹೇಳುವ ರೀತಿಯೇ ಬೇರೆ. ಅದು ಹೆಚ್ಚು ಬಳಕೆಯಾಗಿಲ್ಲ. ಕೆಲವು ಋಣಾತ್ಮಕ ಅಂಶಗಳನ್ನು  ಬದಿಗೊತ್ತಿ ನೋಡಿದರೆ, 'ಎದೆಗಾರಿಕೆ' ನಿಸ್ಸಂಶಯವಾಗಿ ಒಳ್ಳೆ ಪ್ರಯತ್ನ.

ಅತುಲ್ ಕುಲಕರ್ಣಿ ಅಭಿನಯಕ್ಕೆ ಧಂಗು ಬಡಿಸುವಷ್ಟು ಅದ್ಭುತ. ಅವರ ಮುಂದೆ ಆದಿತ್ಯ, ಸೃಜನ್ ಲೋಕೇಶ್, ಧರ್ಮ ಎಲ್ಲ ಮಾಸ್ಕ್ ಆಗ್ತಾರೆ.


ಮಿಸ್ ಮಾಡ್ದೆ ಚಿತ್ರ ನೋಡಿ.. ಕೊನೆಯಲ್ಲಿ ತಲೆ ಬಿಮ್ ಅಂದ್ರೆ ಚಿತ್ರ ಮಾಡಿದವರಿಗೆ ಸಾರ್ಥಕತೆ...

~ಹೊಗೆ

DRAMA KANAADA MOVIE REVIEW

ಭಟ್ರು ಕಥೆ ಹೇಳ್ತಾವ್ರೆ .. ಒಂದ್ಸಲ ಹೋಗ್ಬನ್ನಿ.. !!

ಜೀವನ ನಾಟಕರಂಗ, ನಾವೆಲ್ಲ ಪಾತ್ರಧಾರಿಗಳು, ದೇವರೇ ಸೂತ್ರಧಾರ ಎಂಬ ಅನಾದಿಕಾಲದ ನುಡಿಯನ್ನು ನಿರ್ದೇಶಕರು
ಚಿಕ್ಕದಾಗಿ ಚೊಕ್ಕದಾಗಿ 'ಬೊಂಬೆ ಆಡ್ಸೋನು ಮೇಲೆ ಕುಂತವ್ನೆ' ಅಂತ ಹೇಳಿ ತುಂಡ್ ಹೈಕಳ ಕೈಯಲ್ಲಿ ಒಂದು ನಾಟಕೀಯ ತಿರುವುಗಳಿರುವ ಡ್ರಾಮಾ ಆಡಿಸಿದ್ದಾರೆ. ಮುಂಗಾರುಮಳೆ,ಗಾಳಿಪಟ ನಂತರ ಭಟ್ರ ಕಡೆಯಿಂದ ಅಂಥಾ  ಒಂದು ಗಟ್ಟಿ ಕಥೆಯುಳ್ಳ ಚಿತ್ರ ಬಂದಿಲ್ಲವೆನ್ನುವ ಆರೋಪದಿಂದ ಒಂದು ಪಕ್ಕಾ 'ಡ್ರಾಮ' ಆಡಿಸಿ ಆರೋಪ ಮುಕ್ತರಾಗಿದ್ದಾರೆ.

ಕಥೆಯಲ್ಲಿ ಎಂದಿನಂತೆ (ಭಟ್ರ ಸ್ಟೈಲ್) ಓತ್ಲಾ ಹೊಡೆಯುವ ಇಬ್ಬರು ನಾಯಕರು. ಅವರಿಗೆ ತುಂಡ್ ಹೈಕಳು ಎಂಬ ನಾಮಕರಣ. ಹಿಂಗೇ ಓತ್ಲಾ ತಿರುಗೋ ಇಬ್ಬರ ಚೇಷ್ಟೆ ತರಲೆಗಳು ಸಾಗ್ತಿದ್ದಂತೆ ಕಥೆ ನಾಯಕಿ(ರಾಧಿಕಾ ಪಂಡಿತ್) ಕಡೆಗೆ ಮುಖ ಮಾಡುತ್ತದೆ. ಪ್ರಾಣಕ್ಕೆ ಅಪಾಯವಿರುವ ನಾಯಕಿ, ನಾಯಕಿ ತಂದೆ ಅದಕ್ಕೆ ಕಾರಣರಾಗಿರುವುದು, ನಾಯಕ ನಾಯಕಿ ಭೇಟಿ, ಲವ್ವು ಗಿವ್ವು ಇತ್ಯಾದಿಗಳ ಜೊತೆಗೆ ಚಿತ್ರದಲ್ಲಿ ದೊಡ್ಡ ನಾಟಕವೇ ಅಡಗಿದೆ. ಇದರ ಜೊತೆಗೆ ಇರುವ ಮತ್ತೊಂದು ವಿಶೇಷ ಅಂಶ ಎಂದರೆ ಆಧ್ಯಾತ್ಮ. ಇಷ್ಟು ದಿನ ಭಟ್ರ ಹಾಡುಗಳಲ್ಲಿ ಅಡಗಿದ್ದ ತತ್ವಶಾಸ್ತ್ರ, 'ಡ್ರಾಮಾ'ದ ಕಥೆಯಲ್ಲಿ  ಬೆರೆತು ಇನ್ನು ಕೊಂಚ ಸಾಗಿ ಅಧ್ಯಾತ್ಮಿಕ ಅಂಶಗಳನ್ನ ಬೆರೆಸಿ ಪ್ರೇಕ್ಷಕರನ್ನ ಮತ್ತಷ್ಟು ಕಥೆಯೊಂದಿಗೆ ಒಡಗೂಡಿಸಿಕೊಳ್ಳುವ ತಂತ್ರ ಎನ್ನಬಹುದೇನೋ. ಆ ನಿಟ್ಟಿನಲ್ಲಿ ಚಿತ್ರಕಥೆ ಯಶಸ್ವಿಯಾಗಿದೆ.



ಯಶ್ ಸಾಹಸ, ನೃತ್ಯಗಳಲ್ಲಿ ಮಿಂಚಿ ಬರೀ ತುಂಡ್ ಅಭಿನಯ ಅನ್ಸ್ಕೊಳದೆ ಕ್ಲೈಮಾಕ್ಸ್ನಲ್ಲಿ ಅತ್ತು ಪರಿಪೂರ್ಣತೆ ಮೆರೆದಿದ್ದಾರೆ.
ಇನ್ನು ಸತೀಶ್ ಗೆ ಮತ್ತದೇ ಹಳ್ಳಿ ಸೊಗಡಿನ ಡೈಲಾಗ್ ಡೆಲಿವರಿಯಲ್ಲೇ ಸೈ ಎನಿಸಿಕೊಳ್ತಾರೆ. ರಾಧಿಕ ಪಂಡಿತ್ ರ ನಾಯಕಿಯ ಪಾತ್ರಕ್ಕೆ ಭಟ್ರು ಪುನಃ 'ನಂದಿನಿ' ಅನ್ನೋ ಹೆಸರಿಟ್ಟಿರುವುದು ಗಮನಿಸಬೇಕಾದ ಅಂಶ.ಪಂಡಿತ್ ಹಿಂದೆಂದಿಗಿಂತ ಮುದ್ದಾಗಿ ಕಾಣ್ತಾರೆ. ಸಿಂಧು ಲೋಕನಾಥ್ ಮೂಕಾಭಿನಯದಲ್ಲಿ ಮುಗ್ಧ ಲುಕ್ಸ್. ಸುಚೇಂದ್ರ ಪ್ರಸಾದ್ ಭಾವಾವೇಗದ ಕಾಲೇಜ್ ಪ್ರಾಂಶುಪಾಲರ ಜಟಿಲ ಪಾತ್ರವನ್ನ ಸಲೀಸಾಗಿ ಅಭಿನಯಿಸಿದ್ದಾರೆ. ಇನ್ನು ಅಂಬರೀಷ್ ಗೆ ಪರದೆಯ ಮೇಲೆ ವಿಶಿಷ್ಟ ಸ್ಥಾನ ಕಲ್ಪಿಸಲಾಗಿದೆ. ಬೊಂಬೆ ಶಾಸ್ತ್ರದವನ ಪಾತ್ರದಲ್ಲಿ ಅವರದು ಪ್ರಬುದ್ಧ ನಟನೆ.

ಮಳೆ ನಂತರ ಭಟ್ರು ಕಾಮೆರಮ್ಯಾನ್ ಕೃಷ್ಣ ಜೊತೆ ಕೆಲಸ ಮಾಡಿರೋದು ಇದರಲ್ಲೇ. ಸಾಕಷ್ಟು ಗ್ಯಾಪ್ ಆದರೂ ಅವರಿಬ್ಬರ ಜೋಡಿ ಮತ್ತೊಮ್ಮೆ ಕೆಲಸಮಾಡಿದೆ. ಕೃಷ್ಣ ಅಂದಮೇಲೆ ಸಾಕಷ್ಟು ಏರಿಯಲ್ ಮತ್ತು ಹ್ಯಾಂಡ್ ಹೆಲ್ಡ್ ಶಾಟ್ಸ್ ಇರಲೇಬೇಕು.
ಅವೇ ಒಮ್ಮೊಮ್ಮೆ ಕಥೆ ಹೇಳುತ್ತವೆ.ರವಿವರ್ಮ ಸಾಹಸದಲ್ಲಿ ಒಂದು ಫೈಟ್ ಮಜಬೂತಾಗಿ ಮೂಡಿಬಂದಿದೆ, ಏನೋ ನಿಜವಾಗಲು ಹೊಡೆದಾಡುತ್ತಿದ್ದಾರೆ ಎನ್ನುವಷ್ಟು. ಒಂದು ಬಿಟ್ ಅನ್ನು ಬಿಟ್ರೆ ಉಳಿದೆಲ್ಲ ಹಾಡುಗಳನ್ನು ಭಟ್ರೇ ಬರ್ದಿರೋದು ಅವರ ಪ್ರತಿಭೆಗೆ ಕನ್ನಡಿ. ಹರಿಕೃಷ್ಣ ಹಾಡುಗಳು ಮತ್ತು ಹಿನ್ನಲೆ ಸಂಗೀತ ಒಂದಕ್ಕೊಂದು ಸ್ಪರ್ಧೆಗೆ ಬಿದ್ದಂತೆ ಸಕ್ಕಾತಾಗಿ ಮೂಡಿಬಂದಿದೆ.

ಒಟ್ನಲ್ಲಿ ತುಂಡ್ ಹೈಕಳ ಸಾವಾಸ ಚೆನ್ನಾಗೈತೆ. ಮನರಂಜನೆಯ ರಸದೂಟ ಕೊಡೋದ್ರಿಂದ ಉಪವಾಸ ದೂರದ ಮಾತು. ಭಟ್ರು ಅಪರೂಪಕ್ಕೆ ಕಥೆ ಮಾಡವ್ರೆ .. ಕೊನೆಗ್ ಒಂದು ಅರ್ಥವತ್ತಾದ ಸಂದೇಶವಿದೆ. ಹೋಗಿ ನೋಡ್ಕೊಮ್ಬನ್ನಿ. !!!


~ಹೊಗೆ

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ MOVIE REVIEW

ಬತ್ತಿಹೋದ ದೇಶಭಕ್ತಿಗೆ ರಾಯಣ್ಣ ಔಷಧಿ..

ಮೂವತ್ತು ಕೋಟಿ ಬಜೆಟ್, ಕನ್ನಡ ಚಿತ್ರರಂಗದಲ್ಲೇ ಅತೀ ದೊಡ್ಡ ಚಿತ್ರ ಎಂಬ ಹೆಗ್ಗಳಿಕೆ, ದರ್ಶನ್ ರಂಥ ಅಜಾನುಬಾಹು ದೇಹ ಮತ್ತು ಅಷ್ಟೇ ಮಟ್ಟದ ಪ್ರೇಕ್ಷಕವರ್ಗ ಹೊಂದಿರುವ ನಾಯಕನಟ, ಈಗಿನ ಮಟ್ಟಕ್ಕೆ ಅಪರೂಪ ಎನಿಸುವ ಐತಿಹಾಸಿಕ ವಿಷಯಾಧಾರಿತ ಕಥೆ, ಸಂಗೊಳ್ಳಿ ರಾಯಣ್ಣನಂಥ ಮೇರುಪುರುಷನ ಮೇಲಿನ ಕಥಾವಸ್ತು.. ಇಷ್ಟು ಸಾಕು ಒಂದು ಚಿತ್ರವನ್ನ 
ಅದ್ಭುತ ಎನಲು. ಆದರೆ ಈ ಅದ್ಭುತವನ್ನ ಅತ್ಯದ್ಭುತ ಮಾಡಲು ನಿರ್ದೇಶಕ ನಾಗಣ್ಣ ಎಡವಿದ್ದಾರೆ. 

ರಾಯಣ್ಣ ಕಿತ್ತೂರು ಸಂಸ್ಥಾನದ ವೀರರಾಣಿ ಚೆನ್ನಮ್ಮಳ ಬಲಗೈ ಭಂಟ. ಸಂಗೊಳ್ಳಿ ಅವನ ಊರು. ಕಥೆ ಆರಂಭವಾಗುವುದು
ಹೀಗೆ. ಬ್ರಿಟಿಷ್ ಅಧಿಕಾರಿ ಥ್ಯಾಕರೆ ರಾಣಿ ಚೆನ್ನಮ್ಮಳ ಬಳಿ ಕಪ್ಪ ಕೇಳಲು ಬರುತ್ತಾನೆ. ರಾಣಿಯು ಫೇಮಸ್ ಸ್ಕೂಲ್ ಫ್ಯಾನ್ಸಿ ಡ್ರೆಸ್ ಡೈಲಾಗ್ 'ನಿಮಗೇಕೆ ಕೊಡಬೇಕು ಕಪ್ಪ' ಎನ್ನುತ್ತಾಳೆ. ಥ್ಯಾಕರೆ ಸಾಹೇಬ ಅಪಮಾನಿತನಾಗಿ ಒಳಸಂಚು ನಡೆಸಿ ಯುದ್ಧಸಾರುತ್ತಾನೆ. ರಾಯಣ್ಣ ಮುಂದಾಳತ್ವದಲ್ಲಿ ಆ ಯುದ್ಧ ಗೆದ್ದು ಕಿತ್ತೂರು ಹರ್ಷೋದ್ಗಾರ ಮಾಡುತ್ತದೆ. ಆ ಯುದ್ಧದಲ್ಲಿ ಥ್ಯಾಕರೆ ಸತ್ತ ಪರಿಣಾಮ ಹೊಸ ಬ್ರಿಟಿಷ್  ಅಧಿಕಾರಿ ಬರುತ್ತಾನೆ. ಅವನು ಮತ್ತೊಂದು ಯುದ್ಧ ಸಾರಿ, ವಿರೋಧ ಪಕ್ಷದ ಕೆಲವರಿಗೆ ಹಣದಾಸೆ ತೋರಿಸಿ ಯುದ್ಧ ಗೆಲ್ಲುತ್ತಾನೆ. ರಾಣಿ, ರಾಯಣ್ಣ ಇತರ ಎಲ್ಲರೂ ಸೇರಿ ಬಂಧಿತರಾಗುತ್ತಾರೆ.
ಐದು ವರ್ಷದ ನಂತರ ರಾಯಣ್ಣ ಮತ್ತು ಇತರರು ಬಿಡುಗಡೆಗೊಳ್ತಾರೆ, ರಾಣಿ ಚೆನ್ನಮ್ಮನ ಹೊರತಾಗಿ. ಅಲ್ಲಿಯತನಕ ಕೇವಲ ವೀರನಾಗಿದ್ದ ರಾಯಣ್ಣ, ಅಲ್ಲಿಂದ ಕ್ರಾಂತಿಕಾರಿ ನಿಲುವುಗಳನ್ನು ತಾಳಿ ಕ್ರಾಂತಿವೀರನಾಗ್ತಾನೆ. ಗೆರಿಲ್ಲಾ ಮಾದರಿಯ ತಂತ್ರಗಳನ್ನು ಹೂಡಿ ಬ್ರಿಟಿಷರನ್ನು ಹೈರಾಣಾಗಿಸುತ್ತಾನೆ. ಕೊನೆಗೆ ಕೆಲ ದೇಶಭ್ರಷ್ಟರ ಕುಯುಕ್ತಿಯಿಂದ ಬ್ರಿಟಿಷರಿಗೆ ಸಿಕ್ಕಿ ಗಲ್ಲು
ಶಿಕ್ಷೆಗೆ ಒಳಗಾಗುತ್ತಾನೆ.


 
ಇಡೀ ಚಿತ್ರಕಥೆ ದೇಶಭಕ್ತಿಯ ಬದಲಾಗಿ ರಾಯಣ್ಣನೊಬ್ಬನನ್ನೇ ವೈಭವೀಕರಿಸುತ್ತದೆ. ಅದೇ ಇಲ್ಲಿ ದೊಡ್ಡ ಕಂದಕವಾಗುತ್ತದೆ.
ಬೇರೆ ಯಾವುದೇ ಒಂದು ಪಾತ್ರಕ್ಕೂ ಮಹತ್ವವೇ ಇಲ್ಲದಂತಾದಾಗ ಮೂರು ಗಂಟೆಗಳ ಕಾಲ ರಾಯಣ್ಣ ನಂಥ ರಾಯಣ್ಣನನ್ನೇ ನೋಡಲು ಬಹಳಷ್ಟು ಬೇಸರವಾಗುತ್ತದೆ. ಜಯಪ್ರದ ರಾಣಿಯ ಪಾತ್ರದಲ್ಲಿ ನೀರಸವಾಗಿ ತೋರುತ್ತಾರೆ. ಉಮಾಶ್ರೀ ಬರಿಯೆ ಒಂದೆರಡು ಪಂಚಿಂಗ್ ಡೈಲಾಗ್ಸ್ ಗೆ ಸೀಮಿತವಾಗುತ್ತಾರೆ. ಇನ್ನು ಶಶಿಕುಮಾರ್ ಸಾಕಷ್ಟು ಸಮಯಗಳ ಕಾಲ ಸ್ಕ್ರೀನ್ ಮೇಲೆ ಕಂಡರೂ ಅವರ ಪಾತ್ರಕ್ಕೆ ಮಹತ್ವವೇ ಇಲ್ಲ. ಇನ್ನು ನಾಯಕಿ ಹಣೆಪಟ್ಟಿ ಹೊತ್ತ ನಿಖಿತಾ ಅಂತೂ ಐಟಂ ಡ್ಯಾನ್ಸರ್ ನಂತೆ  ಒಂದು ಹಾಡಿಗೆ ಮಾತ್ರ ಬಂದು ಹೋಗ್ತಾರೆ.

ಐದು ವರ್ಷದ ನಂತರವೂ ಹುಡುಗನೊಬ್ಬ ದೊಡ್ದವನಾಗದಿರುವುದು, ರಾಯಣ್ಣನ ವಿಗ್ ನೀರಿನ ಫೈಟ್ ನಲ್ಲೂ ಒದ್ದೆಯಾಗದೆ ಇರುವುದು ಹೀಗೆ ಸಾಕಷ್ಟು ಋಣಾತ್ಮಕ ಅಂಶಗಳನ್ನು ಹೊಂದಿದ್ದರು 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಒಂದು ಅಸಾಧಾರಣ ಚಿತ್ರ. ಇಲ್ಲಿ ಮೊದಲು ಸ್ಮರಿಸಬೇಕಿರುವುದು ಕೆಚ್ಚೆದೆಯ ನಿರ್ಮಾಪಕರಾದ ಆನಂದ ಅಪ್ಪುಗೊಳ್ ರವರನ್ನ. ಹಿಂದೆಂದೂ ಮಾಡಿರದ ಶೈಲಿಯಲ್ಲಿ ಚಿತ್ರವನ್ನು  ಕನ್ನಡ ಪ್ರೇಕ್ಷಕರ ಮುಂದೆ ತಂದಿದ್ದಾರೆ. ದರ್ಶನ್ ಕೂಡ ಸಾಕಷ್ಟು ಶ್ರಮವಹಿಸಿದ್ದಾರೆ. ಪೋಷಾಕಿನಲ್ಲಿ ನೋಡಲು ರಾಯಣ್ಣನ ಅಪರಾವತಾರ. ಧ್ವನಿಯೇರಿಸಿ ಡೈಲಾಗ್ಸ್ ಹೇಳಿದರೆ ಮಾತ್ರ ಅದು ಅಭಿನಯ ಅಂತ ನಿರ್ದೇಶಕರು ಭಾವಿಸಿದ್ದಾರೇನೋ ಎಂದು ಒಮ್ಮೊಮ್ಮೆ ಅನಿಸಿದರೆ ಅದು ದರ್ಶನ್ ತಪ್ಪಲ್ಲ.

ಇಂಥ ಮಹಾನ್ ಚಿತ್ರಕ್ಕೆ ತಕ್ಕ ಸಂಗೀತ, ಕ್ಯಾಮೆರ ಕೆಲಸ ಇಲ್ಲದಂತಾಗಿದೆ. ಅಥವಾ ಜನರ ನಿರೀಕ್ಷೆಗೆ ತಕ್ಕುದಾಗಿಲ್ಲ.
ಆದರು ನಮ್ಮ ಬತ್ತಿಹೋದ ದೇಶಭಕ್ತಿಗೆ ಈ ಚಿತ್ರ ಒಂದು ಔಷಧಿ. ಸಂಗೊಳ್ಳಿ ರಾಯಣ್ಣ ನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಹೋಗಿ ನೋಡಿ. ಕ್ಲೈಮಾಕ್ಸ್ ನಲ್ಲಿ ಕಣ್ಣಲ್ಲಿ ನೀರು ಜಿನಿಗೋದ್ ಖಂಡಿತ.

>>>>

~ಹೊಗೆ

ಸಿನಿಮಾ ಪ್ರಶ್ನೋತ್ತರ

ವರ್ಷದ ಹಿಂದೆ ನಾಗತಿಹಳ್ಳಿ ಚಂದ್ರಶೇಖರ್ ಅವರು ನಡೆಸುವ ಚಿತ್ರಕಥಾ ಶಿಬಿರದಲ್ಲಿ ಭಾಗವಹಿಸಲು ಅರ್ಜಿ ಹಾಕಿದ್ದೆ.ಅರ್ಜಿ ತುಂಬಲು ಕೆಲವು ಸಿನಿಮಾ ಸಂಬಂಧಪಟ್ಟ ಪ್ರಶ್ನೆಗಳಿಗೆ ಉತ್ತರಿಸಬೇಕಾಗಿತ್ತು. ಅವರ ಪ್ರಶ್ನೆಗಳಿಗೆ ನನ್ನ ಉತ್ತರ ಈ  ಕೆಳಗೆ..
>>>>>>>>>>>>>>>>>>>>>>>>>>>>>>>

1. ಇಂದಿನ ಸಮಾಜಕ್ಕೆ ಎಂಥ ಚಿತ್ರಗಳ ಅವಶ್ಯಕತೆ ಇದೆ?

ಸಾಮಾನ್ಯವಾಗಿ ಜನರು ಚಿತ್ರಮಂದಿರಕ್ಕೆ ಬರುವುದು ಮನರಂಜನೆಗಾಗಿ. ಆದ್ದರಿಂದ ಕೇವಲ ಒಂದು ಚಿತ್ರ, ಸಾಮಾಜಿಕವಾಗಿ ಬದಲಾವಣೆ ತರುವುದು ಕಷ್ಟಸಾಧ್ಯ. ಆದರೆ, ಸಾಲು ಸಲ್ಲು ರೌಡಿಸಂ ಚಿತ್ರಗಳು ಹೇಗೆ ಜನರ ಮನಸ್ಸನ್ನು ಪ್ರಚೋದಿಸುವುದೋ, ಸಾಲು ಸಾಲು ಪ್ರೀತಿ ಪ್ರೇಮ ಚಿತ್ರಗಳು ಹೇಗೆ ಯುವಜನತೆಯ ಮೇಲೆ ಪರಿಣಾಮ ಬೀರುವುದೋ, ಅದೇ ರೀತಿ ಸಾಲು ಸಾಲು ಚಿತ್ರಗಳು ಸಾಮಜಿಕ ಮೌಲ್ಯಗಳನ್ನು ಸಾರುವ ಅಡಿಪಾಯವಿಟ್ಟುಕೊಂಡುಬಂದರೆ  ಜನರ ಮನಸ್ಸನ್ನು ಪರಿವರ್ತನೆ ಮಾಡುವುದು ಕಷ್ಟ ಎನಿಸುವುದಿಲ್ಲ.


ನನ್ನ ಪ್ರಕಾರ CONTEXTUAL ಚಿತ್ರಗಳು ಬರಬೇಕು, ಇಂದಿನ ಸಮಾಜಕ್ಕೆ.
ಉದಾ: ಸದ್ಯ, ಅಣ್ಣಾ ಹಜಾರೆ ಯವರು  ಭ್ರಷ್ಟಾಚಾರದ ವಿರುದ್ಧ ಚಳುವಳಿಯನ್ನು ಅತ್ಯುನ್ನತ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಇದನ್ನೆಲ್ಲಾ ನಾವು ನ್ಯೂಸ್ನಲ್ಲಿ ನೋಡ್ತೀವಿ, ಮನಸ್ಸಿನಲ್ಲೇ 'ಶಹಬ್ಬಾಸ್ ಹಜಾರೆ' ಅಂದ್ಕೊತೀವಿ. ಆದರೆ ಒಬ್ಬ ಜನಸಾಮಾನ್ಯ ತನ್ನ ನಿಜ ಜೀವನದಲ್ಲಿ ಏನೆಲ್ಲಾ ಬದಲಾವಣೆ ಮಾಡಿಕೊಂಡರೆ ಇಂತಹ ಚಳುವಳಿಗಳಿಗೆ ಮತ್ತಷ್ಟು ಶಕ್ತಿ ಬರುತ್ತದೆ, ಮುಂತಾದವುಗಳನ್ನು ಚಿತ್ರಗಳ ಮೂಲಕ ತೋರಿಸಬೇಕು. ಅಂಥಾ ಚಿತ್ರಗಳ ಅವಶ್ಯಕತೆ ಇದೆ.


2. ನೀವು ಮೆಚ್ಚಿದ ಇತ್ತೀಚಿಗೆ ತೆರೆಕಂಡ ಚಿತ್ರಗಳು? ಏಕೆ? 

ಇತ್ತೀಚೆಗೆ ತೆರೆಕಂಡ ಚಿತ್ರಗಳಲ್ಲಿ ಮೂರು ಚಿತ್ರಗಳು ವಿವಿಧ ಕಾರಣಗಳಿಗೆ ನನಗೆ ಇಷ್ಟವಾಯಿತು.

ಅ. ಐ ಯಾಮ್ ಸಾರಿ ಮತ್ತೆ ಬನ್ನಿ ಪ್ರೀತಿಸೋಣ - 
ತುಂಬಾನೇ ಕ್ಲೀನ್ ಚಿತ್ರ. ಕಥಾ ಹಂದರ ತುಂಬಾ ಇಷ್ಟವಾಯ್ತು. climax ತನಕ ಜನರನ್ನು ಹಿಡಿದಿಟ್ಟುಕೊಳ್ಳುವ ಚಿತ್ರಕಥೆ ಅದರ ನಿರೂಪಣೆಯಲ್ಲಿತ್ತು. ಈ ಚಿತ್ರದ title, climax ನೋಡಿದ್ ಮೇಲ್ ಗೊತ್ತಾಗತ್ತೆ - ಎಷ್ಟು apt  ಅಂತ. ನಾಯಕನಿಗೆ ಎಷ್ಟು ಸ್ಕೋಪ್ ಇದ್ಯೋ, ಅಷ್ಟೇ ಸ್ಕೋಪ್ ಚಿತ್ರದ ನಾಯಕಿಗೂ ಇದೆ ಅನ್ನೋದು ವಿಶೇಷ. ಆದರೆ ಇಂಥ ಅಪರೂಪದ ಚಿತ್ರಗಳನ್ನು ಚಿತ್ರಮಂದಿರದಲ್ಲಿ ಹೆಚ್ಚು ದಿನ ಉಳಿಸಿಕೊಳ್ಳಲಾಗದಿದ್ದು ಕನ್ನಡ ಪ್ರೇಕ್ಷಕರ ವಿಪರ್ಯಾಸ  .

ಆ. ವಿನಾಯಕ ಗೆಳೆಯರ ಬಳಗ - 
ತುಂಬಾ ಸಿನಿಮೀಯ ಅನ್ನಿಸದ, ಸದಭಿರುಚಿಯ sensible  ಚಿತ್ರ. ಚಿತ್ರಕಥೆ ಅಷ್ಟು ಗಟ್ಟಿ ಇರ್ಲಿಲ್ಲ ಅನ್ನೋದು ನನ್ನ ಅನಿಸಿಕೆ. 
ಇನ್ನೂ ಉತ್ತಮಗೊಳ್ಳಬಹುದಿತ್ತು. ಅವರ ಪ್ರಯತ್ನ ಅಭಿನಂದನಾರ್ಹ.

ಇ. ಜಿನ್ದಗಿ ನಾ ಮಿಲೇ ದೊಬಾರ -

ಹೃತಿಕ್ ರೋಶನ್ ಅಂತ ಘಟಾನುಘಟಿಯರಿದ್ರು, ಚಿತ್ರ ಅವರ ಮೇಲೆ ಕೇಂದ್ರೀಕೃತಗೊಳ್ಳದೆ ಎಲ್ಲಾ ಪಾತ್ರಗಳಿಗೂ ಉತ್ತಮ ಅವಕಾಶಗಳಿವೆ. ಚಿತ್ರದ ಕಾನ್ಸೆಪ್ಟ್ ಅರ್ಥಗರ್ಭಿತವಾಗಿದೆ. ಬರೀ ವಿದೇಶದಲ್ಲಿ ಚಿತ್ರಿಸಬೇಕೆಂಬ ಕಾರಣಕ್ಕೆ spain  ನಲ್ಲಿ ಚಿತ್ರೀಕರಣ ಮಾಡಿಲ್ಲ. ಕಥೆಗಾಗಿ ಸ್ಪೇನ್ ಗೆ ಹೋಗಿದ್ದಾರೆ. ಆ ದೇಶದ ನೇಟಿವಿಟಿ , ಕಥೆಯ ಎಳೆಗೂ, ಆ ದೇಶದ ಸಂಸ್ಕೃತಿಗೂ ಚೆನ್ನಾಗಿ relate ಮಾಡಿರುವ ಒಳ್ಳೆ ಚಿತ್ರ.
 >>>>>>>>>>>>>>>>>>>>>>>>>>>>>>>>>>>>>>>>>>>>>

ನಿಮ್ಮ ಉತ್ತರಗಳೇನು  ?? :)

~ಹೊಗೆ

ಆಟಿಕೆಯಾದಳವಳು

ಇಂಜಿನಿಯರಿಂಗ್ ದಿನಗಳಲ್ಲಿ ಬರೆದ ಒಂದು ಅಂಕಣ ನನ್ನ ಹಳೆ ದಿನಚರಿಯ ಡೈರಿ ಒಳಗೆ ಹುದುಗಿಹೊಗಿತ್ತು. ಅಲ್ಲಿ ಹೆಂಗ್ ಬರ್ದಿದ್ನೋ ಹಂಗೆ ಇಲ್ಲಿ ಪ್ರಕಟಿಸುತ್ತಿದ್ದೇನೆ. ಅಂಥಾ ವಿಶೇಷ ಏನೂ ಇಲ್ಲ. ಆಗಿನ ನನ್ನ ಮನಸ್ಥಿತಿಯ ಪ್ರತೀಕವಷ್ಟೇ.
'FOR RECORD PURPOSE ONLY' ಅಂತಾರಲ್ಲ. ಅದಕ್ಕಾಗಿ ಪ್ರಕಟಿಸುತ್ತಿದ್ದೇನೆ. ಓದ್ಕೊಳಿ..

ವಿ. ಸೂ - ಇದು ನೈಜ ಘಟನೆಯನ್ನಾಧರಿಸಿದ ಕಾಲ್ಪನಿಕ ಬರಹ :-)
>>>>>>>>>>>>>>>>>>>>>>>>>>>>

 ಆಟಿಕೆಯಾದಳವಳು..


ಅದೊಂದು ಸುಂದರ ಸಂಜೆ. B.E ಎರಡನೇ ವರ್ಷದ ಹುಡುಗರು ಅದ್ಯಾವುದೋ fest ಗಾಗಿ ಸ್ಕಿಟ್ ಪ್ರಾಕ್ಟೀಸ್ ಮಾಡುತ್ತಿರುತ್ತಾರೆ. ಸ್ಕಿಟ್ ನಲ್ಲಿದ್ದ ಹುಡುಗರು ಅತ್ಯುತ್ಸಾಹದಲ್ಲಿ ತಮ್ಮ ನಟನಾ ಚತುರತೆಯನ್ನು ಪ್ರದರ್ಶಿಸುವ ಹಂಬಲದಲ್ಲಿ, ಎಲ್ಲರನ್ನೂ ನಗಿಸುವ ಆಶಯದಲ್ಲಿ ಸ್ಕಿಟ್ ಅಭ್ಯಾಸ ಮಾಡುತ್ತಿರುತ್ತಾರೆ. ಆ ಸಮಯದಲ್ಲಿ ಅವರದೇ ತರಗತಿಯ ಅತ್ಯುನ್ನತ ಸುಂದರಿ, ಕಾಲೇಜಿನ ಬೆಡಗಿ, ರತಿಯನ್ನೂ ನಾಚಿಸುವ 'ಕೃತಿ' ಅದಲ್ಲಿಗೆ ಬರುತ್ತಾಳೆ. ಅವಳನ್ನು ನೋಡಿದ ಕೂಡಲೇ ಸ್ಕಿಟ್ ಮಾಡುತ್ತಿದ್ದ ಹುಡುಗರಲ್ಲಿ ಅದೇನೋ ತಳಮಳ-ಕಳವಳ, ಆ ತಂಪಿನ ಸಂಜೆಯಲ್ಲೂ ಹುಡುಗರು ಬೆವರಿಳಿಸುತ್ತಾರೆ.
ದಿಡೀರನೆ, ಮಾಡುತ್ತಿದ್ದ ಸ್ಕಿಟ್ ಪ್ರಾಕ್ಟೀಸ್ ಅರ್ಧದಲ್ಲೇ ನಿಲ್ಲಿಸಿ ಹೊರಡುತ್ತಾರೆ. ಇಲ್ಲಿಯ ತನಕ ಎಲ್ಲಾ ಹುಡುಗರನ್ನು ಒಂದೇ ಥರದಲ್ಲಿ ಮಾತನಾಡಿಸುತ್ತಿದ್ದ ಅವಳು, ಒಂದೆರಡು ದಿನಗಳಿಂದ 'ಪರಮೇಶ'ನ ಬಗ್ಗೆ ಅದೇನೋ ಹೆಚ್ಚಿನ ಆಸಕ್ತಿ. ಇದನ್ನು ಕಂಡ ಇತರೆ ಹುಡುಗರಿಗೆ ಒಂಥರಾ ಮೈ-ಉರಿ. ಹುಡುಗರಿಗೆ ಸಹಜವಾಗಿ ಬಂತೂ ಕುತೂಹಲ, ಅವರಿಬ್ಬರ ಬಗ್ಗೆ.
ನೋಡುನೋಡುತ್ತಿದ್ದ ಹಾಗಿ ಅವಳ KINETIC ZING ನಲ್ಲಿ ಹತ್ತುಕುಳಿತೇಬೆಟ್ಟ ಪರಮೇಶ. ಅಲ್ಲಿ ನೆರೆದಿದ್ದ ಹುಡುಗರೆಲ್ಲಾ ಮೂಕವಿಸ್ಮಿತರಾದರು. ಹೀಗೆ ಶುರುವಾದ ಅವರಿಬ್ಬರ ಸಂಬಂಧ ನಂತರ ದಿನೇದಿನೇ ಗಟ್ಟಿಯಾಗತೊಡಗಿತು. ಪರಮೇಶನಿಗಿದ್ದ ನಾಲ್ಕು ಸಬ್ಜೆಕ್ಟ್ Back ಗಳೇ ಅವನಿಗೆ ವರದಾನವಾಯಿತು. ಅದರ ಅನುಕಂಪದ ಅಲೆಯೇ ಅವಳನ್ನು ಪರಮೇಶನೆಡೆಗೆ Attract ಮಾಡಿತು.  ಒಂದು ದಿನ ಅವಳು ಫೋನಿನಲ್ಲಿ ಅವರಿಬ್ಬರ ಮದುವೆಯ ಬಗ್ಗೆ ಮಾತನಾಡಿಬಿಟ್ಟಳು. ಹೀಗೆ ದಿನೇ ದಿನೇ ಫೋನಾಟ ಹೆಚ್ಚಾಯಿತು. ಪರೀಕ್ಷೆ ಸಮಯವಾದ್ದರಿಂದ ಕಾಲೇಜಿನ ತರಗತಿಗಳು ನಡೀತಿರಲಿಲ್ಲ. ಆದ್ದರಿಂದ ತರಗತಿಯ ಇತರೆ ವಿದ್ಯಾರ್ಥಿನಿಯರಿಗೆ ಇವರಿಬ್ಬರ ಒಡನಾಟ ಹೆಚ್ಚು ತಿಳಿದಿರಲಿಲ್ಲ. ಅವಳ ಹುಟ್ಟಿದಹಬ್ಬದ ದಿನ ಅವನು ಒಂದು ಒಳ್ಳೆಯ ಗಿಫ್ಟ್ ಅನ್ನು ಕೊಟ್ಟೇಬಿಟ್ಟ. ಪರೀಕ್ಷೆಗಳು ಮುಗಿದವು. ಪರಮೇಶನು ಅವಳದೇ ಗುಂಗಿನಲ್ಲಿ ಪರೀಕ್ಷೆಗಳನ್ನೂ ಮುಗಿಸಿದ.


ಇನ್ನು ರಜಾದಿನಗಳು. ಅವರಿಬ್ಬರ ಜೀವನದ ಅತ್ಯಂತ ಕ್ರೂರ ದಿನಗಳಂತಾಗಿತ್ತು. ಈ ರಜೆಯು ಒಬ್ಬರಿಂದೊಬ್ಬರನ್ನು ದೂರಮಾಡಿತು. ಆದರೂ ಈ ಪ್ರೀತಿಹಕ್ಕಿಗಳನ್ನು ಒಂದು ಮಾಡಿದ್ದು ಮೊಬೈಲ್. ಸೆಲ್ ಫೋನ್ ಇರದ ಪರಮೇಶನಿಗೆ ಕಾಯಿನ್
ಬಾಕ್ಸ್ ಗಳೇ ಜೀವಾಳವಾಯಿತು. ದಿನಕ್ಕೆ ಅರ್ಧ-ಮುಕ್ಕಾಲು ಗಂಟೆಗಳು ಅವರ ಮಾತುಗಳಿಗೆ ಸಮಯವಾಯಿತು. ಒಂದು ದಿನ 'ತಾರೆ ಜಮೀನ್ ಪರ್' ಎಂಬ ಹಿಂದೀ ಚಿತ್ರಕ್ಕೂ ಹೊರಟರು. ನಂತರ ಅವಳು ಹೊರಟಲು ಕೇರಳದ ಅಜ್ಜಿಯಮನೆಗೆ.
ಒಂದು ವಾರಗಳ ಕಾರಣ ಇವನ ಹೆಣಗಾಟ-ಪರದಾಟ ಹೇಳತೀರದು. ಇಬ್ಬರೂ sms ಗಳಲ್ಲೇ ಕಾಲಕಳೆದರು. 143 ಎಂಬ ಅಂಕಿಯೇ ಅವರ ಮಂತ್ರವಾಯಿತು. ಕೇರಳದಿಂದ ಬಂದಳು ಆ ಚೆಲುವೆ- ಆದರೂ ಇವನನ್ನು meet  ಮಾಡಲಿಲ್ಲ. ಬೆಂಗಳೂರಿಗೂ ಹೋಗಿ ಬಂದಳು. ದಿನೇ ದಿನೇ ಫೋನಿನಲ್ಲಿ ಅವರ ಸರಸ ಸಲ್ಲಾಪದ ಮಾತುಗಳು ಹೆಚ್ಚಾಯಿತು.
ಅವರ ಮಾತು ಒಂದೊಮ್ಮೆ ಎಲ್ಲೇ ಮೀರುತ್ತಿತ್ತು. ಮಕ್ಕಳು ಬಗ್ಗೆಯಲ್ಲಾ ಮಾತು ಹೋಗ್ತಿತ್ತು. ಪ್ರೀತಿ ಪವಿತ್ರ, ಪ್ರೇಮ ಅಮರ ಎಂದೆಲ್ಲಾ ಒದರುತ್ತಿದ ಪರಮೇಶನ ಮಾತುಗಳು ಸತ್ಯವಾ ಎಂದೆನಿಸುತ್ತಿತ್ತು. ಪ್ರೀತಿ ಲೈಂಗಿಕ ಆಕರ್ಷಣೆ ಎಂದು 'ನನಗೆ' ಯಾವತ್ತೋ ತಿಳಿದಿತ್ತು. ಪರಮೇಶ ಇದನ್ನು ಒಪ್ಪದಿದ್ದರೂ ಅವರಿಬ್ಬರ ನಡುವಿನ ಮಾತುಗಳು ಅದನ್ನು ಸಾರಿ ಸರ್ರಿ ಹೇಳುತಿತ್ತು.
ಇವರಿಬ್ಬರ ಈ ಪ್ರೀತಿ ಸಾಗರಕ್ಕೆ ನಾನು ಸುನಾಮಿಯಾಗುವ ಲಕ್ಷಣಗಳು ನನ್ನ ಮನಸ್ಸಿನಲ್ಲಿ ಹುಟ್ಟಿತು. ಅವಳನ್ನು ನಾನು ಒಲಿಸಿಕೊಳ್ಳುವುದಾಗಿ ಪರಮೇಶನೆದುರು ಪಣತೊಟ್ಟೆ. ಈ ಚಾಲೆಂಜ್ ನನಗೆ ನನ್ನ ಎಬಿಲಿಟಿ, attitude ಚೇಂಜ್ ನ ದೊಡ್ಡ ಪರೀಕ್ಷೆಯಾಗಿತ್ತು. ಇದು ನನಗೆ ಕೇವಲ ಆಟವಾಗಿತ್ತು. ನನ್ನ ಆಟಕ್ಕೆ ಸಮ್ಮತಿಯಂತೆ ಪುಷ್ಠಿಕೊಟ್ಟನು ಪರಮೇಶ.
ನನ್ನ ಪರಮೇಶನ ಆಟದೊಳಗೆ 'ಆಟಿಕೆ'ಯಾಗಿ ಉಳಿದವಳು - ನಿರಾಭರಣ ಸುಂದರಿ, ಕನಸಿನ ಕನ್ಯೆ 'ಕೃತಿ'.
ಇದು 'ಆಟಿಕೆಯಾದಳವಳು' ಕಥೆ.

ಇಸವಿ - 2006
ಸ್ಥಳ - ಮೈಸೂರು
>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>

ಆ ಸುಂದರಿ ನಿಜವಾಗಲು ಒಂದು ಆಟಿಕೆಯ ವಸ್ತುವಾಗಿದ್ದಳು. ಕಾಲೇಜಿನ ಕೆಲವು ಲಫಂಗರಿಗೆ. ಲಫಂಗರಲ್ಲದವರೂ ಅವಳ
ಬಗ್ಗೆ ಇಲ್ಲ ಸಲ್ಲದ್ದನ್ನೂ ಮಾತನಾಡುತ್ತಿದ್ದರು. ಅಂಥವರ ಮೇಲಿನ ಕಿಚ್ಚೇ ಈ ಅಂಕಣಕ್ಕೆ ಮೂಲ ಎಂದು ನನಗನ್ನಿಸುತ್ತದೆ, ಆಳವಾಗಿ ಯೋಚಿಸಿದಾಗ.

~ಹೊಗೆ

MugdhaYuddha reviews/opinions...

ನನ್ನ ಮೊದಲ ಕಿರುಚಿತ್ರ 'ಮುಗ್ಧಯುದ್ಧ'ಗೆ ಹಲವು ರೀತಿಯ ಪ್ರತಿಕ್ರಿಯೆಗಳು ಬಂದವು.
ಅದರಲ್ಲಿ ಕೆಲವು ಆಯ್ದ ಬರಹಗಳು.

 1. Mahesh Kumar Javalkoti  (TCSer and an IAS aspirant)

First of all, congrats! it is not easy to make one.. many of us just dream of it, very few like you go for it and I am pretty sure that there gonna be many more efforts from you...
I am a layman in this area but I would try to tell all the things that I felt honestly.. I may be wrong but thats how I perceived it.

Positives -1. Very good effort - especially as it is in local language (Kannada).
2. Camera angles and use of all the facilities in camera are praiseworthy.
3. Sound editing is pretty good.
4. I can appreciate the dedication of your group , Hoge Boys :)
Scope to improve - A little lengthy, length can be reduced
(it actually depends on topic - so I am specifically talking about this particular topic that your team chose)

I found the short film a genuine effort. Its just that people around us are very much used to world-class films & serials that they fail to realise efforts & positives in our local culture. Nevertheless, we need to keep improving so that our local languages, thoughts, cultures & feelings should also survive & find place in mainstream arts-literature.
In this sense, I appreciate your efforts. I will wait for your next works. I am damn sure they will be much better and much deeper...

2. ಉಷಾ ಫಾಟಕ್  (ಖ್ಯಾತ ಲೇಖಕರು ಮತ್ತು ರಂಗತಜ್ಞರು)
ಹೊಗೆ ಬಾಯ್ಸ್ ತಂಡದವರ ಚಿತ್ರ "ಮುಗ್ಧ ಯುದ್ಧ" ಸರಳ ನಿರೂಪಣೆಯ ಉನ್ನತ ಆಶಯದ ಅತಿ ಪುಟ್ಟ ಚಿತ್ರ.
ಮಹಾದೇವಣ್ಣನ ಮಗ ಶಾಲಾ ಬಾಲಕ ಭ್ರಷ್ಟಾಚಾರ ತಡೆಯಲು ತನ್ನದೇ ಮುಗ್ಧವಾದ ಪರಿಹಾರವನ್ನು ಕಂಡುಹಿಡಿಯುತ್ತಾನೆ!
ಆ ಪರಿಹಾರವೇನು ಎಂಬುದು ಇಲ್ಲಿಯ ಸಸ್‍‌ಪೆನ್ಸ್! ಅದನ್ನು ನೋಡಿ ಆನಂದಿಸಬೇಕು ಅಷ್ಟೇ..
 ನನಗೆ ಹಿಡಿಸಿದ್ದು
೧. ಸಾರ್ಥಕ ಶೀರ್ಷಿಕೆ "ಮುಗ್ಧ ಯುದ್ಧ".
೨. ಚಿತ್ರ ಕಥೆ.
೩. ಕ್ಯಾಮರಾ ಕೆಲಸ.
೪. ಮುಗ್ಧ ಬಾಲಕನ ಅಭಿನಯ.
೫. ಚೌಕಾಬಾರ ಆಡುವಾಗ ಕಾಯಿಗಳಿಗೆಂದು ಕಾರ್ಪೆಂಟರ್ ಮಗ ಉಪಯೋಗಿಸುವ ಮೊಳೆಗಳು! ಅವುಗಳನ್ನೂ ಮತ್ತು
ಚೌಕಗಳನ್ನು ಬರೆದುಕೊಂಡಿದ್ದ ಹಲಗೆಯನ್ನೇ ಅಸ್ತ್ರವನ್ನಾಗಿಸುವ ನಿರ್ಧಾರ.
೬. ಅಲ್ಲಲ್ಲಿ ಹಿನ್ನೆಲೆಯಲ್ಲಿ ಕೇಳಿಬರುವ ಸಂಗೀತ.
೭. ಚಿತ್ರಕ್ಕಾಗಿ ಪ್ರತ್ಯಕ್ಷ ಪರೋಕ್ಷವಾಗಿ ದುಡಿದವರ ಪರಿಚಯದ ಪರಿ.
ಹೀಗೆ ಮಾಡಿದ್ದರೆ ..?
೧. ಇನ್ನೂ ಗಟ್ಟಿಯಾದ ಚಿತ್ರ ಕಥೆ ಮತ್ತೊಂದೈದು ನಿಮಿಷಗಳ ಕಾಲ ವಿಸ್ತರಣೆ
೨. ಮುಗ್ಧ ಬಾಲಕನೇ ಇಲ್ಲಿ ಕಥಾನಾಯಕನಾಗಿ ಕಾಣುವುದರಿಂದ ಮನೆಯ ಇತರ ಸಮಸ್ಯೆಗಳ ಬಗೆಗೆ ಅವನು ತೋರುತ್ತಿದ್ದ ಅಕ್ಕರಾಸ್ಥೆಯ ನಿರೂಪಣೆ.
೩. ಜಮೀನಿನ ಸಮಸ್ಯೆಯಿಂದ ತಂದೆ ತಾಯಿ ಅನುಭವಿಸುವ ಯಾತನೆ ಮತ್ತು ಅದನ್ನು ನೋಡುವ ನೊಂದುಕೊಳ್ಳುವ ಬಾಲಕ
೪. ತಂದೆಯ ಜತೆಜತೆಗೆ ಬಾಲಕನೂ ಕಚೇರಿಗೆ ಹೋಗಿ ಅಲ್ಲಿನ ಜನರ ವರ್ತನೆಯನ್ನು ಸ್ವತ: ಬಾಲಕ ನೋಡುವುದು.

3Monish Nagaraj, Owner/Partner at Solis Ventures.

Heyy champ really glad to see your film.. Congrats on all de efforts you have put in.. Really appreciate it.. I watched it. Overall, a very good effort in terms of your first film..Really happy for you

I m sure lot of people would have reacted to the film in many ways by now. People are always ready to comment & advice on films these days. Dont bother about them too much.. It will never stop, even if you make a 100cr film:). But,just suggesting few things to make your next production even better. Take them only if you agree with it.. 

- The concept that you have chosen is very cliched. I kinda felt it would have worked better if you had chosen to treat it more naturally than dramatically. Editing in this is cliched & traditional. See if you could make it crisper. I felt you could have told this same story in less than 4 min. So just think again as to why you have stretched it to 12??. There are many scenes which add no value to the film. See if you can edit it. Sound needs to be redesigned. Its spoiling the mood. Camera is decent, its going with the mood of the story. Had you done good colour correctioning, it would have looked even better.Also, you need to be very careful with the lip syncs & pronunciations. Full marks to you for using real locations. 

These are just few specific observations which I thought would have made your film even better. But again, thats only my opinion:). Dont take it too seriously. I hate finding flaws, but thought should let you know constructively since you have just started off. But do think about them. Again, my wishes are always with you. Will look for more films 


4. Rahul Roy, TCS, Kolkata

shashank... Congratulations macha! Tyt hug! 
Sch a gd stuff! Proud f u smile
d story... So true. So innocent.
D direction... Very good! Story tellin... Very good!Cinematography... Very good!

D way u told it... D music... D camera angles... D simple dialoges... D actors... Very good macha! Very nice

ur naratn part in d end also is wel thought of n written. Evrythn is f d std f a gd shrt film! I enjoyd it!
Evn d music... Bang on!

Bt macha... If as a frnd i nd 2 point out a downside dat i felt puld d standrd bak a litle 
bit...it wld b d Editing wrk done. Litle disapointin in d editin part...tel u y..
.
Doz many fade outs 2 blak in d begng in d carpntr shop wr distractng a bit. 

A few transitn styles lookd unnecsry..coz d level f shrt film u hv made...sch films dnt rly 
require so many transitions. FEW WERE GOOD...n necsry! Bt nt al f dem.Drz is 1 scn shwn d fathr's face upset n woried..bt 4 a surprisngly short period f tym...les 
dan hlf a secnd i gues!

Bt in al...i told u... Trust me... U hv made a grt film.. Wid a grt story n dirctn!!Lovd ur wrk! Al d best 4 ur great futre!
........

Thank you for reading.. Watch the movie in youtube :)




~ಹೊಗೆ

CHARULATHA (2012) MOVIE REVIEW

ಚಾರುಲತೆ ಮಲಗಿಸೋಲ್ಲ , ಹೆದರಿಸೋಲ್ಲ..

'ಅಲೋನ್' ಎಂಬ ಥೈಲ್ಯಾಂಡ್ ದೇಶದ ಸಿನಿಮಾ ಅವತರಣಿಕೆಯಾದ 'ಚಾರುಲತಾ' ಮಹಿಳಾ ಪ್ರಧಾನ ಚಿತ್ರ.
ಪ್ರಿಯಾಮಣಿ ಸಯಾಮಿ ಅವಳಿ ಜವಳಿಯಾಗಿ ನಟಿಸಿರುವುದು ಇಲ್ಲಿ ಗಮಾನರ್ಹ. ಕತೆಯ ಎಳೆಯು
ಉತ್ತಮವಾಗಿದುದರಿಂದಲೇ ಅಲ್ಲಿಂದ ಇಲ್ಲಿಗೆ ತಂದಿರುವುದು. ನಿರೂಪಣೆ ನೇರವಾಗಿರದೆ ರಿವರ್ಸ್ ಎನಿಸುವಂಥ  ಶೈಲಿಯಲಿದ್ದರೂ ಅದೇನೋ ಅಷ್ಟು ಮಜಾ ಕೊಡೋಲ್ಲ.

ಚಾರು ಮತ್ತು ಲತಾ ಸಯಾಮೀಸ್ ಅವಳಿಗಳು. ಅನ್ಯೋನ್ಯವಾಗಿ ಬಾಳುವ ಅವರನ್ನು 'ಲಂಗ ದೋಸ್ತಿಗಳು' ಎನ್ನಬಹುದು.
ಈ ಲಂಗದೋಸ್ತಿಗಳ ನಡುವೆ ಒಬ್ಬ ಬಂದು ಇಬ್ಬರ ಬಿರುಕಿಗೆ ಕಾರಣವಾಗುತ್ತಾನೆ. ಚಾರು ಮತ್ತು ಲತೆ ಬೇರೆಯಾಗುವಾಗ
ಒಬ್ಬಳು ಸತ್ತು, ಒಬ್ಬಳು ಬದುಕುಳಿದಾಗ ಆರಂಭವಾಗುವುದೇ ಈ "never break a promise" ಕಥೆ.



ಪ್ರಿಯಾಮಣಿ ಗೆ ಅತ್ಯಂತ ವಿಶಿಷ್ಟ ಪಾತ್ರವನ್ನು ಕತೆ ಕಲ್ಪಿಸಿಕೊಟ್ಟರೂ ಅಂಥಾ ಅದ್ಭುತ ಎನ್ನುವ ಅಭಿನಯಕ್ಕೆ ಹೆಚ್ಚು ಅವಕಾಶವಿಲ್ಲ. ಆದರು ಪಾತ್ರಕ್ಕೆ ನ್ಯಾಯ ನೀಟಾಗಿ ಒದಗಿಸಿದ್ದಾರೆ. ಹೊಸ ಪರಿಚಯ ಸ್ಕಂದ ಗೆ ಸ್ಕೋಪ್ ಹೆಚ್ಚು ಇಲ್ಲ.
ರವಿಶಂಕರ್ ಮಂತ್ರಗಾರನ  ಪಾತ್ರ  ಬೇರೆ ದೇಶದ ಕಥೆಗೆ ನೇಟಿವಿಟಿ ಕೊಡುವ ಒಂದು ವ್ಯರ್ಥ ಪ್ರಯತ್ನ.

ಪಿ ಕುಮಾರ್ ನಿರ್ದೇಶನದಲ್ಲಿ ಮೂಡಿರುವ ಈ ಚಿತ್ರ ಅಲ್ಲಲ್ಲಿ ಉತ್ತಮವಾಗಿದ್ದರೂ ಒಟ್ಟಾರೆಯಾಗಿ ನೋಡಿದಾಗ ಸಪ್ಪೆಯಾಗಿದೆ.
ಪನ್ನೀರ್ ಸೆಲ್ವಂರ ಕ್ಯಾಮೆರ ಕೆಲಸದಲ್ಲಿ ಯಥೇಚ್ಚವಾಗಿ ಕ್ರೇನ್ ಬಳಸಿ ಕಥೆಯ ಮೂಡ್  ಸೆಟ್ ಮಾಡುತ್ತಾರೆ.
ಪ್ರಿಯಾಮಣಿಯನ್ನು  ಸಯಾಮೀಸ್ ಅವಳಿಗಳಾಗಿ ತೋರಿಸುವಲ್ಲಿ ತಾಂತ್ರಿಕ ತಂಡ ಅತ್ಯಂತ ಯಶಸ್ವಿಯಾಗಿದೆ.
ಸುಂದರ್ ಸಿ ಬಾಬು ಸಂಗೀತ-ರಿರೆಕಾರ್ಡಿಂಗ್  ಯಾಕೋ ಸಾಧಾರಣ ಅನಿಸುತ್ತದೆ ಥೀಮ್ ಮ್ಯುಸಿಕನ್ನು ಹೊರತುಪಡಿಸಿ.

ಚಿತ್ರ ಮುಕ್ತಾಯವಾದರೂ ದೆವ್ವದ ಅಸ್ತಿತ್ವದ ಬಗ್ಗೆ ಸರಿಯಾದ ಚಿತ್ರಣ ಕೊಡದೆ ಪ್ರೇಕ್ಷಕರನ್ನು ಮೂಢನಂಬಿಕೆಗೆ ಗುರಿ ಮಾಡುವಲ್ಲಿ ಚಾರುಲತೆ ಯಶಸ್ವಿಯಾಗಿದೆ. ಈ ನಿಟ್ಟಿನಲ್ಲಿ ಇದು ಮತ್ತೊಂದು 'ಆಪ್ತಮಿತ್ರೆ'ಯಾಗಲು ಕಷ್ಟವಾಗಬಹುದು.

ಹಾರರ್ ಸಿನಿಮಾ ಹಣೆಪಟ್ಟಿ ಹೊತ್ಕೊಂಡು ಬಂದಿರುವ ಈ ಸಿನಿಮಾ ತೀರ ಹೆದರಿಸುವುದೂ ಇಲ್ಲ. ಕಥೆಯ ವೈಶಿಷ್ಟ್ಯ, ಕೆಲವೊಂದು ತಿರುವುಗಳಿಂದ ಸುಮ್ಮನೆ ನಿಮ್ಮನ್ನು ಮಲಗಲೂ ಬಿಡುವುದಿಲ್ಲ ಈ ಚಾರುಲತಾ.

~ಹೊಗೆ

shiva kannada movie review

 ಮಿಷನ್ ಇಂಪಾಸಿಬಲ್ಗೂ  ಶಿವನಿಗೂ 'ಎತ್ತ'ಣಿಂ'ಎತ್ತ' ಸಂಬಂಧ...

 ಟಾಮ್ ಕ್ರ್ಯೂಸ್ 'ಮಿಷನ್ ಇಂಪಾಸಿಬಲ್ 'ಲಿ  ಮಾಡಿದ ಸಾಹಸ ದೃಶ್ಯವೊಂದನ್ನು ಶಿವಣ್ಣನ  ಅಭಿನಯದಲ್ಲಿ ನೋಡ್ಬೇಕು
ಅಂತ ನಿರ್ದೇಶಕ ಓಂಪ್ರಕಾಶ್ ರಾವ್ ಗೆ ಅದ್ಯಾವಾಗ್ ಕನಸು ಬಿದ್ದಿತ್ತೋ ಗೊತ್ತಿಲ್ಲ, ಹಂಗೆ ಅಲ್ಲಿಂದ ಸೀದಾ ತಂದು ಇಳಿಸಿದ್ದಾರೆ. ಅದಿರಲಿ ಬಿಡಿ. ಆ 'ಶಿವ'ನ ಮೇಲೆ ಭಾರ ಹಾಕಿ ಅದನ್ನ ಮರೆತುಬಿಡೋಣ.

ಸಮಾಧಾನದ ಸಂಗತಿಯೆಂದರೆ ಅಂತ ಹೊಸತನವಿಲ್ಲದಿದ್ದರೂ ಈ ಚಿತ್ರಕ್ಕೊಂದು ಕಥೆಯಿದೆ. ಅದೊಂದು ಸೇಡಿನ ಕಥೆ.
ನಾಯಕ (ಶಿವರಾಜಕುಮಾರ್) ಮತ್ತು ನಾಯಕಿಯ(ರಾಗಿಣಿ) ಪೋಷಕರು ಫ್ಯಾಮಿಲಿ ಫ್ರೆಂಡ್ಸ್. ನಾಯಕಿಯ ತಂದೆ ಪತ್ರಕರ್ತ, ನಾಯಕನ ತಂದೆ ಕುದುರೆ ಜಾಕಿ. ಇಬ್ಬರೂ ಪ್ರಾಮಾಣಿಕರು. ಅದೇ ಕಾರಣಕ್ಕೆ ಅವರನ್ನು ಮೂರು ಜನ ಖಳನಾಯಕರು ಕೊಂದುಹಾಕುತ್ತಾರೆ. ಇತ್ತ ನಾಯಕ ನಾಯಕಿ ಬೆಳೆದು ದೊಡ್ಡವರಾದ ಮೇಲೆ ತನ್ನ ಪೋಷಕರನ್ನು ಕೊಂದ ವ್ಯಕ್ತಿಗಳ ಮೇಲೆ ಸೇಡು ತೀರಿಸಿಕೊಳ್ಳುವ ಕಥೆಯೇ 'ಶಿವ'.



ಈ ಕಥೆಯು ಚಿತ್ರಕಥೆ ಆಗುವ ಹಂತದಲ್ಲಿ ಕೊಂಚ ತಿರುವು ಮುರುವುಗಳನ್ನು ಕಂಡರೂ ಅವೆಲ್ಲ ಕನ್ನಡ ಪ್ರೇಕ್ಷಕನಿಗೆ ಹಳೇ  ಮಾಲು. ಒಂದು ಗಟ್ಟಿ ನಿರೂಪಣೆ ಇದ್ದಿದ್ದರೆ ನಿರ್ಮಾಪಕರು ಸುರಿದ ದುಡ್ದಿಗಾದರೂ ಕಳೆ ಬರುತಿತ್ತು.

ಶಿವಣ್ಣ ಕಥೆಯ ಆಯ್ಕೆಯಲ್ಲಿ ಮತ್ತೊಮ್ಮೆ ದುಡುಕಿದಂತೆ ಭಾಸವಾದರೂ ಎಂದಿನಂತೆ 
ತೆರೆಮೇಲೆ ಶಿವ ತಾಂಡವ  ಅಭಿಮಾನಿಗಳಿಗೆ ಹಬ್ಬ. ನಿರ್ದೇಶಕರು ನಾಯಕಿಯ ಪಾತ್ರಕ್ಕೂ ಹೆಚ್ಚು ಒತ್ತುಕೊಟ್ಟಿರುವುದು ಪ್ರೋತ್ಸಾಹಕರ ಸಂಗತಿ. 
ಆದರೆ  ರಾಗಿಣಿಯ ನಟನೆಯಲ್ಲಿ ಅಷ್ಟೇನೂ ವಿಶೇಷ ಇಲ್ಲದಿದ್ರೂ
ಅಂದ ಚಂದಕ್ಕೆ ತಕ್ಕ ವೇದಿಕೆ.
ಖಳನಾಯಕರಾಗಿ ರವಿಶಂಕರ್ ಸುಮ್ಮನೆ ಧ್ವನಿ ಪ್ರದರ್ಶನ ಮಾಡಿದರೆ, ರಂಗಾಯಣ ರಘು ತೆಲುಗು ಮಿಕ್ಸ್ ಕನ್ನಡ ಅಷ್ಟೇನು
ರುಚಿಸುವುದಿಲ್ಲ. ಗುರುದತ್ ಪಾತ್ರಕ್ಕೆ ಮಹತ್ವವಿಲ್ಲ.

ಸತ್ಯ ಹೆಗಡೆ ಟಾಪ್ ಆಂಗಲ್ ಶಾಟ್ಸ್ ನಲ್ಲಿ ಕಾಣುವ ಕ್ಲೈಮ್ಯಾಕ್ಸ್ ದೃಶ್ಯ ಅವರ ಉತ್ತಮ ಕೆಲಸಕ್ಕೆ ಕನ್ನಡಿ. ಗುರುಕಿರಣ್ ಸಂಗೀತ ವೈನಾಗಿದ್ದರೂ ಚಿತ್ರದಲ್ಲಿ ಹಾಡುಗಳ ಕೆಟ್ಟ ಪ್ಲೇಸ್ಮೆಂಟ್ ಮತ್ತು ಸಾಧಾರಣ ಸಂಯೋಜನೆಯಿ0ದಾಗಿ ಸಪ್ಪೆಯಾಗಿ ಕಾಣುತ್ತದೆ.

ಬುಲೆಟ್ ಪ್ರಕಾಶ್, ಶೋಭರಾಜ್ ಮತ್ತು ಶಿವಣ್ಣ ರ ಮಧ್ಯೆ ನಡೆಯುವ ಹಾಸ್ಯ ಸನ್ನಿವೇಶಗಳು ಚಿತ್ರಕ್ಕೆ ಜೀವಾಳ. ಪುಣ್ಯಕ್ಕೆ ಅವು ಬೇರೆ ಭಾಷೆಯಿಂದ ತಂದದ್ದಲ್ಲ ಎಂದು ನಂಬೋಣ.
ಚಿತ್ರದಲ್ಲಿ ಅಂತ ಹೇಳಿಕೊಳ್ಳುವ ಪಂಚಿಂಗ್ ಡೈಲಾಗ್ಸ್ ಇಲ್ಲದಿದ್ದರೂ
ಅಭಿಮಾನಿಗಳು ಶಿವಣ್ಣನ ಅಭಿನಯ, ಸಾಹಸ, ನೃತ್ಯ ನೋಡಿ ತೃಪ್ತಿಪಡ್ಕೊಳ್ತಾರೆ.
ಆದರೆ ಒಂದು ಒಳ್ಳೆಯ ಚಿತ್ರನೋಡಬೇಕೆನ್ನುವ ಆಸೆಯಿಂದ ಬರುವ ಒಬ್ಬ ಕನ್ನಡ ಪ್ರೇಕ್ಷಕ ??? 


~ಹೊಗೆ

GODFATHER KANNADA MOVIE REVIEW

ಗಾಡ್ ಫಾದರ್ ನಲ್ಲಿ ಉಪ್ಪಿದೆ, ರುಚಿಯಿಲ್ಲ !!
ನಿಮಗೇನಾದರೂ ಕಣ್ಣು ಮಂಜಾಗಿದ್ದು, ಈ ಚಿತ್ರವನ್ನ ಮ್ಯೂಟ್ ಮಾಡಿಕೊಂಡು ನೋಡಿದರೆ, ಇದು ತಮಿಳಿನದ್ದೋ ಅಥವಾ ಕನ್ನಡದ್ದೋ ಎಂದು ಗುರುತಿಸುವುದು ಕಷ್ಟವಾಗಬಹುದು. ಏಕೆಂದರೆ ಕಥೆ ಮಾತ್ರವಲ್ಲ, ಪ್ರತಿಯೊಂದು ಶಾಟ್ ಬೈ ಶಾಟ್ ತಮಿಳಿನಿಂದ ಇಳಿಸಿದ್ದಾರೆ. ರೀಮೇಕ್ ಮಾಡೋದು ಎಷ್ಟು ಸುಲಭ ಅಂತ ತೋರಿಸಿದ್ದಾರೆ.

ಇದು ರೀಮೇಕ್ ಎಂಬುದನ್ನು ಮರೆತು ಸುಮ್ಮನೆ ಚಿತ್ರವನ್ನು ನೋಡುವುದಾದರೆ, ಕಥೆಯಲ್ಲಿ ಹೊಸತನವಿದೆ.ಆದರೆ ನಿರೂಪಣೆ ಮಾತ್ರ ಓಬಿರಾಯನ ಮುತ್ತಾತನ ಕಾಲದ್ದು. ಕ್ಲೈಮ್ಯಾಕ್ಸ್ ನಲ್ಲಿ ಪೋಲೀಸ್ ಬರೋದು, ಇಂಟ್ರೋ ಸಾಂಗ್ ನಲ್ಲಿ ಉಪ್ಪಿ ಎಡಗೈಲಿ ಗಿಟಾರ್ ಹಿಡ್ಕೊಂಡು ಕುಣಿಯೋದು, ಆ ಡಬಲ್ ಆಕ್ಟಿಂಗ್ ಫೈಟ್ ಗಳು, ಅಸಹ್ಯದ ಕಾಮಿಡಿ ಇವೆಲ್ಲ ಎಷ್ಟ್ ದಿನಾ ಅಂತ ಪ್ರೇಕ್ಷಕ ನೋಡ್ತಾನೆ ಹೇಳಿ.



ಕಥಾವಸ್ತು ವಿಭಿನ್ನ. ಮರೆಯದಿರಿ, ಅದರ ಕ್ರೆಡಿಟ್ ಸಲ್ಲಬೇಕಾದದ್ದು ತಮಿಳಿಗೆ. ಬಾಲ್ಯದಿಂದ ನಾಟ್ಯವನ್ನೇ  ಮೈಗೂಡಿಸಿಗೊಂಡ ನಾಯಕನಿಗೆ ಅವನ ಮೈಮಾಟವೆಲ್ಲ ನಾಟ್ಯಮಯವಾಗಿ  ಅವನಿಗೆ ಹೆಣ್ಣು ಹುಡುಕುವುದೇ ಶ್ರಮದ ಕೆಲಸವಾಗುತ್ತದೆ. ಅವನ ಬೃಹನ್ನಳೆತನದ ಬಗ್ಗೆ ತಿಳಿಯದ ಒಬ್ಬಳು ಮದುವೆಗೆ ಒಪ್ಪಿ, ಅವನು ಹಸೆಮಣೆಗೆ ನಡೆದು ಬರೋ ಶೈಲಿ ನೋಡೇ ಸುಸ್ತಾಗಿ ಮದುವೆಮನೆಯಿಂದ ಹೊರನಡೆಯುತ್ತಾಳೆ. ಇದರಿಂದ ವ್ಯಗ್ರಗೊಂಡ ನಾಯಕ ಅವನ್ನ ಗಂಡಸ್ತನವನ್ನು ಎತ್ತಿ ತೋರಿಸಲು ಅವಳ ಮೇಲೆ ಅತ್ಯಾಚಾರವೆಸಗಿ ಅವಳಿ ಜವಳಿ ಮಕ್ಕಳನ್ನು ಬೋನಸ್ ಆಗಿ ಕೊಡುತ್ತಾನೆ. ಅದರಲ್ಲಿ ಒಂದನ್ನು ಅವನು ತೆಗೆದುಕೊಂಡು ಬೇರೆಡೆ ಹೋಗುತ್ತಾನೆ. ತನ್ನ ಮಗನಿಗೆ ತನ್ನ ಮೈಮಾಟ ಬರದಿರಲೆಂಬ ಸದ್ಭಾವನೆಯೊಂದಿಗೆ ಅವನು ಜೀವನವಿಡಿ ವೀಲ್ ಚೇರ್ ಮೇಲೆ ಸೆಟಲ್ ಆಗುವ ಭಯಾನಕ ಉಪಾಯ ಹೂಡುತ್ತಾನೆ.
ಇತ್ತ ತಾಯಿಯ ಬಳಿ ಉಳಿದ ಆ ಜವಳಿ ಮಗ, ತಾಯಿಯ ಹುಚ್ಚನಾಗಿ ತಂದೆಯ ಮೇಲೆ ಕಿಚ್ಚನಾಗುತ್ತಾನೆ. ಸದಾ ತಂದೆಯ ಮೇಲೆ ದ್ವೇಷ ಕಾರುತ್ತ ಇರುವ ಈತ ಯಾವಾಗ ತನ್ನ ತಂದೆಯನ್ನೇ ಕೊಲ್ಲುವ ಪ್ರಯತ್ನ ಮಾಡುತ್ತಾನೋ ಆವಾಗ ಕಥೆ ತೆರೆದುಕೊಳ್ಳುತ್ತದೆ.
'ವೀಲ್ ಚೇರ್' ತಂದೆಯ ಮಗನಿಗೆ ಹುಡುಗಿಯೊಬ್ಬಳ ಮೇಲೆ ಲವ್ವಾಗಿ ಮದುವೆ ಸೆಟಲ್ ಆಗಿರುವಾಗ, ಆ 'ತಾಯಿಯ ಹುಚ್ಚ ' ಮದುವೆ  ಮುರಿಯುವ ಪ್ರಯತ್ನ, ತಂದೆಯ ಕೊಲೆಯ ಪ್ರಯತ್ನ ಹೀಗೆ ಏನೇನೊ ಮಾಡುತ್ತಾನೆ. ಕೊನೆಯಲ್ಲಿ ಪೋಲಿಸ್ ಬರುತ್ತಾರೆ. ಎಲ್ಲವೂ 'ಶುಭಂ'ವಾಗುತ್ತದೆ. ಅಲ್ಲಿಗೆ ಮತ್ತೊಂದು ತಮಿಳ್ ಕಥೆಯ ಕನ್ನಡ ಚಿತ್ರ ಮುಗಿಯಿತು.

ಎ ಆರ್ ರೆಹಮಾನ್ ಸಂಗೀತ ಅಂದ್ರೆ ತಮಿಳಿನ ರಾಗಗಳೇ ಇಲ್ಲೂ ಹರಿದಿದೆಯಷ್ಟೇ. ಸ್ಪೆಸಲ್ ಏನೂ ಇಲ್ಲ. ಬಸವರಾಜು ಅವರ ಸಂಕಲನದಲ್ಲಿ ಡಬಲ್ ಆಕ್ಟಿಂಗ್ ಫಿಟ್ ದೃಶ್ಯಗಳು ಇನ್ನೂ ಚೆನ್ನಾಗಿ ಮೂಡಿಬರಬಹುದಿತ್ತು. ಅದು ಶಾಟ್ಸ್ ಮೇಲೆ ಅವಲಂಬಿತವಾದ್ದರಿಂದ ಅವರನ್ನು ಹೆಚ್ಚು ದೂಷಿಸಲಾಗುವುದಿಲ್ಲ. ಛಾಯಗ್ರಹಣ, ನಿರ್ದೇಶನ ಎರಡನ್ನು ತಲೆ ಮೇಲೆ ಹೊತ್ತ ನಿರ್ದೇಶಕ ಶ್ರೀರಾಮ್ ಯಾವ ಪರಿ ರೀಮೇಕ್ ಮಾಡಿದ್ದಾರೆಂದು ಮೇಲೆ ಈಗಾಗಲೇ ಹೇಳಿದ್ದೇವೆ. ವಿ. ಆರ್ ಭಾಸ್ಕರ್ ಸಂಭಾಷಣೆಯಲ್ಲಿ ಹೇಳಿಕೊಳ್ಳುವಂಥದ್ದು ಏನಿಲ್ಲ.

ಜಯಮಾಲ ಪುತ್ರಿ ಸೌಂದರ್ಯ ಕಣ್ಣುಗಳು ಭರವಸೆ ಮೂಡಿಸುತ್ತದೆ. ಕ್ಯಾಥೆರಿನ್ ಎಂಬ ಮತ್ತೊಬ್ಬ ನಾಯಕಿ,ತಾಯಿ ಪಾತ್ರ ಮಾಡಬಹುದು ಅಂತ ಯಾವ ಮಹಾನುಭಾವ ಸೂಚಿಸಿದನೋ ಅವನಿಗೆ ಉಘೆ ಉಘೆ.

ಆದರೆ ಚಿತ್ರದಲ್ಲಿ ಹೇಳಿಕೊಳ್ಳುವ ಅಂಶವೆಂದರೆ ಅದು ಉಪೇಂದ್ರ ಅವರ ಅಭಿನಯ ಮಾತ್ರ. ಅದು ತ್ರಿಪಾತ್ರದಲ್ಲಿ.
ನೃತ್ಯಗಾರನ ಪಾತ್ರದ ಮೈಮಾಟ, ನಡಿಗೆ ಎಲ್ಲ ಅಚ್ಚರಿ ಮೂಡುವಂತೆ ಅಭಿನಯಿಸಿದ್ದಾರೆ. ಭರತನಾಟ್ಯ ಮಾಡುವಾಗ ಇನ್ನು ಸ್ವಲ್ಪ ಶ್ರದ್ಧೆ ವಹಿಸಬೇಕಿತ್ತು ಅಷ್ಟೆ. ಅದಕ್ಕಿಂತ ಹೆಚ್ಚಾಗಿ ಉಪೇಂದ್ರ ರಂಥ ಪ್ರತಿಭಾವಂತರು ಸ್ವಂತ ಕಥೆಗಳಿಗೆ ಆಸ್ಥೆವಹಿಸಿದರೆ
ಆ ಭುವನೇಶ್ವರಿ ತಾಯಿಗೆ ಸವತಿಯರು ಕಮ್ಮಿಯಾದಾರು!!

~ಹೊಗೆ

ROMEO KANNADA MOVIE REVIEW

ರೋಮಿಯೋ ಒಬ್ಬ ಮಾಮೂಲಿ ಪ್ರೇಮಿಯೋ..

ಸಾವಿರ ಸುಳ್ಳು ಹೇಳಿ ಮದುವೆ ಮಾಡು ಅಂತ ಗಾದೆ ಇದ್ರೆ ಅದನ್ನೇ ಈ ಚಿತ್ರದ ನಾಯಕ (ಗಣೇಶ್) ಬಂಡವಾಳ ಮಾಡಿಕೊಂಡು ನಾಯಕಿಗೆ (ಭಾವನಾ) ತನ್ನ ಮನೆ ಡಾಲರ್ಸ್ ಕಾಲೋನಿ, ತನ್ನ ತಂದೆ ಕೊಲೀಗು ಅಂಬಾನಿ ಅಂತೆಲ್ಲ ಡೋಂಗಿ ಹೊಡೆದು ಪ್ರೀತಿ ಪಡೆದುಕೊಳ್ಳುತ್ತಾನೆ. ನಾಯಕಿಯ ತಂದೆ (ಅವಿನಾಶ್) ಮಗಳಿಗೆ ಬೇರೆ ವರನೊಂದಿಗೆ ಮದುವೆ
ಮಾಡಲು ತಯಾರಿ ನಡೆಸುವಾಗ ನಾಯಕ ನಾಯಕಿಯೊಂದಿಗೆ ಪರಾರಿಯಾಗಿ ತರಾತುರಿಯಲ್ಲಿ ಮದುವೆಯಾಗಿ ತನ್ನ ಮನೆಗೆ
ಕರೆತರುತ್ತಾನೆ.ಡಾಲರ್ಸ್ ಕಾಲೋನಿಯಲ್ಲಿ ತನ್ನ ಗಂಡನ ಮನೆಯಿದೆಯೆಂದು ತಿಳಿದಿದ್ದ ನಾಯಕಿಗೆ ತನ್ನ ಗಂಡ ಮಹಾನ್ ಡವ್ 
ರಾಜ ಎಂದು ತಿಳಿಯುತ್ತದೆ. ಆದರೆ ನಾಯಕ ಮಾತ್ರ ತನ್ನದು ಡವ್ ಅಲ್ಲ ಪ್ಯೂರ್ ಲವ್ ಅಂತೆಲ್ಲ ಡೈಲಾಗ್ ಹೊಡೆದ್ರೂ ನಾಯಕಿ ಡೈವೋರ್ಸ್ ಕೇಳುತ್ತಾಳೆ.
ನಿಜವಾಗಲೂ ನನ್ನ ಮೇಲೆ ಪ್ರೀತಿ ಇದ್ರೆ ಡೈವೋರ್ಸ್ ಕೊಡು ಅಂದಾಗ ತ್ಯಾಗಮಯಿ ನಾಯಕ ಡೈವೋರ್ಸ್ ಗೆ  ಒಪ್ಪುತ್ತಾನೆ .
ನಂತರ ನಿರ್ದೇಶಕರು ಕಥೆಯಲ್ಲಿ ಕೆಲವು ಡವ್ ಗಳನ್ನು ಮಾಡಿ ನಾಯಕ ನಾಯಕಿಯನ್ನು ಒಂದಾಗಿಸುತ್ತಾರೆ..



 ವೈದಿ ಕ್ಯಾಮೆರ ಕೈಚಳಕದಲ್ಲಿ ಟ್ರ್ಯಾಕ್ ಶಾಟ್ಸ್ ಉತ್ತಮವಾಗಿದೆ, ಸರವಣನ್ ಸಂಕಲನ ಕೆಲವು ಕಡೆ ಅಷ್ಟು ಹರಿತವಾಗಿಲ್ಲ . ಆದರೆ ಚಿತ್ರದುದ್ದಕ್ಕೂ ನಾಯಕ ತೊಡುವ ಕೂಲಿಂಗ್ ಗ್ಲಾಸ್ ನಲ್ಲಿ ಲೈಟ್ ಬಾಯ್ಸ್, ಅಲ್ಯುಮಿನಿಯಂ ರಿಫ್ಲೆಕ್ಟರ್ಸ್ ಸುಮಾರು ದೃಶ್ಯಗಳಲ್ಲಿ ಕಾಣಿಸುತ್ತದೆ. ಈ ಸಣ್ಣ ತಾಂತ್ರಿಕ ದೋಷವನ್ನ ಸರಿಪಡಿಸದೇ ಇರುವುದು ವಿಪರ್ಯಾಸ .

ಗಣೇಶ್, ಭಾವನ ತಮ್ಮ ಕೆಲಸ ನಿಭಾಯಿಸಿದ್ದಾರೆ. ರಂಗಾಯಣ ರಘು ಇಂತಹದೇ ಪಾತ್ರ ಇನ್ನು ನೂರು ಚಿತ್ರದಲ್ಲಿ ಮಾಡಿದರೂ  ಜನ ಬೇಜಾರ್ ಮಾಡ್ಕೊಳ್ದೇ ನೋಡ್ತಾರೆ ಅನ್ನೋದೇ  ರಘು ಶಕ್ತಿ. ಸಾಧು ಕೋಕಿಲ ಸೆಕೆಂಡ್ ಹೀರೋವಾಗಿ ಕಾಣಿಸಿಕೊಂಡು ಹೆಚ್ಚಿನ ದೃಶ್ಯಗಳಲ್ಲಿ ಅಭಿನಯಿಸಿ ಅಭಿಮಾನಿಗಳಿಗೆ ಕಚಗುಳಿ ಇಡುತ್ತಾರೆ.

ನಿರ್ದೇಶಕ ಪಿ.ಸಿ.ಶೇಖರ್ ದೃಶ್ಯ ವೈಭವ ತೋರಿಸಲು ಹೋಗಿದ್ದಾರೆ ಹೊರತು ಕಥೆ ಹೇಳಲಿಕ್ಕಲ್ಲ. ನೀರಸ ಹಾಗು ಮಾಮೂಲಿ ಕಥೆಗೆ ಕೆಲವು ಉತ್ತಮ ಹಾಡುಗಳನ್ನು ಕೊಟ್ಟಿರುವುದು ಅರ್ಜುನ್ ಜನ್ಯರ ಪ್ರತಿಭೆ ತೋರಿಸುತ್ತದೆ. ಆದರೆ 'ಆಲೋಚನೆ ಆರಾಧನೆ' ಹಾಡಿಗೂ ಅದರ ಹಿಂದಿನ ದೃಶ್ಯಕ್ಕೂ ಸಂಭಂಧವಿಲ್ಲ. ಹಾಗು ಎಲ್ಲರ ಬಾಯಲ್ಲೂ ಗುನುಗುವ ರೋಮಿಯೋ ಶೀರ್ಷಿಕೆ ಹಾಡು ಚಿತ್ರ ಮುಗಿದ ನಂತರ ಬರುವುದು ಶೋಚನೀಯ.

ಬಹುಶಃ ನಟರಾಜ್ ರವರ ಸಂಭಾಷಣೆ ಇರದಿದ್ದರೆ ಇಡೀ ಚಿತ್ರ ಮಂಕಾಗಿ ಬಿಡ್ತಿತ್ತೋ ಏನೋ.

ಆದರೂ ಗಣೇಶ್ ಅಭಿಮಾನಿಗಳಿಗೆ ಈ ಚಿತ್ರದಲ್ಲಿ ಭಾವನಾ ಸ್ಕ್ರೀನ್ ಪ್ರೆಸೆನ್ಸ್, ಸಾಧು,ರಘು ಹಾಸ್ಯದ ಟೈಮಿಂಗ್ ಪಕ್ಕ ಪೈಸಾ ವಸೂಲ್.


~ಹೊಗೆ

ಪೇಪರ್ ದೋಣಿ KANNADA FILM REVIEW

ಪೇಪರ್  ದೋಣಿ ಇಟ್ಕೊಂಡು ಟೈಟಾನಿಕ್ ಲೆವೆಲ್ ಯೋಚನೆ ...

ನಾಯಕ ಚೇತನ್ (ನವೀನ್ ಕೃಷ್ಣ ) ಲೋಕೋದ್ಧಾರಕ. ಹುಟ್ಟು ಹೋರಾಟಗಾರ.
ವಿಷ್ಣುವಿನ ಹನ್ನೊಂದನೆಯ ಅವತಾರಕ್ಕೆ  ಜಸ್ಟ್ ಮಿಸ್ಸು.
ಎಸ್.ಓ.ಎಸ್  ಎಂಬ ಸಂಘಟನೆ ಕಟ್ಕೊಂಡು ಭಯೋತ್ಪಾದನೆ, ಭ್ರಷ್ಟಾಚಾರ, ಬಡತನ ನಿರ್ಮೂಲನೆ, ಉದ್ಯೋಗ ಕ್ರಾಂತಿ.. ಹೀಗೆ ಒಂದ ಎರಡ.. ನಾಯಕನ ತಲೇಲಿ ಓಡೋದು. ಅದನ್ನ ಕಾರ್ಯರೂಪಕ್ಕೆ ತಂದು ಕ್ಷಣಾರ್ಧದಲ್ಲಿ ಸಮಸ್ಯೆ ಬಗೆಹರಿಸೋದು. ಹೀಗೆ ಅಖಿಲ ಭಾರತದ ಎಲ್ಲ ಸಮಸ್ಯೆಗೆ ಪರಿಹಾರ ಕಂಡುಕೊಳ್ತಾ ಸುಮ್ಮನಾಗದೆ ಇಡಿ ವಿಶ್ವದಲ್ಲೇ  ಶಾಂತಿ, ಸುವ್ಯವಸ್ಥೆ  ನೆಲ್ಸೋಹಂಗೆ ಮಾಡುವುದೇ ಈ ಎಸ್.ಓ.ಎಸ್ ಸಂಸ್ಥೆಯ ಗುರಿ.


ಅದೇನೋ ಗಾದೆ ಹೇಳ್ದಂಗಾಯ್ತು.. ನಮ್ ಎಲೆಲೇ ಆನೆ ಸತ್ತು ಬಿದ್ದಿರ್ಬೇಕಾದ್ರೆ, ಪಕ್ಕದ್ ಎಲೇಲಿ ಇರುವೆ ಹುಡುಕ್ದಂಗೆ ಅಂತ..
ಹೀಗೆ ಒಂದು ಹಂತದಲ್ಲಿ ಭಾರತದ ಸಮಸ್ಯೆಗಳನ್ನೇ ಮರೆತು  ಅಲ್ಜೀರಿಯ, ಇತ್ಯೋಪಿಯ, ಸೋಮಾಲಿಯ ದೇಶಗಳ ತೊಂದರೆಗೆಲ್ಲಾ  ನಾಯಕ ಮೂಗು ತೂರಿಸಲು ಹೋದಾಗ ನಿಮ್ಮ ತಲೆ ತಿರುಗಿದರೆ ಆಶ್ಚರ್ಯವಿಲ್ಲ.

ಮೇಲಿನ ಹಾಗೆ ಕಥಾವಸ್ತುವಿನಲ್ಲಿ ಸ್ವಲ್ಪ ವಿಭಿನ್ನತೆ ಇದ್ರೂ, ಇತರೆ ಎಲ್ಲಾ 'ಡಿಫರೆಂಟ್' ಚಿತ್ರಗಳಂತೆ ಇಲ್ಲೂ ತಾಯಿ ಸೆಂಟಿಮೆಂಟ್, ಆಕ್ಷನ್, ಲವ್, ಮರ ಸುತ್ತೋ ಹಾಡುಗಳು, ಹೀಗೆ 'ಡಿಫರೆಂಟ್' ಅಂಶಗಳನ್ನು ತುರುಕಲಾಗಿದೆ. ಒಂದು ಸೀರಿಯಸ್ ಚೇಸಿಂಗ್ ಸೀನೊಂದು  ಸ್ಕೂಲ್ ಪಕ್ಕ ಇರೋ ರೋಡ್ನಲ್ಲಿ ನಡಿತಾ ಇರತ್ತೆ. ಸ್ಕೂಲ್ನಲ್ಲಿ ಜನಗಣಮನ ಹಾಡುವುದನ್ನು ಕೇಳಿ ನಾಯಕ, ಖಳನಾಯಕ, ಗೂಂಡಾಗಳು ಎಲ್ಲ ಒಂದು ಕ್ಷಣ ನಿಂತರೆ ಅದನ್ನ ಕಾಮಿಡಿ ಅನ್ಬೇಕೋ ದೇಶಭಕ್ತಿಯ ಪರಾಕಾಷ್ಠೆ ಅನ್ಬೇಕೋ ಗೊತ್ತಿಲ್ಲ.


ನವೀನ್ ಕೃಷ್ಣ ಮುಳುಗೋ ಪೇಪರ್ ದೋಣಿನ  ಸ್ವಲ್ಪ ಹೊತ್ತಾದರೂ ತೇಲಿಸುವ ಪ್ರಯತ್ನ ಮಾಡಿದ್ದಾರೆ. ಅವರ ಪ್ರತಿಭೆಗೆ ತಕ್ಕ ಚಿತ್ರವಲ್ಲ. ನಾಯಕಿ ಶಾಂತಲ, ತಾಯಿಯ ಪಾತ್ರದಲ್ಲಿ ವಿನಯ ಪ್ರಸಾದ್, ಕ್ರಾಂತಿಕಾರಿ ಪಾತ್ರದ ಅವಿನಾಶ್ ಎಲ್ರೂ ಡಮ್ಮಿ.


ಶ್ರೀಸುಮನ್ ಸಂಗೀತದಲ್ಲಿ 'ಇರಬಹುದ ಇರಬಹುದ' ಹಾಡು ಇಂಪಾಗಿದೆ.
ಛಾಯಾಗ್ರಹಣ, ಸಂಕಲನದಲ್ಲಿ ವಿಶೇಷತೆ ಏನು ಇಲ್ಲ.


ನಿರ್ದೇಶಕ ಆರ್.ಕೆ. ನಾಯಕ್ ಅವರು ಎಂತಹ ಮಹತ್ವಾಕಾಂಕ್ಷಿ ಅಂತ ಈ ಚಿತ್ರದಲ್ಲಿ ಎದ್ದೆದ್ದು ಕಾಣುತ್ತದೆ. ಸ್ಲಂನಲಲ್ಲೇ ಸಾಫ್ಟ್ವೇರು, ಮಾಸಲ್ಲೇ ಮಾಹಿತಿ ತಂತ್ರಜ್ಞಾನ, 2500 ರೂಗಳಿಗೆ ಲಾಪ್ ಟಾಪು, ಹೀಗೆ ಎಲ್ಲೆ  ಮೀರಿ ಅವರ ಕನಸುಗಳು ಪೇಪರ್ ದೋಣಿಯ ಮೂಲಕ ಸಾಗರದಲ್ಲಿ ಈಜಾಡುವ ಪ್ರಯತ್ನ ಮಾಡಿದ್ದಾರೆ. ಅವರ ಪ್ರಯತ್ನ ಪ್ರಶಂಸಾರ್ಹ.ಆದರೆ ಸಿನಿಮಾ ಬದಲು ಒಂದು ಬೀದಿ ನಾಟಕವಾದರೂ 
ಮಾಡಿದ್ರೆ ಪ್ರೇಕ್ಷಕರ ಚೆಪ್ಪಾಳೆ ಗಿಟ್ಟಿಸಬಹುದಿತ್ತು.
~ಹೊಗೆ

'ಸಾಲದ' ಮದುವೆ ಮುಂಜಿ ಪಂಕ್ಸನ್ ಗಳು

'ಸಾಲ' ಮದುವೆ ಮುಂಜಿ ಪಂಕ್ಸನ್ ಗಳು !!

ಹುಡ್ಗೀರು, ಹೆಂಗಸರು, ಮದುವೆ ಇವುಗಳ ಮೇಲೆ ಆಕರ್ಷಣೆ ಇಲ್ಲವೆಂದರೆ  ಒಬ್ಬ ಗಂಡಸನ್ನು ಮಂಗಳಮುಖಿ ಅನ್ನುತ್ತಾರೋ ವಿರಾಗಿ ಅಂತಾರೋ ತಿಳಿಯದು. ಅದು ನಮಗೆ ಬೇಡವಾದ ವಿಚಾರ. ಆದರೆ ಈ ಮದುವೆ, ಮುಂಜಿ, ನಾಮ್ಕರಣ, ಅರ್ವತ್ತೊರ್ಷದ ಶಾಂತಿ, ಬರ್ತಡೆ ಪಾರ್ಟಿ ಇವುಗಳ ಬಗ್ಗೆ ನಿಮಗೆ ವೈರಾಗ್ಯ ಬಂತೋ .. ನಿಮ್ಮನ್ನ ಅಂತರ್ಮುಖಿ ಅಂತ ಜನಗಳು ಬಯ್ತಾರೆ. ಅಂತರ್ಮುಖಿ ಎಂಬ ಪದ ಗೊತ್ತಿರದ ಜನ'ಗೊ'ಳು ನಿಮ್ಮನ್ನ ಹುಚ್ಚಾ ಬೆಪ್ಪ ಎಂದು ಕರೆಯುವುದುಂಟು. ಇನ್ನು ಇಂಗ್ಲೆಂಡಿನ ಬರ್ಮಿಂಗ್ ಹ್ಯಾಮ್  ಪ್ಯಾಲೇಸಿನ ಶೌಚಾಲಯದಲ್ ಹುಟ್ದಂಗಾಡೋರು 'ನಾಟ್ ಸೋ  ಸೋಶಿಯಲ್', 'ಇಂಟ್ರಾವರ್ಟ್' ಎಂಬ ಪದಗುಚ್ಛ ಬಳಸುತ್ತಾರೆ. 

ನಂಗೂ ಸಾಕಾಯ್ತಪ್ಪ.. ಈ ರೀತಿ ಸಮಾರಂಭಗಳಿಗೆ ಹೋಗೀ  ಬಂದು. ಈ ವಯಸ್ಸೇ ಅಂಥದ್ದು. ಅಂದ್ರೆ ಈ 23-24 ರ ಹರೆಯ ಯಾವ್ ಮನುಶ್ಯಂಗೂ ಬೇಡಾಪ್ಪ. ಆಗ ತಾನೇ ಡಿಗ್ರಿ ಮುಗ್ದಿರತ್ತಾ? ನಮ್ ಕಣ್ ಮುಂದೇನೇ ನಾವು ಕಾಲೇಜಿನಲ್ಲಿ ನಮ್ಮ ಜತೆಯಲ್ಲೇ ನಕ್ಕೊಂಡು, 'ನಲ್'ಕೊಂಡು ಓದಿದ  ಹುಡುಗಿಯರಿಗೆಲ್ಲಾ  ಮದುವೆ.. ಬಿಡಿ ಅದು ಎಲ್ಲ ಹುಡುಗರ 'ಪರ್ಸನಲ್' ವಿಷಯ. ಅದಕ್ಕ್ಕೆ ನಾವ್ 'ಕೈ' ಹಾಕೋದು ಸರಿಯಲ್ಲ..

ಅಲ್ಲಾ.. ಈ ಜೀವ್ನ ಇರೋದೇ ಪಂಕ್ಸನ್ ಗಳ್ನ ಅಟೆಂಡ್ ಮಾಡೋದಕ್ಕಾ ಅಂತೊಮ್ಮೆ ನಿಮಗನಿಸಿದರೆ ನಾನು ನೀವು ಸಮಾನ ಮನಸ್ಕರು ಅಂತ. ಆಷಾಡ ಬಿಟ್ರೆ ಮಿಕ್ಕೆಲ್ಲಾ ಮಾಸದಲ್ಲೂ ಈ ಪಂಕ್ಸನ್ ಸಹವಾಸ ತಪ್ಪಿದಲ್ಲ. ನನ್  ಪ್ರಕಾರ ಇವಕ್ಕೆ ಅರ್ಥಾನೇ ಇಲ್ಲಾರೀ..

ಮದುವೆ ಅಂದ್ರೆ ಅಲ್ಲಿ ಬರಿ ಅಳು. ನಗುವಿನ ಮುಖವಾಡದಲ್ಲಿ... ಜಾಸ್ತಿ ಎಕ್ಸ್ಪ್ಲೇನ್  ಮಾಡಲ್ಲ. ಖ್ಯಾತ ನಿರ್ದೇಶಕ ಗುರುಪ್ರಸಾದ್ ಬಾಯಲ್ಲಿ ಮದುವೆ ಅಂದ್ರೆ ಏನ್  ಗೊತ್ತಾ - "ಇಬ್ರನ್ ಮಲಗ್ಸಕ್ಕೆ ಅದೆಷ್ಟ್  ಜನ ಅದೆಷ್ಟ ದಿನ ಎದ್ದಿರ್ಬೇಕಪ್ಪ !!"

ಇನ್ನು ಮುಂಜಿಲಿ ಎರಡು ವಿಧ. ಸೊಂಟದಿಂದ ಮೇಲೆ, ಮತ್ತೊಂದು ಸೊಂಟದ ಕೆಳಗೆ.. ಅವರವರ ಸಂಸ್ಕಾರಕ್ಕೆ ತಕ್ಕಂತೆ.
ಸೋ  ಮುಂಜಿಗೆ ಆಡಂಬರ ಬೇಕಿಲ್ಲ. ಸಂಸ್ಕಾರ ಸಾಕು.


ಗೃಹಪ್ರವೇಶ ಅಂತೂ ಕೇಳಲೇ ಬೇಡಿ. ಅದೊಂದು ಹೊಟ್ಟೆ ಕಿಚ್ಚಿನ ಉತ್ತುಂಗದ ಹಂಗ.. ಆಹ್ವಾನಿತ ಜನರು ಸುಮ್ನೆ ಬಂದು ಊಟ  ಮುಗಿಸಿ ಹೋಗುವ ಬದಲು ಏನೋ ತಾವೇ ಈ ಮನೇಲ್ ಬಂದು ವಾಸಿಸಬೇಕೆನೋ ಎಂಬಂತೆ ಮನೆಯ ಆಕಾರ ಪ್ರಕಾರದ ಬಗ್ಗೆ ಕಾಮೆಂಟ್ ಹೊಡೆಯದೆ ಇರುವುದಿಲ್ಲ. ಈ ಚಂದಕ್ಕೆ ಯಾಕ್ ಆಗ್ದೆರೋ ಜನಗಳ್ನ ಕರೀಬೇಕು?

ನಾಮಕರಣ, ಮೊದಲ ಹುಟ್ಟಿದಹಬ್ಬ, ವೈಕುಂಟ ಸಮಾರಾಧನೆ ಇವೆಲ್ಲ ಎಷ್ಟೇ ಗ್ರ್ಯಾಂಡ್ ಆಗಿ ಮಾಡ್ಕೊಂಡ್ರು ನಿಮಗೆ ಜ್ಞಾಪಕ ಇರಲ್ಲ.

ಇನ್ನು ಅರ್ವತ್ತೊರ್ಷದ ಶಾಂತಿ ಮಾಡ್ಕೊತೀರ..
ರಿಟೈರ್ಡ್ ಆದ ದುಡ್ಡು ಕೈಯಲ್ಲಿರತ್ತೆ. ಆದರೆ ಬರೋ ಜನರು ಯಾವ್ ಮೈಂಡ್ ಸೆಟ್ ನಲ್ಲಿ ಬರ್ತಾರೆ ಅಂತ ನೀವು ಊಹಿಸಕ್ಕು ಆಗಲ್ಲ 
- "ಅಯ್ಯೋ ಪಾಪ.. ಮೂರ್ತಿ ಮನೇಲಿ ಶಾಂತಿ ಕಣ್ರೀ ಇವತ್ತು.. ಪಾಪ ಅವರ ಮನೆ ಕೊನೆ ಫಂಕ್ಷನ್ನು.. ಹೋಗ್ಬರೋಣ ಬನ್ನಿ" .. ಇವೆಲ್ಲ ಬೇಕಾ??


ಇನ್ನು ಪಂಕ್ಸನ್ ಗಳಲ್ಲಿ ಹೇಸಿಗೆ ಹುಟ್ಸೋ ಒಂದು ವಿಷಯ ಅಂದ್ರೆ ಉಡುಗೊರೆ. ನೀವೇ ಯೋಚನೆ ಮಾಡಿ, ಇದುವರ್ಗೂ ಎಷ್ಟ್ ಕಡೆ ಎಷ್ಟ್ ಜನಕ್ಕೆ ನೀವ್ ಗಿಫ್ಟ್ ಕೊಟ್ರಲ್ಲ.. ಅದ್ರಲ್ಲಿ ಎಷ್ಟ್ ಜನಕ್ಕೆ ನೀವು ಮನಃ ಪೂರ್ವಕ ಕೊಟ್ಟಿದ್ದೀರಾ, ಎಷ್ಟ್ ಜನಕ್ಕೆ ಏನೋ ಕೊಡಬೇಕಲ್ಲ ಅಂತಾನೋ ಅಥ್ವಾ ಅವರು ನಿಮ್ಮನೆ ಪಂಕ್ಸನ್ ಬಂದಾಗ ಕೊಟ್ಟಿದ್ರೂ ಅಂತ ವಾಪಸ್ ಮಾಡಿದ್ದೀರಾ.. ಇಷ್ಟ ಸಾಕಲ್ವ ಈ ಉಡುಗೊರೆ ಅನ್ನೋ ಕಾನ್ಸೆಪ್ಟ್ ಮೇಲೆ ಹೇಸಿಗೆ ಹುಟ್ಸಕ್ಕೆ..

ಇನ್ನು  ಬೀಗರೂಟ ಬಾಡೂಟಗಳು ಪ್ರತಿಷ್ಠೆಯ ಪ್ರಶ್ನೆ.. ಕಂಠಪೂರ್ತಿ ಕುಡಿತ, ಗಂಟಲು ಗಂಟ ತಿನ್ನಾಟ .. !!

ಸ್ವಂತ ಹುಟ್ಟಿದಹಬ್ಬ ಆಚರಿಸ್ಕೊಳ್ಳೋದು.. ಬಿಡಿ. ಸಮಯ ಹಾಳು..

ಇನ್ನೊಂದ್ ಇಂಟರೆಸ್ಟಿಂಗ್ ವಿಷಯ.. '' ಯಾರಾರ ನಮ್ಮ ದೇಶದಲ್ಲಿ ಸತ್ಯನಾರಾಯಣ ಪೂಜೆಯನ್ನ ನಿಜವಾದ ಶ್ರದ್ಧೆ ಭಕ್ತಿಯಿಂದ ಮಾಡೋದು ನೋಡಿದಿರಾ.. ಚಾನ್ಸೇ ಇಲ್ಲ. ಊರೌರ್ನೆಲ್ಲ ಕರ್ಕೊಂಡು ಒಂದು ದೊಡ್ಡ ಸಮಾರಮ್ಭವನ್ನೇ ಮಾಡ್ಬೇಕು.. ಪೂಜೆ ಮರಿಬೇಕು. ಬಂದವರೆಡೆಗೆ ಗಮನ ವಹಿಸಬೇಕು. ಅದು ನಮ್ ಜನ್ಗಳ ಸತ್ಯನಾರಾಯಣ ಪೂಜೆಯ ರಿಯಲ್ ಡೆಫಿನಿಶನ್.."

ಸಾಲ ಮಾಡಿಯಾದ್ರು ಪಂಕ್ಸನ್ ಗಳನ್ನ ಜನಗೊಳು ಮಾಡಕ್ಕೂ, ಆ ಸಾಲದಷ್ಟು ಪಂಕ್ಸನ್ ನಾವ್ ಅಟೆಂಡ್  ಮಾಡಕ್ಕು ಸರಿಯಾಗಿದೆ.. ಲಂಚ್ ಬಫೆ ಇದ್ರು , ಎನ್  ಬೇಕೋ ಅದನ್ನ ಮಾತ್ರ ಹಾಕಿಸಿಕೊಳ್ಳುವ ಸೌಕರ್ಯ ಇದ್ರೂ ಜನ ಊಟ ಚೆಲ್ತಾರೆ ಅಂದ್ರೆ.. ನಿಜವಾಗ್ಲೂ ಆ ಜನ ಚೆಲ್ಲೆದ್ದೋಗಿದಾರೆ ಅಂತರ್ಥ.

ಇದೆಲ್ಲ ನಿಂತೋದ್ರೆ  ಜನ ಸೇರೋದಾದರೂ ಎಲ್ಲಿ. ಸತ್ಸಂಗ, ವಿಚಾರ ಸಂಕೀರ್ಣ, ಚಿಂತನೆ-ಸಂವಾದ ಕಾರ್ಯಕ್ರಮಗಳು ಹೆಚ್ಚಾಗಲಿ. ಆಗ ಅವಕ್ಕೂ ಅರ್ಥ ಬರತ್ತೆ.. ಸ್ವಲ್ಪ ದೊಡ್ ಮಾತ್ಗಳು ಬರ್ತಾಇದೆ. ಇಲ್ಲಿಗೆ ಸಾಕಪ್ಪ.. ಲೈಟಾಗಿ ಓವರ್ ಆಗಿದ್ರೆ ಒಸಿ ಅಡ್ಜಸ್ಟ್ ಮಾಡ್ಕೊಳಿ ಪ್ಲೀಸ್ :)

ಉಸ್ಸಪ್ಪಾ ಈ 'ಪಂಕ್ಸನ್' ಮುಗಿತು... ನಿಮ್ಮ ಕಮೆಂಟ್ ನಮಗೆ ಉಡುಗೊರೆ :)
~ಹೊಗೆ

Addoori kannada film review

ಕಲ್  ಕಲರ್ ಅದ್ದೂರಿ..
ಅದು ಬಣ್ಣದ ಲೋಕ. ಆ ಲೋಕದಲ್ಲಿ ಇರೋದು ಇಬ್ರು ಮಾತ್ರ. ಅದು ಅಚ್ಚು  ರಚ್ಚು ಲವ್ ಸ್ಟೋರಿ.
ಅಚ್ಚು (ಧ್ರುವ ಸರ್ಜಾ) ಡಿಚ್  ಮಾಡ್ದ ಅಂತ ಜಗಳ ಮಾಡಿ ಅವನನ್ನು ಬಿಡಲು ರಚ್ಚು (ರಾಧಿಕಪಂಡಿತ್) ನಿರ್ಧರಿಸುತ್ತಾಳೆ. ಆದ್ರೆ ಈ ಅಚ್ಚು ಅಷ್ಟು ಸುಲಭವಾಗಿ ಪ್ರೀತಿನ ಬಿಡ್ಕೊಡ್ದೆ ಹೆಂಗಾರು ಅವಳಿಗೆ ಟಚ್ ಆಗೋ ಹಂಗೆ ಮಾಡಿ ಪುನಃ ಪ್ರೀತಿ ಪಡಿತೀನಿ, "ಥೂ ಅಂತ ಉಗಿದರೂ ನಿನ್ನೆ ಪ್ರೀತಿ ಮಾಡುತ್ತೀನಿ ಹೋಗೆ" ಎಂದು ಹಾಡುತ್ತಾನೆ.
ಅವಳು ವಾಪಸು ಊರಿಗೆ ಹೋಗಲು ಏಳು ದಿನ ಸಮಯವಿರುತ್ತದೆ. ಅಚ್ಚು ಅಷ್ಟರೊಳಗೆ ಕಳೆದುಹೋದ ಪ್ರೀತಿಯನ್ನು ಗಿಟ್ಟಿಸಿಕೊಳ್ಳಬೇಕಾಗುತ್ತದೆ. ಈ ಅಚ್ಚು ಏನೇ ಸರ್ಕಸ್ ಮಾಡಿದ್ರೂ ಒಪ್ಪದ ರಚ್ಚು ಸಾಕ್ಷಾತ್ ರಚ್ಚೆ ಹಿಡಿದು ಒಲ್ಲೆ ಎನ್ನುತ್ತಾಳೆ.
ಅಷ್ಟಕ್ಕೂ ಇವರಬ್ಬರ ಮಧ್ಯೆ ಜಗಳವಾಗಲು ಕಾರಣ ಏನು ಅಂತ ಪ್ರೇಕ್ಷಕನ ಪ್ರಶ್ನೆಗೆ ರಚ್ಚು "ಪ್ರೀತಿಸುವ ಹುಡುಗಿಯರ ಯಾರು ಕಾಯಿಸಬಾರದು" ಎಂದು ಉತ್ತರಿಸುತಾಳೆ. ಕೊನೆಗೆ ಅಚ್ಚು ಆ  ದಿನ ಏತಕ್ಕೆ  ಲೇಟಾಗಿ ಬಂದ ಅಂತ ತಿಳಿದು ರಚ್ಚು ಪುನಃ ಅವನನ್ನು ಕಚ್ಚಿಕೊಳ್ಳುತ್ತಾಳೆ.





ಧ್ರುವ ಸರ್ಜಾ ನೃತ್ಯ, ಸಾಹಸ ಅದ್ದೂರಿ. ಅಭಿನಯಕ್ಕೆ ಇನ್ನೊಂದೆರಡು ಪಿಚ್ಚರ್ ಆಗ್ಬೇಕು. ರಾಧಿಕ ಪಂಡಿತ್ ರಚ್ಚುವಾಗಿ ಅಚ್ಚು ಮೆಚ್ಚು. ಎ.ಪಿ ಅರ್ಜುನ್ ಪಟ್ಟ ಶ್ರಮದಿಂದ ಚಿತ್ರ ಸಂಭ್ರಮಯುತವಾಗಿದೆ. ನಿರೂಪಣೆ, ಕಥೆ ಎಲ್ಲಕ್ಕೂ ಫುಲ್ ಮಾರ್ಕ್ಸ್.
ಸಂಭಾಷಣೆ ಮತ್ತು ಕಥೆಯ ವೇಗ ಡಲ್ ಡಲ್. ಆದರೆ ಪ್ರತಿಯೊಂದ್ ಫ್ರೇಮು ಒಂದು ಕಲ್ಪನಾ ಲೋಕ. ಕಣ್ಣಿಗೆ ಬಣ್ಣದ ಹಬ್ಬ.
ಇದರಲ್ಲಿ ಸೂರ್ಯ ಕಿರಣ್ ಕ್ಯಾಮೆರ ಕೈಚಳಕವೂ  ಇದೆ. ಟ್ರ್ಯಾಕಿಂಗ್ ಶಾಟ್ಸ್ ಚಿತ್ರದ ವೇಗಕ್ಕೊಂದು ಕಳೆ. ದೀಪು ಸಂಕಲನ ನಿರ್ದೇಶಕನ ಆಣತಿಯಂತೆ. ರವಿವರ್ಮ ಸಾಹಸ ನಿರ್ದೇಶನದಲ್ಲಿ ಒಂದು ಬ್ಯಾಸ್ಕೆಟ್ ಬಾಲ್ ಫೈಟ್ ಮಸ್ತ್ ಮಸ್ತ್. ನಾಯಕ ಹೊಸಮುಖನಾದರೂ ಹರಿಕೃಷ್ಣ ಗೆ ಅವರ ಸಂಗೀತದಿಂದಲೇ ಜನರನ್ನು ಚಿತ್ರಮಂದಿರಕ್ಕೆ ಕರೆತರುವ  ತಾಕತ್ತಿದೆ.


ಅಚ್ಚು ರಚ್ಚು ಲವ್ ಸ್ಟೋರಿ ನಿಮಗೂ ಮೆಚ್ಚುಗೆ ಆಗತ್ತೆ. ಆದರೆ ಅದ್ದೂರಿ ಅನ್ಸಲ್ಲ.

~ಹೊಗೆ

"VILLAIN" KANNADA MOVIE REVIEW

ಸಂಭಾಷಣೆ ಹೀರೋ.. ಮಿಕ್ಕಿದ್ದೆಲ್ಲಾ 'ವಿಲನ್'.
ನಾಯಕ 'ಟಿಪ್ಪು' (ಆದಿತ್ಯ)ರೌಡಿ. ನಾಯಕಿ ಅನು (ರಾಗಿಣಿ) 
ಈ ರೌಡಿಯ ಪರಿಚಯವೇ ಇಲ್ಲದಿದ್ದರೂ ಹೆಸರನ್ನು ಉಪಯೋಗಿಸಿ ಅವಳ 'ಮಾನ'ವನ್ನು ಏರಿಯಾ ಹುಡುಗರಿಂದ 
ರಕ್ಷಿಸಿಕೊಳ್ಳುತ್ತಿರುತ್ತಾಳೆ. ನಂತರ ಟಿಪ್ಪು ಅವಳಿಗೆ ಬೇರೆ ಹೆಸರಿನಲ್ಲಿ ತನ್ನ ಪರಿಚಯ ಮಾಡಿಕೊಂಡು ಸ್ನೇಹಮಾಡುತ್ತಾನೆ. ಸ್ನೇಹ ಪ್ರೀತಿಯಾಗಲು ಅಲ್ಲೊಂದು ಇಂಪಾದ ಹಾಡು - 'ಕಣ್ಣಲೆ ಸಂಭಾಷಣೆ'. ನಾಯಕಿಗೊಬ್ಬ ತಮ್ಮ.
ಅವನು ಕ್ರೈಂ ರಿಪೋರ್ಟರ್. ಕೊಲೆಯೊಂದನ್ನು ತನ್ನ ಕ್ಯಾಮೆರದಲ್ಲಿ ಸೆರೆಹಿಡಿದು ಕೊಲೆಪಾತಕರಾದ ರಾಜಕಾರಣಿ (ಶೋಭರಾಜ್) ಮತ್ತು ಜಮೀಲ್ (ರಂಗಾಯಣ ರಘು) ರವರ ಕೆಂಗಣ್ಣಿಗೆ ಗುರಿಯಾಗಿ ಸಾಯುತ್ತಾನೆ.
ಟಿಪ್ಪು ತನ್ನ ಬಾಮೈದನನ್ನು ಕೊಂದವರ ವಿರುದ್ಧ ಸಾಕ್ಷಿ ಹೇಳಲು ಅಣಿಯಾಗುತ್ತಿದ್ದರೆ, ಇಲ್ಲಿ ನಾಯಕಿ ಅನುಗೆ ತನ್ನ ಪ್ರಿಯತಮ ದೊಡ್ಡ ರೌಡಿ ಎಂದು ತಿಳಿಯುತ್ತದೆ. ನಂಬಿಕೆ ದ್ರೋಹದ ಆರೋಪದ ಮೇಲೆ ಟಿಪ್ಪುವನ್ನು ದೂರಮಾಡಿದಾಗ ಅಲ್ಲೊಂದು ಕೈಲಾಶ್ ಖೇರ್ ಧ್ವನಿಯಲ್ಲಿ
ವಿರಹ ಗೀತೆ. ಕೊನೆಗೆ ಅವರಿವರಿಂದ ಪ್ರೀತಿ ಪಾಠ ಕಲಿತು ನಾಯಕಿ ಮನಸುಬದಲಾಯಿಸುತ್ತಾಳೆ. ಇತ್ತ ನಾಯಕ ಕೆಟ್ಟವರನ್ನು ಕ್ಲೈಮ್ಯಾಕ್ಸ್ ಫೈಟಲ್ಲಿ  ಮಟ್ಟಹಾಕಿ ಪೋಲೀಸರಿಗೊಪ್ಪಿಸಿ
ಅವರಿಗೆ ಶಿಕ್ಷೆ ಕೊಡಿಸುತ್ತಾನೆ. ಇಲ್ಲಿಗೆ ಮುಕ್ತಾಯ ಮತ್ತೊಂದು ಕನ್ನಡ ಚಿತ್ರ.
ಚಿತ್ರದಲ್ಲಿ ಚೆನ್ನಾಗಿದೆ ಅಂತ ಒಂದಂಶ ಇದ್ದರೆ ಅದು ಎಂ.ಎಸ್.ರಮೇಶ್  ಅವರ ಸಂಭಾಷಣೆ. ಅವರ ದೈತ್ಯ ಪ್ರತಿಭೆಗೆ ಎಂದೂ ಮುಪ್ಪಿಲ್ಲ. ಷ್ಟನ್ನು ಬಿಟ್ಟರೆ ಚಿತ್ರದಲ್ಲಿ ಉಪ್ಪಿಲ್ಲ. ಸ್ವಲ್ಪ ಖಾರ ತುಂಬಲು ಒಂದು ಐಟಂ ನೃತ್ಯ ಮತ್ತು ರಾಗಿಣಿ 'ಚರ್ಮೋ'ತ್ಸವವಿದೆ. ನಿರ್ದೇಶಕ ಎಂ.ಎಸ್.ರಮೇಶ್  'ವಿಲನ್' ಅಂತ ಚಿತ್ರಕ್ಕೆ ಹೆಸರಿಟ್ಟು ನಾಯಕನ ಕೈಲಿ ಮ್ಯಾಂಡಲಿನ್, ಮೌತ್ ಆರ್ಗನ್ ಹಿಡಿಸಿದ್ದಾರೆ. ಬೀದಿಯಲ್ಲಿ  ನಿಂತು ಪ್ರೀತಿಗಾಗಿ ಅಂಗಲಾಚುವಂತೆ ಮಾಡಿದ್ದಾರೆ. ಒಂದೂ ಆಯುಧವಿಲ್ಲದೆ ಮರದ ದಿಮ್ಮಿಗಳಲ್ಲೇ ಹೊಡೆದಾಡಿಸಿದ್ದಾರೆ.
ಒಟ್ಟಿನಲ್ಲಿ ಹೆಸರಿಗೆ ತಕ್ಕಂತ ಚಿತ್ರವಾಗಿರದೆ ಇಂತ ಚಿತ್ರಕ್ಕೆ ಅತ್ಯವಶ್ಯಕವಾದ ಪಾತ್ರ ವಿಜ್ರುಂಭಣೆಯೇ  ಇಲ್ಲದೆ ನೀರಸ ನಿರೂಪಣೆ, ಸಾದಾ ಕಥೆ ಹೆಣೆದ ನಿರ್ದೇಶಕನೇ ಈ ಚಿತ್ರದ ವಿಲನ್ ಇರಬಹುದು.
ಹಾಡುಗಳನ್ನು ಬೇಕಾದ ಬೇಡವಾದ ಎಲ್ಲ ಕಡೆ ತುರುಕಲಾಗಿದೆ. ನಗಿಸುವ ವ್ಯರ್ಥ ಪ್ರಯತ್ನ ಮಾಡಲಾಗಿದೆ. ತಾಂತ್ರಿಕವಾಗಿ ಕೂಡ ಚಿತ್ರದಲ್ಲಿ ಏನು ಇಲ್ಲ.  ಕಥೆಯ ತಿರುವಿಗೆ ಕಾರಣವಾಗುವ 'ರೆಕಾರ್ಡೆಡ್ ಕ್ಯಾಸೆಟ್'ನ್ನು ನಂತರದಲ್ಲಿ ಮರೆತಿದ್ದಾರೆ. ಈ ರೀತಿ ಹಲವು ನ್ಯೂನ್ಯತೆ ವೈಫಲ್ಯತೆಗಳ ನಡುವೆ ಈ ಚಿತ್ರವನ್ನು ನೀವು ನೋಡಲೆಬೇಕೆಂದರೆ ಅದು ಚಿತ್ರದುದ್ದಕ್ಕೂ ಇರುವ ತೂಕದ ಸಂಭಾಷಣೆಗಾಗಿ ಮಾತ್ರ.

~ಹೊಗೆ

BREAKING NEWS - KANNADA MOVIE REVIEW

ಬ್ರೇಕಿಂಗ್ ನ್ಯೂಸ್: 'ಮೇಷ್ಟ್ರು' ಪಾಠ ಬೋರ್ ಹೊಡ್ಸಲ್ಲ..
ರಾಜಕಾರಣಿ ಮುದ್ದೆ ತಿಂದದ್ದು, ಸಿನಿಮಾ ತಾರೆಯ ಮಗು ಒದ್ದೆ ಮಾಡಿದ್ದು,  ಈ ತರದ ಕ್ಷುಲ್ಲಕ ವಿಷಯಗಳನ್ನೆಲ್ಲಾ ಸುದ್ದಿ ಮಾಡಿ ಬೆಳಗಿಂದ ರಾತ್ರಿ 'ಬ್ರೇಕಿಂಗ್ ನ್ಯೂಸ್' ಬಿತ್ತರಿಸುವ ಮಾಧ್ಯಮಗಳಿಗೆ ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಚುಚ್ಚು ಮದ್ದು ನೀಡಿದ್ದಾರೆ.
ಅದು ತಮ್ಮ ಚಿತ್ರದ 'ಬ್ರೇಕಿಂಗ್ ನ್ಯೂಸ್'ನ  ಹಾಸ್ಯ ಮಿಶ್ರಿತ ನಿರೂಪಣೆಯ ಮೂಲಕ.

ಕ್ಷಣಕ್ಕೊಂದು ಸುದ್ದಿಯಲ್ಲದ ಸುದ್ದಿ ಸ್ಫೋಟಿಸಿ ಸಾಮಾನ್ಯ ಜನರ ಸಣ್ಣ ಪುಟ್ಟ ಜಗಳಗಳನ್ನೇ ಬಂಡಾಯವಾಗಿಸಿಕೊಂಡು  'ಟಿ.ಆರ್.ಪಿ' ಎಂಬ ಪೆಡಂಭೂತದ ಹಿಂದೆ ಬಿದ್ದಿರುವ ಈಗಿನ ಕೆಲವು ಮಾಧ್ಯಮಗಳಿಗೆ ಈ ಚಿತ್ರ ಒಂದು ಉತ್ತಮ ಸಂದೇಶ. ಅದಕ್ಕಿಂತ ಹೆಚ್ಚಾಗಿ  ಬ್ರೇಕಿಂಗ್ ನ್ಯೂಸ್ ಎಂದ ಮಾತ್ರಕ್ಕೆ ಬಾಯಿಬಿಟ್ಟುಕೊಂಡು ನೋಡುವ ಮಹಾಜನಗಳಿಗೆ ಮೇಷ್ಟ್ರು ವಿಭಿನ್ನ ರೀತಿಯಲ್ಲಿ ತಿಳಿಹೇಳಿದ್ದಾರೆ.ಆದರೂ ಈ 'ಬ್ರೇಕಿಂಗ್ ನ್ಯೂಸ್' ಯುಗದಲ್ಲಿ,  ಕ್ಲೈಮ್ಯಾಕ್ಸ್ ನಲ್ಲಿ ಪೋಲಿಸ್ ಬರೋದು, ಕೊನೆಗೆ ನಾಯಕ ನಾಯಕಿ ಸುಸೂತ್ರವಾಗಿ  ಮದುವೆಯಾಗೋದು ಇವೆಲ್ಲ ಅನಾದಿಕಾಲದ ಚಿತ್ರಗಳಿಂದ ನೋಡಿ ನಮಗೆ ಬೇಸರವಾಗಿದೆ ಅನ್ನೋದು ನಿರ್ದೇಶಕರು ಮರೆತಿದ್ದಾರೆ.
ಅರ್ಜುನ್ (ಅಜಯ್ ರಾವ್) 'ಸಕಾಲ ಟಿವಿ'ಯ ಪ್ರೋಗ್ರ್ಯಾಮ್ ಹೆಡ್. ರಾಗಿ ಮುದ್ದೆ, ಕಬ್ಬಡಿ ಮುಂತಾದ ದೇಶೀಯ ವಸ್ತುಗಳ ಮೇಲೆ ಚಾನೆಲ್ ನಲ್ಲಿ ಕಾರ್ಯಕ್ರಮ ಮಾಡುತ್ತಿದ್ದ ಅವನಿಗೆ ಚಾನೆಲ್ ಮ್ಯಾನೇಜರ್ 'ಟಿ.ಆರ್.ಪಿ'  ಹೆಚ್ಚಿಸುವ ಕ್ರಿಕೆಟ್, ಸಿನಿಮಾ, ಸ್ಕ್ಯಾಂ ಗಳ ಮೇಲೆ ಕಾರ್ಯಕ್ರಮ ಮಾಡಲಿಲ್ಲವೇಕೆಂದು ಅವನಿಗೆ ಛೀಮಾರಿ ಹಾಕಿ ಅವನ ತಲೆಯಲ್ಲಿ 'ಸೆನ್ಸೇಷನಲ್ ನ್ಯೂಸ್'  ಎಂಬ ಬೀಜವನ್ನು ಬಿತ್ತುತ್ತಾರೆ. 

ಅದೇ ಸಂದರ್ಭದಲ್ಲಿ ಲೋಕಾಯುಕ್ತ ಸೋಮಶೇಖರ್ (ಅನಂತ್ ನಾಗ್) ರಾಜ್ಯದ ದೊಡ್ಡ ಹಗರಣಗಳನ್ನು ಬಯಲುಮಾಡಿರುತ್ತಾರೆ. ಅವರನ್ನು ಎಕ್ಸ್ಕ್ಲೂಸಿವ್  ಸಂದರ್ಶನ  ಮಾಡಿ 'ಸೆನ್ಸೇಷನಲ್ ನ್ಯೂಸ್'  ತರ್ತೀನಿ ಅಂತ ಹೊರಟ ಅರ್ಜುನ್ ಗೆ ಯಡವಟ್ಟಾಗಿ ಕೆಲಸ ಕಳೆದುಕೊಳ್ಳುತ್ತಾನೆ. ಆ ಯಡವಟ್ಟಿಗೆ ಕಾರಣವಾದ ಸ್ವತಹ ಲೋಕಾಯುಕ್ತರ ಮಗಳು 'ಶ್ರದ್ಧಾ'ಳನ್ನು  (ರಾಧಿಕ ಪಂಡಿತ್) ಅಪಹರಿಸಿ ನಿಗೂಢ ಜಾಗದಲ್ಲಿ ಅವಳನ್ನು ಬಚ್ಚಿಟ್ಟು 'ಸಕಾಲ ಟಿವಿ'ಗೆ ದೊಡ್ಡ ಸುದ್ದಿ ಕೊಟ್ಟು ಮನೆಮಾತಾಗುತಾನೆ. ಇತ್ತ ಲೋಕಾಯುಕ್ತರ ಮಗಳನ್ನು ಖದೀಮರು ಅಪಹರಿಸಿ 'ಡಿನೋಟಿಫಿಕೇಶನ್ ' ಕೇಸ್ ಖುಲಾಸೆ ಮಾಡಲು ಬೇಡಿಕೆ ಇಡುತ್ತಾರೆ. ಆ ಹೊತ್ತಿಗಾಗಲೇ ಅರ್ಜುನ್ - ಶ್ರದ್ಧಾ ನಡುವೆ ಪ್ರೇಮಾಂಕುರವಾಗಿ ಅರ್ಜುನನೇ ಮುಂದೆ ನಿಂತು ಅವಳನ್ನು ಖದೀಮರಿಂದ  ಬಿದಿಡಿಸುವ ಹೊತ್ತಿಗೆ ಪ್ರೇಕ್ಷಕನಿಗೆ 'ಬ್ರೇಕಿಂಗ್ ನ್ಯೂಸ್' ಕೊಂಚ ಸಪ್ಪೆಯಾಗಿಹೋಗಿರುತ್ತದೆ.

ಅಜಯ್ ರಾವ್ ನಿಮ್ಮ ಮನೆಮಗನ ಹಾಗೆ ಕಂಡರೆ ಅದು ಅವರ ಅಭಿನಯಕ್ಕೆ ಸಂದ ದೊಡ್ಡ ಪ್ರಶಸ್ತಿ. ರಾಧಿಕ ಪಂಡಿತ್ ಗೆ ಈ ಪಾತ್ರ ತುಂಬಾ ಸಲೀಸು. ಅನಂತ್ ನಾಗ್ 'ಸಂತೋಷ್ ಹೆಗ್ಡೆ'ಯ ಅಪರಾವತಾರ. ಅರುಣ್ ಸಾಗರ್ ಚಿತ್ರದಲ್ಲಿ ನಗ್ನ ಚಿತ್ರಕಾರನಾಗಿ ಒಂದು ಪ್ಲ್ಯಾಸ್ಟಿಕ್ ಸಾಕು ಮಾನ ಮುಚ್ಚಲು ಎಂದು ತಮ್ಮ ಕಲಾತ್ಮಕತೆ  ತೋರಿಸಿದ್ದಾರೆ. ರಂಗಾಯಣ ರಘು ಗೆ ಹೆಚ್ಚಿನ ಸ್ಕೋಪ್ ಇಲ್ಲ.

ಮನೋಮೂರ್ತಿ ಗೆ ಸಹಾಯಕರಾಗಿ ಮುಂಗಾರುಮಳೆ ಚಿತ್ರಕ್ಕೆ  ಅತ್ಯುತ್ತಮ ಸಂಗೀತ ಜೋಡಿಸಿದ್ದ ಸ್ಟೀಫನ್ ಪ್ರಯೋಗ್ ರ ಸಂಗೀತದಲ್ಲಿ 'ಓಡಿ ಹೋಗೋಣ' ಮತ್ತು 'ಸಂಬಂಧ  ಸನಿರಿಸ'  ಗೀತೆಗಳು ನೆನಪಿನಲ್ಲಿರುತ್ತದೆ. 'ಸಂಬಂಧ  ಸನಿರಿಸ'  ಹಾಡಿನಲ್ಲಿ ಮೋಹನ್ ಬಿ ಕೆರೆಯ ಕಲೆಗೆ ಬೆಲೆ, ಕೆಕೆ ಕ್ಯಾಮೆರಾ ಕೆಲಸಕ್ಕೆ ಅವರಿಗೆ ಚಾಮರ ಬೀಸಲೇಬೇಕು. ಬಸವರಾಜ್ ಅರಸ್ ಎಡಿಟಿಂಗ್ ನಿರ್ದೇಶಕನ ಆಣತಿಯಂತೆ.

ಇಂತಹ ಗಂಭೀರ ವಿಷಯದ ಬಗ್ಗೆ ಹೆಚ್ಚು ಲೆಕ್ಚರ್ ಕೊಡದೇ ಹಾಸ್ಯದ ಅಲೆಯಲ್ಲೇ ಸಾಗುವ ಚಿತ್ರಕಥೆಯಲ್ಲಿ ಕೆಲವು ಲೋಪದೋಷಗಳಿವೆ. ಹಾಸ್ಯ ಸಂಭಾಷಣೆಗಳು  ಎಲ್ಲ ಕಡೆ ನಿಮಗೆ ನಗು ತರಿಸುವುದಿಲ್ಲ. ಅಭಿನಯದ ಮೂಲಕವೆ ಕಾಮಿಡಿ ತೆಗೆಯಲು ಕನ್ನಡದಲ್ಲಿ ಚ್ಯಾಪ್ಲಿನ್, ಬೀನ್ ಗಳಿಲ್ಲವಲ್ಲ.
ಫೈಟ್ಸ್, ಹಾಡುಗಳು ಕೇವಲ ಕಮರ್ಷಿಯಲ್ ಕಾರಣಗಳಿಗೆ ತುರುಕಿದಂತಾಗಿ 'ನಾಗತಿ'ತನ ಕಳೆದು ಹೋಗಿದೆ. ಚಿತ್ರದಲ್ಲಿ ರೈತರ ಜಮೀನನ್ನು ಕಿತ್ತುಕೊಳ್ಳುವ ಬಂಡವಾಳಶಾಹಿಗಳಿಗೆ ಧಿಕ್ಕಾರ ಕೂಗಿಸುವ  ಮೇಷ್ಟ್ರುಅದೇ ಚಿತ್ರದ ಟೈಟಲ್ ಕಾರ್ಡ್ ನಲ್ಲಿ  'ನೈಸ್'ಆಗಿ ಕೆಲವರಿಗೆ 
ಧನ್ಯವಾದ ಹೇಳುವುದು ಎಷ್ಟರ ಮಟ್ಟಿಗೆ ಸರಿ ಅಂತ ಜನ ನಿರ್ಧರಿಸಲಿ.

ಇಷ್ಟು ದಿನ ಬರಿ ಟಿವಿಯಲ್ಲಿ 'ಬ್ರೇಕಿಂಗ್ ನ್ಯೂಸ್' ಕಾಟ ನೋಡುತ್ತಿದ್ದ ನಿಮಗೆ ಬೆಳ್ಳಿ ಪರದೆಯ ಮೇಲೆ 'ಬ್ರೇಕಿಂಗ್ ನ್ಯೂಸ್' ಆಟ ಇಷ್ಟವಾಗಬಹುದು!!




~ಹೊಗೆ

KATAARIVEERA SURASUNDARAANGI REVIEW

ಥಳಥಳಿಸುವ 3ಡಿಯಲ್ಲಿ ನಳನಳಿಸುವ ಸಂಭಾಷಣೆಯ ಮಧ್ಯೆ ಒಂದು ಬಣಗುಟ್ಟುವ ಕಥೆ..
ಕುರ್ಚಿಗಾಗಿ ಕದನ, ದಿಡ್ಹೀರ್ ಚುನಾವಣೆ, ನಂಗಾನಾಚ್, ಅಧಿಕಾರಿಗಳ ವರ್ಗಾವಣೆ, ಪ್ರೀತಿಯ ನಡುವೆ ಬರುವ ಹಿರಿಯರ ಪ್ರತಿಷ್ಠೆಯ ಪ್ರಶ್ನೆ, ಪ್ರೇಮಿಗಳ ಹೋರಾಟ ಇದೆಲ್ಲಾ ಭೂಲೋಕದಲ್ಲಲ್ಲದೆ ಪರಲೋಕದಲ್ಲೂ ಇದೆ ಎಂದು ತೋರಿಸಿ
ಎಲ್ಲೇ ಹೋದರು ಈ ಸಾಮಾಜಿಕ ಪಿಡುಗುಗಳು ತಪ್ಪಿದಲ್ಲ ಎಂದು ಮಾರ್ಮಿಕವಾಗಿ ಹೇಳುತಾರೆ ಸ್ವತಃ ಚಿತ್ರಕಥೆ-ಸಂಭಾಷಣೆ  ಬರೆದಿರುವ ಉಪೇಂದ್ರ. ಅವರ ಬಾಯಿಂದ ಬರುವ ಪುಂಖಾನುಪುಂಖ ಪದಪುಂಜಗಳು ಕಿವಿಗೆ ಹಿತ, ಮನಸ್ಸಿಗೆ ಮುದ ಕೊಟ್ಟು ಬುದ್ಧಿಗೆ ಚುರುಕು ಮುಟ್ಟಿಸುವುದನ್ನು ಮರೆಯುವುದಿಲ್ಲ. ಆದರೂ ಚಿತ್ರದಲ್ಲಿ ಹೇಳಿಕೊಳ್ಳುವಂಥ ಕಥೆಯೇ ಇಲ್ಲ. ಎರಡನೆಯ ಭಾಗದಲ್ಲಿ 3ಡಿ ಎಫೆಕ್ಟ್ಸ್ ಹುಡುಕಿದರೂ ಸಿಗುವುದಿಲ್ಲ.


ಭೂಲೋಕದಲ್ಲಿ ಉಪೇಂದ್ರ (ಉಪೇಂದ್ರ) 'ಅನಿಸಿದ್ದು ಮಾಡುವ ಪುಣ್ಯಾತ್ಮನಾಗಿ' ಅವನಿಗೆ ಬೇಕಾದ ಕೆಲಸಗಳನ್ನು ಮಾಡುತ್ತಾ ಕೊನೆಗೊಮ್ಮೆ ಡಾನ್ ಆಗುವ ಹೆಬ್ಬಯಕೆಗೆ ನೀರೆರೆದು ಪೋಷಿಸಿ ದೊಡ್ಡ ಡಾನ್ ನಂತೆ ಪೋಸ್ ಕೊಡುತ್ತಿರುವಾಗ ಆಕಸ್ಮಿಕ ಸಾವನ್ನಪ್ಪಿ ಇಹಲೋಕ ತ್ಯಜಿಸುತ್ತಾನೆ. ಪಾಪ-ಪುಣ್ಯಗಳೆರಡನ್ನು  ಸಮಾನವಾಗಿ ಮಾಡಿ ಯಮನ ತಲೆಗೆ ಹುಳ ಬಿಟ್ಟು 15 ದಿನ ನರಕ , 15 ದಿನ ಸ್ವರ್ಗ ದರ್ಶನದ 'ಶಿಕ್ಷೆ' ಪಡೆಯುತ್ತಾನೆ. ಸ್ವರ್ಗದಲ್ಲಿ ಸುರಸುಂದರಾಂಗಿ ಇಂದ್ರಜೆಗೆ (ರಮ್ಯ)  ಮರುಳಾಗಿ ಅವಳನ್ನು ಮೋಹಿಸಿ ಬಲೆಗೆ ಹಾಕಿಕೊಳ್ಳುತ್ತಾನೆ. ಇವರಿಬ್ಬರ ಮದುವೆಗೆ ಯಮೇಂದ್ರರು ಅಡ್ಡಿ ಬಂದಾಗ ಭೂಲೋಕಕ್ಕೇ ಓಡಿ ಬರುವ ತೀರ್ಮಾನಕ್ಕೆ ಬಂದಾಗ ಅಲ್ಲೊಂದು ಫೈಟ್. ಹೀಗೆ ಮಾಡುವಾಗ ಹುಲುಮಾನವ ಉಪೇಂದ್ರ ಯಮನನ್ನು ಗೆಲ್ಲುವುದಾದರೂ ಹೇಗೆ ಎಂಬುದೇ ಕಥೆಯ ಸ್ವಾರಸ್ಯ. ಆದರೆ ಸ್ವಾರಸ್ಯವನ್ನ ಹಿಡಿದಿಡುವಲ್ಲಿ ನಿರ್ದೇಶಕ ಸುರೇಶ್ ಕೃಷ್ಣ (ಬಾಷಾ,ಕದಂಬ ಖ್ಯಾತಿ) ಸೋಲುತ್ತಾರೆ.
ಚಿತ್ರದಲ್ಲಿ ಟಿಪಿಕಲ್ ಉಪೇಂದ್ರ ಅಭಿನಯವಿದೆ.ರಮ್ಯ ಸ್ವತಃ  ಡಬ್ ಮಾಡದೇ ಇರುವುದು ಕನ್ನಡಿಗರಿಗೆ ಸಂತಸದ ಸುದ್ದಿ.  ಅಂಬರೀಷ್ ಯಮನಾಗಿ ಚಿತ್ರದ ಸ್ಟಾರ್ ವಾಲ್ಯೂ ಹೆಚ್ಚಿಸಿದರೂ, ಅವರ ಸಂಭಾಷಣೆಯಲ್ಲಿ ಅದುಲುಬದಲಾಗುವ  'ಹಕಾರ ಅಕಾರ'ಗಳ ಬಗ್ಗೆ ಅವರಷ್ಟೇ ದೊಡ್ಡ ಮನಸ್ಸಿನ ಪ್ರೇಕ್ಷಕ ಮರೆತುಬಿಡುವುದು ಲೇಸು.
ಕನ್ನಡಕ್ಕೆ ಪ್ರಥಮ ಸಂಪೂರ್ಣ 3ಡಿ ಚಿತ್ರ ತರುವಲ್ಲಿ ವೇಣು ರವರ ಕ್ಯಾಮೆರ ಕೆಲಸಕ್ಕೆ ಜೈ ಅನ್ನಲೇಬೇಕು. ಅವರಿಗೆ ಈ ವರ್ಷದ ರಾಜ್ಯ ಪ್ರಶಸ್ತಿ ಬರುವ ಎಲ್ಲ ಸಾಧ್ಯತೆಗಳಿವೆ. 
ಗ್ರಾಫಿಕ್ಸ್ ಕೆಲಸದ ಸ್ವರ್ಗ ನರಕ ಲೋಕಗಳನ್ನು 3ಡಿಯಲ್ಲಿ ನೋಡುವುದೇ ಒಂದು ಹಬ್ಬ. ಕಳೆದ ವರ್ಷ 'ಸಂಜು ವೆಡ್ಸ್ ಗೀತ' ಗೆ ಅತ್ಯುತ್ತಮ ಸಂಕಲನ  ಪ್ರಶಸ್ತಿ ಪಡೆದ ಜಾನಿ ಹರ್ಷ ಮತ್ತೊಮ್ಮೆ ಕೈಚಳಕ ತೋರಿಸಿದ್ದಾರೆ.
'ಝುಂಝುಂತಾ' ಹಾಡು, ಹಿನ್ನಲೆ ಸಂಗೀತಕ್ಕೆ ಹರಿಕ್ರಿಷ್ಣಗೆ ಒಂದು ಚಪ್ಪಾಳೆಯಿರಲಿ. 
ಇಷ್ಟು ದೊಡ್ಡ ಬಜೆಟ್ ಚಿತ್ರಕ್ಕೆ ಬೆನ್ನೆಲುಬಾಗಿ ನಿಂತ ನಿರ್ಮಾಪಕ ಮುನಿರತ್ನಗೆ ದೊಡ್ಡ ಸಲಾಮು. ಸದಾ ಹೊಸತು ಯೋಚಿಸುವ ಉಪೇಂದ್ರ ರವರಿಗೆ ಅಭಿನಂದನೆ.
ಸ್ವಾರಸ್ಯ ಕಥಾನಕ ಇದ್ದಿದ್ದರೆ ಈ 'ಕಠಾರಿ ವೀರ' ಪ್ರತಿಯೊಬ್ಬರೂ ನೋಡಲೇಬೇಕಾದ ಚಿತ್ರವಾಗ್ತಿತ್ತು. 
~ಹೊಗೆ

ANNA BOND MOVIE REVIEW

ಮೊದಲಾರ್ಧ 'ಅಣ್ಣಾ' ಸೂಪರ್.. ದ್ವಿತೀಯಾರ್ಧ ಢಂ ಢಂ ಢಮಾರ್ !!

"ಕಾಮ ಖ್ಯಾತಿ ಕಾಸು ಇದೇ ಜೀವನ" - ಬಾಂಡ್ ಚಿತ್ರದ ಮೊದಲಾರ್ಧದ ಯಶಸ್ಸಿಗೆ ಇಂತಹ  ಕಚಗುಳಿ ಸಂಭಾಷಣೆಯೇ ಸೋಪಾನ. ಸೂರಿ ಸಂಭಾಷಣೆ ಚಿತ್ರದ ನಾಯಕ, ಚಿತ್ರಕಥೆ ಸೆಕಂಡ್ ಹೀರೋ.. ಆದರೆ ಖಳನಾಯಕನ ಪಾತ್ರದಲ್ಲಿರುವುದು ಇಬ್ಬರು - ಕಥೆ ಮತ್ತು ಕ್ಲೈಮ್ಯಾಕ್ಸ್.



ಬಾಂಡ್ ರವಿ (ಪುನೀತ್)  ಕರಾಟೆ, ಸಮಾಜ ಸೇವೆ, ಉಳುಕು ತೆಗೆಯುವುದು ಇವೆ ಅವನ ಕಸುಬಲ್ಲದ ಕಸುಬು. ಅವನಿಗೆ ಚಪಾತಿಬಾಬು (ರಂಗಾಯಣ ರಘು) ಅಂತ ಅಪಾಪೋಲಿ ಸಾಥ್ . ಮೀರ (ಪ್ರಿಯಮಣಿ) ಮತ್ತು ದಿವ್ಯ (ನಿಧಿ) ಡಾಕ್ಯುಮೆಂಟರಿ ಮಾಡಲು ಬಾಂಡ್ ರವಿಯ ಊರಿಗೆ ಬರುತ್ತಾರೆ. ಮೀರ ಳ ನಗುವಿಗೆ  ಬಾಂಡ್ ರವಿ ಕ್ಲೀನ್ ಬೌಲ್ಡ್. ಆ ಊರಿನ ಬಾನಮತಿ, ದೆವ್ವ ಮತ್ತು ಇತರ ಮೂಢನಂಬಿಕೆಗಳ ಮೇಲೆ ಡಾಕ್ಯುಮೆಂಟರಿ ಮಾಡುವಾಗ ಬರುವ ಹಾಸ್ಯದ ಸನ್ನಿವೇಶಗಳು ನಕ್ಕು ನಕ್ಕು ಸುಸ್ತುಪಡಿಸುತ್ತದೆ.
ಕಥೆ ಮುಂದೆ ಸಾಗುತ್ತ ಖಳನಾಯಕನ ಚಾರ್ಲಿ (ಜಾಕಿ ಶರಫ್) ಪ್ರವೇಶ. ಅವನ ದ್ವೇಷಕ್ಕೆ ಮೀರಳನ್ನು ಅಪಹರಿಸಿದಾಗ ಬಾಂಡ್ ರವಿ, ಅಣ್ಣ ಬಾಂಡ್ ಆಗಿ ಶತ್ರುಗಳನ್ನು ಸದೆಬಡಿಯುತ್ತಾನೆ. ಚಾರ್ಲಿ ಏಕೆ ಮೀರಾಳನ್ನು ಅಪಹರಿಸುತ್ತಾನೆ ಎಂದು ನೀವು ಚಿತ್ರಮಂದಿರದಲ್ಲಿ ನೋಡಿ.

ಡಿಫರೆಂಟ್ ಡ್ಯಾನಿ, ರವಿವರ್ಮ ಒಬ್ಬರಿಗೊಬ್ಬರು ಪಂದ್ಯ ಕಟ್ಟಿದವರಂತೆ ಸಾಹಸ ದೃಶ್ಯಗಳನ್ನು ಮಾಡಿಸಿದ್ದಾರೆ. ಹರಿಕೃಷ್ಣ ಸಂಗೀತ ಜಾಕಿಯ ಮಟ್ಟಕ್ಕಲ್ಲದಿದ್ದರೂ ಖುಷಿ ಕೊಟ್ಟು ಕುಣಿಸುತ್ತದೆ. ಸತ್ಯ ಹೆಗಡೆ ಎಂಬ ಮಾಂತ್ರಿಕ ಇಲ್ಲದಿದ್ದರೆ ಈ ಚಿತ್ರ ಡಲ್ ಆಗ್ತಿತ್ತೋ ಏನೋ ಎನ್ನುವಷ್ಟರ ಮಟ್ಟಿಗೆ ಕ್ಯಾಮೆರ ಕೆಲಸ ಮಾಡಿದ್ದಾರೆ. ದೀಪುವಿನ ಸಂಕಲನ ಕುದುರೆಯಷ್ಟೇ ವೇಗಭರಿತ. ಇಮ್ರಾನ್ ನೃತ್ಯ ಒಂದೊಂದು ಹಾಡಿನಲ್ಲೂ ವಿಭಿನ್ನ. ಒಟ್ಟಿನಲ್ಲಿ ಈ ಚಿತ್ರ ತಾಂತ್ರಿಕ ಕುಶಲತೆಯ ಔನ್ನತ್ಯದಲ್ಲಿದೆ.

ಅಪ್ಪು ಸಾಹಸದಲ್ಲಿ ಹಿಂದೆಂದಿಗಿಂತ ಉತ್ತಮ. ಪ್ರೀತಿಯನ್ನು ವ್ಯಕ್ತಪಡಿಸುವಾಗ ಮುಗ್ಧತೆ, ಸಾಹಸದಲ್ಲಿನ ವ್ಯಗ್ರತೆಗೆ ಯಾರೂ ಸಾಟಿಯಿಲ್ಲ. ಪ್ರಿಯಮಣಿ ಮೈಕೈ ತುಂಬಿದರೂ ಸುಂದರಿ. ನಿಧಿಯ ಪಾತ್ರ ಚಿಕ್ಕದಾದರೂ ತುಂಬಾ ಇಷ್ಟವಾಗುತ್ತಾಳೆ. ಜಾಕಿ ಶರಫ್ ಅಭಿನಯಿಸಿ ಅವರೇ ಡಬ್ ಮಾಡಿರುವುದು ಪ್ರಶಂಸನೀಯ. ರಂಗಾಯಣ ರಘು ಚಿತ್ರದ ನಿಜವಾದ ಪೈಸಾ ವಸೂಲ್.

ನಿರ್ದೇಶಕ ಸೂರಿ ಚಿತ್ರಕಥೆಯಲ್ಲಿನ ವೇಗದ ಕಡೆಗೆ ಗಮನೆ ಹರಿಸಿ ಕಥೆಯನ್ನೇ ಮರೆತಂತಿದೆ. ಆದರೂ ಅಪ್ಪು ಅಭಿಮಾನಿಗಳಿಗೆ ಮೋಸವಿಲ್ಲ. ದ್ವಿತೀಯಾರ್ಧದಲ್ಲಿ ಹೆಚ್ಚೇನೂ ಆಗದೆ ಬರಿ ಢಂ ಢಂ ಅಂತ ಸಾಹಸಕ್ಕೆ ಪ್ರಾಧಾನ್ಯತೆ. ಹಾಗಂತ ಯಾವುದೋ ಕಾಂಜಿ ಪೀಂಜಿ ಫೈಟ್ಸ್ ಅಲ್ಲ.. ಪ್ರತಿಯೊಂದು ಮೈನವಿರೇಳಿಸುವಂಥದ್ದು.
ಮೊದಲ ದಿನದ ಪ್ರೇಕ್ಷಕನ ಮಾತು - ಫಸ್ಟ್ ಹಾಫ್ ಬೆಂಕಿ, ಸೆಕಂಡ್ ಹಾಫ್ ಹೊಗೆ.

~ಹೊಗೆ

PARIE KANNADA MOVIE - REVIEW

ಈ 'ಪರಿ'ಯ ಕಿರಿಕಿರಿ..

ಸದಭಿರುಚಿಯ ಚಿತ್ರ ಎಂದು  ಬಿಡುಗಡೆಯ ಮುನ್ನವೇ  ಹಣೆಪಟ್ಟಿಯನ್ನು ಹೊತ್ತುಕೊಂಡ ಈ ಚಿತ್ರ ಸಕಲ ರೀತಿಯಲ್ಲೂ  ನಿರಾಶೆ ಮೂಡಿಸುವುದು ಕನ್ನಡ ಪ್ರೇಕ್ಷಕನಿಗೆ  ವಿಪರ್ಯಾಸವೆ ಸರಿ. ಬಿಡಿಟಿ ಬ್ಯಾನರ್ನ ಪ್ರಥಮ ಕಾಣಿಕೆ , ಸಂಪನ್ನ ಮುತಾಲಿಕ್ ರ ಕಾದಂಬರಿಯನ್ನು ಆಧರಿಸಿ ಹೊರತಂದಿರುವ ಈ ಚಿತ್ರದಲ್ಲಿ ಮಿಸ್ಸಾಗಿರುವುದು ಒಂದು ಗಟ್ಟಿ ಚಿತ್ರಕಥೆ.



ಬ್ರಾಹ್ಮಣ ಹುಡುಗ 'ಭಾರದ್ವಾಜ' (ರಾಕೇಶ್) ಕೆಳವರ್ಗದ ಯುವತಿ 'ಪರಿ' ಯ (ನಿವೇದಿತ) ಪ್ರೇಮಸಮುದ್ರದಲ್ಲಿ ಬಿದ್ದು  ನಂತರ ಪರಿಯನ್ನು ಪಡೆಯಲು ಜನಿವಾರವನ್ನು ಒಗೆದು ನಾಯಕಿಯ ತಂದೆ ಮಾಡುವ 'ಕಳ್ಳ ಸಾರಾಯಿ' ದಂಧೆಯಲ್ಲಿ ಪ್ರವೀಣನಾಗಿ ಅವಳ ತಂದೆಯ ಮೆಚ್ಚುಗೆಗೆ ಪಾತ್ರವಾದರೂ ಕೊನೆಗೆ ಅವಳ ತಂದೆ ನಾಯಕಿಯನ್ನು 
ಮತ್ತೊಬ್ಬನಿಗೆ  ಕೊಟ್ಟು ಮದುವೆ ಮಾಡಲು ಹೋದಾಗ ಈ ಭಾರದ್ವಾಜ ನಾಯಕಿಯ ತಂದೆ ಮಾತಿಗೆ ಬೆಲೆ ಕೊಟ್ಟು 
ಪರಿಯನ್ನು ತ್ಯಜಿಸಿ ತೆರಳುತ್ತಾನೆ.  ಸುಮೇಧಾ (ಹರ್ಷಿಕ ಪೂರ್ನಚ್ಚ) ಬಳಿಗೆ. ಆಕೆ ಒಂದು ದೊಡ್ಡ ಡಿಸ್ಟಿಲರಿಯ  ಓನರ್. ಅಲ್ಲಿ ತನ್ನ ಕಳ್ಳ ಸಾರಾಯಿ ದಂಧೆಯ ಪ್ರಾವಿಣ್ಯತೆಯನ್ನೇ ತೋರಿ 'ಭಾರದ್ವಾಜ' ಅವಳ ಪ್ರೀತಿಗೂ ಪಾತ್ರನಾಗುತ್ತಾನೆ. ಇನ್ನುಳಿದ ಪರಿಯ ಕಥೆ ಬರಿಯೇ ಕಲಸುಮೇಲೋಗರ.

ನಿರ್ದೇಶಕ ಸುಧೀರ್ ಅತ್ತಾವರ್ ಅವರಿಗೆ ಕಥೆಯ ಹಿಡಿತ ಸಿಕ್ಕಿಲ್ಲವೆಂದು ಮೊದಲಾರ್ಧದಲ್ಲೇ ತಿಳಿಯುತ್ತದೆ. 'ಮುಗಿಲಿನ ಮಾತು ಮುಸಲಧಾರೆ' ಹಾಡಿನ ಮೂಲಕ ವೀರ್ ಸಮರ್ಥ್ ರವರ ಸಂಗೀತ ಇಷ್ಟವಾಗುತ್ತದೆ. ಅನಂತ್ ಅರಸ್ ರವರ ಕ್ಯಾಮೆರಾದ ಏರಿಯಲ್ ಶಾಟ್ಸ್ ಕೆಲವು ಸುಂದರ ದೃಶ್ಯಗಳನ್ನೂ ಸೆರೆಹಿಡಿದಿದೆ.

ಚಿತ್ರದ ವಿಶೇಷ ಎಂದರೆ ಮೂರು ಜನ 'ಪದ್ಮಶ್ರೀ'ಗಳು ಇಲ್ಲಿ ಕೆಲಸ ಮಾಡಿರುವುದು. ಎಂ.ಎಸ್ ಸತ್ಯು ರವರ ಕಲೆ, ನಿಮಾಯ್ ಘೋಷ್ ರ ಸ್ಥಿರ ಛಾಯಾಗ್ರಹಣ, ಉಷಾ ಉತ್ತುಪ್ ರ ಹಾಡುಗಾರಿಕೆ ಇದ್ದರೂ ಅವೆಲ್ಲ ಚಿತ್ರಕ್ಕೆ ಕಳೆ ತರುವಲ್ಲಿ  ಹೆಚ್ಚಾಗಿ ಕೆಲಸ ಮಾಡಿಲ್ಲ. 'ಮರಳಿ ಮರೆಯಾಗಿ' (ಸವಾರಿ) ಅಂತ ಭಾವಪೂರ್ಣ ಹಾಡುಗಳನ್ನು ಕೊಟ್ಟ ಸುಧೀರ್ ಅತ್ತಾವರ್ ತಮ್ಮ ಮುಂದಿನ ಚಿತ್ರಗಳಲ್ಲಾದರೂ ಎಚ್ಚೆತ್ತುಕೊಳ್ಳಲಿ ಅಥವಾ ಪುನಃ ಗೀತ ಸಾಹಿತ್ಯಕ್ಕೆ ಮರಳಲಿ.

DASHAMUKHA COMPLETE REVIEW..

ಹತ್ತು ಜನ್ಮಕ್ಕಾಗೋ ಅಷ್ಟು ಸಹನೆ ಇದ್ದರೆ 'ದಶ'ಮುಖ ನಿಮಗೆ ಸಹಿಸುತ್ತೆ.

ಸೆನ್ಸಾರ್ ಬೋರ್ಡ್ ನಿಂದ ಸದಾ 'ಎ' ಸ್ವೀಕರಿಸುತ್ತಿದ್ದ ನಿರ್ದೇಶಕ ರವಿ ಶ್ರೀವತ್ಸ ಈ ಬಾರಿ 'ಯುಎ' ತೆಗೆದುಕೊಂಡಿರುವುದೇ 
ಈ ಚಿತ್ರದ ಅವರ ಬಹು ದೊಡ್ಡ ಸಾಧನೆ. 1957 ರಲ್ಲಿ ಬಂದ ಇಂಗ್ಲೀಷಿನ '12 ಆಂಗ್ರಿ ಮೆನ್' ಹಿಂದಿಯಲ್ಲಿ 'ಏಕ್ ರುಕಾ ಹುವಾ ಫೈಸಲಾ' ಆಗಿತ್ತು. ಕನ್ನಡದಲ್ಲಿ 'ದಶಮುಖ'ನಾಗಿ ಬಂದಿದೆ.

ಒಂದು ಕೊಲೆ ಪ್ರಕರಣವನ್ನು ನಮ್ಮ ನ್ಯಾಯಾಲಯ ಬಗೆಹರಿಸಲಾಗದೆ ಹತ್ತು ಜನ ಸಾಮಾನ್ಯರನ್ನು ಗುರುತಿಸಿ ಅವರಿಗೆ 
ಆ ಗುರುತರ ಜವಾಬ್ದಾರಿಯನ್ನು ವಹಿಸಿಬಿಡುತ್ತೆ. ಈ ರೀತಿ 'ಜ್ಯೂರಿ ಸಿಸ್ಟಂ' ನಮ್ಮ ಸಂವಿಧಾನದಲ್ಲಿ  ಇಲ್ಲದಿದ್ದರೂ ಒಂದು ಸಿನಿಮಾ ಮಟ್ಟಿಗೆ ಪ್ರೇಕ್ಷಕ ಸಹಿಸಿಕೊಳ್ಳಬಹುದು. ಪ್ರಕರಣವನ್ನು ಬಗೆಹರಿಸಲು ಬರುವ ಹತ್ತು ಜನರು ವಿವಿಧ ಹಿನ್ನಲೆಯುಳ್ಳವರೂ, ಬೇರೆ ಬೇರೆ ಪೀಳಿಗೆಯವರು. ನಿಜ ಹೇಳ್ಬೇಕು ಅಂದ್ರೆ ಪ್ರತಿಯೊಬ್ಬರದೂ ಅವರದೇ ಆದ ಒಂದು ತಲೆ ಪ್ರತಿಷ್ಟೆ. ಅಂತ ಮಹಾಸಮಾಗಮದ 2  ಗಂಟೆಗಳ ಕಾಲದ ರೌಂಡ್ ಟೇಬಲ್ ಮೀಟಿಂಗ್ ಏ ಈ ದಶಮುಖ.

ಹುಡುಗನೊಬ್ಬ ತನ್ನ ತಂದೆಯನ್ನೇ ಕೊಂದ ಆರೋಪದ ಮೇರೆಗೆ ಬಂಧನಗೊಳಗಾಗುತ್ತಾನೆ. ಇದನ್ನು ಬಗೆಹರಿಸಲು ಬರುವ ಈ ಹತ್ತು ಜನರಲ್ಲಿ ಒಂಭತ್ತು ಜನ ಆರೋಪಿಯನ್ನು ಅಪರಾಧಿ ಎಂದರೆ ಕ್ರೇಜಿಸ್ಟಾರ್ ರವಿಚಂದ್ರನ್ ಮಾತ್ರ ಅವನನ್ನು ನಿರಪರಾಧಿಯೆಂದು ಹೇಳಿ ಕಥೆಗೆ ನಾಂದಿ ಹಾಡುತ್ತಾರೆ. ಚಿತ್ರ ಸಾಗುತ್ತ ಮಿಕ್ಕಿದ ಒಂಭತ್ತು ಜನರನ್ನು ತಮ್ಮ ವಾದದ ಮೂಲಕ ರವಿ ಹೇಗೆ ಕೇಸನ್ನೇ ಉಲ್ಟಾ ಹೊಡೆಸುತ್ತಾರೆ ಎಂದು ಚಿತ್ರಮಂದಿರದಲ್ಲಿ ನೋಡಿ. ಶ್ರೀಧರ್ ಸಂಭ್ರಮ್ ಸಂಗೀತ ಡಲ್ ಹೊಡೆದರೆ ಸಾಧು ಕೋಕಿಲ ಹಿನ್ನಲೆ ಸಂಗೀತ ಅಲ್ಲಲ್ಲಿ ಅವರ ಪ್ರತಿಭೆಗೆ ಕನ್ನಡಿ ಹಿಡಿಯುತ್ತದೆ. ಲಕ್ಷ್ಮಣ್ ರೆಡ್ಡಿಯ ಕತ್ತರಿ ಕೆಲಸ ಕೆಲವೆಡೆ ಕಳೆ ಕೊಡುತ್ತದೆ.

ರವಿ ಸರ್ ಜೊತೆ ದೇವರಾಜ್, ಅನಂತನಾಗ್, ದತ್ತಣ್ಣ, ಅವಿನಾಶ್, ಮಾಳವಿಕಾ, ಅಚ್ಯುತ್ ರಾವ್, ರವಿ ಕಾಳೆ ಇತರ ಜ್ಯೂರಿಗಳಾಗಿ ಅಭನಯಿಸಿದ್ದಾರೆ. ಬಹಳ ದಿನಗಳ ನಂತರ ಫೀಲ್ಡ್  ಗೆ ಬಂದಿರುವ ಸರಿತಾ ಅಭಿನಯ ಮರೆತಿಲ್ಲ. ಆರೋಪಿಯ ಪಾತ್ರದಲ್ಲಿ ಬಿರುಗಾಳಿ ಚೇತನ್ ಇದ್ದು, ಅವನ ಪ್ರೇಯಸಿಯಾಗಿ ಆಕಾಂಕ್ಷಾ ಮನ್ಸುಖಾನಿ ಇದ್ದಾರೆ.

ಮಾಥ್ಯೂ ರಾಜನ್ ರವರ ಕ್ಯಾಮೆರಗೆ  ಹೆಚ್ಚು ಕೆಲಸವಿಲ್ಲ. ಕಾರಣ ಬರಿಯ ನಾಲ್ಕು ಗೋಡೆಗಳ ಮಧ್ಯೆ ನಡೆಯುವ ಈ ಸಿನಿಮಾದಲ್ಲಿ  ತರ್ಕ ವಾದಗಳಿಗೆ ಹೆಚ್ಚು ಒತ್ತು . ಆದರೆ ಅದೇ ತರ್ಕಗಳಲ್ಲಿ ಹುರುಳಿಲ್ಲದಾಗ ಪ್ರೇಕ್ಷಕನಿಗೆ ನಿರಾಸೆಯಾಗತ್ತೆ. ಉದಾಹರಣೆಗೆ - ಆರೋಪಿಯ ಪಾತ್ರದ ಚೇತನ್ ಅವನ ತಂದೆಯ ಪಾತ್ರದಲ್ಲಿ ಬರುವ ಹಿರಿಯ ನಟ ಸುದರ್ಶನ್ ಇವರಿಬ್ಬರ ನಡುವೆ ಎತ್ತರದ ಅಂತರ ಕೇಸಿನ ಪ್ರಮುಖ ಸಾಕ್ಷಿಗಳಲ್ಲಿ ಒಂದು. ಆದರೆ ಅದೇ ಚೇತನ್ 5 ' 4 " ಮತ್ತು ಸುದರ್ಶನ್ 6 ' 2  "  ಎತ್ತರ ಇದ್ದಾರೆ ಎನ್ನುವುದು ಚೇತನ್ ನನ್ನು ನೋಡಿದ ಯಾವ ದಡ್ಡನೂ ನಂಬುವುದಿಲ್ಲ.   ಚಿತ್ರ ನಿಜವಾಗಲು ಒಂದು ವಿಭಿನ್ನ ಪ್ರಯತ್ನವಾದರೂ ಕನ್ನಡ ಪ್ರೇಕ್ಷಕನ ನಾಡಿಗೆ ತಕ್ಕುದಾದದಲ್ಲ.

ದಶಮುಖ ಎಂಥಹಾ ತಲೆನೋವು ಮುಲಾಮಿಗಾದರೂ  ಸವಾಲ್ ಒಡ್ಡುತ್ತೆ  ಅಂತಾನೆ 
ಮೊದಲ ದಿನದ  ಪ್ರೇಕ್ಷಕ..  

~ ಹೊಗೆ

bheema teeradalli REVIEW.. a complete look

ಭೀಮಾ ತೀರದಲ್ಲಿ ಒಂದು ವ್ಯಘ್ರ 'ರಕ್ತ'ಚರಿತ್ರೆ...

ಚಂದಪ್ಪ ಹರಿಜನ. ಈತ ಮೇ, 2000 ರಲ್ಲಿ ಪೋಲಿಸ್ ಗನ್ನಿಗೆ ಬಲಿಯಾದ. ಪೋಲಿಸ್ ದಾಖಲೆಯ ಪ್ರಕಾರ ಇವನೊಬ್ಬ ನರಹಂತಕ. ಅವನ ಪ್ರಕಾರ ಅವನು ಅನ್ಯಾಯದ ವಿರುದ್ಧ ಹೋರಾಡುವ ಕ್ರಾಂತಿಕಾರಿ.
ಇದೇ ಎಳೆಯನ್ನು ಆಧರಿಸಿ ಸಿನಿಮಾ ಮಾಡಿದ್ದಾರೆ ನಿರ್ದೇಶಕ ಓಂ ಪ್ರಕಾಶ್ ರಾವ್.




ಸೆನ್ಸಾರ್ ಮಂಡಳಿ  'ಎ' ಪ್ರಮಾಣ ಪತ್ರ ಕೊಟ್ಟಿರುವುದು ಸರಿಯಷ್ಟೆ. ಕಥೆಗೆ ತಕ್ಕಂತೆ ಚಿತ್ರಕತೆ ಇದ್ದರೂ ಅತಿಯಾದ ರಕ್ತಪಾತ ಪ್ರೇಕ್ಷಕರಿಗೆ ಚಿಟ್ಟು ಹಿಡಿಸಬಹುದು. ಚಿತ್ರದ ಮೊದಲಾರ್ಧ ನಿಧಾನಗತಿಯಲ್ಲಿ ಸಾಗುವುದೇ ಮೇಜರ್ ಡ್ರಾಬ್ಯಾಕ್.
ಆದರೆ ನಿಮಗೆ ಅಲ್ಲಲ್ಲಿ ಸಿಗುವ ಪಾತ್ರಗಳು, ಅದರ ದೃಶ್ಯ ವೈಭವ, ಕೆಲವು  ಮೈನವಿರೇಳಿಸುವ ಡೈಲಾಗ್ ಗಳು ನಿಮ್ಮನ್ನು ರೋಮಾಂಚನಗೊಳಿಸಿ ಸಿನಿಮಾಗೂ ನಿಮಗೂ ಜೀವ ಕೊಡುತ್ತದೆ.


ಓಂ ಪ್ರಕಾಶ್ ರಾವ್ ನಿರ್ದೇಶಕನಾಗಿ ಗೆಲ್ಲುವುದು ಪಾತ್ರ ವಿಜೃ೦ಭಣೆಯಲ್ಲಿ , ಚಿತ್ರದಲ್ಲಿ ಕೊಡುವ ಸಂದೇಶದಲ್ಲಿ ಮತ್ತು ಕಥಾವಸ್ತುವಿನ ಆಯ್ಕೆಯಲ್ಲಿ. ಚಿತ್ರದಲ್ಲಿ ಹೇಳಿಕೊಳ್ಳುವಂತ ಕಥೆಯಿಲ್ಲ. ಮೇಲೆ ಹೇಳಿದ ಒನ್ ಲೈನ್ ಎಳೆಯಲ್ಲಿ ಕಥೆ ಮಾಡಿದ್ದಾರೆ. ಶೇಕಡಾ ಎಂಭತ್ತು ಭಾಗ ಉತ್ತರ ಕರ್ನಾಟಕ ಭಾಷೆಯಲ್ಲಿ ಸಂಭಾಷಣೆ ಇರುವುದು ಶ್ಲಾಘನೀಯ ಪ್ರಯತ್ನ. ಅಲ್ಲಲ್ಲಿ ಭಾಷೆ ಕೃತಕವಾಗಿ ಕಂಡರೂ ಅವರ ಪ್ರಯತ್ನ ಮೆಚ್ಚುವಂಥದ್ದು.


ದುನಿಯಾ ವಿಜಯ್ ಗೆ ಹೇಳಿ ಮಾಡಿಸಿದ ಪಾತ್ರ. ಚಂದಪ್ಪನ ಪಾತ್ರಕ್ಕೆ  ಚಂದಗೆ ಒಪ್ಪುತ್ತಾರೆ. ನಾಯಕಿ ಪಾತ್ರದಲ್ಲಿ ಪ್ರಣಿತ ಇದ್ದು ಕಥೆ ಮತ್ತು ಅದರ ನೇಟಿವಿಟಿ ಗೆ ಖಂಡಿತಾ ಅವರ ಬಣ್ಣ, ಉಡುಗೆ-ತೊಡುಗೆ ಒಪ್ಪುವುದಿಲ್ಲ. ಉಳಿದಂತೆ ತಾರಾಗಣದಲ್ಲಿ ಶರತ್ ಲೋಹಿತಾಶ್ವ, ಲೋಕನಾಥ್, ದೊಡ್ಡಣ್ಣ, ಗುರುರಾಜ್ ಹೊಸಕೋಟೆ, ರಾಜು ತಾಳಿಕೋಟೆ, ಶ್ರೀನಿವಾಸಮೂರ್ತಿ, ಸುಚೇಂದ್ರ ಪ್ರಸಾದ್, ಹೊಸ ಪರಿಚಯ 'ಪ್ರತಾಪ್ ರೆಡ್ಡಿ' ಇದ್ದಾರೆ. ಅವರವರ ಪಾತ್ರಕ್ಕೆ ತಕ್ಕಂತೆ ಸಿನಿಮಾದಲ್ಲಿ ಅವರು ಕಿರುಚಾಡುತ್ತಾರೆ. ವ್ಯಘ್ರರಾಗುತ್ತಾರೆ. ಈ ಎಲ್ಲಾ ಘಟಾನುಘಟಿಗಳ ಮಧ್ಯೆ ನಾಯಕನ ತಾಯಿಯ ಪಾತ್ರದಲ್ಲಿ  ಉಮಾಶ್ರಿ ಮಿಂಚುತ್ತಾರೆ. ಪ್ರೇಕ್ಷಕರಿಂದ ಶಿಳ್ಳೆ - ಚಪ್ಪಾಳೆ ಗಳಿಸುತ್ತಾರೆ. 'ಮಾನ್ಯ' ಅಬಕಾರಿ ಸಚಿವ ರೇಣುಕಾಚಾರ್ಯ ಚಿತ್ರದಲ್ಲಿ ಡಿಸಿಪಿ.
  
" ಗಂಡ್ ಮಕ್ಕಳಿಗೆ ಗಂಡ್ಸಾಗೋದು ಹೇಗೆ ಅಂತ ಪಾಠ ಹೇಳ್ಕೊಡ್ಬೇಕಿಲ್ಲ" ಇಂತ ಹಲವು ಪಂಚಿಂಗ್ ಸಾಲುಗಳು ಚಿತ್ರದಲ್ಲಿ ಇದೆಯಂದರೆ ಅದರ ರೂವಾರಿ ಎಂ.ಎಸ್.ರಮೇಶ್ . ಅಣಜಿ ನಾಗರಾಜ್ ಚಿತ್ರಕ್ಕೆ ಹಣ ಹಾಕಿ ಹಲವು ದಿನಗಳ ನಂತರ ಕ್ಯಾಮೆರಾ ಹಿಂದೆ ಕೂಡ ಕೆಲಸ ಮಾಡಿದ್ದಾರೆ. ದ್ವಿತೀಯಾರ್ಧದಲ್ಲಿ ಅವರ ಕ್ಯಾಮೆರ ಹಿಂದಿನ ಶ್ರಮ ಕಾಣುತ್ತದೆ. ಪದೇ ಪದೇ ಸೂರ್ಯನ ಕಿರಣದ ಬ್ಯಾಕ್ ಡ್ರಾಪ್ ನಲ್ಲಿ ಪಾತ್ರಗಳನ್ನು ಸೆರೆಹಿಡಿದ್ದಾರೆ. ಅಭಿಮಾನ್ ರಾಯ್ ಸಂಗೀತಕ್ಕೆ ಹೆಚ್ಚು ಪ್ರಾಮುಖ್ಯತೆ ಇಲ್ಲ. ಏಕೆಂದರೆ ಚಿತ್ರದಲ್ಲಿ ಇರುವುದು ಎರಡೇ  ಹಾಡುಗಳು. ಹಿನ್ನಲೆ ಸಂಗೀತವಂತೂ 'ರಕ್ತ ಚರಿತ್ರ' ದ ಡಿಟ್ಟೋ ಎಂದು ಜನ ಮಾತನಾಡಿ ಕೊಳ್ಳುತ್ತಿದ್ದಾರೆ.


ದೃಶ್ಯಾವಳಿಗಳು ರಕ್ತಸಿಕ್ತವಾಗಿದ್ದರೂ ಅದರ ಒಡನೆಯೇ ಇರುವ ಸಂದೇಶ ಉತ್ತಮವಾಗಿದೆ. ಹಿಂಸೆಯಿಂದ ಕ್ರಾಂತಿ ಮಾಡಿದವನ ಹೆಂಡತಿ ಯಾವತಿದ್ದರೂ ವಿಧವೆಯೇ. ನೀವು ಕ್ರಾಂತಿಕಾರರಾಗಿದ್ದಾರೆ ಸಮಾಜದಲ್ಲೇ ಇದ್ದು ಮಾಡಿ ಎನ್ನುವುದು ಈ ಚಿತ್ರ ಕೊಡುವ ತೂಕದ ಸಂದೇಶ.


~ ಹೊಗೆ